Thursday, April 1, 2021

ಸರಿಗನ್ನಡ ಮತ್ತು ಗುಣಮಟ್ಟ

 “ಸರಿಗನ್ನಡ ಮತ್ತು ಗುಣಮಟ್ಟದ” ಬಗ್ಗೆ

ಲಿಂ|| ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ನಿಲುವು.


“ಸರಿಗನ್ನಡ”ದ ಬಗ್ಗೆ ಜಾಗೃತಿ ಮೂಡಿಸುವ ಕಾಯಕ ಪ್ರಾರಂಭವಾಗಿದೆ
. ಕನ್ನಡ ಸರಳ - ಸುಂದರ ಭಾಷೆ. ಕರ್ನಾಟಕದ ವಿವಿಧ ಭಾಗದ ಜನರು ವಿಶಿಷ್ಠ ಶೈಲಿಯ ಭಾಷಾ ಸೊಗಡನ್ನು ಹೊಂದಿದ್ದಾರೆ. ಆದರೆ ಕನ್ನಡದ ಗ್ರಂಥ ಭಾಷೆಯನ್ನು ಬರವಣಿಗೆಯಲ್ಲಿ ಬಳಸುವಾಗ, ಉಚ್ಛಾರ ಮಾಡುವಾಗ ತಪ್ಪು ಉಂಟಾಗುವುದನ್ನು ಸಿದ್ಧಗಂಗಾ ಮಠದ ಲಿಂಗೈಕ್ಯ ಪರಮ ಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಸಹಿಸುತ್ತಿರಲಿಲ್ಲ.


ಪರಮ ಪೂಜ್ಯರು ಈ ವಿಚಾರವನ್ನು ಬಹಳ ಹಿಂದೆ ಅವರ ಶ್ರೀವಾಣಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅದು ಕೆಳಗಿನಂತಿದೆ.


“ಮೊನ್ನೆ ಒಂದು ಅಪ್ಲಿಕೇಷನ್ ತಂದುಕೊಟ್ಟರು, ಕೊಟ್ಟಾತ ಒಬ್ಬ ನಿವೃತ್ತ ಶಿಕ್ಷಕ, ಮೊವತ್ತು ವರ್ಷಗಳ ಸೇವೆ ಸಲ್ಲಿಸಿ ವಿಶ್ರಾಂತ ಜೀವನಕ್ಕೆ ಕಾಲಿಡುತ್ತಿರುವ ವ್ಯಕ್ತಿ. ಮುಖ್ಯೋಪಾಧ್ಯಾಯನಾಗಿ ಪ್ರೌಢಶಾಲೆಯ ಆಡಳಿತಾಂಗದಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕ. ಅವನು ಕೊಟ್ಟ ಅರ್ಜಿಯ ವಿಷಯವನ್ನಿಲ್ಲಿ ಪ್ರಸ್ತಾಪಿಸುತ್ತಿಲ್ಲ. ಆ ಅರ್ಜಿಯ ಭಾಷಾದೋಷಗಳನ್ನು ಕುರಿತು ಹೇಳಬೇಕಾಗಿದೆ. “ನನ್ನ ಹಣ್ಣನಿಗೆ” ಎಂದು ಪದ ಬಳಸಿದ್ದು ಕಾಣಬಂದಿತು. 

