ಅದು ತೊಂಭತ್ತರ ದಶಕ. ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆ ಇನ್ನೇನು ಮುಚ್ಚಿ ಹೋಗುತ್ತದೆಂಬ ಗಾಳಿ ಸುದ್ಧಿ. ಇದ್ದ ಬಾಡಿಗೆ ಕಟ್ಟಡ ಬಿಡಲು ಸುಪ್ರೀಂಕೋರ್ಟ್ ಆದೇಶ. ಕೊಂಡುಕೊಂಡಿದ್ದ ಈಗಿರುವ ನಿವೇಶನದಲ್ಲಿ ಕಟ್ಟಡ ಕಟ್ಟಲು ಹಣವಿಲ್ಲ. ದಿಕ್ಕು ತೋಚದೆ ಕಂಗಾಲಾಗಿದ್ದ ಸಂಸ್ಥಾಪಕ ಶಿವಣ್ಣನವರು ಹತಾಶರಾಗಿ ದುಃಖಿತರಾಗಿದ್ದರು. ಆಗ ಅವರಿಗೆ ಆಶಾಕಿರಣವಾಗಿ ಗೋಚರಿಸಿದ್ದು ಶಾಮನೂರು ಶಿವಶಂಕರಪ್ಪನವರು. 1970 ರಲ್ಲಿ ಸಿದ್ಧಗಂಗಾ ಸಂಸ್ಥೆಯ ಪ್ರಾರಂಭೋತ್ಸವಕ್ಕೆ ಆಗಮಿಸಿ ಶುಭ ಕೋರಿದ್ದ ಶಿವಶಂಕರಪ್ಪನವರು ಶಿವಣ್ಣನವರ ಏಕಾಂಗಿ ಹೋರಾಟವನ್ನು ಗಮನಿಸುತ್ತಲೇ ಬಂದಿದ್ದರು. 20 ವರ್ಷಗಳಿಂದ ಹೇಗ್ಹೇಗೋ ಎಳೆದಾಡಿದ ಸಿದ್ಧಗಂಗೆಯ ನಾವೆ ಮುಳುಗುವ ಪರಿಸ್ಥಿತಿ! 1991 ರಲ್ಲಿ M S ಶಿವಣ್ಣನವರು ಶಿವಶಂಕರಪ್ಪನವರ ಮನೆಯ ಅಂಗಳದ ಮೂಲೆಯಲ್ಲಿ ನಿಂತಿದ್ದರು. ದೂರದಿಂದ ಇವರನ್ನು ಗಮನಿಸಿದ ಅವರು “ಏನು ಬಂದಿದ್ದು ಶಿವಣ್ಣ?” ಎಂದು ಪ್ರಶ್ನಿಸಿದರು. ಶಾಲೆಯ ಕಟ್ಟಡ ಕಟ್ಟಲು ಹಣವಿಲ್ಲ, ಯಾವ ಬ್ಯಾಂಕಿನಿಂದಲೂ ಸಾಲ ಸಿಗುತ್ತಿಲ್ಲ” ಎಂದು ನಿವೇದಿಸಿಕೊಂಡಾಗ ಮರು ಮಾತಿಲ್ಲದೆ ಶಿವಶಂಕರಪ್ಪನವರು ಬಾಪೂಜಿ ಬ್ಯಾಂಕಿನ ಮ್ಯಾನೇಜರ್‌ಗೆ ಫೋನ್ ಮಾಡಿ “ಶಿವಣ್ಣ ಬರಾÛನೆ, ಅವನಿಗೆ ಶಾಲೆ ಕಟ್ಟಡ ಕಟ್ಟಲು ಲೋನ್ ಕೊಡು” ಎಂದು ಆಜ್ಞಾಪಿಸಿದರು. ಅತ್ತಲಿಂದ ಬ್ಯಾಂಕ್ ಮ್ಯಾನೇಜರ್ ಶ್ಯೂರಿಟಿ ಕೊಡಲು ಶಿವಣ್ಣನವರ ಹತ್ತಿರ ಏನೂ ಇಲ್ಲ” ಎಂದರು. ತಕ್ಷಣ “ಅವನು ಕೇಳಿದಷ್ಟು ಕೊಡು. ಅವನು ಕಟ್ಟದಿದ್ದರೆ ನಾನು ಕಟ್ತೀನಿ” ಎಂದು ಫೋನ್ ಇಟ್ಟರು. ಮುಂದಿನ ದೃಶ್ಯ ಬದಲಾಯಿತು. ಶಿವಣ್ಣನವರು ಕೇಳಿದಷ್ಟು ಸಾಲ ಬಾಪೂಜಿ ಬ್ಯಾಂಕಿನಿಂದ ಮಂಜೂರಾಯಿತು. ಸಾಲ ಪಾವತಿ - ಮರು ಸಾಲ- ಮರು ಪಾವತಿ ಹೀಗೆ ನಿರಂತರವಾಗಿ ನಡೆಯಿತು. ಮುಳುಗುತ್ತಿದ್ದ ಸಿದ್ಧಗಂಗೆಯ ನಾವೆ ತೇಲಿತು.
