Saturday, December 31, 2022

 ಮಕ್ಕಳ ಕೌಶಲ್ಯದ ಅನಾವರಣ

ಸಿದ್ಧಗಂಗಾದಲ್ಲಿ ನಡೆದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ.






ನಗರದ ಶ್ರೀ  ಸಿದ್ಧಗಂಗಾ ಶಾಲೆಯ 3 ರಿಂದ 10 ನೇ ತರಗತಿಯ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡರು. ನೂರಾರು ಮಾದರಿಗಳು, ಅದಕ್ಕೆ ಸಂಬಂಧಪಟ್ಟ ವಿವರಣೆ, ಮಕ್ಕಳ ವಿಜ್ಞಾನಾಸಕ್ತಿ ಮತ್ತು ಕಲಾ ಪ್ರೇಮಕ್ಕೆ ಸಾಕ್ಷಿಯಾದವು. ಸುಂದರವಾಗಿ ನಿರ್ಮಿತವಾದ ವೇದಿಕೆಯಲ್ಲಿ ಹಸಿರು ಸಸ್ಯಗಳಿಗೆ ನೀರೆರೆಯುವ ಮೂಲಕ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ'ಸೌಜ ರವರು ಮತ್ತು ತೀರ್ಪುಗಾರರಾಗಿ ಆಗಮಿಸಿದ್ದ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳನ್ನು ಶ್ಲಾಘಿಸಿದರು. ತಮ್ಮ ಮಕ್ಕಳ ‘ವಸ್ತು ಪ್ರದರ್ಶನ’ ವೀಕ್ಷಿಸಲು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಸ್ಮಾರ್ಟ್ ರೈಲ್ವೆ ಸ್ಟೇಷನ್, ಕಾರ್ಗಿಲ್ ಯುದ್ಧ , ಚನ್ನಕೇಶವ ದೇವಸ್ಥಾನ, ಮಣ್ಣಿನ ಮತ್ತು ಶಿಲೆಗಳ ಮಾದರಿಗಳು, ವಿಧಾನಸೌಧ, ಆದಿಮಾನವನ ಜೀವನಶೈಲಿ ಹೀಗೆ ನೂರಾರು ಸಮಾಜಶಾಸ್ತ್ರಕ್ಕೆ, ಕಲೆಗೆ ಸಂಬಂಧಪಟ್ಟ ಮಾದರಿಗಳು ಒಂದಕ್ಕಿಂತ  ಒಂದು ಆಕರ್ಷಕವಾಗಿ ಪ್ರದರ್ಶನಗೊಂಡವು. ಮಕ್ಕಳ ಕ್ರಿಯಾಶೀಲತೆಗೆ ವಿಸ್ಮಯ ಪಡುವಂತಾಯಿತು. ವಿಜ್ಞಾನ ಮಾದರಿಗಳು ಭೌತಶಾಸ್ತ್ರದ ಅನೇಕ ತತ್ವಗಳ ಮೇಲೆ ಆಧಾರಿತವಾಗಿದ್ದು, ರಸಾಯನಶಾಸ್ತ್ರ ವಿಭಾಗದಲ್ಲಿ ಮಕ್ಕಳು ರಾಸಾಯನಿಕ ಕ್ರಿಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಜೀವ ವೈವಿಧ್ಯಗಳ ಮಾದರಿಗಳು, ಸಸ್ಯಗಳು, ಜಲಚಕ್ರ, ನೀರಿನ ಮರುಬಳಕೆಯ ಮಾದರಿಗಳು ಜೀವಶಾಸ್ತ್ರ ವಿಭಾಗದಲ್ಲಿ ಗಮನ ಸೆಳೆದವು. ಹೊಲಗದ್ದೆಗಳಲ್ಲಿ ಪಶು-ಪಕ್ಷಿಗಳನ್ನು ಓಡಿಸಲು ದೊಡ್ಡ ಶಬ್ದ ಬರುವಂತೆ ಮಾಡಿದ ಮಂಕಿಗನ್ ಮಾದರಿಯ ಸರಳ ಯಂತ್ರದ ಬಗ್ಗೆ ಎಲ್ಲರೂ ಆಕರ್ಷಿತರಾದರು. ಇತ್ತೀಚಿನ ದಿನಗಳಲ್ಲಿ ಊರೊಳಗೆ ಬರುತ್ತಿರುವ ಮುಷ್ಯಾಗಳ ಹಾವಳಿ ತಡೆಯಲು ಇದು ಸೂಕ್ತವಾಗಿದೆ ಎಂಬ ಅಭಿಪ್ರಾಯ ಎಲ್ಲರಲ್ಲಿ ಮೂಡಿತು. ಪ್ಲಾಸ್ಟಿಕ್ ಪೈಪ್‌ನಿಂದ ಮಾಡಿದ ಬಹಳ ಹಗುರವಾದ ಈ ಮಂಕಿಗನ್ ಬಹು ಉಪಯೋಗಿಯಾಗಿತ್ತು. ಪ್ರಾಣಿ ಸಂಗ್ರಹಾಲಯ, ಗ್ರಾಮರ್ ಟ್ರೀ  , ಹೈಡ್ರಾಲಿಕ್ ಬ್ರಿಡ್ಜ್ , ರಾಕೆಟ್ ಉಡಾವಣೆ, ಸೌರವ್ಯೂಹ, ಕೆಂಪುಕೋಟೆ ಇತ್ಯಾದಿ ಅನೇಕ ಮಾದರಿಗಳಿದ್ದವು.

