Monday, January 21, 2019

ಗುರುಕಾರುಣ್ಯ ಪಡೆದ ದಾವಣಗೆರೆಯ ಶಿವಣ್ಣ

ಸಿದ್ಧಗಂಗಾ ಶ್ರೀಗಳವರಿಗೂ ದಾವಣಗೆರೆಯ ಎಂ.ಎಸ್. ಶಿವಣ್ಣನವರಿಗೂ ತಂದೆ-ಮಗನಂತಹ ಅವಿನಾಭಾವ ಸಂಬಂಧ. ಪ್ರೀತಿ, ಹಠ ಎರಡೂ ಮೇಳೈಸಿದ ಅಪೂರ್ವ ಸಂಗಮ.

ಎಸ್.ಎಸ್.ಎಲ್.ಸಿ. ಮಾಕ್ರ್ಸ್‍ಕಾರ್ಡ್ ಹಿಡಿದು ಮಠಕ್ಕೆ ಹೋದ ಶಿವಣ್ಣನಿಗೆ ಆಗಿನ್ನೂ 15ರ ಹರೆಯ. ಮಾಗಡಿಯಿಂದ ನಡೆದು ಮಠಕ್ಕೆ ಹೋದವರು ನೇರ ಹೋಗಿದ್ದು ಸ್ವಾಮೀಜಿಯವರ ಕಛೇರಿಯೊಳಗೆ. ನಾನು ಮುಂದೆ ಓದಬೇಕು ಮಠದಲ್ಲಿ ಇರ್ತೇನೆ ಎಂಬ ನೇರ ನುಡಿ ಕೇಳಿ ಅಚ್ಚರಿಗೊಂಡ ಸ್ವಾಮೀಜಿಯವರು ಬಾಲಕನ ಕೈಯಿಂದ marks card ಪಡೆದು ನೋಡಿದರು. Rank  ಸ್ಟೂಡೆಂಟ್. ಮನೆಯಲ್ಲಿ ಬಡತನ ಮೇಲಾಗಿ ತಂದೆ-ತಾಯಿ ಇಲ್ಲದ ಅನಾಥನೆಂದು ತಿಳಿದಾಗ ಸ್ವಾಮೀಜಿಯವರ ಮಾತೃ ಹೃದಯ ಕರಗಿತು. ನೀನು ಮಠದಲ್ಲಿ ಇರುವುದು ಬೇಡ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಸೇರಿಕೋ. ಗುಬ್ಬಿ ತೋಟದಪ್ಪನ ಛತ್ರದಲ್ಲಿ ಊಟ-ವಸತಿ ಸೌಕರ್ಯಕ್ಕೆ ಏರ್ಪಾಟು ಮಾಡೋಣ ಎಂದವರೇ ಪತ್ರ ಕೊಟ್ಟರು. ಸಿದ್ಧಗಂಗಾ ಸ್ವಾಮೀಜಿಯವರ ಶಿಫಾರಸ್ಸು ಪತ್ರ ತಂದ ಬಾಲಕ ಶಿವಣ್ಣನಿಗೆ ಸುಲಭವಾಗಿ ತೋಟದಪ್ಪನ ಛತ್ರ ಆಶ್ರಯ ನೀಡಿತು. ಸೆಂಟ್ರಲ್ ಕಾಲೇಜಿನಲ್ಲೂ ಸೀಟು ಸಿಕ್ಕಿತು. ಹೀಗೆ ಪ್ರಾರಂಭವಾದ ಅನಿರೀಕ್ಷಿತ ಘಟನೆಯಿಂದ ಸ್ವಾಮೀಜಿಯವರಿಗೆ ಶಿವಣ್ಣ ಅಸಾಧ್ಯ ಬುದ್ಧಿಶಕ್ತಿಯುಳ್ಳವನು, ಛಲಗಾರ ಎಂಬುದು ವೇದ್ಯವಾಗಿತ್ತು. ನಿರ್ಭೀತಿಯಿಂದ ತನಗೆ ಬೇಕಾದ್ದು ಕೇಳಿ ಪಡೆಯುತ್ತಿದ್ದ ಈ ಬಾಲಕನ ಮೇಲೆ ಪ್ರೀತಿ. ಆದರೆ ಕೆಲವೊಮ್ಮೆ ಹುಸಿಮುನಿಸು ತೋರುತ್ತಿದ್ದರು.

