Sunday, April 18, 2021

ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದ ಹರಿಕಾರನ ಪ್ರಥಮ ವರ್ಷದ ಸ್ಮರಣೆ

 ಶಿಕ್ಷಣ ಶಿಲ್ಪಿ ಎಂ.ಎಸ್.ಶಿವಣ್ಣ

ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದ ಹರಿಕಾರನ ಪ್ರಥಮ ವರ್ಷದ ಸ್ಮರಣೆ

‘ಶಿವಣ್ಣ’ ಎಂಬ ಶಿಕ್ಷಣದ ದ್ರುವತಾರೆ ಸಿದ್ಧಗಂಗೆಯ ನಭದಿಂದ ಜಾರಿ ಬಿದ್ದು ಏಪ್ರಿಲ್ 18 ಕ್ಕೆ ವರ್ಷ ತುಂಬುತ್ತದೆ. ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದು ಸಿದ್ಧಗಂಗೆಯ ವೈಶಿಷ್ಠ್ಯತೆ ಮೆರೆದು ತಮ್ಮ ಪೂಜ್ಯ ಗುರುಗಳಾದ ಲಿಂ|| ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಧ್ಯೇಯ ಉದ್ದೇಶಗಳನ್ನು ಈಡೇರಿಸಿ ಸಾರ್ಥಕ ಭಾವದಿಂದ ಗುರುಗಳನ್ನು ಅರಸುತ್ತಾ ಸಿದ್ಧಲಿಂಗನ ಪಾದಗಳಲ್ಲಿ ಲೀನವಾದ ಶಿವಣ್ಣನವರು ಅಖಂಡ ಗುರುಭಕ್ತಿ, ದೈವಭಕ್ತಿಯ ಪ್ರತೀಕವಾಗಿದ್ದರು.

ಎಂಭತ್ತು ಸಂವತ್ಸರಗಳನ್ನು ಹರಳುಗಟ್ಟಿಸಿ ಇಹಲೋಕ ವ್ಯಾಪಾರ ಮುಗಿಸಿದ ಶಿವಣ್ಣನವರ ಜೀವನ ಹೋರಾಟದಿಂದಲೇ ಪ್ರಾರಂಭವಾಗಿ ಹೋರಾಟದಲ್ಲೇ ಮುಕ್ತಾಯಗೊಂಡಿತು. ಶಿಕ್ಷಣ ರಂಗದಲ್ಲಿ ಮಂತ್ರದಂಡವಿಲ್ಲದ ಮಾಂತ್ರಿಕನಾಗಿ ಐದು ದಶಕಗಳಿಗೂ ಮೀರಿ ಅಮಿತ ಶ್ರದ್ಧೆಯಿಂದ ಲಕ್ಷ - ಲಕ್ಷ ವಿದ್ಯಾರ್ಥಿಗಳ ಭವಿಷ್ಯ ತಿದ್ದಿ – ತೀಡಿ ಸುಂದರ ಆಕಾರ ನೀಡಿದ ಶಿವಣ್ಣ ಮೇಷ್ಟ್ರನ್ನು ಸುಲಭವಾಗಿ ಮರೆಯಲಾಗದು.



ಪ್ರೀತಿಯಿಂದ ಮಕ್ಕಳ ಮನಸ್ಸು ಗೆದ್ದು, ತಪ್ಪಿದಾಗ ಶಿಕ್ಷಿಸಿ, ಸರಿದಾರಿಗೆ ತಂದ ಅದ್ವಿತೀಯ ಗುರುವನ್ನು ಅವರ ಶಿಷ್ಯಗಣ ಆರಾಧಿಸುತ್ತಿದ್ದಾರೆ. ಉಳಿ ಪೆಟ್ಟು ಬೀಳದೆ ಕಗ್ಗಲ್ಲು ಮೂರ್ತಿಯಾಗದು ಎಂಬ ಸಿದ್ಧಾಂತದ ಶಿವಣ್ಣನವರಿಗೆ ಮಕ್ಕಳ ಭಾವಕೋಶದಲ್ಲೊಂದು ವಿಶಿಷ್ಠ ಸ್ಥಾನವಿದೆ.