ಕೋವಿಡ್‌ನಿಂದಾಗಿ ಮಕ್ಕಳು ಎರಡು ವರ್ಷ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಸಂಸ್ಥೆಯ ಕಾರ್ಯದರ್ಶಿ ಹೇಮಂತ್‌ರವರ ಮಾರ್ಗದರ್ಶನದಲ್ಲಿ, ಶಿಕ್ಷಕರ ಮತ್ತು ಪಾಲಕರ ಸಹಯೋಗದಿಂದ ಕಲೆ ಮತ್ತು ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ಮಕ್ಕಳ ಆಸಕ್ತಿ ಅನಾವರಣಗೊಂಡಿತು. 300 ಕ್ಕೂ ಹೆಚ್ಚು ವಿವಿಧ ಮಾದರಿಗಳು ಪ್ರದರ್ಶಿತಗೊಂಡಿದ್ದವು.

Wednesday, December 21, 2022

 ಉಪಯೋಗಿಸಿ ಬಿಸಾಡುವ ಟಿಶ್ಯೂ ಪೇಪರ್‌ ನೀವಾಗಬೇಡಿ  ಹದಿವಯಸ್ಸಿನ ಬಾಲಕಿಯರಿಗೆ  ಡಾ || ಶಶಿಕಲಾ ಕೃಷ್ಣಮೂರ್ತಿಯವರಿಂದ ಎಚ್ಚರಿಕೆ

ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳಲ್ಲಿ ಉಂಟಾಗಿರುವ ಮಾನಸಿಕ ಬದಲಾವಣೆಗಳ ಹಾಗೂ ಹದಿವಯಸ್ಸಿನ ಹೆಣ್ಣು ಮಕ್ಕಳು ತಮ್ಮ ಜೀವನ ಶೈಲಿಯನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದರ ಬಗ್ಗೆ ಎಸ್. ಎಸ್. ಇನ್ಸ್ಟಿಟ್ಯೂಟ್ ಆಫ್‌ ಮೆಡಿಕಲ್‌ ಸೈನ್ಸ್‌ (SSIMS) ನ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ|| ಶಶಿಕಲಾ ಕೃಷ್ಣಮೂರ್ತಿಯವರು ಸಿದ್ಧಗಂಗಾ ಸಂಸ್ಥೆಯ 10 ನೇ ತರಗತಿ ಬಾಲಕಿಯರಿಗೆ ಮತ್ತು ತಾಯಂದಿರಿಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. 



