ದಾವಣಗೆರೆ, ನವೆಂಬರ್ 26

Where Dreams Take Wings
ದಾವಣಗೆರೆ, ನವೆಂಬರ್ 26

ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಇವರು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸಹಯೋಗದಲ್ಲಿ “ಮಕ್ಕಳ ರಂಗ ತರಬೇತಿ ಶಿಬಿರ” ಆಯೋಜಿಸಿದರು. ಈ ಶಿಬಿರದಲ್ಲಿ ಬಿ.ಇ ಪದವೀಧರೆ ಹಾಗೂ ಹೆಗ್ಗೋಡು ರಂಗ ತರಬೇತಿ ಕೇಂದ್ರದ ಡಿಪ್ಲೊಮೋ ಪದವೀಧರೆ ಪ್ರಜ್ಞಾ ನೀಲಗುಂದ ಅವರು ಒಂದು ತಿಂಗಳ ಕಾಲ ಯಶಸ್ವಿಯಾಗಿ ಮಕ್ಕಳಿಗೆ ತರಬೇತಿ ನೀಡಿದ್ದಾರೆ.
ಶಿಬಿರದಲ್ಲಿ ಮೂವತ್ತಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ತರಬೇತಿ ಪಡೆದಿದ್ದಾರೆ. ಶಿಬಿರದಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಬಾ. ಮ. ಬಸವರಾಜಯ್ಯ ಅವರು ರಚಿಸಿರುವ “ಒಂದು ಕಾಡಿನ ಕಥೆ” ನಾಟಕ ಕಲಿತಿದ್ದು
ದಿನಾಂಕ 18-11-2025 ರ ಮಂಗಳವಾರ ಸಂಜೆ 6.30 ಕ್ಕೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಬಯಲು ರಂಗಮಂದಿರದಲ್ಲಿ ಪ್ರದರ್ಶಿಸಲಿದ್ದಾರೆ.
ಶಿಬಿರದ ಸಮಾರೋಪ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾಧಿಕಾರಿಗಳಾದ ಜಿ.ಎಂ. ಗಂಗಾಧರ ಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ನೀಲಮ್ಮನವರು ಶಿಬಿರದ ಸಮಾರೋಪ ಭಾಷಣ ಮಾಡಲಿದ್ದು, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ಅಧ್ಯಕ್ಷತೆ ವಹಿಸಲಿದ್ದಾರೆ. ನಾಟಕ ಅಕಾಡೆಮಿ ಸದಸ್ಯರುಗಳಾದ ರವೀಂದ್ರನಾಥ್ ಸಿರಿವರ, ವಿಶ್ವನಾಥ ರೆಡ್ಡಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪ್ರಜಾವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ, ಪ್ರತಿಮಾ ಸಭಾದ ಪ್ರಧಾನ ಕಾರ್ಯದರ್ಶಿ ಬಿ.ಎನ್, ಮಲ್ಲೇಶ್ ಹಾಗೂ ನೀವು-ನಾವು ತಂಡದ ಮುಖ್ಯಸ್ಥ ರಂಗಕರ್ಮಿ ಎಸ್. ಎಸ್. ಸಿದ್ಧರಾಜು ಗೌರವ ಉಪಸ್ಥಿತರಿರುತ್ತಾರೆ.
ನಾಟಕದ ಕಥಾ ಹಂದರ: ಮನುಷ್ಯರು ದಿನೇ ದಿನೇ ಕಾಡು ನಾಶಮಾಡುತ್ತಾ ವನ್ಯಪ್ರಾಣಿ ಸಂಕುಲಕ್ಕೆ ನೆಲೆ ಇಲ್ಲದಂತೆ ಮಾಡುತ್ತಿರುವುದನ್ನು ಕಂಡು “ಕಾಡು ಪ್ರಾಣಿಗಳು ಮತ್ತು ಊರು ಪ್ರಾಣಿಗಳು” ಒಟ್ಟುಗೂಡಿ ಮನುಷ್ಯರ ವಿರುದ್ಧ ಮುಷ್ಕರ ಮಾಡುತ್ತವೆ. ಕಾಡು ಹಾಗೂ ಪರಿಸರ ನಾಶದಿಂದ ಆಗುವ ವಿನಾಶದ ಬಗ್ಗೆ ಪಾಠ ಹೇಳುತ್ತವೆ….. ಹಾಡು-ನೃತ್ಯಗಳ ಸಂಯೋಜನೆಯೊಂದಿಗೆ ನಾಟಕ ಸಿದ್ಧಪಡಿಸಲಾಗಿದೆ…. ನಾಟಕಾಸಕ್ತರು ಮಕ್ಕಳು ಪ್ರದರ್ಶಿಸುವ ಈ ನಾಟಕ ವೀಕ್ಷಿಸಲು ಮನವಿ ಮಾಡಿದ್ದಾರೆ.