ಹೀಗೆ ಸಾಗಿ ಬಂದ ಗುರು-ಶಿಷ್ಯರ ಸಂಬಂಧ ದಾವಣಗೆರೆಯಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆ ಸ್ಥಾಪನೆಗೆ ಕಾರಣವಾಯಿತು. ಸಿದ್ಧಗಂಗಾ ಎಂದು ಹೆಸರಿಡಲು ಸ್ವಾಮೀಜಿಯವರು ಪ್ರಾರಂಭದಲ್ಲಿ ಒಪ್ಪಲಿಲ್ಲ. ಹೆಸರಿಗೆ ಚ್ಯುತಿ ಬರದಂತೆ ನಡೆಸುವುದಾದರೆ ಮಾತ್ರ ಎಂಬ ಕರಾರು. ಮಠದಿಂದ ಒಂದು ಬಿಡಿಗಾಸೂ ಕೊಡುವುದಿಲ್ಲ ಎಂಬ ಕಟ್ಟೆಚ್ಚರ. 35ರ ಹರೆಯದ ಶಿವಣ್ಣ ಜಗಮೊಂಡ. ಹಿಡಿದ ಹಠ ಬಿಡದ ಶಿವಣ್ಣ ತಮ್ಮ ಆಶೀರ್ವಾದ ಒಂದಿದ್ದರೆ ಸಾಕು ಎಂದು ಸ್ವಾಮೀಜಿಯವರಿಗೆ ನಮಸ್ಕರಿಸಿ ಬಂದು ಸ್ಥಾಪಿಸಿದ ಸಿದ್ಧಗಂಗಾ ಸಂಸ್ಥೆ ಇಂದು ದಾವಣಗೆರೆಯ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ.

1970ರಲ್ಲಿ ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯ ಫಲಕ ಅನಾವರಣಕ್ಕೆ ದಯಮಾಡಿಸಿದ ಶ್ರೀಗಳವರು ಸಂಸ್ಥೆಯ ಏಳು-ಬೀಳುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.

1997ರಲ್ಲಿ ಸಂಸ್ಥೆಯ ರಜತ ಮಹೋತ್ಸವ ಮತ್ತು ನಮ್ಮ ಹಿರಿಯ ಮಗ ಹೇಮಂತ್ ಮತ್ತು ರೇಖಾರಾಣಿಯವರ ವಿವಾಹ ಮಹೋತ್ಸವಕ್ಕೆ ಬಂದು ಆಶೀರ್ವದಿಸಿದರು.

2003ರಲ್ಲಿ ಸಿದ್ಧಲಿಂಗೇಶ್ವರ ಸ್ವಾಮಿಯ ದೇವಾಲಯ ಉದ್ಘಾಟನೆಗೆ ಬಂದವರು ಶಿವಪೂಜೆ ನೆರವೇರಿಸಿ ನಮ್ಮನ್ನು ಕೃತಾರ್ಥರನ್ನಾಗಿಸಿದರು. ನೀನು ಅಸಾಧ್ಯ ಕಣೋ ಶಿವಣ್ಣ. ಸಿದ್ಧಲಿಂಗೇಶ್ವರನನ್ನು ದಾವಣಗೆರೆಯಲ್ಲಿ ಪ್ರತಿಷ್ಠಾಪಿಸಿ ಬಿಟ್ಟೆ ಎಂದು ಮೆಚ್ಚಿ ನುಡಿದರು. ನೆನೆದಾಗಲೆಲ್ಲಾ ಶ್ರೀಗಳವರ ದರ್ಶನಕ್ಕೆ ತುಮಕೂರಿಗೆ ಹೋಗಿ ಬರುವ ಪರಿಪಾಠ ಶಿವಣ್ಣನವರಿಗಿತ್ತು. ಸುಖ ದುಃಖ ಎರಡನ್ನೂ ಅವರೊಡನೆ ಹಂಚಿಕೊಂಡರೆ ಸಮಾಧಾನ. ಶಿವಣ್ಣನವರಿಗೆ ಶ್ರಿಗಳೆಂದರೆ ದೇವರ ಸಮಾನ. ಅವರು ಬೇಡ ಅಂದರೆ ಮುಗೀತು ದೇವರ ಅಪ್ಪಣೆ ಆಗಲಿಲ್ಲ ಎಂದು ತಮ್ಮ ಯೋಜನೆಗಳನ್ನು ಅಲ್ಲಿಗೇ ನಿಲ್ಲಿಸಿಬಿಡುತ್ತಿದ್ದರು. ಅವರ ಮೇಲಿನ ಭಕ್ತಿ ಶ್ರೀಗಳವರ 100ನೇ ವರ್ಷದ ಆಚರಣೆ ಸಂದರ್ಭದಲ್ಲಿ ಕಟ್ಟಿದ ಶಾಲಾ ಕಟ್ಟಡಕ್ಕೆ 2008ರಲ್ಲಿ “ಡಾ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಶತಮಾನೋತ್ಸವ ಸೌಧ” ಎಂದು ನಾಮಕರಣ ಮಾಡುವುದರಲ್ಲಿ ಪರಿಪೂರ್ಣವಾಯಿತು. ಸ್ವಾಮೀಜಿಯವರ ಪ್ರೀತಿಯ ವಾಕ್ಯ “ಕಾಯಕವೇ ಕೈಲಾಸ” ಎಂದು ಬರೆಸಿ ಶ್ರೀಗಳವರು ಅವುಗಳನ್ನು ಕತ್ತೆತ್ತಿ ದೃಷ್ಟಿಸಿ ನೋಡಿದಾಗ ಜೀವನ ಸಾರ್ಥಕವಾಯಿತೆನ್ನಿಸಿತು.

