ಸಿದ್ಧಗಂಗಾ ಪ್ರೌಢಶಾಲೆಯ 8ನೇ ತರಗತಿ ಮಕ್ಕಳು ಭಾಗವಹಿಸಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಕುವೆಂಪುರವರ “ಶೂದ್ರತಪಸ್ವಿ”, ಎಪಿಜೆ ಅಬ್ದುಲ್ ಕಲಾಂರವರ “ವಿಂಗ್ಸ್ ಆಫ್ ಫೈಯರ್”, ಸುಮತೀಂದ್ರ ನಾಡಿಗರ “ತ್ಯಾಗಮಯಿ” ಪುಸ್ತಕಗಳನ್ನು ವಿಮರ್ಶಾತ್ಮಕ ದೃಷ್ಠಿಯಿಂದ ವೀಕ್ಷಕ ಮತ್ತು ತೀರ್ಪುಗಾರರೆದುರು ಮಂಡಿಸಿ ಹೇಗೆ ಈ ಪುಸ್ತಕಗಳು ತಮಗೆ ನೆಚ್ಚಿನ ಪುಸ್ತಕಗಳಾಗಿವೆ ಎಂಬುದನ್ನು ಪ್ರತಿಪಾದಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದ ಅಪೂರ್ವ ಕಾರ್ಯಕ್ರಮಕ್ಕೆ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಮಂಟಪದ ವೇದಿಕೆ ಭಾನುವಾರ ಸಾಕ್ಷಿಯಾಯಿತು. ಸಿದ್ಧಗಂಗಾ ಸಂಸ್ಥೆಯ ಬಾಲಕ – ಬಾಲಕಿಯರು ಪ್ರಸ್ತುತ ಪಡಿಸಿದ ಅವರ ನೆಚ್ಚಿನ ಪುಸ್ತಕಗಳಾದ “ರಿಫ್ರೆಶ್ ಯುವರ್ ಮೈಂಡ್”, “ಡ್ರಾಗನ್ ಇನ್ ದಿ ಟನಲ್”, “ಚಾಣಕ್ಯ ನೀತಿ”, “ಮಂಕುತಿಮ್ಮನ ಕಗ್ಗ”, “ಸೋತವನ ಸಾವಿರ ಕಥೆಗಳು”, “ಅಣ್ಣನ ನೆನಪು”, “ದಿ ಅಲ್ಕೆಮಿಸ್ಟ್” ಹೀಗೆ ಹಲವಾರು ಪುಸ್ತಕಗಳ ವಿಮರ್ಶೆ ಮಾಡಿ ವಿವಿಧ ವಿಭಾಗಗಳಿಗೆ ಮೀಸಲಾದ 15 ಬಹುಮಾನಗಳನ್ನು ಪಡೆದಿದ್ದಾರೆ. ಮನಾಲ್ ಜಾನ್, ದೀಕ್ಷಾ ಜೆ. ಗಿರೀಶ್ ಎಸ್. ಪುಸ್ತಕ ಪ್ರೇಮಿ ಪುರಸ್ಕಾರ ಪಡೆದರೆ, ಗ್ರೀಷ್ಮಾ ಎಸ್. ಚೇತನ್ ರೆಡ್ಡಿ ಕಥಾಜನಕರೆನಿಸಿಕೊಂಡರು. ಧಾನ್ವಿ, ಅಕ್ಷತ ಪವಾರ್, “ಸೂಕ್ಷ್ಮ ದೃಷ್ಠಿಯ ಓದುಗರು” ಎಂದು ಕರೆಸಿಕೊಂಡರು. ಗೌತಮಿ “ದಿ ಸ್ಟೋರಿ ಆಫ್ ಮೈ ಲೈಫ್” ಶ್ರೀವತ್ಸ “ರಿಚ್ ಡ್ಯಾಡ್ ಪೂರ್ ಡ್ಯಾಡ್” ಪುಸ್ತಕಗಳನ್ನು ತಮ್ಮ ಮೆಚ್ಚಿನ ಪುಸ್ತಕಗಳೆಂದು ಬಿಂಬಿಸಿದರು.