ನಗರದ ಸಿದ್ಧಗಂಗಾ ಶಾಲಾ-ಕಾಲೇಜುಗಳಲ್ಲಿ ಇಂದು ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರಿಕೆಜಿಯ ಪುಟಾಣಿ ಭುವಿತ್ ಕನಕದಾಸರ ವೇಷ ಧರಿಸಿ ಎಲ್ಲರ ಗಮನ ಸೆಳೆದನು. 2 ನೇ ತರಗತಿ ಬಾಲಕ ಜಯಸೂರ್ಯಸ್ವಾಮಿ ಕನಕದಾಸರ ಪ್ರಸಿದ್ಧ “ದಾಸನಾಗು ವಿಶೇಷನಾಗು” ಕೀರ್ತನೆ ಹಾಡಿದನು. 4 ನೇ ತರಗತಿ ಬಾಲಕಿ ಆರಾಧ್ಯ ಕನಕದಾಸರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಎಲ್ಲರಿಗೂ ತಿಳಿಸಿಕೊಟ್ಟಳು. ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿಯಿಂದ ಪೂಜಿಸಲಾಯಿತು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ಮತ್ತು ಶಿಕ್ಷಕರು ಹಾಗೂ ಉಪನ್ಯಾಸಕರು ಆಚರಣೆಯಲ್ಲಿ ಭಾವಗಹಿಸಿದರು.
ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಲಾ-ಕಾಲೇಜಿನ ಮಕ್ಕಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಪಾಲಕರು ಸೇರಿ70ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಸದಾಶಿವ ಹೊಳ್ಳರವರು ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕದ ಹಿರಿಮೆಯನ್ನು ತಿಳಿಸುತ್ತಾ ನಾಡಿಗಾಗಿ ಶ್ರಮಿಸಿದ ದಿಗ್ಗಜರನ್ನು ಸ್ಮರಿಸಿದರು. ಭಾರತ ಜನನಿಯ ತನುಜಾತೆ ಕರ್ನಾಟಕ ಮಾತೆಯ ವೈಭವವನ್ನು ವರ್ಣಿಸಿದರು.