ಶಿವಣ್ಣನವರು ದಾವಣಗೆರೆಯಲ್ಲಿ ಹುಟ್ಟಿ ಬೆಳೆದವರಲ್ಲ. ಆದರೆ ಇಲ್ಲಿಯ ಜೀವನಾಡಿಯ ಮಿಡಿತ ಅರಿತವರಾಗಿದ್ದರು. 60 ರ ದಶಕದಲ್ಲಿ ಎಸ್ ಎಸ್ ಎಲ್ ಸಿ ಎಂಬ ಭೂತವನ್ನು ಎದುರಿಸಲಾರದೆ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದವರ ಆಶಾಕಿರಣವಾಗಿ “ಶಿವಾನಂದ ಟ್ಯುಟೋರಿಯಲ್” ಎಂಬ ಮಿಣುಕು ದೀಪ ಹಚ್ಚಿ ಹಂತ ಹಂತವಾಗಿ ತೈಲ ಎರೆಯುತ್ತಾ ‘ಸಿದ್ಧಗಂಗಾ’ ಎಂಬ ಜ್ಞಾನ ಜ್ಯೋತಿ ಬೆಳಗಿಸಿ ದಶದಿಕ್ಕುಗಳಲ್ಲಿ ಅದರ ಪ್ರಕಾಶ ಹರಡುವಂತೆ ಮಾಡಿ ಶಿಕ್ಷಣದ ಕ್ರಾಂತಿಕಾರರಾದರು.

ಅಂಜಿಕೆ, ಅಳಕು, ಸುಳ್ಳು, ತಟ – ವಟ ಅರಿಯದ ನಿಷ್ಕಪಟಿ. ಬೇಕೆನಿಸಿದ್ದನ್ನು ಶತಾಯ ಗತಾಯ ಪಡೆಯುವ ಹಠಮಾರಿ. ಮಾಡುವ ಕೆಲಸದಲ್ಲಿ ಶ್ರದ್ಧೆ - ನಿಷ್ಠೆ. ಪಟ್ಟು ಬಿಡದ ಛಲಗಾರ. ನೊಂದವರ ಕಣ್ಣೀರಿಗೆ ಕರಗುವ, ಮೋಸ ವಂಚನೆಗಳಿಗೆ ಆರ್ಭಟಿಸುವ ವೈರುಧ್ಯ ಸ್ವಭಾವದ ಬ್ರಹ್ಮಸೃಷ್ಟಿ. ಪ್ರಾಣದ ಹಂಗು ತೊರೆದು ಸಾತ್ವಿಕ ಹೋರಾಟ ನಡೆಸಿದ್ದು ಈಗ ಇತಿಹಾಸ. ಸಮಕಾಲೀನರು ಶಿವಣ್ಣನವರ ಎದೆಗಾರಿಕೆಗೆ ಬೆರಗಾಗುತ್ತಿದ್ದರು.

ಶಾಲೆಯ ಹೊರತಾಗಿ ಅವರ ಕಾರ್ಯಕ್ಷೇತ್ರ, ಸಮಾಜಸೇವೆ, ಪತ್ರಿಕೋದ್ಯಮ, ಸಾಂಘಿಕ ಚಟುವಟಿಕೆ, ಕಲೆ, ನಾಟಕರಂಗಗಳಿಗೆ ವಿಸ್ತರಿಸಿತ್ತು. ಬಹುಮುಖ ಪ್ರತಿಭೆಯ ಶಿವಣ್ಣನವರಿಗೆ ಪಾಠ ಮಾಡುವುದು ಬಾಲ್ಯದ ಹವ್ಯಾಸ. ಮುಂದೆ ಅದು ಸಿದ್ಧಗಂಗಾ ವಿದ್ಯಾಸಂಸ್ಥೆಯ ಸ್ಥಾಪನೆಗೆ ನಾಂದಿಯಾಯಿತು. ಡಿ.ಎಡ್, ಬಿ.ಎಡ್ ಗಳಂತಹ ಯಾವುದೇ ಶಿಕ್ಷಕ ವೃತ್ತಿಯ ಅರ್ಹತೆಗಳಿಲ್ಲದೆ ಶಿಕ್ಷಣಕ್ಕೆ ಹೊಸ ರೂಪ ನೀಡಿ ಶಿಕ್ಷಣ ತಜ್ಞನೆಂಬ ಬಿರುದು ಪಡೆದರು.

