Sunday, April 7, 2019

MSS Quiz - ರಾಜ್ಯದ ಹಲವಾರು ಜಿಲ್ಲೆಗಳಿಂದ ಭಾಗವಹಿಸಿದ ಸಹಸ್ರಾರು ವಿದ್ಯಾರ್ಥಿಗಳು

ಸಿದ್ಧಗಂಗಾ ಸಂಸ್ಥೆಯ MSS Quiz
ರಾಜ್ಯದ ಹಲವಾರು ಜಿಲ್ಲೆಗಳಿಂದ ಭಾಗವಹಿಸಿದ ಸಹಸ್ರಾರು ವಿದ್ಯಾರ್ಥಿಗಳು

Click here to leave your feedback about MSS Quiz

ದಾವಣಗೆರೆ, ಏಪ್ರಿಲ್ 7,

ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆ ಪ್ರತಿವರ್ಷ ಸಂಸ್ಥೆಯ ಸಂಸ್ಥಾಪಕರಾದ ಎಂ. ಎಸ್. ಶಿವಣ್ಣನವರ ಗೌರವಾರ್ಥ ಏರ್ಪಡಿಸುತ್ತಿರುವ ಪ್ರತಿಷ್ಠಿತ  MSS Quiz 2019 ಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರು ಸಾವಿರಕ್ಕೂ ಹೆಚ್ಚು ಮಕ್ಕಳು ತಮ್ಮ ಹೆಸರನ್ನು ನೊಂದಾಯಿಸಿ ಕೊಂಡಿದ್ದರು. ದೂರದ ಗುಲ್ಬರ್ಗ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಗದಗ, ತುಮಕೂರು, ಪಾವಗಡ, ಶಿವಮೊಗ್ಗ, ರಾಯಚೂರು, ಬೆಳಗಾವಿ, ಬೆಂಗಳೂರು, ಸೇರಿದಂತೆ ದಾವಣಗೆರೆ ಜಿಲ್ಲೆಯ ಎಲ್ಲ ತಾಲ್ಲೂಕಿನ ಮಕ್ಕಳು ಭಾಗವಹಿಸಿದ್ದರು.

ಹಬ್ಬದ ಸಂಭ್ರಮದ ನಡುವೆಯೂ ಸಾವಿರಾರು ಮಕ್ಕಳು ಕ್ವಿಜ್‍ನಲ್ಲಿ ಭಾಗವಹಿಸಿ ತಮ್ಮನ್ನು ಅದೃಷ್ಠ ಪರೀಕ್ಷೆಗೆ ಒಡ್ಡಿಕೊಂಡರು. ಬಹುಮಾನದ ಮೊತ್ತ 25 ಸಾವಿರ, ಆಕರ್ಷಕ ಸ್ಮರಣಿಕೆ ಎಲ್ಲರಲ್ಲೂ ಆಸೆಯ ಚಿಗುರೊಡೆಯುವಂತೆ ಮಾಡಿತ್ತು. ಸಿದ್ಧಗಂಗೆಯ ಅಂಗಳ ವಿದ್ಯಾರ್ಥಿಗಳ ಕಲರವ
ದಿಂದ ಕಂಗೊಳಿಸಿತು. ವಿದ್ಯಾರ್ಥಿಗಳು ಸಾಗರದಂತೆ ಹರಿದು ಬಂದರು. ಇಂದು ಬೆಳಿಗ್ಗೆ 8 ಗಂಟೆಯಿಂದಲೇ ತಂಡ ತಂಡವಾಗಿ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಕುತೂಹಲದಿಂದ ಸಂಸ್ಥೆಯ ಚಟುವಟಿಕೆಗಳನ್ನು ವೀಕ್ಷಿಸಿದರು.

ಕಂಪ್ಯೂಟರೀಕೃತ ಪ್ರವೇಶ ಪತ್ರದ, ನೋಂದಣಿಯಿಂದಾಗಿ ಶಿಸ್ತು ಬದ್ಧವಾಗಿ ನಡೆದ ಕಾರ್ಯಕ್ರಮ ಪಾಲಕರನ್ನು ಅಚ್ಚರಿಗೊಳಿಸಿತು. 80  ಕೊಠಡಿಗಳಲ್ಲಿ  ಆಸನ  ವ್ಯವಸ್ಥೆ  ಮಾಡಲಾಗಿತ್ತು.  ವಿಜ್ಞಾನ 30 ಗಣಿತದ 30 ಪ್ರಶ್ನೆಗಳಿಗೆ  ಮಕ್ಕಳು OMR ಶೀಟ್‍ನಲ್ಲಿ ಉತ್ತರಿಸಿದರು.

