Sunday, February 27, 2011

Story Behind

ಗೆದ್ದು ಬಾ ಇಂಡಿಯಾ
ಕೋಟಿ ಕೋಟಿ ಭಾರತೀಯರ ಮೊರೆ !

"ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ, ಅದು ಒಂದು ಧರ್ಮ" ವಿಶ್ವ ಕಪ್ 2011ರ ಚರ್ಚೆಯಾಗದ ಸ್ಥಳವಿಲ್ಲ. ಅಬಾಲವೃದ್ಧರಾದಿಯಾಗಿ ಈ ಆಟದ ಬಗ್ಗೆ ಆಸಕ್ತಿ, ತೀವ್ರ ಕುತೂಹಲ ತಾಳುತ್ತಿದ್ದಾರೆ. ಯಾರು ಗೆಲ್ಲಬಹುದೆಂಬ ಊಹೆಯ ಮೇಲೆ
ಬೆಟ್ಟಿಂಗ್ ಪ್ರಾರಂಭವಾಗಿದೆ. ಕ್ರಿಕೆಟ್ ಪ್ರೇಮಿಗಳ ಬೆಂಬಲ, ಹಾರೈಕೆಗಳು ಕೆಲವೊಮ್ಮೆ ಅತಿರೇಕ ಮುಟ್ಟಿದೆ. ತಲೆ ಬೋಳಿಸಿಕೊಳ್ಳುವುದು, ತಲೆಗೂದಲನ್ನು ವಿಶ್ವಕಪ್ ಮಾದರಿಯಲ್ಲಿ ಕಟ್ಟಿಕೊಂಡಿರುವುದು, ಪೂಜೆ, ಹೋಮ, ಹವನ, ಕ್ರಿಕೆಟ್ ಆಟಗಾರರ ಕಟೌಟ್ ಗಳಿಗೆ ಅಭಿಷೇಕ, ಉರುಳುಸೇವೆ, ಸಹಿ ಸಂಗ್ರಹಣೆ ಇಂತಹ ಹತ್ತು ಹಲವಾರು ವಿಧದಲ್ಲಿ ತಮ್ಮ ಅಭಿಮಾನವನ್ನು ಕ್ರಿಕೆಟ್ ಪ್ರೇಮಿಗಳು ವ್ಯಕ್ತಪಡಿಸುತ್ತಿದ್ದಾರೆ.

ಇವೆಲ್ಲಕ್ಕಿಂತ ವಿಭಿನ್ನವಾಗಿ ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆ ಅಪ್ಪಟ ಕನ್ನಡ ಹಾಡೊಂದನ್ನು ರಚಿಸಿ ವೀಡಿಯೊ ಆಲ್ಬಮ್ ಬಿಡುಗಡೆಗೊಳಿಸಿ ತಮ್ಮ ಉತ್ಕಟ ಅಭಿಮಾನ ಮೆರೆದಿದ್ದಾರೆ. "ಗೆದ್ದು ಬಾ ಇಂಡಿಯಾ" ಎಂಬ ಶುಭ ಹಾರೈಕೆಯೊಂದಿಗೆ ತ
ಮ್ಮ ಅಂತರಾಳದ ಭಾವನೆಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ. ಸುಂದರವಾದ ಪೂರಕ ದೃಶ್ಯಗಳನ್ನು ಅಳವಡಿಸಿ, ಭಾರತದ ಅನೇಕ ನೃತ್ಯ ಪ್ರಕಾರಗಳನ್ನು ಪೂರ್ವ ಪ್ರಾಥಮಿಕ ತರಗತಿಯಿಂದ ಪದವಿ ಪೂರ್ವ ತರಗತಿಗಳ ಮಕ್ಕಳನ್ನು ಬಳಸಿ ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ.

ಈ ಆಲ್ಬಮ್ ರಚಿಸಿರುವುದು "ಸಿದ್ದಗಂಗಾ ಶಾಲೆಯ" ಮಕ್ಕಳು ಎಂಬುದು ವಿಶೇಷ. ಪ್ರತಿಷ್ಟಿತ ವಿಶ್ವಕಪ್ಪನ್ನು ಭಾರತದ ಬಲಿಷ್ಠ ತಂಡ ಪಡೆಯಬೇಕೆಂಬುದು ಈ ಕಿರಿಯ ಹೃದಯಗಳ ಬಯಕೆ! ಹಿರಿ-ಕಿರಿಯ ವಿದ್ಯಾರ್ಥಿಗಳು ಸೇರಿದರು. ಪ್ರತಿಭೆಗಳನ್ನು ಕಲೆಹಾಕಿದರು. ಜಯಂತ್ ರವರ ಕವಿ ಮನಸು ತುಡಿಯಿತು.