70 ಮಕ್ಕಳಿಂದ “ಹಚ್ಚೇವು ಕನ್ನಡ ದೀಪ” ಗೀತೆಯನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಲಾಯಿತು. ಅಕ್ಕಮಹಾದೇವಿ ಮತ್ತು ಬಸವಣ್ಣನವರ ವಚನಗಳನ್ನು ಸಿ.ಬಿ.ಎಸ್.ಇ ಎಲ್.ಕೆ.ಜಿ. ರಾಘವಿ ಮತ್ತು ಮನಿಷ್ ಗೌಡ ಹೇಳಿದರು. ಒಂದನೇ ತರಗತಿ ರಿಷಿಕ್ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಪರಿಚಯ ಮಾಡಿದರೆ, 2ನೇ ತರಗತಿ ತಾನ್ವಿ ಹರೀಶ್, ನಿದಾ ಫಾತಿಮ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಪರಿಚಯ ಮಾಡಿಕೊಟ್ಟರು. ಎಲ್.ಕೆ.ಜಿ. ರೇವಂತ್ ಆರ್ಯ ಮತ್ತು 8ನೇ ತರಗತಿ ಓಜಸ್ ರಾಜ್ಯೋತ್ಸವದ ಶುಭಾಷಯ ತಿಳಿಸಿದರು. ಪುಣಾಣಿ ಮಕ್ಕಳು ಜೋಗದ ಸಿರಿ ಬೆಳಕಿನಲ್ಲಿ ಹಾಡನ್ನು ಇಂಪಾಗಿ ಹಾಡಿದರು.ಸಿ.ಬಿ.ಎಸ್.ಇ. 6ನೇ ತರಗತಿ ಮಕ್ಕಳು ಬಾರಿಸು ಕನ್ನಡ ಡಿಂಡಿಮ ಮತ್ತು ಕನ್ನಡ ಹೊನ್ನುಡಿ ದೇವಿಯನು ಪೂಜಿಸು ಹಾಡುಗಳಿಗೆ ಆಕರ್ಷಕ ನೃತ್ಯ ಮಾಡಿದರು. ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ವಂದನಾರ್ಪಣೆ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿʼಸೌಜ ಮಾಡಿದರೆ, ಶಿಕ್ಷಕಿ ಆಶಾರವರು ಅಚ್ಚುಕಟ್ಟಾಗಿ ನಿರೂಪಣೆ ನಡೆಸಿಕೊಟ್ಟರು. ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಮತ್ತು ನಿರ್ದೇಶಕ ಡಾ|| ಜಯಂತ್‌ರವರು ಭಾಗವಹಿಸಿದ್ದರು. ಮಕ್ಕಳು ಹಳದಿ ಕೆಂಪು ಬಣ್ಣದ ವಸ್ತ್ರಗಳಲ್ಲಿ ಕಂಗೊಳಿಸಿದರು. ಸಂಗೀತ ಶಿಕ್ಷಕರು, ದೈಹಿಕ ಶಿಕ್ಷಕರು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದುಕೊಟ್ಟರು.
2025-26 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ನಗರದ ಕಾಲೇಜುಗಳಲ್ಲಿ ಒಂದಾದ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಮಕ್ಕಳು ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಜಯಗಳಿಸಿ ರಾಷ್ಟ್ರಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ದಾವಣಗೆರೆ ನಗರದಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್‌ಬಾಲ್ ಕ್ರೀಡಾ ಕೂಟದಲ್ಲಿ ಗಿರೀಶ್ ಆರ್ ನೇಸರ್ಗಿ ಎಂಬ ವಿದ್ಯಾರ್ಥಿ ಜಮ್ಮು- ಕಾಶ್ಮೀರದಲ್ಲಿ ನೆಡೆಯುವ ರಾಷ್ಟ್ರಮಟ್ಟದ ಫುಟ್‌ಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ.
