Wednesday, November 26, 2025

ಮರೆಯಲಾಗದ ನೆನಪು




ಸದಾ ನಗುಮುಖ. ಹಣೆಯ ಮೇಲೆ ವಿಭೂತಿ. ಜಿಲ್ಲಾಧಿಕಾರಿಯಾದರೂ ಸರಳ ನಡೆ-ನುಡಿ. ಇದು ನಮ್ಮ ದಾವಣಗೆರೆ ಡಿ.ಸಿ ಆಗಿದ್ದ ಬೀಳಗಿ ಸರ್‌ರವರ ವ್ಯಕ್ತಿತ್ವ. ಕಛೇರಿಗೆ ಬರುವ ಎಲ್ಲರ ಅಹವಾಲುಗಳನ್ನು ಕೇಳಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದರು. ವೃದ್ಧರು, ಅಂಗವಿಕಲರಿಗೆ ವಿಶೇಷ ಕಾಳಜಿ ವಹಿಸುತ್ತಿದ್ದ ದಕ್ಷ, ಪ್ರಾಮಾಣಿಕ, ಜನಾನುರಾಗಿ ಅಧಿಕಾರಿ ಮಹಾಂತೇಶ್‌ ಬೀಳಗಿಯವರ ದುರ್ಮರಣ ತೀವ್ರ ದುಃಖ ತಂದಿದೆ. ಕೋವಿಡ್‌ ಸಂದರ್ಭದಲ್ಲಿ ಅವರ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅನೇಕ ಬಾರಿ ನಮ್ಮ ಸಂಸ್ಥೆಗೆ ಭೇಟಿ ನೀಡಿದ್ದ ಅವರ ನೆನಪು ಇನ್ನೂ ಹಸಿರಾಗೇ ಇದೆ.

2019 ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆಗೆ ಬಂದಾಗ ಸಂಸ್ಥೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರಲ್ಲದೆ ತಮ್ಮ ಮಗಳು ಚೈತನ್ಯಳನ್ನು ನಮ್ಮ ಕಾಲೇಜಿಗೆ ಸೇರಿಸಿದ್ದರು. ನಮ್ಮ ಶಾಲಾ ಗೀತೆ “ಈ ಶಾಲೆಯೇ ನಮ್ಮ ಸ್ವರ್ಗ” ಬಹುವಾಗಿ ಇಷ್ಟಪಟ್ಟಿದ್ದರು. ಸ್ವತಃ ಗಾಯಕರಾದ ಬೀಳಗಿ ಸರ್‌ರವರು ಈ ಗೀತೆಯನ್ನು ಸಮಯ ಸಿಕ್ಕಾಗ ಮಗಳ ಜೊತೆಗೂಡಿ ಹಾಡಿ ಸಂಭ್ರಮಿಸುತ್ತೇನೆ ಎಂದು ಹೇಳುತ್ತಿದ್ದರು. 10 ನೇ ತರಗತಿ ಮಕ್ಕಳಿಗೆ ಪ್ರೇರಣದಾಯಕ ಮಾತುಗಳಿಂದ ಅವರಲ್ಲಿ ವಿಶ್ವಾಸ ಮೂಡಿಸಿದ್ದರು.