ಭಾರತ ಮಾತೆಯು ಕಾದಳು ಸಹಿಸಿ
ಸೋಲಿನ ಸರಪಳಿ ಕರಗಿದೆ ದಹಿಸಿ
ಮನಸು ಗೆಲುವಿಗೆ ಕಾದಿದೆ ತಹಿಸಿ
ವಿಶ್ವವ ಗೆದ್ದು ಸಂತಸ ಹರಿಸಿ
ಗೆದ್ದು ಬಾ ಓ ನನ್ನ ಇಂಡಿಯಾ
ನಾವೇನೆಂದು ಜಗತ್ತಿಗೆ ತೋರುವ

ಹಾಡು ಸಿದ್ಧವಾಯಿತು, ಶಾಲೆಯಲ್ಲಿ ಉತ್ತಮ ಗಾಯಕನೆಂದು ಹೆಸರು ಪಡೆದಿದ್ದ ಸುಜಿತ್ ಇದಕ್ಕೊಂದು ಸುಂದರ ರಾಗ ಸಂಯೋಜನೆ ಮಾಡಿದ. ರಾಗಕ್ಕಾಗಿ ಹಲವಾರು ಪ್ರಯೋಗಗಳಾದವು. ಶಾಲೆಯ ಗಾನಕೋಗಿಲೆ ಎಂದೇ ಹೆಸರಾದ ಮಾನಸ ತನ್ನ ಧ್ವನಿ ಮೇಳೈಸಿ ಪುಟಾಣಿ ಸಿದ್ಧಾಂತ್ನ
ಬಾಲು ತಂದು ಕುಕ್ಕಿ ನೋಡು
ಹೋಗುವುದು ಸಿಕ್ಸಿಗೆ
ಯಾರ್ಕರ್ ನೀ ಹಾಕಿ ನೋಡು
ಬೌಂಡರಿ ನಮ್ಮ ಡ್ರೈವಿಗೆ
ಎಳೆಯ ಧ್ವನಿ ಸೇರಿಸಿದರು. ಹಿನ್ನೆಲೆ ಸಂಗೀತವಿದ್ದರೆ ಚೆನ್ನ ಎನಿಸಿತು. ಶಾಲೆಯಲ್ಲಿದ್ದ ಕೀ ಬೋರ್ಡ್, ಗಿಟಾರ್ ಮಾತ್ರ ಇವರ ಕೈಗೆಟುಕುವಂತಿತ್ತು . ಇದನ್ನೇ ಬಳಸಿ ಬಾಲಾಜಿ ಅದ್ಭುತವಾದ ಹಿನ್ನೆಲೆ ಸಂಗೀತ ನೀಡಿದ. ಸರಿ! ಹಾಡು ಸಿದ್ಧವಾಯಿತು.

ತಹಿಸಿದೆ ತನುಮನ ರಾತ್ರಿ ಹಗಲು
ನಮ್ಮ ಕನಸಿಗೆ ಮಿತಿಯೇ ಮುಗಿಲು
ಹರಿಣಿಗಳನು ನೆಲದಲಿ ಕುಟ್ಟು
ಕಾಂಗರು ಸೊಕ್ಕನ್ನು ಕಾಲಲಿ ಮೆಟ್ಟು
ನ್ಯೂಜಿಲ್ಯಾಂಡನು ಬಿಸಿಲಲಿ ಸುಟ್ಟು
ಲಂಕೆಯ ನಡು ನೀರಲಿ ಬಿಟ್ಟು
ಪಾಕಿಗೆ ಸೋಲಿನ ಬುತ್ತಿಯ ಕೊಟ್ಟು
ಇತರೆ ಚಿಲ್ಲರೆ ಪಕ್ಕಕ್ಕೆ ಇಟ್ಟು ||ಗೆದ್ದು ಬಾ||