ಸಿದ್ಧಗಂಗೆಗೆ ಸೇರಿದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವಂತೆಯೇ ಇಲ್ಲ. ಬೋಧನೆಯಲ್ಲಿನ ನಾವೀನ್ಯತೆ ಇಲ್ಲಿ ಎಲ್ಲರಿಗೂ ಕರಗತ. ಶಿಕ್ಷಣವೆಂಬುದು ಏಕಾಗ್ರತೆಯ ಕೂಸು. ಕಥೆಗಳ ಮೂಲಕ ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಿ ನಂತರ ಪಠ್ಯಗಳಲ್ಲಿ ತೊಡಗಿಸಿಕೊಳ್ಳುವುದು ಶಿವಣ್ಣನವರ ಬೋಧನಾ ಕ್ರಮವಾಗಿತ್ತು. ಎಷ್ಟೋ ವರ್ಷಗಳ ಹಿಂದೆ ಹೇಳಿದ ಕಥೆಗಳು ಮಕ್ಕಳ ಮನಸ್ಸಿನಲ್ಲಿ ಇಂದಿಗೂ ಅಚ್ಚೊತ್ತಿ ನಿಂತಿದೆ. ಕಥೆಗಳೆಂದರೆ ಅದು ಜೀವನದ ರಸಪಾಕ. ಅನುಭವದ ಮೂಸೆಯಲ್ಲಿ ಪುಟಿದ ಚಿನ್ನ. ತನ್ನ ವಾಗ್ಝರಿಯಿಂದ ಮಕ್ಕಳನ್ನು ಸೆಳೆಯುತ್ತಿದ್ದ ಸೂಜಿಗಲ್ಲಾಗಿದ್ದರು ಶಿವಣ್ಣನವರು. ಕಥೆಯ ಮೂಲಕ ನೀತಿ ಬೋಧಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿದ ಶ್ರೇಷ್ಠ ಗುರು!

ಖಂಡ – ತುಂಡವಾಗಿ ಮಾತನಾಡುತ್ತಿದ್ದ ಶಿವಣ್ಣನವರಿಗೆ ವೈರಿಗಳ ಸಮೂಹವೂ ದೊಡ್ಡದಿತ್ತು. ವೈರಿಯೂ ಮೆಚ್ಚುವಂತೆ ಬಾಳಿದ ಶಿವಣ್ಣನವರ ತತ್ವ - ಸಿದ್ಧಾಂತಗಳಿಂದ ಪ್ರಭಾವಿತರಾದ ಕ್ರಮೇಣ ಅವರೆಲ್ಲರೂ ಸ್ನೇಹಿತರಾದದ್ದು ಮತ್ತೊಂದು ದಾಖಲೆ.

ಶಿಕ್ಷಣಕ್ಕೆ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ, ವಿಜ್ಞಾನ ಆವಿಷ್ಕಾರಗಳಿಗೆ, ನಾಟಕ, ಸಂಗೀತ, ನೃತ್ಯಗಳಿಗೆ ಮುಕ್ತ ಅವಕಾಶ ನೀಡಿ ಶಿಕ್ಷಣದಿಂದ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆ ಎಂಬುದನ್ನು ಸದ್ದಿಲ್ಲದೆ ಸಾಧಿಸಿ ತೋರಿಸಿದ ಶಿವಣ್ಣನವರು ಶಾಲೆ ಸಮಾಜಮುಖಿಯಾಗಿರಬೇಕೆಂಬ ಸಂದೇಶವನ್ನು ತಮ್ಮ ಜೀವಿತ ಕಾಲದಲ್ಲಿ ಪಾಲಿಸಿ ಅದೇ ಪರಂಪರೆಯನ್ನು ಸಂಸ್ಥೆಯಲ್ಲಿ ಮುಂದುವರೆಸಿಕೊಂಡು ಹೋಗಲು ದಾರಿದೀಪವಾಗಿದ್ದಾರೆ.