ಸ್ವತಃ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಬಾಪೂಜಿ ಸಂಸ್ಥೆಯ ಕಾರ್ಯದರ್ಶಿ ಮತ್ತೊಂದು ಸಂಸ್ಥೆಯ ಬೆಳವಣಿಗೆಗೆ ಹೇಗೆ ಸಹಾಯ ಹಸ್ತನೀಡಿದರು ಎಂಬುದು ಅವರ ಉದಾರ ನೀತಿಗೊಂದು ನಿದರ್ಶನ. ಅನೇಕ ಕಾರ್ಯಕ್ರಮಗಳಲ್ಲಿ ನಮ್ಮೊಡನೆ ಭಾಗವಹಿಸಿದ ನೆನಪು
ಮರೆಯಲಾಗದು. ಬೋರ್‌ವೆಲ್ ತೋಡಿಸಿದಾಗ ಅದಕ್ಕೆ ಚಾಲನೆ ನೀಡಿದ ಸಣ್ಣ ಕಾರ್ಯದಿಂದ, ನಡೆದಾಡಿದ ದೇವರು ಸಿದ್ಧಗಂಗಾ ಶ್ರೀ
ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯ ಸ್ಮರಣೆಯಲ್ಲಿ ದಾಸೋಹಕ್ಕೆ ಚಾಲನೆ ನೀಡಿ ಸ್ವತಃ ಮಕ್ಕಳಿಗೆ ಬಡಿಸಿದ ಅಮೋಘ ಕಾರ್ಯಕ್ಕೆ
ಅವರಿಂದ ಚಾಲನೆ ದೊರಕಿತ್ತು. ಸಹಾಯ ಬೇಡಿ ಬಂದವರಿಗೆ ಎಂದೂ ಇಲ್ಲವೆಂದಿಲ್ಲ. ಸದಾ ತೆರೆದ ಮನಸ್ಸು – ತೆರೆದ ಬಾಗಿಲು ಸಾಮ್ರಾಟ
ಅಶೋಕನನ್ನು ನೆನಪಿಸುತ್ತದೆ. ಅವರ ಸ್ಮರಣ ಶಕ್ತಿ ಅದ್ಭುತವಾದದ್ದು. ಒಳ-ಹೊರಗು ಎಂಬುದಿಲ್ಲದೆ ಇದ್ದದ್ದು ಇದ್ದಂತೆ ನುಡಿಯುವ ನಿಷ್ಕಲ್ಮಶ ಜೀವಿ.
ಅವರು ಅನುಭವಿಸಿದ ನೋವುಗಳೆಷ್ಟೋ! ಒಂದು ಘಟನೆ ನನ್ನ ಮನಃ ಕಲಕಿತ್ತು.ಬಾಪೂಜಿ ಸಂಸ್ಥೆಯ ಸುವರ್ಣ ಮಹೋತ್ಸವ. ಬಹಳ ಅದ್ದೂರಿಯಾಗಿ ಆಯೋಜನೆಗೊಂಡಿತು. ರಾಷ್ಟ್ರಪತಿ A P J ಅಬ್ದುಲ್ ಕಲಾಂ ರವರು ಆಗಮಿಸಿದ್ದರು. ಬಾಪೂಜಿ ಸಂಸ್ಥೆ ಹರ್ಷದ ಹೊನಲಲ್ಲಿ ತೇಲುತ್ತಿತ್ತು. ಶಿವಶಂಕರಪ್ಪನವರ ಕುಟುಂಬಕ್ಕೆ ಬರಸಿಡಿಲಿನ ವಾರ್ತೆ ತಲುಪಿತು. ಅಪಘಾತದಲ್ಲಿ ಮೊಮ್ಮಗಳ ದುರಂತ ಸಾವು! ಕೌಟುಂಬಿಕ ಸಮಸ್ಯೆಯನ್ನು ಬದಿಗೊತ್ತಿ ಸಮಾರಂಭಕ್ಕೆ ಕಿಂಚಿತ್ತೂ ಲೋಪವಾಗದಂತೆ ದುಃಖ ನುಂಗಿ ನಗುವಿನ ಮುಖವಾಡ ಧರಿಸಿ ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡ ನಂಜುಂಡ ಶಾಮನೂರು ಶಿವಶಂಕರಪ್ಪನವರು. ಕಷ್ಟಗಳನ್ನು ನುಂಗಿ ನೀರು ಕುಡಿಯುವುದು ಅವರಿಗೆ ಜನ್ಮತಃ ಬಂದ ದೇಣಿಗೆ. ಅಸಂಖ್ಯಾತರಿಗೆ ನೆರಳು ನೀಡಿದ ಆಲದ ಮರ ಧರೆಗುಳಿದಿದೆ. ಅಪ್ಪಾಜಿಯವರ ನೆನಪು ಸಿದ್ಧಗಂಗಾ ಸಂಸ್ಥೆಯಲ್ಲಿ ಅಮರ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಇಂದು ಬೆಳಿಗ್ಗೆ ಶಾಲಾ ಕಾಲೇಜಿನ ಮಕ್ಕಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪ್ರಾರ್ಥಿಸಿ
ಮೌನಾಚರಣೆಯ ಮೂಲಕ ಗೌರವ ಸಲ್ಲಿಸಿದರು.
- ಜಸ್ಟಿನ್ ಡಿʼಸೌಜ
ಸಿದ್ಧಗಂಗಾ ವಿದ್ಯಾಸಂಸ್ಥೆ,
ದಾವಣಗೆರೆ