ಇನ್ನೊಂದು ಇಂಗ್ಲೀಷ್ ಎಂ.ಎ ಮಾಡುತ್ತಿರುವ ಅಭ್ಯರ್ಥಿಯೊಬ್ಬ ಅಪ್ಲಿಕೇಷನ್ ಕೊಟ್ಟುಹೋದ. ಅದರ ಮೇಲೆ ಕಣ್ಣಾಡಿಸಿದಾಗ ಇದು ಯಾವ ಇಂಗ್ಲೀಷ್ ಎಂಬ ಭಾವನೆ ಬಂದಿತು. “I am here by informing” ಎಂದು ಪ್ರಾರಂಭಿಸಿ ಅನಂತರ “requesting” ಎಂದು ಸೇರಿಸಿ ವಾಕ್ಯ ಪ್ರಾರಂಭ ಮಾಡಿದ್ದು ಕಾಣಬಂದಿತು. ಮತ್ತೊಂದು ಸಮಯದಲ್ಲಿ ವಿದ್ಯಾರ್ಥಿಗಳ ಆಟೆಂಡೆನ್ಸ್ ರಿಜಿಸ್ಟರ್ ನೋಡುವ ಸಂದರ್ಭದಲ್ಲಿ ವಿದ್ಯಾರ್ಥಿ “ಸಿವರುದ್ರಯ್ಯ”, ‘ಮುಖ್ಯೋಪಾಧಾಯ’ ಎನ್ನುವ ಕಾಗುಣಿತಗಳ ದೋಷಗಳನ್ನು ಕಾಣುವಂತಾಯಿತು. ಇವು ಶಿಕ್ಷಣ ಕ್ಷೇತ್ರದಲ್ಲಿ ಕಾಣಬರುತ್ತಿರುವುದಾದರೆ ಅನ್ಯಕ್ಷೇತ್ರಗಳ ಹಣೆಬರಹವೂ ಇದೇ ಆಗಿದೆ. 

ಸಂಸ್ಕøತ ಪ್ರೌಢವಾದ, ಜ್ಞಾನನಿಷ್ಠವಾದ ಭೌದ್ಧಿಕ ಭಾಷೆ. ಅಲ್ಲಿನ ಶ್ಲೋಕಗಳ ಅಧ್ಯಯನ ನಿರ್ದಿಷ್ಟವಾಗಿರುತ್ತದೆ. ತಪ್ಪಿಲ್ಲದ ಉಚ್ಛಾರ ಅತಿ ಮುಖ್ಯ. ಪೂಜಾ ಸಂದರ್ಭದಲ್ಲಿ ಕೆಲಮಂತ್ರಗಳನ್ನು ಪಠಿಸುವ ಪುಣ್ಯಾತ್ಮರು ಅಪಶಬ್ಧವನ್ನೇ ಎತ್ತಿದ ಕಂಠದಲ್ಲಿ ಉಗ್ಗಡಿಸುವುದನ್ನು ಗಮನಿಸಬಹುದು. ವಸ್ತುಗಳ ಉತ್ಪಾದನೆಯಲ್ಲಿ, ಮಾಡುವ ಕೆಲಸದಲ್ಲಿ, ಕಲಿಯುವ ಹಂತದ ಗುಣಕ್ಕೆ ಪ್ರಾಮುಖ್ಯತೆ ಇಲ್ಲವಾಗಿದೆ. ಪರೀಕ್ಷೆಗಳಲ್ಲಿ ಫಲಿತಾಂಶ ಇಳಿಮುಖವಾಗಿದೆ. ಏರುಮುಖವಾಗಿದೆ ಎಂದರೆ ಅಪಮಾರ್ಗದಲ್ಲಿ ನಡೆದಿರಬೇಕು ಎಂಬುದು ಬಹಿರಂಗ ಸತ್ಯವಾಗಿದೆ. ಚುನಾವಣೆಗಳಲ್ಲಿ ಪ್ರಚಂಡ ಬಹುಮತ ಗಳಿಸಲಾಯಿತು ಎನ್ನುವಾಗ ನಡೆದಿರುವ ಭ್ರಷ್ಟಾಚಾರವನ್ನು ಮರೆಯುವಂತಿಲ್ಲ. ಕೃಷಿ ಕೃತ್ಯ ಕಾಯಕವೊಂದೆ ಭ್ರಷ್ಟ ಮುಕ್ತವಾದ ಪವಿತ್ರ ದುಡಿಮೆಯೆಂಬ ಸದ್ಭಾವನೆಯಿತ್ತು. ಅಲ್ಲಿಯೂ ಪ್ರಮಾಣಿಕವಾದ ದುಡಿಮೆ ಕಾಣಬರುತ್ತಿಲ್ಲ. ಪ್ರಕೃತಿ ಸೋಮಾರಿಗಳಿಗೆ, ಸೋಗಲಾಡಿತನಕ್ಕೆ ಒಲಿಯಲಾರಳು. ಗುಣಮಟ್ಟವನ್ನು ನಿರ್ಧಾರ ಮಾಡುವ ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಆದರೆ ಅಲ್ಲಿಯೂ ನ್ಯೂನತೆಗಳಿವೆಯೆನ್ನಲಾಗುತ್ತದೆ. ನಮ್ಮ ಪೂಜ್ಯಗುರುಗಳು ಬಳಸುತ್ತಿದ್ದ ಕೆಲವು ವಸ್ತುಗಳು ನಮ್ಮ ಬಳಿ ಇನ್ನೂ ಸುಭದ್ರಸ್ಥಿತಿಯಲ್ಲಿವೆ. 