Quiz ಬಗ್ಗೆ ಪ್ರಾಸ್ಥಾವಿಕವಾಗಿ ಮಾತನಾಡಿ Quiz ರೂಪು ರೇಷೆಗಳನ್ನು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ|| ಜಯಂತ್ ರವರು ವಿವರಿಸಿ ವಿಜ್ಞಾನ ಪ್ರಯೋಗದ ಮೂಲಕ ನೊರೆಯ ಬುಗ್ಗೆಯುಕ್ಕಿಸಿ ಶುಭಕೋರಿದರು. ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಭಾನುವಾರದ ರಜೆಯನ್ನು ಲೆಕ್ಕಿಸದೆ ಕ್ವಿಜ್‍ನ ಯಶಸ್ಸಿಗೆ ಸಹಕರಿಸಿದರು. ಕ್ವಿಜ್‍ನ ಮೇಲ್ವಿಚಾರಣೆಯನ್ನು ಹಿರಿಯ ವಿದ್ಯಾರ್ಥಿ ಡಿ. ಎಸ್. ಪ್ರಶಾಂತ್‍ರವರು ಶಾಲಾ ಶಿಕ್ಷಕರ ಮತ್ತು ಸ್ವಯಂಸೇವಕರ ನೆರವಿನಿಂದ ಸಮರ್ಪಕವಾಗಿ ನಿರ್ವಹಿಸಿದರು. ಶಾಲೆಯ ಮೊಮೆಂಟೋಗಳನ್ನು ಹಿಡಿದ ಪಿ. ಯು. ಸಿ. ಮಕ್ಕಳು ಆಕರ್ಷಕ ಪಥ ಸಂಚಲನ ನಡೆಸಿದರು. ಬಂದ ಪಾಲಕರಿಗೆ ಮತ್ತು ಮಕ್ಕಳಿಗೆ ಉಪಹಾರದ ವ್ಯವಸ್ಥೆಯನ್ನು ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್. ಹೇಮಂತ್‍ರವರು ಅಚ್ಚುಕಟ್ಟಾಗಿ ನಿರ್ವಹಿಸಿದರು. MSS Quiz ಸಾವಿರಾರು ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಅದೃಷ್ಟದ ಪರೀಕ್ಷೆಗೆ ವೇದಿಕೆಯಾಗಿದ್ದು ಜಿಲ್ಲೆಯ ಮತ್ತು ರಾಜ್ಯದ ಬೇರೆ ಬೇರೆ  ಜಿಲ್ಲೆಗಳಿಂದ ಆಗಮಿಸಿದ ಮಕ್ಕಳು ಮತ್ತು ಪಾಲಕರು ಸಿದ್ಧಗಂಗೆಯ ಮಕ್ಕಳ ಮತ್ತು ಬೋಧಕ, ಬೋಧಕೇತರ ವರ್ಗದವರ ಸೌಹಾರ್ದತೆ ಮತ್ತು ಸೌಜನ್ಯಕ್ಕೆ ಮಾರು ಹೋದರು. ಸಿದ್ಧಗಂಗಾ ಸಂಸ್ಥೆಯ ಮಕ್ಕಳ ನಾಯಕತ್ವ ಗುಣಕ್ಕೆ ಇದೊಂದು ನಿದರ್ಶನವಾಗಿತ್ತು.

ಪ್ರಾರಂಭದಲ್ಲಿ ವಿದ್ಯಾರ್ಥಿ ಗಾಯಕ ವಿಶ್ವಂಭರ ಹಾಗೂ ಅನುಶ್ರೀ ಶಾಸ್ತ್ರೀಯ ಸಂಗೀತದ ಸುದೆ ಹರಿಸಿದರೆ, ಸಂಗೀತ ಶಿಕ್ಷಕರಾದ ಮಂಜುನಾಥ್‍ರವರು ತಬಲ ಸಾಥ್ ನೀಡಿದರು. ನಡೆದಾಡುವ ದೇವರಾದ ಸಿದ್ಧಗಂಗೆಯ ಶಿವಕುಮಾರ ಮಹಾಸ್ವಾಮಿಗಳವರ ಮತ್ತು ಎಂ. ಎಸ್. ಶಿವಣ್ಣನವರ ಚಿತ್ರಗಳನ್ನು ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರಿಸಿ ಸಭಿಕರ ಗಮನ ಸೆಳೆದರು. ಸುಶ್ರಾವ್ಯ ಗಾಯನ, ಆಹ್ಲಾದಕರ ವಾತಾವರಣದಲ್ಲಿ ಪಾಲಕರು ಭಾನುವಾರದ ಸವಿ ಸವಿದರು. ಕ್ವಿಜ್‍ನ ಫಲಿತಾಂಶ ಸಂಸ್ಥೆಯ ವೆಬ್ ಸೈಟ್‍ www.siddaganga.com ನಲ್ಲಿ ವಾರದೊಳಗೆ ಪ್ರಕಟವಾಗಲಿದೆ.



1 comment:

  1. Great Information sharing.I am very happy to read this article .. thanks for giving us go through info.Fantastic nice. I appreciate this post Take a look at Cabinets to go Black Friday 2020 Sale

    ReplyDelete