ಈ ಕ್ರೀಡಾಪಟುಗಳನ್ನು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಡಾ. ಜಸ್ಟಿನ್ ಡಿ”ಸೌಜ, ನಿರ್ದೇಶಕರಾದ ಡಾ. ಜಯಂತ್, ಕಾರ್ಯದರ್ಶಿಗಳಾದ ಹೇಮಂತ್ ಡಿ.ಎಸ್., ಪ್ರಾಂಶುಪಾಲರಾದ ವಾಣಿಶ್ರೀ ಹಾಗೂ ಉಪನ್ಯಾಸಕ ವೃಂದದವರು, ದೈಹಿಕ ಶಿಕ್ಷಣ ಉಪನ್ಯಾಸಕರಾದ ಲಿಂಗರಾಜ್ ಹೆಚ್, ರಘು ಹೆಚ್.ಎಂ., ಶ್ರೀನಿವಾಸ್ ಹಾಗು ಸುನೀತಾ ಇವರ ತರಬೇತಿಯಲ್ಲಿ ಮಕ್ಕಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ದಾವಣಗೆರೆ ಆ. 27,
12 ಅಡಿ ಎತ್ತರದ ಭವ್ಯ ಗಣಪತಿ ಮಕ್ಕಳು ಎಳೆಯುತ್ತಿದ್ದ ರಥದ ಮೇಲೆ ಗಂಭೀರವದನವಾಗಿ ವಿರಾಜಮಾನನಾಗಿದ್ದನು. ಶಾಲೆಯ ಮಕ್ಕಳು ವಿವಿಧ ವೇಷ ಭೂಷಣಗಳಲ್ಲಿ ಆಗಮಿಸಿದ್ದರು. ತಿರುಪತಿ ವೆಂಕಟೇಶ, ಧನಲಕ್ಷ್ಮಿ, ಮಧುರೆ ಮೀನಾಕ್ಷಿ, ಚಾಮುಂಡೇಶ್ವರಿ, ಗಣಪತಿ, ಶಿವಾಜಿ, ರಾಮ, ಸೀತೆ, ಲಕ್ಷ್ಮಣ, ಹನುಮಂತ, ಪರಶುರಾಮ, ರಾಧಾಕೃಷ್ಣ ಹೀಗೆ ಸುಮಾರು ಇನ್ನೂರಕ್ಕೂ ಹೆಚ್ಚು ಮಕ್ಕಳು ಪೌರಾಣಿಕ ಪಾತ್ರದಲ್ಲಿ ಕಣ್ಮನ ಸೆಳೆಯುವಂತಿದ್ದರು. ಬೆಳಿಗ್ಗೆ 9 ಗಂಟೆಗೆ ಶಾಲೆಯಿಂದ ಪರಿಸರ ಸ್ನೇಹಿ ಪೇಪರ್ ಗಣಪತಿಯನ್ನು ಗಾಂಧಿ ಸರ್ಕಲ್‌ಗೆ ತಂದರು. ಅಲ್ಲಿಂದ ನಂದಿಕೋಲು, ಡೊಳ್ಳು, ವೀರಗಾಸೆ, ಪಟಗಳನ್ನು ಹಿಡಿದ ಮಕ್ಕಳು ಆಗಮಿಸಿ ಮೆರವಣಿಗೆಗೆ ಸಿದ್ಧರಾದರು. ಜೊತೆಗೆ ಸಾವಿರಕ್ಕೂ ಹೆಚ್ಚು ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಶಿಸ್ತುಬದ್ಧವಾಗಿ ಮೆರವಣಿಗೆಯೊಡನೆ ಹೆಜ್ಜೆ ಹಾಕಿದರು.
ಶಾಲೆಯ ವಾದ್ಯವೃಂದದವರು ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ ನಡೆದರು. ನಡುನಡುವೆ ಮಕ್ಕಳ ಉದ್ಘೋಷ ದಾರಿಹೋಕರ ಗಮನ ಸೆಳೆಯಿತು. ಕ್ಷಣಕಾಲ ನಿಂತು ಗಣಪತಿಗೆ ಕೈ ಮುಗಿಯುತ್ತಿದ್ದರು. ಮೆರವಣಿಗೆ ಗಾಂಧಿ ಸರ್ಕಲ್‌ನಿಂದ ಜಯದೇವ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮೂಲಕವಾಗಿ ಸಿದ್ಧಗಂಗಾ ಶಾಲೆಯ ಆವರಣ ತಲುಪಿತು. ಬೃಹತ್ ಮೆರವಣಿಗೆ ಭಕ್ತಿಪೂರ್ವಕ ವಾತಾವರಣ ಸೃಷ್ಠಿಸಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಸಿದ್ಧಗಂಗಾ ಸಂಸ್ಥೆಯ ಮಕ್ಕಳೇ ತಯಾರಿಸಿದ ಈ ಪೇಪರ್ ಗಣಪತಿ ನೋಡಿ ದಿಗ್ಭೃಾಂತರಾದರು. ಕೆಲವರು ಸ್ಪರ್ಶಿಸಿ ಪುನೀತರಾದರು. ನಾಲ್ಕು ಮಕ್ಕಳು ಎತ್ತಬಹುದಾದ 12 ಅಡಿ ಎತ್ತರದ ಪರಿಸರ ಸ್ನೇಹಿ ಗಣಪ ಸಾರ್ವಜನಿಕ ವೀಕ್ಷಣೆಗೆ 10 ದಿನಗಳ ಕಾಲ ಲಭ್ಯವಿದೆ. 11ನೇ ದಿನ ವಿಸರ್ಜಿಸಲಾಗುವುದು.
