Sunday, June 6, 2021

ಕೋವಿಡ್ 19ರ ವಿರುದ್ದ ಮಾನವೀಯ ಸ್ಪರ್ಶ

ಕೋವಿಡ್ 19ರ ವಿರುದ್ದ ಮಾನವೀಯ ಸ್ಪರ್ಶ

ಸಿದ್ಧಗಂಗಾ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ಆಮ್ಲಜನಕ ಸಾಂದ್ರಕಗಳ ಕೊಡುಗೆ

ದಾವಣಗೆರೆಯ ಜನರು ಸದಾ ಸೇವೆಯಲ್ಲಿ ಮುಂದಿದ್ದಾರೆ. ನಾನು ಅನೇಕ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆದರೆ ದಾವಣಗೆರೆಯ ಜನತೆಯು ದಾನ ಮಾಡುವ, ಸಮಾಜಕ್ಕೆ ಸ್ಪಂದಿಸುವ ಮನೋಭಾವವನ್ನು ಬೇರೆಲ್ಲೂ ನೋಡಲಿಲ್ಲ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಇಂದು ಬೆÀಳಿಗ್ಗೆ ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿರುವ ಸುಮಾರು 5ಲಕ್ಷ ರೂ ಗಳ ಹತ್ತು ಆಕ್ಸಿಜನ್ ಕಾನ್ಸಂಟ್ರೆಟರ್‍ಗಳನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಿದ್ಧಗಂಗಾ ವಿದ್ಯಾಸಂಸ್ಥೆ ಸದಾ ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಾ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದೆ. ಭೂಕಂಪ, ಅತಿವೃಷ್ಟಿಯ ಸಂದರ್ಭದಲ್ಲಿ ದೇಣಿಗೆ ನೀಡಿದೆ. ಕಳೆದ ವರ್ಷ ಆಹಾರ ಕಿಟ್‍ಗಳನ್ನು ನೀಡಿ ತನ್ನ ಪರಂಪರೆ ಉಳಿಸಿಕೊಂಡಿದೆ. ಇದೀಗ ಅತ್ಯವಶ್ಯಕವಾಗಿ ಬೇಕಾಗಿರುವ ಆಮ್ಲಜನಕ ಸಾಂದ್ರಕಗಳನ್ನು ಪೂರೈಸುತ್ತಿದ್ದಾರೆ. ಈ ಸತ್ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಅವರು ಎಲ್ಲಿದ್ದರೂ ಅವರಿಗೆ ಜಿಲ್ಲಾಡಳಿತದ ಪರವಾಗಿ ಅಭಿನಂದಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳು ಮನಃಪೂರ್ವಕವಾಗಿ ಹಾರೈಸಿದರು ಮತ್ತು ದಾವಣಗೆರೆಯ ಇತಿಹಾಸದಲ್ಲಿ ಈ ಸತ್ಕಾರ್ಯ ಶಾಶ್ವತವಾಗಿ ದಾಖಲಾಗುವುದು ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆಯೆ ಪೂಜ್ಯ ಮಹಾಪೌರರಾದ ಎಸ್.ಟಿ.ವಿರೇಶ್‍ರವರು ಕೋವಿಡ್ 19ರ ಕ್ಲಿಷ್ಟ ಪರಿಸ್ಥಿತಿಯಲ್ಲಿ ಎಲ್ಲರೂ ಸಹಕರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಿದ್ಧಗಂಗಾ ವಿದ್ಯಾಸಂಸ್ಥೆ ಸೇವಾಕಾರ್ಯಗಳಲ್ಲಿ ಜಿಲ್ಲೆಯ ಮತ್ತು ರಾಷ್ಟ್ರೀಯ ವಿಪತ್ತುಗಳ ಸಂದರ್ಭದಲ್ಲಿ ಸದಾ ತನ್ನ ಕೈ ಜೋಡಿಸುತ್ತಾ ಬಂದಿದೆ. ಅವರ ಸೇವಾಭಾವನೆಗೆ ಕೃತಜ್ಞತೆಗಳು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್‍ರವರು ಈ ಆಕ್ಸಿಜನ್ ಕಾನ್ಸಂಟ್ರೇಟರ್‍ಗಳು ಯಾರಿಗೆ ಲಭ್ಯವೆಂದು ಸವಿಸ್ತಾರವಾಗಿ ತಿಳಿಸಿದರು. ಕೋವಿಡ್ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೂ ಕೆಲವೊಮ್ಮೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಆಕ್ಸಿಮೀಟರ್‍ನಲ್ಲಿ 90ಕ್ಕಿಂತ ಕಡಿಮೆಯಾದಾಗ ಉಸಿರಾಟ ಸಮಸ್ಯೆಯಿಂದ ಬಳಲುತ್ತಾರೆ. ತಕ್ಷಣ ಆಮ್ಲಜನಕದ ಪೂರೈಕೆಯಾಗಬೇಕು. ಅಂತಹ ರೋಗಿಗಳಿಗೆ ಆಕ್ಸಿಜನ್ ಸಾಂದ್ರಕಗಳು ಜೀವರಕ್ಷಕವಾಗಿರುತ್ತದೆ. ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳಿಗೆ ವೈದ್ಯರು ಆಮ್ಲಜನಕ ಪೂರೈಕೆ ಅವಶ್ಯಕತೆ ಇದೆ ಎಂದು ಮನಗಂಡು ರೋಗಿಯ ವಿವರ ಬರೆದು ಪತ್ರಕೊಟ್ಟರೆ ಅಂತಹ ರೋಗಿಗಳಿಗೆ ಉಚಿತವಾಗಿ ಸಿದ್ಧಗಂಗಾ ಸಂಸ್ಥೆಯಿಂದ ಈ ಯಂತ್ರ ಕೊಡಲಾಗುತ್ತದೆ. ಅವರ ಅವಶ್ಯಕತೆ ಮುಗಿದಾಗ ಸುಸ್ಥಿತಿಯಲ್ಲಿ ಹಿಂತಿರುಗಿಸಿದರೆ ಬೇರೆಯವರಿಗೆ ಕೊಡಲು ಅನುಕೂಲವಾಗುತ್ತದೆ. ಇದು ಸಿದ್ಧಗಂಗಾ ಸಂಸ್ಥೆಯಿಂದ ಒಂದು ಅಳಿಲು ಸೇವೆ ಎಂದರು. ಸಂಸ್ಥೆಯ ಕರೆಗೆ ಓಗೊಟ್ಟು ತಮ್ಮ ಸಹಾಯ ಹಸ್ತ ಚಾಚಿದ ದೇಶ-ವಿದೇಶಗಳಲ್ಲಿ ನೆಲೆಸಿರುವ ಹಿರಿಯ ವಿದ್ಯಾರ್ಥಿಗಳು ಕೇವಲ ಮೂರುದಿನಗಳಲ್ಲಿ ನೆರವಿನ ಮಹಾಪೂರ ಹರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್, ಕಾರ್ಯದರ್ಶಿ ಹೇಮಂತ್, ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ, ಪತ್ರಕರ್ತರು ಮತ್ತು ಹಿರಿಯ ವಿದ್ಯಾರ್ಥಿಗಳಾದ ಸಾಮ್ರಾಟ್ ಮತ್ತು ರಾಮಮನೋಹರ ಅವರು ಉಪಸ್ಥಿತರಿದ್ದರು. 


No comments:

Post a Comment