ಎಲ್ಲ ಮಕ್ಕಳಿಗೆ ಈ ಹಾಡನು ಕೇಳಿಸಲಾಯಿತು, ಮಕ್ಕಳು ಹುಚ್ಚೆದ್ದು ಕುಣಿದರು. ಎಲ್ಲವು ಧೂಳು ಧೂಳು .. ಇಂಡಿಯಾ ಗೆಲ್ಲಬೇಕು. ಈ ಮಕ್ಕಳ ಹರ್ಷಾತಿರೇಕ ನೋಡಿದ ಜಯಂತ್ ರವರಿಗೆ ಇದಕ್ಕೆ ದೃಶ್ಯ ರೂಪ ಕೊಡಬೇಕೆನಿಸಿತು. ಸಿದ್ಧಗಂಗೆಯ ನಾಟ್ಯಮಯೂರಿಗಳಾದ ಸುಚಿತ್ರ, ರಾಜೇಶ್ವರಿ, ಸುಪ್ರೀತ, ಶೀತಲ್ ಮತ್ತು ಅಂಜುಂ ನಾಟ್ಯಕ್ಕೆ ಸಿದ್ಧರಾದರು. ಭಾರತದ ನೃತ್ಯಗಳನ್ನು ಅಳವಡಿಸಿ ವೈವಿಧ್ಯತೆಯಲ್ಲಿ ಏಕತೆ ತರಲು ಯೋಚಿಸಿದರು. ಭರತನಾಟ್ಯ, ಮಣಿಪುರಿ, ಮಹಾರಾಷ್ಟ್ರದ ನಾಟಂಕಿ, ಕರಾವಳಿಯ ಯಕ್ಷಗಾನ, ಜೊತೆಗೊಂದಿಷ್ಟು ವೆಸ್ಟರ್ನ್ ಡಾನ್ಸ್ ಗೆ ಹೆಜ್ಜೆ ಹಾಕಲು ಪ್ರಾರಂಭಿಸಿದರು. ಮೇಕಪ್ ಡ್ರೆಸ್ ಮಾಡಿದವರು ಹೇಮಾ ಆಂಟಿ, ಪುಟಾಣಿ ಭಾರತ ಮಾತೆಯ ಸುತ್ತ ನೆರೆದರು ಪುಟ್ಟ ಪುಟ್ಟ ಬಾಲಕ-ಬಾಲಕಿಯರು! ಪಾತ್ರಧಾರಿಗಳೆಲ್ಲರು ತನ್ಮಯದಿಂದ ಭಾವಪೂರ್ಣ ಅಭಿನಯ ನೀಡಿದರು. ಈಗ ಬಂದ ಸಮಸ್ಯೆ ಲೈಟ್ ಮತ್ತು ಕ್ಯಾಮೆರಾದ್ದು! ಸಂಗಮೇಶ್ವರ ಸ್ಟುಡಿಯೋ ಮಾಲೀಕ ಪುಟ್ಟರಾಜು ಇನ್ನೂ ಯುವಕ. ವಿದ್ಯಾರ್ಥಿಗಳ ಈ ಉತ್ಸಾಹ ನೋಡಿ ತನ್ನಲ್ಲಿದ್ದ ಕ್ಯಾಮೆರಾ ಕೊಟ್ಟು ಸಹಕರಿಸಿದರು. ಥರ್ಮಕೊಲ್ ಶೀಟಿಗೆ ಸಿಲ್ವರ್ ಪೇಪರ್ ಅಂಟಿಸಿಕೊಂಡು ಲೈಟ್ ಬಾಯ್ ಗಳು ಸಿದ್ಧರಾದರು. ಆಕ್ಷನ್-ಕಟ್ ಗಳ ಧ್ವನಿ-ಪ್ರತಿಧ್ವನಿಗಳು ಶಾಲೆಯ ಸ್ಟೇಜ್ ಮೇಲೆ ಅನುರಣಿಸಿತು. ಜಯಂತ್ - ಬಾಲಾಜಿ ಚಿತ್ರೀಕರಣಕ್ಕೆ ಸಿದ್ಧರಾದರು. ಯಕ್ಷಗಾನ ವೇಷ ತೊಡಿಸಲು ಬಂದವರು ಸ್ಥಳೀಯ ಯಕ್ಷಗಾನ ಕಲಾವಿದ ಆನಂದ ಶೆಟ್ಟರು. ಅಬ್ಯಾಸವಿಲ್ಲದ ಬಾಲಕಿಯರು ಕಿರೀಟದ ಭಾರದಿಂದ ಬಸವಳಿದರು.
ವೆಸ್ಟ್ ಇಂಡಿಸ್ "ಧೂಳು .. ಧೂಳು" ಎಂದರೆ ಈ ಬಾಲಕಿಯರು "ನೋವು ನೋವು " ಎಂದು ನೋವಿನಲ್ಲೂ ನಲಿದರು. ಎರಡು ದಿನಗಳಲ್ಲಿ ಈ ಮಹತ್ಸಾದನೆಯ ಚಿತ್ರೀಕರಣ ಮುಗಿಯಿತು. ಈಗ ಉಳಿದದ್ದು ಎಡಿಟಿಂಗ್, ಹಾಡಿಗೆ ದೃಶ್ಯ ಹೊಂದಿಸುವ ಕಾರ್ಯ. ಬಾಲಾಜಿ ತನ್ನೆಲ್ಲ ಬುದ್ಧಿಶಕ್ತಿ ಉಪಯೋಗಿಸಿ ಎಡಿಟಿಂಗ್ ಮಾಡಿದ. ಇದು ಸಹ ಟ್ರಯಲ್ ಅಂಡ್ ಎರರ್ ಮೆಥೆಡ್. ಎರಡು ಹಗಲು - ಎರಡು ರಾತ್ರಿ ಬಿಡದಂತೆ ಕಂಪ್ಯೂಟರ್ ಮುಂದೆ ಗುದ್ದಾಡಿ youtube ನಿಂದ ಒಂದಷ್ಟು ಚಿತ್ರಗಳನ್ನು ಸೇರಿಸಿ ಕೊನೆಗೆ ಎಡಿಟಿಂಗ್ ಮುಗಿಸಿದಾಗ ನಿರ್ದೇಶಕ ಜಯಂತ್ ರವರಿಗೆ ಕೆಲವು ಕಡೆ ಬದಲಾವಣೆ ಮಾಡಬೇಕಿದೆ ಎನಿಸಿತು. ಮತ್ತೆ ಎರಡು ದಿನ ಕೂತು ತಮ್ಮ ಕನಸಿಗೆ ರೆಕ್ಕೆ ಕಟ್ಟಿ ವೀಡಿಯೊ ಸಿದ್ಧಪಡಿಸಿದರು. ಸ್ಟುಡಿಯೋ, ರೆಕಾರ್ಡಿಂಗ್, ಎಡಿಟಿಂಗ್ ನಡೆದದ್ದು ತರಗತಿಯ ಒಂದು ಕೊಠಡಿಯಲ್ಲಿ, ಯಾರೂ ತರಬೇತಿ ಪಡೆದವರಲ್ಲ. ನಿಷ್ಣಾತರಾರು ಜೊತೆಯಲ್ಲಿಲ್ಲ! ಸಾಧಿಸಬೇಕೆಂಬ ಅದಮ್ಯ ಬಯಕೆ, ಛಲ, ನಿರಂತರ ಪ್ರಯತ್ನ ಶ್ರದ್ಧೆ, ಬದ್ಧತೆ ಮಾತ್ರ ಇವರಲ್ಲಿತ್ತು.