ಪ್ರತಿವರ್ಷ ಗಣೇಶ ಚತುರ್ಥಿಯನ್ನು ವಿಭಿನ್ನವಾಗಿ ಸಾಂಪ್ರದಾಯಿಕವಾಗಿ ಆಚರಿಸುವ ಮಕ್ಕಳಲ್ಲಿ ಭಕ್ತಿಭಾವ ಮೂಡಿಸುವುದರ ಜೊತೆಗೆ ಶಾಲಾ ಮಕ್ಕಳೇ ರೂಪಿಸುವ ಗಣಪತಿ ಪೂಜೆಗೆ ಹಲವಾರು ಪಾಲಕರು ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ನಿರ್ದೇಶಕ ಡಾ|| ಜಯಂತ್ ಅವರ ಪರಿಕಲ್ಪನೆಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಶಾಲೆಯ ಚಿತ್ರಕಲಾ ಶಿಕ್ಷಕರ ನೆರವಿನಿಂದ ಸುಂದರ ರೂಪ ತಾಳುವ ಪೇಪರ್ ಗಣಪತಿಗೆ ಪ್ರತಿನಿತ್ಯ ಬೆಳಿಗ್ಗೆ ಶಾಲಾ ಮಕ್ಕಳು ಪೂಜಾ ಕಾರ್ಯದ ನೇತೃತ್ವ ವಹಿಸುವರು. ಕಾರ್ಯದರ್ಶಿ ಹೇಮಂತ್ ಹಾಗೂ ದೈಹಿಕ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪ್ರತಿ ತರಗತಿಯ ಶಿಕ್ಷಕರು ಈ ಮಕ್ಕಳಿಗೆ ಮಾರ್ಗದರ್ಶನ ನೀಡುವರು. ಭಾವೈಕ್ಯತೆ, ಭಾತೃತ್ವ ಬೆಳೆಸುವಲ್ಲಿ ಮಹಾಗಣಪತಿಯ ಪಾತ್ರ ಹಿರಿದಾಗಿದೆ. ಇಡೀ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರದಿಂದ ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ.
ದಾವಣಗೆರೆ | 26/08/2025
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆ ದಾವಣಗೆರೆ, ದಿನಾಂಕ 10-08-2025 ರಂದು, ಬೆಂಗಳೂರಿನಿಂದ ಬೆಳಗಾವಿಗೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್ ಅನ್ನು ಮಾನ್ಯ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು ಈ ನಿಮಿತ್ತ ದಾವಣಗೆರೆ ರೈಲು ನಿಲ್ದಾಣದಲ್ಲಿ ನೂತನ ಕಾರ್ಯವೈಕರಿಯುಳ್ಳ ರೈಲನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು, ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ನೃತ್ಯ,ಹಾಗೂ ನೈರುತ್ಯ ರೈಲ್ವೆ ವಿಭಾಗದಿಂದ ಆಯೋಜಿಸಿದ್ದ ಚಿತ್ರಕಲಾ,ಭಾಷಣ,ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಸಿದ್ಧಗಂಗಾಶಾಲೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದೆ ಶ್ರೀಮತಿ ಪ್ರಭಾಮಲ್ಲಿಕಾರ್ಜುನ್ ಮೇಡಂ ಅವರಿಂದ ಪ್ರಥಮ.ದ್ವಿತೀಯ, ತೃತೀಯ ಸ್ಥಾನ ಪಡೆದು ಪ್ರಶಸ್ತಿಪತ್ರ ಹಾಗೂ ಬಹುಮಾನ ಪಡೆದರು,ದಾವಣಗೆರೆಇಂದ ಹಾವೇರಿಯ ತನಕ ನೂತನ ವಂದೇಭಾರತ್ ರೈಲಿನಲ್ಲಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಪ್ರಯಾಣಿಸಿ ಪುಳಕಗೊಂಡರು ಸ್ಥಳೀಯ ಸಂಸ್ಥೆಯ 105 ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.