ಸಂಸ್ಥೆಯ ಸಂಸ್ಥಾಪಕರಾದ ಎಂ.ಎಸ್‌ ಶಿವಣ್ಣನವರ ಸರಳತೆಯನ್ನು ಮೆಚ್ಚಿದ್ದರು. ಅವರು ಲಿಂಗೈಕ್ಯರಾದಾಗ ಸಾಂತ್ವನದ ನುಡಿಗಳಿಂದ ನಮ್ಮಲ್ಲಿ ಧೈರ್ಯ ತುಂಬಿದ್ದರು. ಕೋವಿಡ್‌ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಸಂಸ್ಥೆ 10 ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಸಮರ್ಪಿಸುವ ಸಂದರ್ಭದಲ್ಲಿ ಸಂಸ್ಥೆಯ ಸೇವಾಕಾರ್ಯವನ್ನು ಮುಕ್ತವಾಗಿ ಶ್ಲಾಘಿಸಿದ್ದರು. ಸಂಸ್ಥೆವತಿಯಿಂದ ಒಂದು ಸಾವಿರ ದಿನಸಿ ಪ್ಯಾಕೇಟ್ಗಳನ್ನು ಹಂಚುವ ಸಂದರ್ಭದಲ್ಲಿ ನಮ್ಮೊಡನೆ ಇದ್ದರು. ದಾವಣಗೆರೆಯಿಂದ ವರ್ಗಾವಣೆಗೊಂಡು ಬೆಂಗಳೂರಿಗೆ ಒಲ್ಲದ ಮನಸ್ಸಿನಿಂದ ತೆರಳಿದ್ದರು. ಮನೆಗೆ ಭೇಟಿಕೊಟ್ಟಾಗ ತಮ್ಮ ವೃದ್ಧ ತಾಯಿ ಮತ್ತು ಅಣ್ಣನನ್ನು ಪರಿಚಯಿಸಿ ಪತ್ನಿಯಿಂದ ಫಲಹಾರ ಕೊಡಿಸಿ ಮಗಳ ಭವಿಷ್ಯದ ಬಗ್ಗೆ ತಮ್ಮ ಕನಸನ್ನು ಹಂಚಿಕೊಂಡರು. ಬೆಂಗಳೂರಿಗೆ ಹೋದ ನಂತರವೂ ಸಂಸ್ಥೆಯ ಒಡನಾಟ ಮರೆಯಲಿಲ್ಲ. ಆನಗೋಡಿನ ಶಿವಣ್ಣನವರ ಸ್ಮಾರಕದ ಉದ್ಘಾಟನೆ ಸಂದರ್ಭದಲ್ಲಿ ಸಮಾರಂಭದಲ್ಲಿ ಭಾಗವಹಿಸಿ ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಸಂಸ್ಥೆಯ ವಾರ್ಷಿಕ ಸಮಾರಂಭದಲ್ಲಿ ಕಾರ್ಯಬಾಹುಳ್ಯದ ನಡುವೆಯೂ ಬಿಡುವು ಮಾಡಿಕೊಂಡು ನಮ್ಮ ಸಂಭ್ರಮ ಹೆಚ್ಚಿಸಿದ್ದರು. ದಾವಣಗೆರೆಯನ್ನು ಅವರು ಬಹಳವಾಗಿ ಪ್ರೀತಿಸುತ್ತಿದ್ದರು.ಹೆಬ್ಬಾಳು ಟೋಲ್‌ ಬಂತು ಅಂದ್ರೆ ನನಗೆ ಒಂಥರಾ ವೈಬ್ರೇಷನ್‌ ಆಗುತ್ತೆ, ದಾವಣಗೆರೆಯ ಜನರ ಪ್ರೀತಿ ನಾನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು.
ಜನರ ಕಷ್ಟಗಳನ್ನು ಆಲಿಸುತ್ತಾ, ಯುವಜನಾಂಗವನ್ನು ಹುರಿದುಂಬಿಸುತ್ತಾ ಅವರಲ್ಲಿ ಆತ್ಮ ವಿಶ್ವಾಸ ತುಂಬುತ್ತಿದ್ದ ಬೀಳಗಿ ಸರ್‌ ಇನ್ನೆಂದೂ ನಮಗೆ ಕಾಣಲು ಸಿಗುವುದಿಲ್ಲ ಎಂಬ ಸಂಕಟ ನಡುಕ ಹುಟ್ಟಿಸುತ್ತಿದೆ.

ಸಹೃದಯಿ ವ್ಯಕ್ತಿಗೆ ಎಂತಹ ದುರ್ಮರಣ! ವಿಧಿಯ ಕ್ರೂರ ದೃಷ್ಠಿ ಮಹಾಂತೇಶ್‌ ಬೀಳಗಿ ಸರ್‌ರವರನ್ನು ಆಹುತಿ ತೆಗೆದುಕೊಂಡಿದೆ. ಮಗಳನ್ನು ತಮ್ಮಂತೆಯೇ IAS ಮಾಡಿಸಬೇಕೆಂಬ ಅದಮ್ಯ ಆಸೆ ಕೈಗೂಡುವ ಮೊದಲೇ ಕಣ್ಣುಚ್ಚಿ ಎಲ್ಲರ ಕಣ್ಣಲ್ಲಿ ನೀರು ಬರಿಸಿದ್ದಾರೆ. ದಾವಣಗೆರೆ ಕಂಡ ಇಂತಹ ಸೇವಾಧಾರಿ ಅಧಿಕಾರಿ ಅಕಾಲದಲ್ಲಿ ಶಾಶ್ವತ ವಿದಾಯ ಕೋರಿದ್ದು ವಿಧಿಯ ವಿಪರ್ಯಾಸ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಅವರಆತ್ಮ ಚಿರಶಾಂತಿ ಪಡೆಯಲಿ.

No comments:

Post a Comment