ಕೋವಿಡ್‌ನಿಂದಾಗಿ ಶಾಲೆಗಳು ಮುಚ್ಚಿದ್ದಾಗ ಮಕ್ಕಳು ಆನ್‌ಲೈನ್‌ ತರಗತಿಗೆಂದು ಪಡೆದ ಮೊಬೈಲ್‌ಗಳಿಂದಾಗಿ ಹೇಗೆ ಅದಕ್ಕೆ ದಾಸರಾಗಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. 180 ಹೆಣ್ಣು ಮಕ್ಕಳು ಅಷ್ಟೇ ಸಂಖ್ಯೆಯ ತಾಯಂದಿರು ಡಾ|| ಶಶಿಕಲಾ ಮೇಡಂರವರ ಮಾತುಗಳನ್ನು ತದೇಕ ಚಿತ್ತದಿಂದ ಆಲಿಸಿದರು. ಹದಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಲ್ಲಿ ಆಗುವ ದೈಹಿಕ ಬದಲಾವಣೆ, ಶುಚಿತ್ವ, ಋತು ಚಕ್ರ, ಆಹಾರ ಪದ್ಧತಿ, ಯುವಕರತ್ತ ಆಕರ್ಷಣೆ, ಸ್ನೇಹಿತರ ಆಯ್ಕೆಯ ಬಗ್ಗೆ ವಿವೇಚನೆ ಇವುಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು. ತಾಯಂದಿರು ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು. ಲೈಂಗಿಕ ದೌರ್ಜನ್ಯಗಳ ಬಗ್ಗೆ ಅವುಗಳಿಂದಾಗುತ್ತಿರುವ ಅನಾಹುತಗಳನ್ನು ವಿವರಿಸುತ್ತಾ “ಉಪಯೋಗಿಸಿ ಬಿಸಾಡುವ ಟಿಶ್ಯೂ ಪೇಪರ್‌ ನೀವಾಗಬೇಡಿ” ಎಂದು ಎಚ್ಚರಿಕೆ ನೀಡಿದರು.

ಪ್ರಾರಂಭದಲ್ಲಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ 10 ನೇ ತರಗತಿಯ ಬಾಲಕಿಯರು ಪೂಜಾ ಸಾಮಗ್ರಿಗಳೊಂದಿಗೆ ತಮ್ಮ ತಮ್ಮ ತಾಯಂದಿರಿಗೆ ಪಾದ ಪೂಜೆ ನೆರವೇರಿಸಿ ಪುಷ್ಪವೃಷ್ಠಿಗೈದರು. ಹೆತ್ತಮ್ಮನಿಗೆ ಹೆಮ್ಮೆ ತರುವ ಮಗಳಾಗುವೆನೆಂದು ವಾಗ್ದಾನ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ, ಶಿಕ್ಷಕಿಯರಾದ ಪ್ರತಿಭಾ, ಝೀನತ್‌, ರಮಾದೇವಿ, ಅಂಬುಜಾಕ್ಷಿ ಮತ್ತು ಭೂಮಿಕ ಇವರಿದ್ದರು. ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿತ್ತೆಂಬುದು ಎಲ್ಲರ ಅಭಿಪ್ರಾಯವಾಗಿತ್ತು.

 ಸ್ಕೌಟ್ಸ್‌ – ಗೈಡ್ಸ್‌  ಸಿದ್ಧಗಂಗಾ ಸಂಸ್ಥೆಯಿಂದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ  ದಾವಣಗೆರೆಯ ಗಾಜಿನ ಅರಮನೆ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಮಟ್ಟದ ಪ್ರಪ್ರಥಮ ಸಾಂಸ್ಕೃತಿಕ ಜಾಂಬೂರಿ ನಡೆಯುತ್ತಿದೆ. ಡಿಸೆಂಬರ್‌ 21 ರಿಂದ 27 ರವರೆಗೆ ದೇಶ –ವಿದೇಶದ ಮಕ್ಕಳ ಪ್ರತಿಭೆ – ಸಾಹಸ ಪ್ರದರ್ಶನ ಅನಾವರಣಗೊಳ್ಳಲಿದೆ. ರಾಷ್ಟ್ರದ ವಿವಿಧ ರಾಜ್ಯಗಳ ಮತ್ತು 10 ವಿದೇಶಿ ರಾಷ್ಟ್ರಗಳ 50 ಸಾವಿರ ಸ್ಕೌಟ್ಸ್‌ – ಗೈಡ್ಸ, ರೇಂಜರ್ಸ್‌, ರೋವರ್ಸ್‌, 10 ಸಾವಿರ ದಳನಾಯಕರು ಮತ್ತು 3 ಸಾವಿರ ಸ್ವಯಂ ಸೇವಕರ ಬೃಹತ್‌ ಮೇಳ ಕರ್ನಾಟಕದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ದಾವಣಗೆರೆ ಜಿಲ್ಲೆಯಿಂದ 920 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ.