ಮುಂದಿನ ಪಯಣ ಮತ್ತೂ ಕಷ್ಟಕರ. ಇದನ್ನು ಜನರಿಗೆ ತಲುಪಿಸುವ ಬಗೆ ಹೇಗೆ ಎಂಬ ಬಗ್ಗೆ ಚರ್ಚಿಸಿದರು. ಮಾಧ್ಯಮದವರನ್ನು ಸಂಪರ್ಕಿಸಿದರು. ಪ್ರೋತ್ಸಾಹದ ಎಳೆಯೊಂದನ್ನು ಹಿಡಿದು ಜೋತಾಡಿದರು. ಪ್ರೆಸ್ ಕ್ಲಬ್ ನಲ್ಲಿ ವೀಡಿಯೊ ತೋರಿಸಿದರು. ವೀಕ್ಷಿಸಿದ ಪತ್ರಕರ್ತರು ಪ್ರೋತ್ಸಾಹದ ನೀರೆರೆದಿದ್ದು ಉತ್ಸಾಹವನ್ನು ಪುಟಿದೆಬ್ಬಿಸಿತು. ವೀಡಿಯೊ ಆಲ್ಬಮ್ ನ್ನು ಬೆಂಗಳೂರಿಗೆ ಒಯ್ದರು. ಟೀವಿ ವಾಹಿನಿಗಳನ್ನು ಸಂಪರ್ಕಿಸಿದರು. ವಿಶ್ವಕಪ್ ಗಾಗಿ ಕ್ಷಣಗಣನೆ ನಡೆಯುತ್ತಿರುವಾಗ ಸಂದರ್ಭೋಚಿತವಾದ ಈ ಹಾಡು ಎಲ್ಲರ ಗಮನ ಸೆಳೆಯಿತು. Tv-9, ಸಮಯ, ಸುವರ್ಣ ವಾಹಿನಿಯವರು ಈ ವೀಡಿಯೊ ಆಲ್ಬಮ್ ಬಿತ್ತರಿಸಿದರು. ಪತ್ರಿಕೆಗಳಲ್ಲಿ ಸುದ್ಧಿ ಪ್ರಕಟವಾಯಿತು. youtube ನಲ್ಲಿ upload ಮಾಡಿದರು. blogspot ನಲ್ಲಿ ಬರೆದರು. ಅಬ್ಬಾ! ಕೊನೆಗೂ ಗುರಿ ಮುಟ್ಟಿದರು. ಅಂದುಕೊಂಡಿದ್ದನ್ನು ಸಾಧಿಸಿದರು. ವಿದ್ಯಾರ್ಥಿಗಳು ತಯಾರಿಸಿದ ಮೊದಲ ಆಲ್ಬಮ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಷ್ಟ್ರ ಮಟ್ಟದಲ್ಲಿ 'ಸಿದ್ದಗಂಗಾ' ಶಾಲೆ ಹೊಸ ದಾಖಲೆ ನಿರ್ಮಿಸಿತು. ಶಾಲಾ ಮಟ್ಟದ ಮಕ್ಕಳು ಹೊಸ ಇತಿಹಾಸ ನಿರ್ಮಿಸಿದರು! ರಚನಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮಕ್ಕಳಿಗೆ ಹೇಗೆ ಪ್ರೇರಕ ಶಕ್ತಿ ಬೇಕೆಂಬುದನ್ನು ಸಿದ್ದಗಂಗಾ ವಿದ್ಯಾಸಂಸ್ಥೆ ಜಯಂತ್ ನಿರೂಪಿಸಿದ್ದಾರೆ. ಯುವಶಕ್ತಿಯ ಸದ್ಬಳಕೆಯ ಪ್ರತೀಕವಾಗಿದ್ದಾರೆ ಈ ವಿಶಿಷ್ಠ ಸಾಧಕರು!