ಮಹಾನಗರ ಪಾಲಿಕೆಯವರು ಕೆ.ಟಿ.ಜೆ ನಗರದ 18 ನೇ ಮುಖ್ಯ ರಸ್ತೆಗೆ “ಶಿಕ್ಷಣ ಶಿಲ್ಪಿ ಎಂ.ಎಸ್ ಶಿವಣ್ಣ ರಸ್ತೆ” ಎಂದು ನಾಮಕರಣ ಮಾಡಿ ಅವರ ನೆನಪನ್ನು ಶಾಶ್ವತಗೊಳಿಸಿದ್ದಾರೆ. ಈ ಸತ್ಕಾರ್ಯಕ್ಕೆ ಸಹಕರಿಸಿದವರೆಲ್ಲರಿಗೂ ಸಂಸ್ಥೆಯ ಕೃತಜ್ಞತೆಗಳು. ದಾವಣಗೆರೆ ವಿಶ್ವವಿದ್ಯಾನಿಲಯ ಲಿಂ|| ಎಂ.ಎಸ್ ಶಿವಣ್ಣನವರ ಸೇವೆಯನ್ನು ಪರಿಗಣಿಸಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಅವರ ಅಭಿಮಾನಿಗಳು, ಶಿಷ್ಯರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪ್ರೀತಿಗೆ ನಮ್ಮ ನಮನಗಳು. ಬಹುದೊಡ್ಡ ಸಂಸ್ಥೆಯ ನಿರ್ಮಾತೃವಾದರೂ ಸರಳ, ನಿಗರ್ವಿ ಶಿವಣ್ಣನವರು ಅಣ್ಣ ಬಸವಣ್ಣ ಹೇಳಿದಂತೆ ಎನಗಿಂತ ಕಿರಿಯರಿಲ್ಲ ..... ಎಂಬ ನುಡಿಯ ಪಡಿಯಚ್ಚಾಗಿ ಬಾಳಿ-ಬದುಕಿ-ಮರೆಯಾದವರು. ಸಾವೆಂಬುದು ಭೌತಿಕ ಕಾಯಕ್ಕೆ ಮಾತ್ರ ಆದರೆ ಮಾಡಿದ ಕಾಯಕಕ್ಕೆ ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಇಂದು ದಾವಣಗೆರೆಯ ಸಿದ್ಧಗಂಗಾ ಸಂಸ್ಥೆ ರಾಜ್ಯದಾದ್ಯಂತ ಹೆಸರು ಮಾಡಿದೆ. ಗುಣಾತ್ಮಕ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವ ಗುರುಕುಲವಾಗಿದೆ. ಇರುಳನ್ನು ಹಗಲಾಗಿಸಿ ಕಣ್ರೆಪ್ಪೆ ಮುಚ್ಚದಂತೆ ಅಹರ್ನಿಶಿ ದುಡಿದು ಶೂನ್ಯದಿಂದ ಶಿಖರಕ್ಕೇರಿದ ಶಿವಣ್ಣನವರು ಆನಗೋಡಿನ ತಮ್ಮ ಜಮೀನಿನಲ್ಲಿ ಶಿಲಾ ಮಂಟಪದ ಗರ್ಭದಲ್ಲಿ ಶಾಶ್ವತ ನಿದ್ರೆಯಲ್ಲಿದ್ದಾರೆ. ಇತಿಹಾಸ ಸೃಷ್ಠಿಸಿ ಚಿರಸ್ಥಾಯಿಯಾಗಿದ್ದಾರೆ. ಅವರ ಸ್ಮರಣೆಯಲ್ಲಿ “ಅಜರಾಮರ” ನುಡಿನಮನ ಕೃತಿ ಸಿದ್ಧಗೊಂಡಿದೆ. ಕೋವಿಡ್ – 19 ರ ಅಬ್ಬರ ಪುಣ್ಯಸ್ಮರಣೆಗೆ ಅಡ್ಡಿಯಾಗಿದೆ. 2020 ರ ಸ್ಥಿತಿ ಮರುಕಳಿಸಿದೆ. ಗುರುಸ್ಮರಣೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿ ಪರಿಸ್ಥಿತಿ ತಿಳಿಯಾದ ನಂತರ ಸ್ಮರಣೋತ್ಸವ ಆಚರಣೆ ಮಾಡೋಣ.

ಜಸ್ಟಿನ್ ಡಿ’ಸೌಜ


1 comment:

  1. Sir, please let me know in class IX social sciences, the Karnataka government has included the teaching of Islam and Christianity. Surprising. Abu Baker was the father of 9 years old daughter and 60 years old prophet married her.

    ReplyDelete