C:\Users\lenovo\Downloads\IMG-20221221-WA0002.jpg

ಈ ಅವಿಸ್ಮರಣೀಯ ಜಾಂಬೂರಿಗೆ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ 50 ಸ್ಕೌಟ್ಸ್‌ 47 ಗೈಡ್ಸ್‌ಗಳು, 5 ತರಬೇತಿದಾರರು ಮತ್ತು 4 ಸ್ವಯಂ ಸೇವಕರು ಎರಡು ಬಸ್‌ಗಳಲ್ಲಿ ತೆರಳಿದ್ದಾರೆ. ದಾವಣಗೆರೆ ಜಿಲ್ಲೆಯ ಪ್ರತಿಷ್ಠಿತ ಗಾಜಿನ ಅರಮನೆಯ ಪ್ರತಿರೂಪವನ್ನು ಜಾಂಬೂರಿಯ ಕಲಾ ಪ್ರದರ್ಶನದಲ್ಲಿ ಸ್ಥಾಪಿಸಿದ್ದಾರೆ. ರಾಷ್ಟ್ರದ ಅತಿ ದೊಡ್ಡ ದಾವಣಗೆರೆಯ ಗಾಜಿನ ಮನೆಯ ವಿಶಿಷ್ಠತೆಯನ್ನು ಪ್ರೇಕ್ಷಕರಿಗೆ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ತಿಳಿಸಿಕೊಡಲು ಮಕ್ಕಳು ಸಿದ್ಧರಾಗಿದ್ದಾರೆ. ಇದಲ್ಲದೆ ಹಿಂದೂ ಸಂಪ್ರದಾಯದ ವಿವಾಹ ಪದ್ಧತಿಯನ್ನು ಸಾಂಸ್ಕೃತಿಕ ವೇದಿಕೆಯಲ್ಲಿ 80 ಕ್ಕೂ ಹೆಚ್ಚು ಮಕ್ಕಳು ಅಭಿನಯಿಸಲಿದ್ದಾರೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಮಟ್ಟದ ಬೃಹತ್‌ ಜಾಂಬೂರಿ ಮೇಳದಲ್ಲಿ ದಾವಣಗೆರೆಯ ಅನುರೂಪ – ಸುಂದರ ಗಾಜಿನ ಅರಮನೆಯನ್ನು ಸಿದ್ಧಗಂಗಾ ಸ್ಕೌಟ್‌ – ಗೈಡ್‌ ಮಕ್ಕಳು ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ. ಶಾಲೆಯ ಚಿತ್ರಕಲಾ ಶಿಕ್ಷಕರಾದ ಯೋಗಿಪ್ರಸಾದ್‌, ರಾಜೇಶ್, ರಾಜಶೇಖರ್‌, ಸ್ವಾತಿ, ಹೀನಾ ಕೌಸರ್‌ ಮತ್ತು ಪ್ರಿಯಾಂಕರವರ ಪರಿಶ್ರಮದಿಂದ ಈ ಸುಂದರ ಆಕೃತಿ ಮೂಡಿ ಬಂದಿದೆ.

Monday, December 19, 2022

 ಸಿದ್ಧಗಂಗಾ ಕಾಲೇಜಿನ ಬಾಲಕ-ಬಾಲಕಿಯರಿಂದ

ರಾಷ್ಟ್ರ – ರಾಜ್ಯಮಟ್ಟದ ಕ್ರೀಡೆಗಳಲ್ಲಿ ಅಪ್ರತಿಮ ಸಾಧನೆ



ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ದಾವಣಗೆರೆಯ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಬಾಲಕ – ಬಾಲಕಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 

ಬಾಲಕಿಯರ ವಿಭಾಗದಿಂದ ಸೃಷ್ಠಿ ಕೆ ಬೆಳ್ಳೂಡಿ ರಾಜ್ಯ ಮಟ್ಟದ ಬಾಸ್ಕೆಟ್‌ ಬಾಲ್‌ನಲ್ಲಿ ದ್ವಿತೀಯ, ಯುವ ಸಬಲೀಕರಣ ಪ್ರಾಧಿಕಾರದ ವಿಭಾಗ ಮಟ್ಟದ ನೆಟ್‌ಬಾಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಹಾವೇರಿ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಮಾನ್ಯ ಜೆ. ಮತ್ತು ದೀಪ್ತಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಬಾಲ್‌ ಬ್ಯಾಡ್‌ಮಿಂಟನ್‌ನಲ್ಲಿ ಅಕ್ಷತಾ ಟಿ. ವಿ ಮತ್ತು ಸಿಂಧು ಸಿ. ವಿ, ಶಿವಮೊಗ್ಗದಲ್ಲಿ ನಡೆದ ಕರಾಟೆಯಲ್ಲಿ ರಕ್ಷಾ ಜಿ. ಆರ್, ಉಡುಪಿಯಲ್ಲಿ ನಡೆದ ವಾಲಿಬಾಲ್‌ನಲ್ಲಿ ಕವನ ವೈ ಮತ್ತು ಸ್ನೇಹ ಟಿ. ಬಿ, ಬೆಂಗಳೂರು ಗ್ರಾಮಾಂತರದಲ್ಲಿ ನಡೆದ ಥ್ರೊ ಬಾಲ್‌ ನಲ್ಲಿ ಶ್ರೀಕಮಲ, ಮಂಡ್ಯ ಜಿಲ್ಲೆಯಲ್ಲಿ ನಡೆದ ಚೆಸ್‌ನಲ್ಲಿ ಅನುಷಾ ಹೆಚ್, ದೀಪಾ ಜೆ. ಮೈದೂರ್‌ ಹಾಗೂ ರಾಯಚೂರು ಜಿಲ್ಲೆಯಲ್ಲಿ ನಡೆದ ಟೆನ್ನಿಸ್‌ ವಾಲಿಬಾಲ್‌ನಲ್ಲಿ ಸುಪ್ರಿಯ ಎಂ, ನಂದಿತ ವಿ, ಪ್ರಕಾಶ್‌, ರೇಣುಕಾ ಎಂ, ಧನುಷ್‌ ಕೆ. ಜೆ, ಸುಪ್ರಿಯ, ಹರ್ಷಿತ  ಎ. ಎನ್ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ, ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬಾಲಕರ ವಿಭಾಗದಲ್ಲಿ ವೈಭವ್‌‌ ಎಸ್, ವಿನಾಯಕ ಬಿ ತಮಿಳು ನಾಡಿನ ದಿಂಡಿಗಲ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ರೋಲ್‌ಬಾಲ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ರಾಯಚೂರಿನಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಸ್‌ ವಾಲಿಬಾಲ್‌ನಲ್ಲಿ ಭಾಗವಹಿಸಿದ ಶಶಾಂಕ ಕೆ. ಎಸ್, ಕಾರ್ತಿಕ್  ಟಿ. ವಿ, ಸುಹಾಸ್‌, ಧನುಷ್‌ ಎಲ್, ಅವನೀಶ್‌ ಡಿ. ಹೆಚ್ , ಶಿವರಾಜ್‌ ಹೆಚ್.‌ ಬಿ ಇವರಲ್ಲಿ ಕಾರ್ತಿಕ್  ಟಿ. ವಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಡೆದ ಚೆಸ್‌ನಲ್ಲಿ ಆದಿತ್ಯ ದೀಪಕ್‌, ಅಭಿಷೇಕ್‌ ವೈ. ಎಂ ಬೆಸ್ಟ್‌ ಆಟಗಾರರಾಗಿದ್ದರು. ಆದಿತ್ಯ ದೀಪಕ್‌ ಜಾರ್ಖಂಡ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್‌ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾನೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದ ಕ್ರೀಡೆಗಳಲ್ಲಿ ಉಲ್ಲಾಸ್‌ ರೆಡ್ಡಿ, ಸಿದ್ಧನಗೌಡ, ಹರೀಶ್‌ ಹೆಚ್.‌ ಕೆ ಇವರು ರಾಜ್ಯಮಟ್ಟದ ಥ್ರೋಬಾಲ್‌ನಲ್ಲಿ, ಸೂಫಿಯಾನ್‌ ಎಸ್.‌ ಎಂ ಚಿಕ್ಕೋಡಿ ಜಿಲ್ಲೆಯಲ್ಲಿ ನಡೆದ ಷಟಲ್‌ ಬ್ಯಾಡ್ಮಿಂಟನ್‌ ನಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕರಾಟೆಯಲ್ಲಿ ಮನೋಜ್‌ ಶೀಲವಂತ್‌ ಮತ್ತು ಮಧು, ಹಾವೇರಿ ಜಿಲ್ಲೆಯಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಶಿವರಾಜ್‌ ಸಿ. ಜೆ ಮತ್ತು ವಿನಾಯಕ ಕೆ. ಹಾಗೂ ಮೈಸೂರು ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಟೇಬಲ್‌ ಟೆನ್ನಿಸ್‌ನಲ್ಲಿ ಮಲ್ಲಿಕಾರ್ಜುನ್  ಜೆ. ಎಸ್ ಮತ್ತು ಅಭಿಷೇಕ್‌ ಬಿ. ಎಸ್ ಉತ್ತಮ ಪ್ರದರ್ಶನ ನೀಡಿ ಸಿದ್ಧಗಂಗಾ ಕಾಲೇಜಿನ ಉತ್ತಮ ಕ್ರೀಡಾಪಟುಗಳೆಂದು ಹೆಸರು ಗಳಿಸಿದ್ದಾರೆ.

ರಾಷ್ಟ್ರ – ರಾಜ್ಯ ಮಟ್ಟದಲ್ಲಿ ತಮ್ಮ ಕ್ರೀಡಾ ಪ್ರತಿಭೆ ಮೆರೆದ ಬಾಲಕ – ಬಾಲಕಿಯರಿಗೆ ಸಿದ್ಧಗಂಗಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.

Friday, December 16, 2022

 ಪ್ರತಿಭಾ ಕಾರಂಜಿ : ಸಿದ್ಧಗಂಗಾ ಫಲ್ಗುಣಿ ರಾಜ್ಯ ಮಟ್ಟಕ್ಕೆ ಆಯ್ಕೆ


ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಿದ್ಧಗಂಗಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ  ಫಲ್ಗುಣಿ ಜಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹಂತ 3 ರಲ್ಲಿ ಕನ್ನಡ ಭಾಷಾ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ನಿರ‍್ಗಳವಾಗಿ ಭಾಷಣ ಮಾಡಿದ ಈ ಬಾಲಕಿ ಕ್ಲಸ್ಟರ್‌, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಈಗ ರಾಜ್ಯ ಮಟ್ಟದ ಸ್ರ‍್ಧೆಗೆ ರ‍್ಹಳಾಗಿದ್ದಾಳೆ. ಸುಪ್ರಿಯಾ ಮತ್ತು ವಿ. ಗಿರಿ ಯವರ ಪುತ್ರಿ ಫಲ್ಗುಣಿಗೆ ಶಾಲಾ ಆಡಳಿತ ಮಂಡಳಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.