ನೀವೊಮ್ಮೆ ಈ ವೀಡಿಯೊ ಆಲ್ಬಮ್ ನೋಡಿ, ನಿಮಗೆ ಇಷ್ಟವಾದರೆ ನಿಮ್ಮ ಫ್ರೆಂಡ್ಸ್ ಗೆ email ಕಳಿಸಿ, ಅವರಿಗೆ ತೋರಿಸಿ, facebook ನಲ್ಲಿ, orkut ನಲ್ಲಿ share ಮಾಡಿ. ನಿಮ್ಮ comments ಬರೆಯಿರಿ. ಗೆದ್ದು ಬಾ ಇಂಡಿಯಾ ಎಂದು ನೀವೊಮ್ಮೆ ಹಾರೈಸಿ. ಈ ಯಶೋಗಾಥೆ ಭಾರತ ತಂಡಕ್ಕೆ ಸ್ಪೂರ್ತಿಯಾಗಲಿ. ಯುವ ಶಕ್ತಿಯನ್ನು ದೆಶಾಭಿಮಾನದತ್ತ ಕರೆದೊಯ್ದು ವಿವಿಧತೆಯಲ್ಲಿ ಏಕತೆ ಮೂಡಿಸಲಿ.

- ಸಿದ್ಧಗಂಗಾ ವಿದ್ಯಾರ್ಥಿಗಳಿಂದ

No comments:

Post a Comment