ನಮ್ಮಲ್ಲಿ ಅಂಬಲಗೆರೆ ನಂಜುಂಡಯ್ಯ ಎಂಬ ಅಧ್ಯಾಪಕರೊಬ್ಬರಿದ್ದರು. ಅವರು ನೆಲಮಂಗಲದಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸಂಸ್ಕøತ ಬೋಧಿಸುವ ಅವಕಾಶ ಲಭ್ಯವಾಗಿತ್ತು. ಆದರೆ ಅವರಿಗೆ ಸಂಸ್ಕøತ ಜ್ಞಾನ ಅಷ್ಟಾಗಿರಲಿಲ್ಲ. ಅವರು ಶ್ರೀಮಠಕ್ಕೆ ಶನಿವಾರ, ಭಾನುವಾರ ಬಂದು ಇಲ್ಲಿ ಶ್ರೀ ರುದ್ರಾರಾಧ್ಯ ಶರ್ಮ, ಶ್ರೀ ಬಿ. ಗಂಗಪ್ಪ ಅವರಿಂದ ಪಾಠ ಹೇಳಿಸಿಕೊಂಡು ಸೋಮವಾರ ಶಾಲೆಗೆ ಹೋಗಿ ಬೋಧಿಸುತ್ತಿದ್ದರು. ಅವರೊಮ್ಮೆ ಶಾಲಾ ತನಿಖಾಧಿಕಾರಿಗಳಾದ ಶ್ರೀ ಗೋಪಾಲ್ ಎಂಬುವರ ಮುಂದೆ ಬೋಧಿಸಬೇಕಾಯಿತು. ಬೋಧನಾ ವಿಧಾನ ಗಮನಿಸಿದ ತನಿಖಾಧಿಕಾರಿಗಳು ನಂಜುಂಡಯ್ಯನವರಿಗೆ “ಬೋಧನಾಚಾರ್ಯ” ಎಂದು ಪ್ರಶಂಸಿಸಿ ಮಾತನಾಡಿದರು. ಗುಣಮಟ್ಟವನ್ನು ಕಾಪಾಡಿಕೊಳ್ಳುವುದರ ಹಿಂದೆ ಶ್ರದ್ಧೆ, ಪ್ರಾಮಾಣಿಕತೆ, ತಾನು ಪ್ರತಿನಿಧಿಸುತ್ತಿರುವ ಸಮಾಜ ಪ್ರಜ್ಞೆ ಇರಬೇಕಾಗುತ್ತದೆ. ಕೊನೆಯದಾಗಿ ಒಂದು ಮಾತು. ಯಾರೂ ತಪ್ಪು ತಿಳಿಯಬಾರದು. ‘ಗುಣಮಟ್ಟ’ ಎಲ್ಲರಿಗೂ ಅನ್ವಯವಾಗುವ ಮಾತು”.(ಕೃಪೆ:ಅಮೃತ ಗಂಗಾ)

ಪರಮ ಪೂಜ್ಯರ 113 ನೇ ದಿವ್ಯ ಜಯಂತಿಯಂದು ಕನ್ನಡಿಗರಾದ ನಾವು ಪೂಜ್ಯರ ಶ್ರೀವಾಣಿ ಪಾಲಿಸಿದರೆ “ಸರಿಗನ್ನಡ” ಅಭಿಯಾನಕ್ಕೆ ಒಂದು ಶ್ರೇಷ್ಠ ಕೊಡುಗೆಯಾಗಬಹುದು.

- ಜಸ್ಟಿನ್ ಡಿ’ಸೌಜ


No comments:

Post a Comment