ಭಾನುವಾರ ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು. ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು. ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.Siddaganga PU Science College, Composite High School, Davangere
Where Dreams Take Wings
Tuesday, September 22, 2026
Thursday, September 17, 2026
ಸಿದ್ಧಗಂಗಾ ಸಂಸ್ಥೆಯಲ್ಲಿ 14 ಅಡಿ ಎತ್ತರದ ಪರಿಸರ ಸ್ನೇಹಿ ಗಣಪ
ದಾವಣಗೆರೆಯ ಶ್ರೀ ಸಿದ್ಧಗಂಗಾ ಸಂಸ್ಥೆಯಲ್ಲಿ ವಿಶಿಷ್ಠ ರೀತಿಯಲ್ಲಿ ಗಣೇಶ ಚತುರ್ಥಿ ಆಚರಿಸುತ್ತಿರುವುದು ನಗರದ ಮನೆ ಮಾತಾಗಿದೆ. ಪರಿಸರ ಸ್ನೇಹಿ ಪೇಪರ್ ಗಣಪತಿಯ ತಯಾರಿಕೆಗೆ ಸಂಸ್ಥೆಯ ನಿರ್ದೇಶಕರಾದ ಡಾ. ಜಯಂತ್, ಚಿತ್ರಕಲಾ ಶಿಕ್ಷಕರಾದ ಸ್ವಾತಿ ಜಿ., ನಟರಾಜ ಶೃಂಗಾರ, ಹೀನಾ ಕೌಸರ್, ಮುಜಸ್ಸಿಂ, ಲಕ್ಷ್ಮಿ, ಸ್ನೇಹಾ ಇವರು ಮಕ್ಕಳ ನೆರವಿನಿಂದ ಮತ್ತು ಆಸಕ್ತ ಶಿಕ್ಷಕರ ಸಹಾಯದಿಂದ ಹಬ್ಬದ ಹಿಂದಿನ ವಾರ ತಯಾರಿ ಪ್ರಾರಂಭಿಸುತ್ತಾರೆ. ನೋಡು ನೋಡುತ್ತಿದ್ದಂತೆ ಸರ್ವಾಭರಣ ಭೂಷಿತನಾದ 14 ಅಡಿ ಎತ್ತರದ ಗಣಪ ಶಾಲೆಯ ರಂಗಮಂದಿರದ ಮೇಲೆ ಆಕಾರ ಪಡೆಯುತ್ತ ಹಬ್ಬದ ಹಿಂದಿನ ದಿನ ಪೂರ್ಣಾಕೃತಿ ಪಡೆಯುತ್ತಾನೆ. ತಾವೇ ನಿರ್ಮಿಸಿದ ಗಣಪ ಸರ್ವಾಂಗ ಸುಂದರನಾಗಿ ಕಾಣುವುದನ್ನು ಕಂಡು ಮಕ್ಕಳು ಸಂತೃಪ್ತರಾಗುತ್ತಾರೆ. ಇದು ಕಳೆದ 13 ವರ್ಷಗಳಿಂದ ನಡೆದು ಬಂದ ಪರಿಪಾಠ. ಈ ವರ್ಷವೂ ಬೃಹತ್ ಗಣಪ ಶಾಲೆಯ ಮಂಟಪದಲ್ಲಿ ವಿರಾಜಮಾನನಾಗಿದ್ದಾನೆ.
Saturday, August 15, 2026
80ನೇ ಸ್ವಾತಂತ್ರ್ಯ ದಿನಾಚರಣೆ 20 ನಿಮಿಷಗಳಲ್ಲಿ 350 ವರ್ಷಗಳ ಇತಿಹಾಸ ಅನಾವರಣಗೊಳಿಸಿದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮಕ್ಕಳು
80ನೇ ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ದಾವಣಗೆರೆಯ ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿದ್ದವು. ಸ್ವಾತಂತ್ರ್ಯ ಸಂಗ್ರಾಮದ 250 ವರ್ಷಗಳ ಇತಿಹಾಸವನ್ನು ಕೆಲವೇ ನಿಮಿಷಗಳಲ್ಲಿ ಕಟ್ಟಿಕೊಟ್ಟ ನಗರದ ಸಿದ್ಧಗಂಗಾ ಸಂಸ್ಥೆಯ ವಿದ್ಯಾರ್ಥಿ – ವಿದ್ಯಾರ್ಥಿನಿಯರ ಅಮೋಘ ನೃತ್ಯ ರೂಪಕ “ಸಂಕೋಲೆಯಿಂದ ಸ್ವಾತಂತ್ರ್ಯದೆಡೆಗೆ” ಎಲ್ಲರ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ನಡೆಸಿದ ದಬ್ಬಾಳಿಕೆ, ಹಿಂಸೆ, ಕ್ರೌರ್ಯ ಸ್ವಾತಂತ್ರ್ಯಾನಂತರದ 80 ವರ್ಷಗಳ ಸಂಭ್ರಮ ಎರಡನ್ನೂ ಅದ್ಭುತವಾಗಿ ಚಲನಚಿತ್ರ ಮಾದರಿಯಲ್ಲಿ ಕಟ್ಟಿಕೊಟ್ಟ ಈ ಮಕ್ಕಳು ನೆರೆದ ವೀಕ್ಷಕರಲ್ಲಿ ಸ್ವಾತಂತ್ರ್ಯಾಭಿಮಾನವನ್ನು ಉಕ್ಕಿಸಿದರು.
1857ರಲ್ಲಿ ಪ್ರಾರಂಭವಾದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ಸಿಂಹ ಘರ್ಜನೆ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಕೆಚ್ಚೆದೆಯ ಶೌರ್ಯ, ಸಿಪಾಯಿ ಮಂಗಲಪಾಂಡೆಯ ದಿಟ್ಟ ಉತ್ತರ, ಬಂದೂಕಿನ, ತೋಪಿನ ನಳಿಕೆಗೆ ಎದೆಯೊಡ್ಡಿ ನಿಂತ ಧೈರ್ಯ, ಶೌರ್ಯ ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದ ಬಾಲಕರು ಎಲ್ಲರ ಚಪ್ಪಾಳೆ ಪಡೆದರು. ಹಂತ ಹಂತವಾಗಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ ಇತಿಹಾಸವನ್ನು ಮರು ಸೃಷ್ಠಿಸಿದಂತಿತ್ತು. ಜಲಿಯನ್‌ವಾಲಾಬಾಗ್ ಹತ್ಯಾಕಾಂಡ, ಸೈಮನ್ ಕಮಿಷನ್ ಜಾರಿಗೆ ಬರದಂತೆ ತಡೆದ ಲಾಲಾ ಲಜಪತರಾಯ್, ಉಪ್ಪಿನ ಸತ್ಯಾಗ್ರಹಕ್ಕಾಗಿ ನಡೆಸಿದ ದಂಡಿಯಾತ್ರೆ, ಕ್ವಿಟ್ ಇಂಡಿಯಾ ಚಳುವಳಿ, ಒಂದೊಂದು ದೃಶ್ಯವೂ ಮನಕಲಕುವಂತೆ ಇತ್ತು. ಅಸಹಕಾರ ಚಳುವಳಿಯಲ್ಲಿ ಗಾಯಗೊಂಡ, ಪ್ರಾಣಾರ್ಪಣೆಗೈದ ಅಸಂಖ್ಯಾತ ಅನಾಮಧೇಯ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಹಿಂಸೆಗೆ ತೊಡಗಿದವರಿಂದ ಶಸ್ತ್ರ ತ್ಯಾಗ, ಗಾಂಧೀಜಿಯವರ ಆಮರಣಾಂತ ಉಪವಾಸ ಊಹೆಗೂ ನಿಲುಕದಂತೆ ಸಿದ್ಧಗಂಗಾ ಸಂಸ್ಥೆಯ ಮಕ್ಕಳು ಭಾವಪೂರ್ಣವಾಗಿ ಅಭಿನಯಿಸಿದರು. ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರವನ್ನು ನೈಜವಾಗಿ ನಿರೂಪಿಸಿದರು.
1947ರ ಆಗಸ್ಟ್ 15 ರಂದು ಬ್ರಿಟಿಷ್ ಧ್ವಜ ಇಳಿಸಿ ಭಾರತದ ತ್ರಿವರ್ಣ ಧ್ವಜ ಹಾರಾಡಿದಾಗ ವೇದಿಕೆಯಲ್ಲಿದ್ದ ಗಣ್ಯರು ಎದ್ದು ನಿಂತು ಗೌರವ ಸಲ್ಲಿಸಿದರು. ಬ್ರಿಟೀಷರ ಆಗಮನದಿಂದ ಕಳೆದುಕೊಂಡಿದ್ದ ಶಾಂತಿ ಸಮೃದ್ಧಿ, ಸಂಪತ್ತು, ನೆಮ್ಮದಿ ಮರುಕಳಿಸಿತು. ಕ್ರೀಡಾಂಗಣದ ಉದ್ದಗಲಕ್ಕೂ ತ್ರಿವರ್ಣ ಧ್ವಜ ಹಾರಾಡಿದವು. ವಿವಿಧ ವೇಷ-ಭೂಷಣ ತೊಟ್ಟ ಬಾಲಕ – ಬಾಲಕಿಯರು “ಜೈ ಭಾರತ – ಜೈ ಕರ್ನಾಟಕ” ಎಂಬ ಸುಮಧುರ ಗೀತೆಯ ಮೂಲಕ ಅಖಂಡ ಭಾರತದ ಹೆಮ್ಮೆಯನ್ನು ವರ್ಣಿಸಿದರು. ಸರ್ಜಿಕಲ್ ಸ್ಟ್ರೈಕ್, ಪೆಹಲ್ಗಾಂವ್ ಘೋರ ಕೃತ್ಯಕ್ಕೆ ಆಪರೇಷನ್ ಸಿಂಧೂರ್ ಉತ್ತರ, ದೇಶದ ವಿಜ್ಞಾನ ಪ್ರಗತಿಯನ್ನು ತೋರಿಸುತ್ತಾ ಭಾರತದ ಎಲ್ಲ ಪ್ರಧಾನಿಗಳ ಭಾವಚಿತ್ರಗಳನ್ನು ಅನಾವರಣಗೊಳಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಪ್ರದರ್ಶಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
20 ನಿಮಿಷಗಳ ಈ ಕಾರ್ಯಕ್ರಮ 350 ವರ್ಷಗಳ ಇತಿಹಾಸವನ್ನು ಮೆಲುಕುಹಾಕುವಂತೆ ಮಾಡಿತು. ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್ ಡಿ. ಎಸ್. ರವರ ನೇತೃತ್ವದಲ್ಲಿ, ಮಾರ್ಗದರ್ಶನದಲ್ಲಿ, ನಿರ್ದೇಶನದಲ್ಲಿ, ಸಾಹಿತ್ಯ, ಸಂಗೀತದಲ್ಲಿ ಮೂಡಿ ಬಂದ ಈ ಅತ್ಯದ್ಭುತ ಕಾರ್ಯಕ್ರಮ ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆ ಮೂಡಿಸಿ ದೇಶಾಭಿಮಾನವನ್ನು ಉಕ್ಕಿಸುವಲ್ಲಿ ಯಶಸ್ವಿಯಾಯಿತು. ಈ ನೃತ್ಯ ರೂಪಕಕ್ಕೆ ಪ್ರಥಮ ಬಹುಮಾನ ಘೋಷಣೆಯಾದಾಗ ಭಾಗವಹಿಸಿದ್ದ ಮಕ್ಕಳು, ಸಹಕರಿಸಿದ ಶಿಕ್ಷಕವೃಂದ ಹಾಗೂ ಪಾಲಕರು ಹರ್ಷೋದ್ಗಾರ ಮಾಡಿದರು. ಪ್ರೇಕ್ಷಕರು ವಿಸ್ಮಿತರಾಗಿ ಭಾವಾವೇಶದಲ್ಲಿ ಮಂತ್ರ ಮುಗ್ಧರಾದರು. ದೇಶಾಭಿಮಾನದ ತಲ್ಲಣದಿಂದ ರೋಮಾಂಚಿತರಾದರು. ಕಾಲಕ್ಕೆ ತಕ್ಕಂತ ವೇಷಭೂಷಣ, ಘಟನಾವಳಿಗಳನ್ನು ಚಿತ್ರಿಸುವ ಕಟೌಟ್‌ಗಳು, ಸನ್ನಿವೇಶ ನಿರೂಪಿಸುವ ಫಲಕಗಳು ಇತಿಹಾಸಕ್ಕೆ ಜೀವಂತಿಕೆ ನೀಡಿತು.
Monday, July 27, 2026
ಕಾರ್ಗಿಲ್ ವಿಜಯ ದಿವಸ್ ಆಚರಿಸಿದ ಸಿದ್ಧಗಂಗಾ ಲೋಕಲ್ ಅಸೋಸಿಯೇಷನ್
ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಯೋಧರ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯನ್ನು ಸ್ಮರಿಸುವ ಉದ್ದೇಶದಿಂದ 26 ಜುಲೈ 2026 ರಂದು ಕಾರ್ಗಿಲ್ ವಿಜಯ ದಿವಸ್ ಅನ್ನು ಸಿದ್ಧಗಂಗಾ ಲೋಕಲ್ ಅಸೋಸಿಯೇಷನ್, ದಾವಣಗೆರೆ ವತಿಯಿಂದ ಅತ್ಯಂತ ಗೌರವ ಹಾಗೂ ಶ್ರದ್ಧೆಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸ್ಕೌಟ್ ಮಾಸ್ಟರ್ ಶ್ರೀ ಮಹೇಶ್ ಎಂ.ಸಿ. ಅವರು ಕಾರ್ಗಿಲ್ ಯುದ್ಧದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿದರು, 1999ರಲ್ಲಿ ಪಾಕಿಸ್ತಾನದ ನುಸುಳುಕೋರರು ಕಾರ್ಗಿಲ್ ಪ್ರದೇಶದ ಎತ್ತರದ ಪರ್ವತ ಶಿಖರಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡ ಸಂದರ್ಭದಲ್ಲಿ ಭಾರತೀಯ ಸೇನೆಯು "ಆಪರೇಷನ್ ವಿಜಯ್" ನಡೆಸಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಧೈರ್ಯ, ಶೌರ್ಯ ಮತ್ತು ದೇಶಪ್ರೇಮದಿಂದ ಹೋರಾಡಿ ಶತ್ರುಗಳನ್ನು ಹಿಮ್ಮೆಟ್ಟಿಸಿ ವಿಜಯ ಸಾಧಿಸಿತು ಎಂದು ವಿವರಿಸಿದರು ಹಾಗು ಭಾರತೀಯ ಯೋಧರು ಹಿಮಾಚ್ಛಾದಿತ ಪರ್ವತ ಪ್ರದೇಶಗಳಲ್ಲಿ ತೀವ್ರ ಚಳಿ, ಕಡಿಮೆ ಆಮ್ಲಜನಕ ಮತ್ತು ನಿರಂತರ ಶತ್ರುಗಳ ಗುಂಡಿನ ದಾಳಿಯನ್ನು ಲೆಕ್ಕಿಸದೆ ದೇಶದ ಗಡಿಯನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದರು,ಅನೇಕ ವೀರ ಯೋಧರು ತಮ್ಮ ಅಮೂಲ್ಯ ಜೀವವನ್ನು ದೇಶಕ್ಕಾಗಿ ಅರ್ಪಿಸಿದರು. ಅವರ ಈ ತ್ಯಾಗದಿಂದಲೇ ಇಂದು ನಾವು ಸುರಕ್ಷಿತವಾಗಿ ಬದುಕುತ್ತಿದ್ದೇವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂಧರ್ಭದಲ್ಲಿ ಸ್ಥಳೀಯ ಸಂಸ್ಥೆಯ ಸ್ಕೌಟ್ ಮಾಸ್ಟರ್ ನಿಂಗರಾಜು RG HWB, ತಬಸುಮ್ ಬಾನು advance, ನೀಲಮ್ಮ ತಲವಾಡ HWB ಇವರು ಉಪಸ್ಥಿತರಿದ್ದು ಮಕ್ಕಳಿಗೆ ರಾಷ್ಟ್ರಧ್ವಜ ಮತ್ತು ಸಶಸ್ತ್ರ ಪಡೆಗಳಿಗೆ ಸದಾ ಗೌರವ ನೀಡಬೇಕು ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸ್ಪೂರ್ತಿತುಂಬಿದರು.
Friday, July 17, 2026
ಸಿದ್ದಗಂಗಾ ನೀಟ್ ಫಲಿತಾಂಶ : ವರುಣ್ ಎಂ AIR 279 ನೇ ರ‍್ಯಾಂಕ್
ಜುಲೈ 17,
Wednesday, June 10, 2026
K-CET 2026 : ಸಿದ್ದಗಂಗಾ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಏಪ್ರಿಲ್ ತಿಂಗಳಲ್ಲಿ ನಡೆದ 2025 -26 ನೇ ಸಾಲಿನ ಕೆ ಸಿ ಟಿ ಪರೀಕ್ಷೆಯಲ್ಲಿ ದಾವಣಗೆರೆಯ ಸಿದ್ದಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಅಮೋಘ ಸಾಧನೆಯನ್ನು ಮಾಡಿದ್ದಾರೆ. ವಿವಿಧ ಕೋರ್ಸ್ ಗಳಿಗಾಗಿ ನಡೆದ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 175 ಕ್ಕೂ ಹೆಚ್ಚು ವಿದ್ಯಾರ್ಥಿಗಳು 5000ದೊಳಗೆ Rank ಅನ್ನು ಪಡೆದು ಕಾಲೇಜಿಗೆ ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾರೆ.
ಪಶು ವೈದ್ಯಕೀಯ ವಿಭಾಗದಲ್ಲಿ ಪ್ರವೀಣ್ ಕುಮಾರ್ ಪೂಜಾರ್ 62ನೇ Rank ಅನ್ನು ದರ್ಶನ್ ಟಿ ಎಂ 689ನೇ Rank , ಸ್ಪೂರ್ತಿ ಪಿ ಆರ್ 977ನೇ Rank ಪಡೆದಿರುತ್ತಾರೆ
ಹೀಗೆ ಹಲವು ಹತ್ತಾರು ವಿಭಾಗಗಳಲ್ಲಿ 175ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐದು ಸಾವಿರದ ಒಳಗೆ Rank ಪಡೆದು ಸಂಸ್ಥೆಯ ಸಾಧನೆಯ ಹೆಜ್ಜೆಗಳನ್ನು ದೃಢ ಗೊಳಿಸಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘಿಸಿದ ಸಂಸ್ಥೆಯ ಮುಖ್ಯಸ್ಥೆ ಡಾ. ಜಸ್ಟಿನ್ ಡಿಸೋಜಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅಭಿನಂದಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿಗಳಾದ ಹೇಮಂತ್ ಡಿಎಸ್, ನಿರ್ದೇಶಕರಾದ ಡಾಕ್ಟರ್ ಜಯಂತ್ ಡಿಎಸ್, ಅಧ್ಯಕ್ಷರಾದ ಪ್ರಶಾಂತ್ ಡಿಎಸ್ ಪ್ರಾಂಶುಪಾಲರಾದ ವಾಣಿಶ್ರೀ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ಪೂರ್ಣ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Thursday, April 23, 2026
ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್‌ಗೆ 100ಕ್ಕೆ 100 ಫಲಿತಾಂಶ ಶ್ರೀ. ವಿ. ಮಠದ್‌ಗೆ 621
2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್‌ಗೆ 100ಕ್ಕೆ 100 ಫಲಿತಾಂಶ ದೊರಕಿದೆ. ವಿ. ಮಠದ್ ಮತ್ತು ಮೀನಾ ವಿ. ಮಠದ್ ದಂಪತಿಗಳ ಪುತ್ರಿ ಶ್ರೀ. ವಿ. ಮಠದ್ 625ಕ್ಕೆ 621 ಅಂಕ ಗಳಿಸಿದ್ದಾಳೆ. ಕನ್ನಡ 125, ಇಂಗ್ಲೀಷ್ 100, ಹಿಂದಿ 100, ಗಣಿತ 100, ವಿಜ್ಞಾನ 96, ಸಮಾಜ 100 ಒಟ್ಟು 621 ಅಂಕಗಳನ್ನು ಪಡೆದುಕೊಂಡಿದ್ದಾಳೆ. A+ ಗ್ರೇಡಿನಲ್ಲಿ 49, A ಗ್ರೇಡಿನಲ್ಲಿ 102, B+ ಗ್ರೇಡಿನಲ್ಲಿ 62, B ಗ್ರೇಡಿನಲ್ಲಿ 50, C+ ಗ್ರೇಡಿನಲ್ಲಿ 18, C ಗ್ರೇಡಿನಲ್ಲಿ 6 ಮಕ್ಕಳು ಉತ್ತೀರ್ಣರಾಗಿ ಶಾಲೆಗೆ 100ಕ್ಕೆ 100 ಫಲಿತಾಂಶ ನೀಡಿದ್ದಾರೆ. ಕನ್ನಡದಲ್ಲಿ 6, ಇಂಗ್ಲೀಷ್‌ನಲ್ಲಿ 1, ಹಿಂದಿಯಲ್ಲಿ 31, ಗಣಿತದಲ್ಲಿ 1, ಸಮಾಜ ವಿಜ್ಞಾನದಲ್ಲಿ 5 ಮಕ್ಕಳು ಒಟ್ಟು 42 ಮಕ್ಕಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಶ್ರೀ. ವಿ. ಮಠದ್ 621, ರಚನಾ ಯು. 616, ಶ್ರೇಯಾ ಎಸ್. ಎಮ್. 608, ಮೊಹಮ್ಮದ್ ರಯಾನ್ ರಜಾ 606, ಆಶಾ ಟಿ. ಹೆಚ್.. 603 ಮತ್ತು ಬಿಬಿ ಜೈನಾಬ್ 601 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಅತ್ತುತ್ಯಮ ಫಲಿತಾಂಶ ನೀಡಿದ ಎಲ್ಲ ಮಕ್ಕಳಿಗೆ ಮತ್ತು ಬೋಧಕ ವರ್ಗದವರಿಗೆ ಮುಖ್ಯ ಶಿಕ್ಷಕಿ ರೇಖಾರಾಣಿ. ಕೆ. ಎಸ್., ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್, ಕಾರ್ಯದರ್ಶಿ ಹೇಮಂತ್, ನಿರ್ದೇಶಕರಾದ ಡಾ|| ಜಯಂತ್ ಮತ್ತು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
Wednesday, April 15, 2026
10ನೇ ತರಗತಿ ಸಿ.ಬಿ.ಎಸ್.ಇ. ಸಿದ್ಧಗಂಗಾ ಶಾಲೆಗೆ ಶೇಕಡ 100 ಫಲಿತಾಂಶ
2025-26ನೇ ಸಾಲಿನ 10ನೇ ತರಗತಿ ಕೇಂದ್ರ ಪಠ್ಯಕ್ರಮದ ಫಲಿತಾಂಶ ಪ್ರಕಟವಾಗಿದ್ದು ನಗರದ ಶ್ರೀ ಸಿದ್ಧಗಂಗಾ ಸಿ.ಬಿ.ಎಸ್.ಇ. ಶಾಲೆ ಶೇಕಡ 100 ಫಲಿತಾಂಶ ಪಡೆದಿದೆ. ಪ್ರೇಕ್ಷಾ ಪಿ. ರಾಮಘಟ್ ಶೇಕಡ 95.60 ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇಂಗ್ಲೀಷ್ 94, ಕನ್ನಡ 95, ಗಣಿತ 96, ವಿಜ್ಞಾನ 97, ಸಮಾಜ 96 ಒಟ್ಟು 478 ಅಂಕಗಳನ್ನು ಪಡೆದಿದ್ದಾಳೆ. ಬಾಲಕಿ ಪ್ರಕಾಶ್ ಆರ್. ಮತ್ತು ವೇದಾವತಿ ಆರ್. ಶಿಕ್ಷಕ ದಂಪತಿಗಳ ಪುತ್ರಿಯಾಗಿದ್ದಾಳೆ. ಮುಹಮ್ಮದ್ ಫರ್‌ಹಾನ್ ಆರ್.ಎನ್. 95.4%, ಸಂಪ್ರೀತ್ ಡಿ ಬೈರಡಿಗಿ 94.4%, ಚಿನ್ಮಯಿ ಎಸ್.ಎಲ್. 94%, ನೀರಜ್ ಕೆ.ಟಿ. 93.4%, ಸುಚಿತ್ ಎ. 92.6%, ಪದ್ಮ ಸಿ.ಆರ್. 91.6%, ಪರ್ಣಿಕಾ ಎಸ್. 91.6%, ಲಕ್ಷ್ಮೀಸಾಗರ್ ಎ.ವಿ. 90.8%, ಶಾಶ್ವತ್. ಎಲ್.ಎ. 90.2%, ಸಾನ್ವಿ ಜಿ.ಬಿ. 90% ಪಡೆದಿದ್ದಾರೆ. 90%ಗಿಂತ ಅಧಿಕ ಅಂಕಗಳಿಸಿದವರು 12 ಮಕ್ಕಳು, 85%ಗಿಂತ ಹೆಚ್ಚು ಅಂಕಗಳನ್ನು ಗಳಿಸಿದವರ ಸಂಖ್ಯೆ 15, 60%ಗಿಂತ ಹೆಚ್ಚು ಅಂಕಗಳನ್ನು ಗಳಿಸಿದವರು 97 ಹಾಗೂ 50%ಗಿಂತ ಹೆಚ್ಚು ಪಡೆದವರು 8 ಮಕ್ಕಳಿದ್ದಾರೆ. ದ್ವಿತೀಯ ಸ್ಥಾನ ಪಡೆದ ಮುಹಮ್ಮದ್ ಫರ್‌ಹಾನ್ ಆರ್.ಎನ್. ಇಂಗ್ಲೀಷ್‌ನಲ್ಲಿ 99, ಚಿನ್ಮಯಿ ಎಸ್.ಎಲ್ ಗಣಿತದಲ್ಲಿ 99, ನೀರಜ್. ಕೆ.ಟಿ. ಕನ್ನಡದಲ್ಲಿ 99, ಪದ್ಮ ಸಿ.ಆರ್. ಕನ್ನಡದಲ್ಲಿ 99 ಮತ್ತು ಪರ್ಣಿಕ ಎಸ್. ಕನ್ನಡದಲ್ಲಿ 99 ಪಡೆದು ದಾಖಲೆ ಸ್ಥಾಪಿಸಿದ್ದಾರೆ. 100ಕ್ಕೆ 100 ಫಲಿತಾಂಶ ನೀಡಿರುವ ಮಕ್ಕಳನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ, ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್, ಅಧ್ಯಕ್ಷರಾದ ಪ್ರಶಾಂತ್, ನಿರ್ದೇಶಕರಾದ ಜಯಂತ್, ಕಾರ್ಯದರ್ಶಿ ಹೇಮಂತ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
Thursday, April 9, 2026
ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ರಶ್ಮಿ ಹೆಚ್. ಎಸ್.ಗೆ 600ಕ್ಕೆ 591
2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ನಗರದ ಶ್ರೀ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ರಶ್ಮಿ ಹೆಚ್. ಎಸ್. 600ಕ್ಕೆ 591 ಅಂಕಗಳನ್ನು ಗಳಿಸಿ ಶೇಕಡವಾರು 98.5% ಪಡೆದಿದ್ದಾರೆ. ಬಾಲಕಿ ಸುರೇಶ್ ಹೆಚ್. ಎಸ್. ಮತ್ತು ಜ್ಯೋತಿ ಎನ್. ಎಂ. ದಂಪತಿಗಳ ಪುತ್ರಿ. ಕನ್ನಡ 99, ಆಂಗ್ಲ 97, ಭೌತಶಾಸ್ತ್ರ 100, ರಸಾಯನಶಾಸ್ತ್ರ 98 ಗಣಿತ 100 ಮತ್ತು ಜೀವಶಾಸ್ತ್ರ 97 ಅಂಕಗಳನ್ನು ಗಳಿಸಿದ್ದಾಳೆ. ಪ್ರಣವ್ ದಿಗ್ಗಾವಿ 587, ಚಂದನ ಎನ್. 587 ದೀಪಾ ಬಿ.ಜೆ. 584, ಸರ್ವಮಂಗಳ 584, ಸಾತ್ವಿಕ್ ನಾಗಸಾಯಿ 584, ಸ್ಪೂರ್ತಿ ಪಿ.ಆರ್. 584 ಅಂಕಗಳನ್ನು ಪಡೆದಿದ್ದಾರೆ.
381 ಮಕ್ಕಳು ಅತ್ಯುನ್ನತ ಶ್ರೇಣಿ, 244 ಮಕ್ಕಳು ಪ್ರಥಮ ದರ್ಜೆ ಮತ್ತು 7 ಮಕ್ಕಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡದಲ್ಲಿ 18, ