Tuesday, January 29, 2019

ಸಿದ್ಧಗಂಗಾ ಕ್ಷೇತ್ರಕ್ಕೆ 11,111 ಕಿಲೋ ಅಕ್ಕಿ ರವಾನೆ


ಸಿದ್ಧಗಂಗಾ ಕ್ಷೇತ್ರಕ್ಕೆ 11,111 ಕಿಲೋ ಅಕ್ಕಿ ರವಾನೆ

ದಾವಣಗೆರೆ ಜ. 29-


ನಡೆದಾಡುವ ದೇವರ ಮೇಲಿನ ಶ್ರದ್ಧಾಭಕ್ತಿಯ ದ್ಯೋತಕವಾಗಿ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಪಾಲಕರು, ಹಿರಿಯ ವಿದ್ಯಾರ್ಥಿಗಳು, ಭಕ್ತರು ಒಟ್ಟಾಗಿ 449 ಪ್ಯಾಕೆಟ್ ಅಕ್ಕಿ ಸಂಗ್ರಹಿಸಿ ಜನವರಿ 31ರಂದು ತುಮಕೂರಿನ ಸಿದ್ಧಗಂಗಾ ಶ್ರೀಮಠದಲ್ಲಿ ನಡೆಯುವ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮದ ದಾಸೋಹ ಮನೆಗೆ ಸಮರ್ಪಿಸುವ ಪವಿತ್ರ ಕಾರ್ಯದಲ್ಲಿ ಭಾಗಿಯಾದರು.


ತ್ರಿವಿಧ ದಾಸೋಹ ಮೂರ್ತಿಯ ಪುಣ್ಯಸ್ಮರಣೆಗೆ ಶ್ರೀಮಠಕ್ಕೆ ಆಗಮಿಸಲಿರುವ ಲಕ್ಷಾಂತರ ಭಕ್ತರ ನಿರಂತರ ದಾಸೋಹ ಸೇವೆಗೆ ದಾವಣಗೆರೆ ಸದ್ಭಕ್ತರ ಕಿರು ಸೇವೆ ಇದಾಗಿದೆ. ಈ ಸತ್ಕಾರ್ಯದಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯ ಹೇಮಂತ್, ಜಯಂತ್ ಹಿರಿಯ ವಿದ್ಯಾರ್ಥಿಗಳಾದ ಅಜ್ಜಪ್ಪ, ಸಿದ್ಧೇಶ್, ರಾಮ ಮನೋಹರ, ಹರ್ಷ ಇವರ ಸೇವೆ ಶ್ಲಾಘನೀಯ. ಪಾಲಕರು 1 ಪ್ಯಾಕೆಟ್ ಅಕ್ಕಿಯಿಂದ ಅವರ  ಶಕ್ತ್ಯಾನುಸಾರ 40 ಪ್ಯಾಕೆಟ್ ಅಕ್ಕಿವರೆಗೆ ಸಮರ್ಪಿಸುವ ಮೂಲಕ ತಮ್ಮ ಭಕ್ತಿ ಸಲ್ಲಿಸಿದರು. ಹನಿ ಹನಿಗೂಡಿ ಹಳ್ಳವಾಯಿತು. ಅಂದಾಜು ಮೂರುವರೆ ಲಕ್ಷ ಮೌಲ್ಯದ ಅಕ್ಕಿಯನ್ನು ಬಸಾಪುರದ ಶ್ರೀನಿವಾಸ ರೈಸ್ ಮಿಲ್‍ನಿಂದ ಖರೀದಿಸಲಾಗಿತ್ತು.


ಇಂದು ಬೆಳಿಗ್ಗೆ 11.30ಕ್ಕೆ ಸಿದ್ಧಗಂಗಾ ಶಾಲಾ ಆವರಣದಿಂದ ಪೂಜೆಗೊಂಡ ವಾಹನದಲ್ಲಿ 11,111 ಕಿಲೋ ಅಕ್ಕಿಯ ಪ್ಯಾಕೆಟ್‍ಗಳನ್ನು ಜೋಡಿಸಲಾಗಿತ್ತು. ತರಕಾರಿ ಮಾರುಕಟ್ಟೆಯಿಂದ ಸ್ವಯಂ ಪ್ರೇರಣೆಯಿಂದ ಪ್ರಭಾಕರ್ ಮತ್ತು ಸುರೇಶ್ ಸಹೋದರರು ಶ್ರೀಮಠಕ್ಕೆ ತರಕಾರಿ ಬುಟ್ಟಿಗಳನ್ನು ತಂದೊಪ್ಪಿಸಿದರು. ಕೆ.ಜಿ.ಎನ್. ಟ್ರಾನ್ಸ್‍ಪೋರ್ಟ್‍ನ ನೂರುಲ್ಲಾ ಖಾನ್‍ರವರು ಈ ವಾಹನವನ್ನು ಶ್ರೀಮಠಕ್ಕೆ ತಲುಪಿಸುವ ಜವಾಬ್ದಾರಿಯನ್ನು ಸೇವಾಭಾವನೆಯಿಂದ ವಹಿಸಿಕೊಂಡರು. ಶ್ರದ್ಧಾಭಕ್ತಿಯ ಈ ಕಾರ್ಯಕ್ಕೆ ಶಾಲೆಯ ಮಕ್ಕಳು, ಶಿಕ್ಷಕರು ಮತ್ತು ಪಾಲಕರು ಹಾಜರಿದ್ದರು.

Monday, January 28, 2019

ಜ. 31 ರಂದು ಸಿದ್ಧಗಂಗಾ ಶ್ರೀಗಳವರ ಪುಣ್ಯಾರಾಧನೆ

ಜ. 31 ರಂದು ಸಿದ್ಧಗಂಗಾ ಶ್ರೀಗಳವರ ಪುಣ್ಯಾರಾಧನೆ

ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಅನ್ನ ದಾಸೋಹ

ದಾವಣಗೆರೆ ಜ. 28
ನಡೆದಾಡುವ ದೇವರೆಂದು ವಿಶ್ವಮಾನ್ಯರಾಗಿರುವ ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 11ನೇ ದಿನದ ಪುಣ್ಯಾರಾಧನೆ ಕಾರ್ಯಕ್ರಮವನ್ನು ಜನವರಿ 31ರಂದು ಗುರುವಾರ ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಆವರಗೊಳ್ಳ ಪುರವರ್ಗ ಮಠದ ಶ್ರೀ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಭಕ್ತಿ ಸೇವೆ. ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿಯವರು ಕಾರ್ಯಕ್ರಮ ಉದ್ಘಾಟಿಸುವರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವಾಗಲಿದೆ. ಸುಮಾರು ಹತ್ತು ಸಾವಿರ ಜನರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಶಾಲೆಯ ಪಾಲಕರು, ಸ್ವಯಂ ಪ್ರೇರಣೆಯಿಂದ ದಾಸೋಹಕ್ಕಾಗಿ ಅಕ್ಕಿ , ಬೇಳೆ , ಬೆಲ್ಲ , ತರಕಾರಿ , ಎಣ್ಣೆ ಹೀಗೆ ವಿವಿಧ ರೂಪದಲ್ಲಿ ಸಲ್ಲಿಸುತ್ತಿದ್ದಾರೆ. ತ್ರಿವಿಧ ದಾಸೋಹಮೂರ್ತಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಜನವರಿ 31ರ ಗುರುವಾರ ನಡೆಯುವ ಈ ಪುಣ್ಯಕಾರ್ಯದಲ್ಲಿ ಎಲ್ಲ ಸದ್ಭಕ್ತರು ಪಾಲ್ಗೊಳ್ಳಲು ಸಂಸ್ಥೆಯ ಸಂಸ್ಥಾಪಕರಾದ ಎಂ. ಎಸ್. ಶಿವಣ್ಣನವರು ವಿನಂತಿಸಿದ್ದಾರೆ.

ಸಿದ್ಧಗಂಗಾ ಸಂಸ್ಥೆಯಿಂದ ಇಂದು ಅಕ್ಕಿ ಲೋಡ್ ರವಾನೆ.

ಸಿದ್ಧಗಂಗಾ ಶ್ರೀಗಳವರ ಪುಣ್ಯಾರಾಧನೆ

ದಾವಣಗೆರೆ ಸಿದ್ಧಗಂಗಾ ಸಂಸ್ಥೆಯಿಂದ ಇಂದು ಅಕ್ಕಿ ಲೋಡ್ ರವಾನೆ.

ದಾವಣಗೆರೆ ಜ. 28-

ತ್ರಿವಿಧ ದಾಸೋಹ ಮೂರ್ತಿಯ 11ನೇ ದಿನದ ಪುಣ್ಯಾರಾಧನೆ ಕಾರ್ಯವು ತುಮಕೂರಿನ ಶ್ರೀಮಠದಲ್ಲಿ ಜನವರಿ 31ರಂದು ಏರ್ಪಡಿಸಲಾಗಿದೆ. ಲಕ್ಷಾಂತರ ಭಕ್ತರು ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳುವರು. ಶ್ರೀಮಠದ ಮಕ್ಕಳಿಗೆ, ಸಿಬ್ಬಂದಿಯವರಿಗೆ ಮತ್ತು ಭಕ್ತಗಣಕ್ಕೆ ದಾಸೋಹ ವ್ಯವಸ್ಥೆ ಇರುತ್ತದೆ. ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ 1 ಲೋಡ್ ಅಕ್ಕಿಯನ್ನು ಈ ದಾಸೋಹ ಕಾರ್ಯಕ್ಕೆ ಅರ್ಪಿಸಲಾಗುವುದು. ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಅಕ್ಕಿ ಲೋಡ್ ಇರುವ ವಾಹನಕ್ಕೆ ಪೂಜೆ ಸಲ್ಲಿಸಲಾಗುವುದು. ಸಂಸ್ಥೆಯ ಕಾರ್ಯದರ್ಶಿ ಹೇಮಂತ್, ನಿರ್ದೇಶಕರಾದ ಡಾ|| ಜಯಂತ್ ಮತ್ತು ಪಾಲಕರಾದ ಅಪ್ಪಣ್ಣನವರ ನೇತೃತ್ವದಲ್ಲಿ ಅಕ್ಕಿ ಲೋಡ್ ಶ್ರೀಮಠಕ್ಕೆ ಸಮರ್ಪಣೆಯಾಗಲಿದೆ. ಶ್ರೀಮಠಕ್ಕೆ ಅಕ್ಕಿ ಅಥವಾ ಬೇಳೆ ಸಮರ್ಪಿಸಲು ಅಪೇಕ್ಷೆ ಇರುವ ಭಕ್ತರಿಗೆ ಮಂಗಳವಾರ ಬೆಳಿಗ್ಗೆ 9 ಗಂಟೆಯವರಿಗೆ ಅವಕಾಶವಿದೆ. ಶ್ರೀಮಠಕ್ಕೆ ಲಾರಿಯನ್ನು ಉಚಿತವಾಗಿ ಒದಗಿಸಿಕೊಟ್ಟ ಸಂಸ್ಥೆಯ ಪಾಲಕರಾದ ಶ್ರೀ ರಂಗ ಟ್ರಾನ್ಸ್‍ಪೋರ್ಟ್ ರವಿಯವರಿಗೆ ಹಾಗೂ ಶಕ್ತ್ಯಾನುಸಾರ ಸೇವೆ ಸಲ್ಲಿಸಿದ ಎಲ್ಲ ಸದ್ಭಕ್ತರಿಗೆ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ಕೃತಜ್ಞತೆ ಸಲ್ಲಿಸಿದ್ದಾರೆ.

Wednesday, January 23, 2019

ಬೃಹತ್ ರಂಗೋಲಿ ಚಿತ್ರ

ದಾವಣಗೆರೆ ಸಿದ್ಧಗಂಗಾ ಶಾಲೆಯಲ್ಲಿ ಮಕ್ಕಳಿಂದ
ನಡೆದಾಡುವ ದೇವರ ಬೃಹತ್ ರಂಗೋಲಿ ಚಿತ್ರ

ಜನವರಿ 23,
ಸಿದ್ಧಗಂಗೆಯ ದಿವ್ಯ ಚೈತನ್ಯ ಅಗಲಿ ಇಂದಿಗೆ ಮೂರು ದಿನ. ನಡೆದಾಡುವ ದೇವರ ಸ್ಮರಣೆ ನಾಡಿನಾದ್ಯಂತ ಹತ್ತು ಹಲವಾರು ವಿಧಗಳಲ್ಲಿ ಆಚರಿಸಿ ಭಕ್ತಗಣ ತಮ್ಮ ದುಃಖವನ್ನು ಶಮನಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯುಗ ಪುರುಷ, ಶಿವಯೋಗಿಯ ದರ್ಶನ ಭಾಗ್ಯ ಪಡೆದವರು ತಮ್ಮ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ.
ತಪೋನಿಧಿಯ ಪಾದಸ್ಪರ್ಶದಿಂದ ಪುನೀತಗೊಂಡಿದ್ದ ದಾವಣಗೆರೆ ನಗರದ ಸಿದ್ಧಗಂಗಾ ಶಾಲೆಯ ಆವರಣದ ನೆಲದ ಮೇಲೆ ನಡೆದಾಡುವ ದೇವರ ಬೃಹತ್ ರಂಗೋಲಿ ಚಿತ್ರ ಬಿಡಿಸಿ ಅಂಗಳವನ್ನು ಮತ್ತಷ್ಟು ಪಾವನಗೊಳಿಸಿ ಮಕ್ಕಳು  ತಮ್ಮ ಭಕ್ತಿ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು.

10ನೇ ತರಗತಿಯ ಸುಮಾರು 50 ಮಕ್ಕಳು ಈ ರಂಗೋಲಿ ಬಿಡಿಸುವ ಕಾರ್ಯ ಕೈಗೊಂಡರು. ಡಾ|| ಜಯಂತ್ ಅವರ ನಿರ್ದೇಶನದಲ್ಲಿ ಚಿತ್ರಕಲಾ ಶಿಕ್ಷಕರಾದ ಪ್ರಸನ್ನ ಕುಮಾರ್ ಕೆ. ಎನ್. ಮತ್ತು ಶಿವಕುಮಾರ್ ಟಿ. ಅವರ ನೇತೃತ್ವದಲ್ಲಿ ಹಸನ್ಮುಖದ ನಡೆದಾಡುವ ದೇವರ ಬೃಹತ್ ರಂಗೋಲಿ ಕಂಗೊಳಿಸಿತು. ನೂರು ಕೆಜಿಯಷ್ಟು ಬ್ಲ್ಯಾಕ್ ಆಕ್ಸೈಡ್ ಉಪಯೋಗಿಸಿ ಸುಮಾರು ಒಂದು ಗಂಟೆಯ ಅವಧಿಯಲ್ಲಿ ನಿಧಾನವಾಗಿ ಅರಳಿದ ಈ ರಂಗೋಲಿ ಎತ್ತರದ ಸ್ಥಳದಿಂದ ನೋಡಿದಾಗ ಕಣ್ಮನ ಸೆಳೆಯುವಂತಿದೆ. 90 X 90 ಅಡಿ ಸ್ಥಳದಲ್ಲಿ ರಂಗೋಲಿ ಮೂಡುತ್ತಿದ್ದ ಚಚ್ಚೌಕದ ಸುತ್ತಲೂ ನಿಂತ ಹೈಸ್ಕೂಲ್ ಮಕ್ಕಳು ಈ ರಂಗೋಲಿಗೊಂದು ಸುಂದರವಾದ ಚೌಕಟ್ಟು ಹೊಂದಿಸಿಕೊಟ್ಟರು. ಸಾರ್ವಜನಿಕ ವೀಕ್ಷಣೆಗೆ ಈ ರಂಗೋಲಿ ಶುಕ್ರವಾರದವರೆಗೆ ಲಭ್ಯವಿರುತ್ತದೆ. ಮೊದಲ ಮಹಡಿ ಹತ್ತಿ ನೋಡಿದರೆ ರಂಗೋಲಿಯಲ್ಲಿ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಹಸನ್ಮುಖ ಸ್ಪಷ್ಟವಾಗಿ ಗೋಚರವಾಗುತ್ತದೆ. 


Monday, January 21, 2019

ಗುರುಕಾರುಣ್ಯ ಪಡೆದ ದಾವಣಗೆರೆಯ ಶಿವಣ್ಣ

ಸಿದ್ಧಗಂಗಾ ಶ್ರೀಗಳವರಿಗೂ ದಾವಣಗೆರೆಯ ಎಂ.ಎಸ್. ಶಿವಣ್ಣನವರಿಗೂ ತಂದೆ-ಮಗನಂತಹ ಅವಿನಾಭಾವ ಸಂಬಂಧ. ಪ್ರೀತಿ, ಹಠ ಎರಡೂ ಮೇಳೈಸಿದ ಅಪೂರ್ವ ಸಂಗಮ.

ಎಸ್.ಎಸ್.ಎಲ್.ಸಿ. ಮಾಕ್ರ್ಸ್‍ಕಾರ್ಡ್ ಹಿಡಿದು ಮಠಕ್ಕೆ ಹೋದ ಶಿವಣ್ಣನಿಗೆ ಆಗಿನ್ನೂ 15ರ ಹರೆಯ. ಮಾಗಡಿಯಿಂದ ನಡೆದು ಮಠಕ್ಕೆ ಹೋದವರು ನೇರ ಹೋಗಿದ್ದು ಸ್ವಾಮೀಜಿಯವರ ಕಛೇರಿಯೊಳಗೆ. ನಾನು ಮುಂದೆ ಓದಬೇಕು ಮಠದಲ್ಲಿ ಇರ್ತೇನೆ ಎಂಬ ನೇರ ನುಡಿ ಕೇಳಿ ಅಚ್ಚರಿಗೊಂಡ ಸ್ವಾಮೀಜಿಯವರು ಬಾಲಕನ ಕೈಯಿಂದ marks card ಪಡೆದು ನೋಡಿದರು. Rank  ಸ್ಟೂಡೆಂಟ್. ಮನೆಯಲ್ಲಿ ಬಡತನ ಮೇಲಾಗಿ ತಂದೆ-ತಾಯಿ ಇಲ್ಲದ ಅನಾಥನೆಂದು ತಿಳಿದಾಗ ಸ್ವಾಮೀಜಿಯವರ ಮಾತೃ ಹೃದಯ ಕರಗಿತು. ನೀನು ಮಠದಲ್ಲಿ ಇರುವುದು ಬೇಡ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಸೇರಿಕೋ. ಗುಬ್ಬಿ ತೋಟದಪ್ಪನ ಛತ್ರದಲ್ಲಿ ಊಟ-ವಸತಿ ಸೌಕರ್ಯಕ್ಕೆ ಏರ್ಪಾಟು ಮಾಡೋಣ ಎಂದವರೇ ಪತ್ರ ಕೊಟ್ಟರು. ಸಿದ್ಧಗಂಗಾ ಸ್ವಾಮೀಜಿಯವರ ಶಿಫಾರಸ್ಸು ಪತ್ರ ತಂದ ಬಾಲಕ ಶಿವಣ್ಣನಿಗೆ ಸುಲಭವಾಗಿ ತೋಟದಪ್ಪನ ಛತ್ರ ಆಶ್ರಯ ನೀಡಿತು. ಸೆಂಟ್ರಲ್ ಕಾಲೇಜಿನಲ್ಲೂ ಸೀಟು ಸಿಕ್ಕಿತು. ಹೀಗೆ ಪ್ರಾರಂಭವಾದ ಅನಿರೀಕ್ಷಿತ ಘಟನೆಯಿಂದ ಸ್ವಾಮೀಜಿಯವರಿಗೆ ಶಿವಣ್ಣ ಅಸಾಧ್ಯ ಬುದ್ಧಿಶಕ್ತಿಯುಳ್ಳವನು, ಛಲಗಾರ ಎಂಬುದು ವೇದ್ಯವಾಗಿತ್ತು. ನಿರ್ಭೀತಿಯಿಂದ ತನಗೆ ಬೇಕಾದ್ದು ಕೇಳಿ ಪಡೆಯುತ್ತಿದ್ದ ಈ ಬಾಲಕನ ಮೇಲೆ ಪ್ರೀತಿ. ಆದರೆ ಕೆಲವೊಮ್ಮೆ ಹುಸಿಮುನಿಸು ತೋರುತ್ತಿದ್ದರು.

ಹೀಗೆ ಸಾಗಿ ಬಂದ ಗುರು-ಶಿಷ್ಯರ ಸಂಬಂಧ ದಾವಣಗೆರೆಯಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆ ಸ್ಥಾಪನೆಗೆ ಕಾರಣವಾಯಿತು. ಸಿದ್ಧಗಂಗಾ ಎಂದು ಹೆಸರಿಡಲು ಸ್ವಾಮೀಜಿಯವರು ಪ್ರಾರಂಭದಲ್ಲಿ ಒಪ್ಪಲಿಲ್ಲ. ಹೆಸರಿಗೆ ಚ್ಯುತಿ ಬರದಂತೆ ನಡೆಸುವುದಾದರೆ ಮಾತ್ರ ಎಂಬ ಕರಾರು. ಮಠದಿಂದ ಒಂದು ಬಿಡಿಗಾಸೂ ಕೊಡುವುದಿಲ್ಲ ಎಂಬ ಕಟ್ಟೆಚ್ಚರ. 35ರ ಹರೆಯದ ಶಿವಣ್ಣ ಜಗಮೊಂಡ. ಹಿಡಿದ ಹಠ ಬಿಡದ ಶಿವಣ್ಣ ತಮ್ಮ ಆಶೀರ್ವಾದ ಒಂದಿದ್ದರೆ ಸಾಕು ಎಂದು ಸ್ವಾಮೀಜಿಯವರಿಗೆ ನಮಸ್ಕರಿಸಿ ಬಂದು ಸ್ಥಾಪಿಸಿದ ಸಿದ್ಧಗಂಗಾ ಸಂಸ್ಥೆ ಇಂದು ದಾವಣಗೆರೆಯ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ.

1970ರಲ್ಲಿ ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯ ಫಲಕ ಅನಾವರಣಕ್ಕೆ ದಯಮಾಡಿಸಿದ ಶ್ರೀಗಳವರು ಸಂಸ್ಥೆಯ ಏಳು-ಬೀಳುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.

1997ರಲ್ಲಿ ಸಂಸ್ಥೆಯ ರಜತ ಮಹೋತ್ಸವ ಮತ್ತು ನಮ್ಮ ಹಿರಿಯ ಮಗ ಹೇಮಂತ್ ಮತ್ತು ರೇಖಾರಾಣಿಯವರ ವಿವಾಹ ಮಹೋತ್ಸವಕ್ಕೆ ಬಂದು ಆಶೀರ್ವದಿಸಿದರು.

2003ರಲ್ಲಿ ಸಿದ್ಧಲಿಂಗೇಶ್ವರ ಸ್ವಾಮಿಯ ದೇವಾಲಯ ಉದ್ಘಾಟನೆಗೆ ಬಂದವರು ಶಿವಪೂಜೆ ನೆರವೇರಿಸಿ ನಮ್ಮನ್ನು ಕೃತಾರ್ಥರನ್ನಾಗಿಸಿದರು. ನೀನು ಅಸಾಧ್ಯ ಕಣೋ ಶಿವಣ್ಣ. ಸಿದ್ಧಲಿಂಗೇಶ್ವರನನ್ನು ದಾವಣಗೆರೆಯಲ್ಲಿ ಪ್ರತಿಷ್ಠಾಪಿಸಿ ಬಿಟ್ಟೆ ಎಂದು ಮೆಚ್ಚಿ ನುಡಿದರು. ನೆನೆದಾಗಲೆಲ್ಲಾ ಶ್ರೀಗಳವರ ದರ್ಶನಕ್ಕೆ ತುಮಕೂರಿಗೆ ಹೋಗಿ ಬರುವ ಪರಿಪಾಠ ಶಿವಣ್ಣನವರಿಗಿತ್ತು. ಸುಖ ದುಃಖ ಎರಡನ್ನೂ ಅವರೊಡನೆ ಹಂಚಿಕೊಂಡರೆ ಸಮಾಧಾನ. ಶಿವಣ್ಣನವರಿಗೆ ಶ್ರಿಗಳೆಂದರೆ ದೇವರ ಸಮಾನ. ಅವರು ಬೇಡ ಅಂದರೆ ಮುಗೀತು ದೇವರ ಅಪ್ಪಣೆ ಆಗಲಿಲ್ಲ ಎಂದು ತಮ್ಮ ಯೋಜನೆಗಳನ್ನು ಅಲ್ಲಿಗೇ ನಿಲ್ಲಿಸಿಬಿಡುತ್ತಿದ್ದರು. ಅವರ ಮೇಲಿನ ಭಕ್ತಿ ಶ್ರೀಗಳವರ 100ನೇ ವರ್ಷದ ಆಚರಣೆ ಸಂದರ್ಭದಲ್ಲಿ ಕಟ್ಟಿದ ಶಾಲಾ ಕಟ್ಟಡಕ್ಕೆ 2008ರಲ್ಲಿ “ಡಾ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಶತಮಾನೋತ್ಸವ ಸೌಧ” ಎಂದು ನಾಮಕರಣ ಮಾಡುವುದರಲ್ಲಿ ಪರಿಪೂರ್ಣವಾಯಿತು. ಸ್ವಾಮೀಜಿಯವರ ಪ್ರೀತಿಯ ವಾಕ್ಯ “ಕಾಯಕವೇ ಕೈಲಾಸ” ಎಂದು ಬರೆಸಿ ಶ್ರೀಗಳವರು ಅವುಗಳನ್ನು ಕತ್ತೆತ್ತಿ ದೃಷ್ಟಿಸಿ ನೋಡಿದಾಗ ಜೀವನ ಸಾರ್ಥಕವಾಯಿತೆನ್ನಿಸಿತು.

2009ರಲ್ಲಿ ಸಿದ್ಧಗಂಗಾ ಪದವಿಪೂರ್ವ ಕಾಲೇಜ್ ಉದ್ಘಾಟನೆಗೆ ಬಂದಾಗ ತಾವೇ ಯಾರ ಸಹಾಯವೂ ಇಲ್ಲದೆ ಮೆಟ್ಟಿಲು ಸರಸರನೆ ಹತ್ತಿ ಕಾಲೇಜ್ ಕಟ್ಟಡ ವೀಕ್ಷಣೆ ಮಾಡಿದರು.

2010ರಲ್ಲಿ ನಡೆದಾಡುವ ದೇವರಿಗೆ ಶ್ರೀಮಠದ ಮಕ್ಕಳ ಊಟಕ್ಕೆ ಸುಮಾರು ಐದು ಸಾವಿರ ತಟ್ಟೆಗಳನ್ನು ಸಮರ್ಪಿಸಿದಾಗ ಶಿವಣ್ಣನವರಿಗೆ ಶ್ರೀಮಠದ ಅನ್ನದ ಋಣವನ್ನು ಕಿಂಚಿತ್ತಾದರೂ ತೀರಿಸದಂತಾಯಿತೆಂಬ ಸಾರ್ಥಕ ಭಾವ. ಹೀಗೆ 5-6 ಬಾರಿ ಶ್ರೀಗಳವರನ್ನು ದಾವಣಗೆರೆಯ ತಮ್ಮ ಸಂಸ್ಥೆಗೆ ಬರಮಾಡಿಕೊಂಡು ಯತಾರ್ಥ ಸೇವೆ ಸಲ್ಲಿಸಿ ಧನ್ಯತೆಯ ಭಾವ ಹೊಂದಿದರು. ಸ್ವಾಮೀಜಿಯವರು ದಯಮಾಡಿಸುತ್ತಿದ್ದಾರೆಂದರೆ ಶಿವಣ್ಣನವರ ಸಂಭ್ರಮ ಹೇಳತೀರದು. ಬುಟ್ಟಿಗಟ್ಟಲೆ ಹೂ ತಂದು ಪಾದಪೂಜೆಯ ಸಂದರ್ಭದಲ್ಲಿ ಪುಷ್ಪಾರ್ಚನೆ ಮಾಡುವುದೊಂದು ಅನನ್ಯ ಸೇವೆ ಎಂಬಂತೆ ಮಾಡುತ್ತಿದ್ದರು.
ಸ್ವಾಮೀಜಿಯವರ ಚಟುವಟಿಕೆ ಕ್ಷೀಣವಾದಂತೆ ಕಾಕತಾಳೀಯವೆಂಬಂತೆ ಶಿವಣ್ಣನವರ ನೆನಪಿನ ಶಕ್ತಿಯೂ ಕುಂದುತ್ತಾ ಬಂದಿತು. ಆಗಾಗ ಶ್ರೀಮಠಕ್ಕೆ ಕರೆದೊಯ್ದು ಹಿರಿಯ ಮತ್ತು ಕಿರಿಯ ಸ್ವಾಮೀಜಿಯವರ ದರ್ಶನ ಪಡೆದು ಬರುವಂತೆ ಮಕ್ಕಳು ವ್ಯವಸ್ಥೆ ಮಾಡುತ್ತಿದ್ದರು.

ದಾವಣಗೆರೆಯಿಂದ ಯಾರೇ ಭಕ್ತಾದಿಗಳು ಶ್ರೀಮಠಕ್ಕೆ ಹೋದರೆ ದಾವಣಗೆರೆಯ ನಮ್ಮ ಸಂಸ್ಥೆ ಹೇಗೆ ನಡೀತಾ ಇದೆ ಎಂದು ಕೇಳಿ ತಿಳಿದುಕೊಳ್ಳುತ್ತಿದ್ದರು. ನಮ್ಮ ಸಂಸ್ಥೆಗಳಿಗೆಲ್ಲಾ ದಾವಣಗೆರೆಯ ಸಿದ್ಧಗಂಗಾ ಸಂಸ್ಥೆ ಮುಕುಟ ಇದ್ದ ಹಾಗೆ ಎಂದು ಪ್ರಶಂಸೆಯ ಮಾತು ಹೇಳುತ್ತಿದ್ದರು. ನಡೆದಾಡುವ ದೇವರಿಂದ ಇಂತಹ ಶ್ಲಾಘನೆಯ ಮಾತು ನಮಗೆ ಪ್ರಾಣವಾಯುವಿದ್ದಂತೆ. ನಮ್ಮ ಸಂಸ್ಥೆಯ ಫಲಿತಾಂಶ, ಮಕ್ಕಳ ಚಟುವಟಿಕೆ, ಸಂಸ್ಕøತಿ ಎಲ್ಲವನ್ನೂ ಅವಲೋಕಿಸುತ್ತಿದ್ದರು. ದಾರಿದೀಪವಾಗಿದ್ದ ಶ್ರೀಗಳವರನ್ನು ಕಳೆದುಕೊಂಡ ನಾವು ಅಕ್ಷರಶಃ ಇಂದು ಅನಾಥರಾಗಿದ್ದೇವೆ.

-Justin D'Souza
Head Mistress, Siddaganga School, Davangere




















ನಗರದ ಸಿದ್ಧಗಂಗಾ ಸಂಸ್ಥೆಯಿಂದ ವಿಶ್ವ ಗುರುವಿಗೆ ಅಂತಿಮ ನಮನ


ದಾವಣಗೆರೆ, ಜ 21

ನಡೆದಾಡುವ ದೇವರು, ಕರ್ನಾಟಕ ರತ್ನ, ಕಾಯಕಯೋಗಿ, ತ್ರಿವಿಧ ದಾಸೋಹಮೂರ್ತಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಯವರು ಇಂದು ಮಧ್ಯಾನ್ಹ ಶಿವೈಕ್ಯರಾದ ವಿಷಯ ಸುದ್ಧಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದೊಳಗೆ ಮಂಕು ಕವಿದಂತಾಯಿತು. ಶ್ರೀಗಳವರ ಚೈತನ್ಯ ಜ್ಯೋತಿಯಿಂದ ಬೆಳಗುತ್ತಿದ್ದ ಶಾಲಾ ಕಾಲೇಜು ಮಕ್ಕಳು ದುಃಖಿತರಾದರು. ಪಾಲಕರು, ಶಿಕ್ಷಕರು ಅನಾಥ ಭಾವದಿಂದ ಬಿಕ್ಕಳಿಸಿದರು.

ಶಾಲಾ ಕಾಲೇಜಿನ ಐದು ಸಹಸ್ರಕ್ಕೂ ಹೆಚ್ಚು ಮಕ್ಕಳು, ಬೋಧP,À ಬೋಧಕೇತರ ಸಿಬ್ಬಂದಿವರ್ಗದವರು, ಪಾಲಕರು ಸಂಸ್ಥೆಯ ವೇದಿಕೆಗಳ ಮೇಲಿದ್ದ ಶ್ರೀ ಗಳವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪಾದುಕೆಗಳಿಗೆ ನಮಸ್ಕರಿಸಿ ಅಂತಿಮ ನಮನ ಸಲ್ಲಿಸಿದರು.

ಬೆಳಿಗ್ಗೆಯಿಂದಲೂ ದುಗುಡದ ವಾತಾವರಣದಲ್ಲಿದ್ದ ಎಲ್ಲರೂ ಒಳ್ಳೆಯ ಸುದ್ಧಿಗೆ ಕಾತುರದಿಂದ ಕಾಯುತ್ತಿದ್ದರು. ಬೆಳಿಗ್ಗೆ 10 ಗಂಟೆಗೆ ಪ್ರೌಢಶಾಲೆಯ ಮಕ್ಕಳು ಮತ್ತೊಮ್ಮೆ ಶ್ರೀಗಳವರ ಆರೋಗ್ಯಕ್ಕಾಗಿ ಧ್ಯಾನ ಮುದ್ರೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಶ್ರೀಗಳವರ ಆರೋಗ್ಯ ಉತ್ತಮಗೊಳ್ಳುತ್ತದೆಂಬ ಆಶಾಭಾವನೆ ಪ್ರತಿಯೊಬ್ಬರಲ್ಲೂ ಮನೆ ಮಾಡಿತ್ತು. ಎಲ್ಲರ ನಿರೀಕ್ಷೆ ಹುಸಿಯಾಗುವಂತೆ ಶ್ರೀಗಳವರ ಲಿಂಗೈಕ್ಯ ಸುದ್ಧಿಯಿಂದÀ ನಿರಾಸೆಗೊಂಡರು.

ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ಶ್ರೀಗಳವರು ದಾವಣಗೆರೆಯ ತಮ್ಮ ಸಂಸ್ಥೆಗೆ ಬಂದ ಎಲ್ಲ ಸಂದರ್ಭಗಳನ್ನು ಜ್ಞಾಪಿಸಿಕೊಂಡು ಅವರ ಆಶೀರ್ವಾದಬಲದಿಂದಲೇ ಮುನ್ನಡೆಯುತ್ತಿದ್ದ ಸಂಸ್ಥೆಗೆ ದಾರಿದೀಪವಾಗಿದ್ದ ಬೆಳಕನ್ನು ಕಳೆದುಕೊಂಡಂತಾಗಿದೆ ಎಂದರು.

ಶ್ರೀಗಳವರ ಗೌರವಾರ್ಥ ನಾಳೆ ಶಾಲೆ – ಕಾಲೇಜಿಗೆ ರಜೆ ಘೋಷಿಸಲಾಗಿದೆ. ಶ್ರೀಗಳವರ ಜೊತೆಗಿದ್ದ ಅವಿನಾಭಾವದ  ದ್ಯೋತಕವಾಗಿ ನೂರಾ ಹನ್ನೊಂದು ಅಡಿ ಎತ್ತರದ ಶ್ರೀಗಳವರ ಪ್ರತಿಮೆಯನ್ನು ಹೊಸ ಕ್ಯಾಂಪಸ್‍ನಲ್ಲಿ ನಿರ್ಮಿಸುವ ಯೋಜನೆ ಇದೆ ಎಂದರು.

ತುಮಕೂರಿನ ಮಠದಲ್ಲಿ ಪೂಜ್ಯರ ಅಂತಿಮ ದರ್ಶನ ಮಾಡಲಾಗದ ಭಕ್ತರು ಸಿದ್ಧಗಂಗಾ ಸಂಸ್ಥೆಯ ವೇದಿಕೆಯಲ್ಲಿಟ್ಟಿರುವ ಶ್ರೀಗಳವರ ಪಾದುಕೆಗಳ ದರ್ಶನ ಮಾಡಬಹುದೆಂದು ತಿಳಿಸಿದರು. ಸಂಸ್ಥೆಯ ಸಂಸ್ಥಾಪಕರಾದ ಎಂ. ಎಸ್. ಶಿವಣ್ಣನವರು ತದೇಕಚಿತ್ತದಿಂದ ಶ್ರೀಗಳವರ ಭಾವಚಿತ್ರ ನೋಡುತ್ತಾ ಮೂಕವಾಗಿ ರೋಧಿಸಿದರು. ತಮ್ಮನ್ನು ಸಾಕಿ - ಸಲಹಿದ , ವಿದ್ಯೆ ನೀಡಿದ ಗುರುವಿನ ಅಗಲಿಕೆ ಅವರ ಮುಖಭಾವದಲ್ಲಿ ವ್ಯಕ್ತವಾಗುತ್ತಿತ್ತು.




Friday, January 18, 2019

ಶಿವಕುಮಾರ ಸ್ವಾಮಿಗಳವರ - ಶ್ರೀ ವಾಣಿ

ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ - ಶ್ರೀ ವಾಣಿ

ಶತಾಯುಷಿ, ಕರ್ನಾಟಕ ರತ್ನ, ತ್ರಿವಿಧ ದಾಸೋಹ ಮೂರ್ತಿ, ನಡೆದಾಡುವ ದೇವರು, ಸಿದ್ಧಗಂಗೆಯ ಸಂತ, ಮಹಾ ತಪಸ್ವಿ, ಕರುಣಾ ಸಾಗರ, ಕಾಯಕಯೋಗಿ ಹೀಗೆ ಹತ್ತು ಹಲವಾರು ಅಭಿದಾನಗಳಿಂದ ಕಂಗೊಳಿಸುತ್ತಿರುವ ಜಗದಚ್ಚರಿ ಶ್ರೀ ಸಿದ್ಧಗಂಗಾ ಕ್ಷೇತ್ರದ ಹಿರಿಯ ಸ್ವಾಮೀಜಿ ಡಾ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರು ತಮ್ಮ ನೂರಾ ಹನ್ನೊಂದನೆಯ ಸಾರ್ಥಕ ಜೀವನ ಸಾಗಿಸಿ ತಮ್ಮ ಆಧ್ಯಾತ್ಮಿಕ ಬಲದಿಂದ ಕೋಟ್ಯಾನುಕೋಟಿ ಜನಮಾನಸದಲ್ಲಿ ದೇವಪದವಿಯಿಂದ ಕಂಗೊಳಿಸುತ್ತಿದ್ದಾರೆ. ಕಾಲಕಾಲಕ್ಕೆ ತಮ್ಮ ವಿದ್ವತ್‍ಪೂರ್ಣ ಭಾಷಣಗಳಿಂದ ಪ್ರವಚನಗಳಿಂದ ಜನರಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಮೂಡಿಸಿದ್ದಾರೆ.
ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರು ತಮ್ಮ ಪದವಿ ಶಿಕ್ಷಣದಲ್ಲಿ ಅಭ್ಯಾಸ ಮಾಡಿದ್ದು ಗಣಿತ ಮತ್ತು ಭೌತ ವಿಜ್ಞಾನ ವಿಷಯಗಳನ್ನು. ಆದರೆ ಅವರ ಪಾರಮಾರ್ಥಿಕ ಜ್ಞಾನದಿಂದ ಸಿದ್ಧಗಂಗೆ ಇಂದು ತ್ರಿವಿಧ ದಾಸೋಹ ಕೇಂದ್ರವಾಗಿ ಕಂಗೊಳಿಸುತ್ತಿದೆ. ಶ್ರೀವಾಣಿಗಳನ್ನೊಮ್ಮೆ ಅವಲೋಕಿಸಿದರೆ ಶ್ರೀಗಳವರ ವಿಚಾರಧಾರೆ ಅವ್ಯಕ್ತವಾಗಿ ನಮ್ಮನ್ನು ಮುನ್ನಡೆಸುತ್ತದೆ.

“ಧರ್ಮದ ತಳಹದಿಯ ಮೇಲೆ ಕಟ್ಟಲ್ಪಡುವ ನಾಗರಿಕತೆ ಸುಸಂಸ್ಕøತವಾದದ್ದು. ನಮ್ಮ ಸಮಸ್ತ ಕ್ರಿಯಾಮುಖದಲ್ಲಿ ಧರ್ಮಬುದ್ಧಿ ಬರದಿದ್ದರೆ ನಾವು ಎಷ್ಟೇ ನಾಗರಿಕರೆನಿಸಿದರೂ ಸುಸಂಸ್ಕøತರೆನಿಸಲಾರೆವು. ನಮಗೆ ಗಳಿಕೆ-ಬಳಕೆ ಎರಡರ ಅರ್ಥವು ಆಗಬೇಕು. ಸಂಪಾದಿಸಿದ ಎಲ್ಲವನ್ನೂ ಧರ್ಮ ಬುದ್ಧಿಯಿಂದಲೇ ಅರಿತು ಬಳಕೆ ಮಾಡಬೇಕು”.
ಕ್ರೀಡೆಗಳಲ್ಲಿ ಎರಡು ಗುಂಪು ಆಟವಾಡುತ್ತಾರೆ. ಒಂದು ಗುಂಪು ಗೆಲ್ಲುತ್ತದೆ. ಮತ್ತೊಂದು ಗುಂಪು ಸೋಲುತ್ತದೆ. ಆಟದಲ್ಲಿ ಸೋಲು – ಗೆಲುವು ಸಾಮಾನ್ಯವಾದದ್ದು, ಗೆದ್ದವರು ಹಿಗ್ಗುತ್ತಾರೆ. ಸೋತವರು ದುಃಖ ಪಡುತ್ತಾರೆ. ಇಂದು ಸೋತವರು ನಾಳೆ ಗೆಲ್ಲಬಹುದು. ಅಪಮಾನವಾಯಿತು ಎಂಬ ಭಾವನೆ ಬಿಟ್ಟು ಮತ್ತೆ ಪ್ರಯತ್ನ ಪಟ್ಟರೆ ಗೆಲ್ಲಬಹುದು.
“ಇಂದು ಕಾಲ ಬದಲಾಗಿದೆ. ಒಂದೊಂದು ಮಠವೂ ಒಂದೊಂದು ವಿಶ್ವವಿದ್ಯಾಲಯವಾಗಬೇಕಾಗಿದೆ. ಮಠಾಧಿಪತಿಯಾದವರು ವಿದ್ವತ್ತಿನ ಶ್ರೀಗಿರಿಯಾಗಬೇಕಾಗಿದೆ. ಗಳಿಸಿದ ವಿದ್ವತ್ತನ್ನು ಜನಕಲ್ಯಾಣಕ್ಕೆ ವಿನಿಯೋಗಿಸುವ ಹೃದಯವಂತರಾಗಬೇಕಾಗಿದೆ”.
“ಆರ್ಥಿಕವಾಗಿ ಬಡತನವಿರಬಹುದು ಅದನ್ನು ಶ್ರಮ ದುಡಿಮೆಯಿಂದ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಆದರೆ ಹೃದಯ ದಾರಿದ್ರ್ಯ ಬರಬಾರದು. ದೊಡ್ಡ ಸ್ಥಾನಗಳಲ್ಲಿರುವವರು ದೊಡ್ಡ ದೃಷ್ಟಿಯುಳ್ಳವರಾಗಬೇಕು. ಉದಾತ್ತ ಚಿಂತಕರಾಗಬೇಕು. ಅಧಿಕಾರ, ಅಂತಸ್ತು, ಅವಕಾಶಗಳು ಬಂದಾಗ ಹಿರಿಯ ಮಾರ್ಗಾವಲಂಬಿಗಳಾಗಿ ಮುನ್ನಡೆಯಬೇಕು”.
“ಎಲ್ಲಿಯವರೆಗೆ ನಮ್ಮ ದೃಷ್ಠಿ, ಭಾವನೆ, ಆಲೋಚನೆ ಕೆಲಸ ಕಾರ್ಯಗಳು ದೊಡ್ಡದಾಗುವುದಿಲ್ಲವೋ ಅಲ್ಲಿಯವರೆಗೆ ನಾವು ದೊಡ್ಡವರಾಗುವುದಿಲ್ಲ ಎಂಬುದನ್ನು ತಿಳಿಯಬೇಕು”
“ಕಷ್ಟ ಬಂದಾಗ ವ್ಯಕ್ತಿತ್ವದ ವಿಕಾಸ, ಸುಖ ಬಂದಾಗ ಸತ್ವ ಪರೀಕ್ಷೆಯಾಗದು. ಕಷ್ಟ ಬಂದಾಗ ಶಕ್ತಿ ಹೊಮ್ಮಿ, ವ್ಯಕ್ತಿತ್ವ ವಿಕಾಸವಾಗಲು ಪರಮಾತ್ಮನು ಈ ವಾತಾವರಣವನ್ನು ಸೃಷ್ಟಿ ಮಾಡಿರಬೇಕು”
“ಪ್ರತಿ ವ್ಯಕ್ತಿಯೂ ಕೂಡ ತನ್ನ ಸ್ಥಾನದಲ್ಲಿ ತಾನು ಮಾಡುವ ಕಾರ್ಯವನ್ನು ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಮಾಡಬೇಕು. ಅದೇ ದೇಶಕ್ಕೆ ಸಲ್ಲಿಸುವ ನಿಜವಾದ ದೇಶ ಸೇವೆ”
“ಪ್ರತಿನಿತ್ಯ ಮಲಗುವ ಮುನ್ನ ನಡೆನುಡಿಗಳು, ನಡೆಸಿದ ಒಳಿತು ಕೆಡಕುಗಳ ಜಮಾ ಖರ್ಚನ್ನು ಅವಲೋಕಿಸಬೇಕು. ಮರುದಿನ ತುಳಿಯಬೇಕಾದ ಗುರುಪಥವನ್ನು ಹುಡುಕುವುದರ ಮೂಲಕ ಶಿವಪಥದ ಕಡೆಗೆ ಸಾಗಬೇಕು. ವಿಕಾರ ವಿಮುಖವಾಗಿ ವಿಕಾಸ ಸುಮುಖವಾಗಿ ಹೆಜ್ಜೆ ಹಾಕುವುದರ ಮೂಲಕ ವಿಕಾರಗಳನ್ನು ತನು, ಮನ , ಬುದ್ಧಿಯಿಂದ ಗೆಲ್ಲಬೇಕು”
“ನಿಜಜೀವನದಲ್ಲಿ ಅಧಿಕಾರಿಗಳಲ್ಲಿ, ಮುಖಂಡರಲ್ಲಿ ಸಮಯ ಪ್ರಜ್ಞೆಯೇ ಇಲ್ಲ. ಕಾರ್ಯಕ್ರಮಕ್ಕೆ ಘಂಟೆಗಟ್ಟಲೇ ತಡವಾಗಿ ಬರುತ್ತಾರೆ. ಇದು ಅವ್ಯವಸ್ಥೆಯ ಪ್ರಪಂಚ. ಹಿಂದೆ ಸಮಯ ಪರಿಪಾಲನೆ ದೊಡ್ಡವರ ಜೀವನದಲ್ಲಿ ಬಹುಮುಖ್ಯವಾಗಿತ್ತು”.
“ಮನುಷ್ಯನ ಜೀವನದಲ್ಲಿ ಚಿಂತೆ ಎನ್ನುವ ಮಹಾವ್ಯಾಧಿ ಹಾನಿಕರವಾದದ್ದು, ಕಷ್ಟಕರವಾದದ್ದು. ಮನುಷ್ಯ ಸಾಧ್ಯವಾದ ಮಟ್ಟಿಗೆ ಯಾವುದೇ ಘಟನೆ ಉಂಟಾದರೆ ಚಿಂತೆ ಮಾಡುವಂತಹ ಪ್ರವೃತ್ತಿಯನ್ನು ಬಿಟ್ಟುಬಿಡಬೇಕು”.
“ಆಧ್ಯಯನಶೀಲನಾಗದ ಶಿಕ್ಷಕ ವಿದ್ಯಾರ್ಥಿಗಳನ್ನು ಸ್ಫೂರ್ತಿಗೊಳಿಸಲಾರ. ಅಧ್ಯಯನ ವಿಮುಖನಾದ ವಿದ್ಯಾರ್ಥಿ ಉತ್ತಮ ಭವಿಷ್ಯ ಕಾಣಲಾರ. ಪರಿಣಾಮದಾಯಕ ಶಿಕ್ಷಣ ವ್ಯವಸ್ಥೆ ಮಾಡದ ದೇಶ ಪ್ರಗತಿ ಸಾಧಿಸಲಾರದು”.
“ಸ್ವಾತಂತ್ರ್ಯ ಬಂದನಂತರ ಭ್ರಷ್ಟಾಚಾರವೇ ಜೀವನ ವಿಧಾನವಾದದ್ದು ದೇಶದ ದೊಡ್ಡ ದುರಂತ. ಉನ್ನತ ಜೀವನ ಮೌಲ್ಯಗಳೆಲ್ಲ ಇಂದು ಕಣ್ಮರೆಯಾಗಿದೆ. ಪ್ರಾಮಾಣಿಕತೆ, ಸರಳ ಜೀವನ, ಆಧ್ಯಾತ್ಮಿಕ ಚಿಂತನೆಗಳು ವಿರಳವಾಗಿದೆ. ಮುಖಂಡರು ದಾಹತ್ರಯಗಳ - ಹಣ, ಅಧಿಕಾರ, ಭೋಗದ ಬೆನ್ನು ಹತ್ತಿದ್ದಾರೆ. ಸಜ್ಜನರು ತೆರೆಮರೆಗೆ ಸರಿಯುವಂತಾಗಿದೆ”.
“ಸಮಸ್ಯೆ ಪರಿಹಾರ ಕೇವಲ ಸರ್ಕಾರದಿಂದ, ಮುಖಂಡರಿಂದ ಆಗುವುದಿಲ್ಲ. ಜನತೆ ಜಾಗೃತರಾಗಬೇಕು. ಅವರಲ್ಲಿ ಕರ್ತವ್ಯ ಪ್ರಜ್ಞೆ ಮೂಡಿ ಬರಬೇಕು. ಅದನ್ನು ಆಚರಣೆಯಲ್ಲಿ ತರಬೇಕು. ಆಗ ಆರ್ಥಿಕ ಸಮಾನತೆ, ಸಹಬಾಳ್ವೆ ಉಂಟಾಗಿ ಜನರ ಭವಿಷ್ಯ ಉಜ್ವಲವಾಗುತ್ತದೆ”.
“ಮನುಷ್ಯ ಹೇಡಿಯಾಗಿ ಬಾಳಬಾರದು. ತನ್ನ ಗೌರವ, ತನ್ನ ಜನ, ತನ್ನ ದೇಶದ ಗೌರವ ಕಾಪಾಡಲು ಸದಾ ಪ್ರಯತ್ನಿಸಬೇಕು. ಆ ಕಾರ್ಯಕ್ಕೆ ಯಾವ ಅಡ್ಡಿ ಬಂದರೂ ಹೆದರಬೇಕಾಗಿಲ್ಲ”.
“ಪ್ರಾರ್ಥನೆಯೆಂದರೆ ಮನಸ್ಸಿಗೆ ಅವಶ್ಯಕವಾಗುವ ಪ್ರಸಾದ(ಆಹಾರ). ಅದನ್ನು ಗಳಿಸುವಾಗ ಏಕಾಗ್ರತೆ ಇರಬೇಕು. ಹೊಟ್ಟೆಗೆ ಹಸಿವಾದಾಗ ಹೇಗೆ ಪ್ರಸಾದ(ಆಹಾರ) ಸ್ವೀಕರಿಸುತ್ತೇವೆಯೋ ಹಾಗೆಯೇ ಮನಸ್ಸಿನ ಹಸಿವಿಗೆ ಪ್ರಾರ್ಥನೆ ಪ್ರಸಾದವಾಗುತ್ತದೆ”.
“ಜೀವಿಯ ಶ್ರೇಷ್ಠತೆಯಿರುವುದು ಹಣ, ಆಸ್ತಿ, ಅಧಿಕಾರಗಳ ಸಂಪಾದನೆಯಲ್ಲಲ್ಲ. ಅದಿರುವುದು ಆತ್ಮವನ್ನು ಅರಿಯುವುದರಲ್ಲಿ. ಕಾಣದಿರುವ ಮನುಷ್ಯನನ್ನು ಅಂದರೆ ತನ್ನೊಳಗಿನ ತನ್ನನ್ನು ಕಾಣುವುದರಲ್ಲಿ”.
“ಪ್ರಾಣಕ್ಕೆ ಸಮಾನವಾದುದು ಅಭಿಮಾನ, ಅಭಿಮಾನ ಎಂದರೆ ಅಹಂಕಾರ ಎಂದು ಅರ್ಥವಲ್ಲ. ಅಹಂಕಾರ ಕೆಟ್ಟದ್ದು ಅದನ್ನು ಪೋಷಿಸಬಾರದು. ಅಭಿಮಾನ ಎಂದರೆ ಆತ್ಮಶ್ರದ್ಧೆ. ಆತ್ಮಗೌರವದಿಂದ ಬಾಳಬೇಕು. ಆತ್ಮಗೌರವ ಹೋದರೆ ಮರಣಪ್ರಾಯ”.
“ಜನರು ಮೊದಲು ತಮ್ಮ ಕರ್ತವ್ಯವನ್ನು ಚೆನ್ನಾಗಿ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ತಮಗೆ ಅನ್ಯಾಯವಾದುದನ್ನು ಪ್ರತಿಭಟನೆ ಮಾಡಲು ಶಕ್ತಿ ಬೆಳೆಸಿಕೊಳ್ಳಬೇಕು. ತಮಗೇನು ಸೌಲಭ್ಯ ದೊರೆಯಬೇಕು ಅದನ್ನು ಹೋರಾಟ ಮಾಡಿ ಪಡೆದುಕೊಳ್ಳಬೇಕು”.
“ಸೌಜನ್ಯ, ವಿನಯ, ನಮ್ರವಾಣಿ, ಮೃದು ವಚನದಿಂದ ಆನಂದವೇ ಉಂಟಾಗುತ್ತದೆ. ಮಾತು ಮನುಷ್ಯನ ಅಳತೆಯ ಸಾಧನ. ಸಜ್ಜನ – ದುರ್ಜನ ನಿರ್ಣಯವಾಗಬೇಕಾದರೆ ಮಾತಿನಿಂದಲೇ ಸಾಧ್ಯ. ಶತ್ರ್ರುತ್ವ – ಮಿತ್ರತ್ವ ಬರುವುದಕ್ಕೆ ಮಾತೇ ಕಾರಣ. ಮಾತು ಕಠೋರವಾದರೆ ಶತ್ರು. ಮಾತು ವಿನಯ - ಸೌಜನ್ಯವಾದಾಗ ಮಿತ್ರ”.
“ಯಾರು ನಿಜವಾದ ಜ್ಞಾನ ಸಂಪಾದನೆ ಮಾಡುತ್ತಾರೋ ನಿಜವಾದ ಜ್ಞಾನಿಯಾಗುತ್ತಾನೋ ಅವನೇ ನಿಜವಾದ ಶ್ರೀಮಂತ”.
“ಮನುಷ್ಯ ಯುದ್ಧಮುಖಿಯಾಗಬೇಕು. ತನ್ನೊಳಗೆ ತಾನು ಯುದ್ಧ ಮಾಡಬೇಕು. ಒಳಗಿರುವ ಮೃಗೀಯ ಭಾವನೆಗಳ ವಿರುದ್ಧ ತನ್ನನ್ನು ತಿಂದು ತೇಗುವ ಅವಗುಣಗಳ ವಿರುದ್ಧ, ತನ್ನಿಂದ ತಾನು ಬದುಕಿದ ಆ ದೇಶ ಕಾಲಗಳ ಹಾನಿ ವಿಪ್ಲವಗಳ ವಿರುದ್ಧ ಯುದ್ಧ ಮಾಡಬೇಕು”.
“ಶಿಕ್ಷಕ ಎಲ್ಲಕ್ಕೂ ಮೊದಲು ಚಾರಿತ್ರ್ಯಶುದ್ಧಿಯನ್ನು ಕಾಪಾಡಿಕೊಳ್ಳಬೇಕು. ಅಧ್ಯಯನಶೀಲನಾಗಬೇಕು. ಚಲಿಸುವ ಜ್ಞಾನ ಭಂಡಾರವಾಗಬೇಕು”.
“ಕೃಷಿ ಪವಿತ್ರವಾದ ಕಾಯಕ. ವ್ಯವಸಾಯದ ಬಗ್ಗೆ ಇಂದಿನ ಯುವಜನಾಂಗ ಆಸಕ್ತಿ ಬೆಳೆಸಿಕೊಳ್ಳಬೇಕು”.
“ಇತ್ತೀಚೆಗೆ ಚುನಾವಣೆಗಳೂ ನೀತಿ ಭ್ರಷ್ಟವಾಗುತ್ತಿವೆ. ಎಚ್ಚೆತ್ತ ಮತದಾರ ವಿಚಾರವಂತನಾಗಬೇಕು. ತನ್ನ ಮತವನ್ನು ಹೆಂಡಕ್ಕೆ, ಹಣಕ್ಕೆ ಬಟ್ಟೆ ಬರೆಗಳಿಗೆ ಮಾರಿಕೊಳ್ಳಬಾರದು. ಧರ್ಮ ಬಾಹಿರ, ನೀತಿ ಬಾಹಿರನಾಗಿ ನಡೆಯಬಾರದು. ಮತದಾನವೂ ಪವಿತ್ರ ಪೂಜೆಯೆಂದೇ ಭಾವಿಸಬೇಕು”.
“ಇಂದು ಎಲ್ಲೆಲ್ಲಿಯೂ ಸೇವೆಯೆಂಬ ಮಾತು ಜನಪ್ರಿಯವಾದ ಸವಿನುಡಿಯಾಗಿದೆ. ಆದರೆ ಸೇವೆ ಎಂಬುದು ಪ್ರಚಾರದ ಸರಕಲ್ಲ. ಅದು ಗುಪ್ತ ಶಕ್ತಿ. ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿಡುವ ಜೀವನ ವಿಧಾನ”
ಮಾನವ ಜನ್ಮ ಲಭ್ಯವಾಗುವುದೇ ಒಂದು ಪುಣ್ಯ. ಅಂತಹ ಪುಣ್ಯ ಸಂದರ್ಭ ಬಂದಾಗ ಇಲ್ಲಿ ಸಲ್ಲುವಂತೆ ಬಾಳುವ ಕಲೆಯನ್ನರಿತು, ಅಲ್ಲಿಯೂ ಸಲ್ಲುವ ಗುರಿ ನಮ್ಮದಾಗಬೇಕು.
ಟಿ. ವಿ. ಎಂಬ ರಾಕ್ಷಸ ಬಂದು ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಒಂದು ಕಾಲಕ್ಕೆ ಟಿ.ವಿ. ಒಂದು ದೊಡ್ಡ ಸಾಧನೆಯಾಗಿತ್ತು. ಜ್ಞಾನಾರ್ಜನೆಗೆ ಪೂರಕವಾಗಿತ್ತು. ಇಂದು ಟಿ.ವಿ. ಮುಂದೆ ಕುಳಿತ ಯುವಜನಾಂಗ ಮುಂದಿನ ಭವಿಷ್ಯವನ್ನು ಯೋಚನೆ ಮಾಡದೆ ವೃಥಾ ಕಾಲವನ್ನು ವ್ಯರ್ಥ ಮಾಡುತ್ತಾರೆ.
ನಮ್ಮ ಸಂಸ್ಕøತಿಯ ದಿವ್ಯ ಬೆಳಕಿಗೆ ಅನೀತಿಯ, ಭ್ರಷ್ಟಾಚಾರದ ಕವಚವನ್ನು ತೊಡಿಸಿದ್ದಾರೆ. ಅದನ್ನು ಕಿತ್ತು ಹಾಕಿದರೆ ಮಾನವೀಯತೆಯ ಬಂಗಾರ ಅರಳುತ್ತದೆ. ಜಗತ್ತಿನ ಕಣ್ಣು ತೆರೆಯುತ್ತದೆ.
ಸಾಮಾನ್ಯರ ದೃಷ್ಟಿಯಲ್ಲಿ ಮಾನವನ ವಯೋಮಾನವನ್ನು ಹುಟ್ಟಿದಾರಭ್ಯದಿಂದ ಸಾಯುವ ತನಕ ಲೆಕ್ಕ ಹಾಕುವುದು ವಾಡಿಕೆ. ಆದರೆ ಜ್ಞಾನಿಗಳು ಅವರು ನಿದ್ರೆ, ಕಲಹ, ವ್ಯಸನಗಳಲ್ಲಿ ವ್ಯರ್ಥವಾಗಿ ಕಳೆದ ವಯಸ್ಸನ್ನು ಪರಿಗಣಿಸುವುದಿಲ್ಲ.
ಸೃಷ್ಟಿಯಲ್ಲಿ ಹುಟ್ಟುವ ಪ್ರತಿಯೊಂದು ಜೀವಿಯೂ ಅನುಭವಿಸಬೇಕಾದ ಒಂದು ಅನಿವಾರ್ಯ ಘಟನೆ ಮರಣ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಅದಕ್ಕೆ ಸಾರ್ಥಕತೆಯನ್ನು ತಂದುಕೊಡುವ ಪ್ರಯತ್ನ ಪವಿತ್ರವಾದುದು. ಹುಟ್ಟು ಸಾವಿನ ಮಧ್ಯೆ ಇರುವ ಬಾಳು ಅದನ್ನು ನಿರ್ಧರಿಸುತ್ತದೆ.
ಯಾರಾದರೂ ಮಹಾಕವಿಯ, ಮಹಾಸಂತನ, ದೊಡ್ಡ ಅನುಭವಿಯ ಒಂದು ವಾಕ್ಯವನ್ನು ಕಂಠಪಾಠ ಮಾಡಿದರೆ ಇಡೀ ಜೀವಮಾನಕ್ಕೆ ಅದು ಕಾಣಿಕೆಯಾಗಿ ಸೇವೆ ಸಲ್ಲಿಸುತ್ತದೆ.
“ವಿಜ್ಞಾನ ಏನೆಲ್ಲವನ್ನು ಸಾಧಿಸಿದೆಯಾದರೂ ಜಗತ್ತನ್ನೇ ಅಂಗೈಯ ನೆಲ್ಲಿಯೆಂಬಂತಾಗಿಸಿದೆಯಾದರೂ ಪ್ರಕೃತಿಯ ಮುಂದೆ ಮನುಷ್ಯನ ಸಾಧನೆ ಏನೇನೂ ಇಲ್ಲ ಎಂಬುದನ್ನು ಸಾರಿ ಸಾರಿ ಹೇಳಿದವು ಸುನಾಮಿಗಳು”.
“ಸಕಲ ಜೀವರಿಗೆ ಲೇಸನೇ ಬಯಸುವ” ವಿಜ್ಞಾನವಿಂದು ಬೇಕಾಗಿದೆ. ಬಾಂಬು ಅಣುಬಾಂಬುಗಳ ಮೂಲಕ ಮನುಕುಲವನ್ನು ನಾಶಮಾಡುವ ಯುದ್ಧಾಸ್ರ್ತಗಳಿಗಿಂತ ನರಳುತ್ತಿರುವ ಜೀವಿಗಳಿಗೆ ನಗು ತಂದು ಕೊಡುವ ವಿಜ್ಞಾನ ಇಂದು ಬೇಕಾಗಿದೆ.
ಕಾಯಕ – ದಾಸೋಹಗಳು ದೇಹ ಮತ್ತು ಮನಸ್ಸುಗಳನ್ನು ಪವಿತ್ರ ಮಾಡುವ ಶುದ್ಧ ಸಂಜೀವಿನಿಗಳು.

ಕೃಪೆ: ಶ್ರೀ ಗುರುಸ್ಮøತಿ ಸಂಪುಟ

ಸಂಗ್ರಹ: ಜಸ್ಟಿನ್ ಡಿ’ಸೌಜ, ಸಿದ್ಧಗಂಗಾ ಶಾಲೆ

Tuesday, January 1, 2019

ನಗರಕ್ಕಿಂದು ಎ. ಆರ್. ಮಣಿಕಾಂತ್

ನಗರಕ್ಕಿಂದು ಬದುಕಿನ ಬಾಂಧವ್ಯದ ಕಥೆಗಾರ
ಎ. ಆರ್. ಮಣಿಕಾಂತ್

Image result for a r manikanth


ಸಿದ್ಧಗಂಗಾ ವಿದ್ಯಾಸಂಸ್ಥೆಯ 49ನೇ ವಾರ್ಷಿಕ ಸಂಭ್ರಮದ ಮೊದಲ ದಿನದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ‘ಭಾವತೀರಯಾನ’ದ ಲೇಖಕರಾದ ಎ. ಆರ್. ಮಣಿಕಾಂತ್‍ರವರು ಜನಿಸಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆಯಿತನಹಳ್ಳಿ. ಓದಿದ್ದು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಬಿ.ಇ. ಆಟೋಮೊಬೈಲ್. ಮೈಸೂರಿನ ಮುಕ್ತ ವಿವಿಯಲ್ಲಿ ಎಂ.ಎ.(ಇಂಗ್ಲೀಷ್). ಒಲಿದಿದ್ದು ಪತ್ರ್ರಿಕೋದ್ಯಮ. ಹಾಯ್ ಬೆಂಗಳೂರ್, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡ ಪ್ರಭಗಳಲ್ಲಿ ಹೊಟ್ಟೆಪಾಡು ಮತ್ತು ಆತ್ಮಸಂತೋಷಕ್ಕಾಗಿ ದುಡಿಮೆ. ಸದ್ಯ ಉದಯವಾಣಿಯ ಬೆಂಗಳೂರು ಆವೃತ್ತಿಯಲ್ಲಿ ಪುರವಣಿ ಮುಖ್ಯಸ್ಥ. ‘ಉಭಯ ಕುಶಲೋಪರಿ ಸಾಂಪ್ರತ’, ‘ಹಾಡು ಹುಟ್ಟಿದ ಸಮಯ’, ‘ಈ ಗುಲಾಬಿಯು ನಿನಗಾಗಿ’, ‘ಭಾವತೀರಯಾನ’, ‘ನನ್ನ ಹಾಡು ನನ್ನದು’, ‘ಕಲ್ಲು-ಸಕ್ಕರೆ’ ಹಾಡು ಹುಟ್ಟಿದ ಸಮಯ ಇವೆಲ್ಲಾ ಓದುಗರ ಪ್ರೀತಿ-ಮೆಚ್ಚುಗೆ, ಅಭಿಮಾನಕ್ಕೆ ಪಾತ್ರವಾದ ಅಂಕಣ ಬರಹಗಳು. ಅಮ್ಮ ಹೇಳಿದ ಎಂಟು ಸುಳ್ಳುಗಳು, ಅಪ್ಪ ಅಂದ್ರೆ ಆಕಾಶ, ಭಾವತೀರಯಾನ, ಮನಸು ಮಾತಾಡಿತು, ಹಾಡು ಹುಟ್ಟಿದ ಸಮಯ, ಈ ಗುಲಾಬಿಯು ನಿನಗಾಗಿ, ಗಿಫ್ಟೆಡ್-ಪ್ರಕಟವಾಗಿರುವ ಪುಸ್ತಕಗಳು. ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಅಪಾರ ಜನಪ್ರಿಯತೆಯನ್ನು, ಅತ್ಯಧಿಕ ಮಾರಾಟವನ್ನು ಕಂಡ ಕೃತಿ. 10 ವರ್ಷದ ಅವಧಿಯಲ್ಲಿ, ಈ ಪುಸ್ತಕದ 1,40,000 ಪ್ರತಿಗಳು ಮಾರಾಟ ಆಗಿರುವುದು ಕನ್ನಡ ಪುಸ್ತಕೋದ್ಯಮದಲ್ಲಿ ಒಂದು ದಾಖಲೆ. ಸೇಡಂನ ಪ್ರತಿಷ್ಠಿತ ಅಮ್ಮ ಪ್ರಶಸ್ತಿ, ಧಾರವಾಡದ ಬಸವರಾಜ ಹೊರಟ್ಟಿ ಪ್ರತಿಷ್ಠಾನದವರು ಕೊಡುವ ಅವ್ವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಈ ಪುಸ್ತಕಕ್ಕೆ ಸಂದಿವೆ. ಅಪ್ಪ ಅಂದ್ರೆ ಆಕಾಶ ಪುಸ್ತಕದ 70,000, ಭಾವತೀರಯಾನ 30,000, ಮನಸು ಮಾತಾಡಿತು 15,000, ಹಾಡು ಹುಟ್ಟಿದ ಸಮಯ ಹಾಗೂ ಈ ಗುಲಾಬಿಯು ನಿನಗಾಗಿ ಪುಸ್ತಕದ ತಲಾ 5000 ಪ್ರತಿಗಳು ಮಾರಾಟವಾಗಿವೆ. ಗಿಫ್ಟೆಡ್ ಪುಸ್ತಕಕ್ಕೆ ವರ್ಷದ ಶ್ರೇಷ್ಠ ಅನುವಾದಿತ ಪುಸ್ತಕವೆಂದು, 2018ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿ ನೀಡಿ ಗೌರವಿಸಿದೆ.

ದಾವಣಗೆರೆ ಜನರ ಪರವಾಗಿ ಓದುಗರ ಭಾವಕೋಶ ಮೀಟಿದ ಈ ಸರಳ, ಸಜ್ಜನ, ಪತ್ರಕರ್ತರಿಗೆ ಆತ್ಮೀಯ ಸ್ವಾಗತ ಬಯಸೋಣ..