2009ರಲ್ಲಿ ಸಿದ್ಧಗಂಗಾ ಪದವಿಪೂರ್ವ ಕಾಲೇಜ್ ಉದ್ಘಾಟನೆಗೆ ಬಂದಾಗ ತಾವೇ ಯಾರ ಸಹಾಯವೂ ಇಲ್ಲದೆ ಮೆಟ್ಟಿಲು ಸರಸರನೆ ಹತ್ತಿ ಕಾಲೇಜ್ ಕಟ್ಟಡ ವೀಕ್ಷಣೆ ಮಾಡಿದರು.

2010ರಲ್ಲಿ ನಡೆದಾಡುವ ದೇವರಿಗೆ ಶ್ರೀಮಠದ ಮಕ್ಕಳ ಊಟಕ್ಕೆ ಸುಮಾರು ಐದು ಸಾವಿರ ತಟ್ಟೆಗಳನ್ನು ಸಮರ್ಪಿಸಿದಾಗ ಶಿವಣ್ಣನವರಿಗೆ ಶ್ರೀಮಠದ ಅನ್ನದ ಋಣವನ್ನು ಕಿಂಚಿತ್ತಾದರೂ ತೀರಿಸದಂತಾಯಿತೆಂಬ ಸಾರ್ಥಕ ಭಾವ. ಹೀಗೆ 5-6 ಬಾರಿ ಶ್ರೀಗಳವರನ್ನು ದಾವಣಗೆರೆಯ ತಮ್ಮ ಸಂಸ್ಥೆಗೆ ಬರಮಾಡಿಕೊಂಡು ಯತಾರ್ಥ ಸೇವೆ ಸಲ್ಲಿಸಿ ಧನ್ಯತೆಯ ಭಾವ ಹೊಂದಿದರು. ಸ್ವಾಮೀಜಿಯವರು ದಯಮಾಡಿಸುತ್ತಿದ್ದಾರೆಂದರೆ ಶಿವಣ್ಣನವರ ಸಂಭ್ರಮ ಹೇಳತೀರದು. ಬುಟ್ಟಿಗಟ್ಟಲೆ ಹೂ ತಂದು ಪಾದಪೂಜೆಯ ಸಂದರ್ಭದಲ್ಲಿ ಪುಷ್ಪಾರ್ಚನೆ ಮಾಡುವುದೊಂದು ಅನನ್ಯ ಸೇವೆ ಎಂಬಂತೆ ಮಾಡುತ್ತಿದ್ದರು.
ಸ್ವಾಮೀಜಿಯವರ ಚಟುವಟಿಕೆ ಕ್ಷೀಣವಾದಂತೆ ಕಾಕತಾಳೀಯವೆಂಬಂತೆ ಶಿವಣ್ಣನವರ ನೆನಪಿನ ಶಕ್ತಿಯೂ ಕುಂದುತ್ತಾ ಬಂದಿತು. ಆಗಾಗ ಶ್ರೀಮಠಕ್ಕೆ ಕರೆದೊಯ್ದು ಹಿರಿಯ ಮತ್ತು ಕಿರಿಯ ಸ್ವಾಮೀಜಿಯವರ ದರ್ಶನ ಪಡೆದು ಬರುವಂತೆ ಮಕ್ಕಳು ವ್ಯವಸ್ಥೆ ಮಾಡುತ್ತಿದ್ದರು.

ದಾವಣಗೆರೆಯಿಂದ ಯಾರೇ ಭಕ್ತಾದಿಗಳು ಶ್ರೀಮಠಕ್ಕೆ ಹೋದರೆ ದಾವಣಗೆರೆಯ ನಮ್ಮ ಸಂಸ್ಥೆ ಹೇಗೆ ನಡೀತಾ ಇದೆ ಎಂದು ಕೇಳಿ ತಿಳಿದುಕೊಳ್ಳುತ್ತಿದ್ದರು. ನಮ್ಮ ಸಂಸ್ಥೆಗಳಿಗೆಲ್ಲಾ ದಾವಣಗೆರೆಯ ಸಿದ್ಧಗಂಗಾ ಸಂಸ್ಥೆ ಮುಕುಟ ಇದ್ದ ಹಾಗೆ ಎಂದು ಪ್ರಶಂಸೆಯ ಮಾತು ಹೇಳುತ್ತಿದ್ದರು. ನಡೆದಾಡುವ ದೇವರಿಂದ ಇಂತಹ ಶ್ಲಾಘನೆಯ ಮಾತು ನಮಗೆ ಪ್ರಾಣವಾಯುವಿದ್ದಂತೆ. ನಮ್ಮ ಸಂಸ್ಥೆಯ ಫಲಿತಾಂಶ, ಮಕ್ಕಳ ಚಟುವಟಿಕೆ, ಸಂಸ್ಕøತಿ ಎಲ್ಲವನ್ನೂ ಅವಲೋಕಿಸುತ್ತಿದ್ದರು. ದಾರಿದೀಪವಾಗಿದ್ದ ಶ್ರೀಗಳವರನ್ನು ಕಳೆದುಕೊಂಡ ನಾವು ಅಕ್ಷರಶಃ ಇಂದು ಅನಾಥರಾಗಿದ್ದೇವೆ.

-Justin D'Souza
Head Mistress, Siddaganga School, Davangere




















No comments:

Post a Comment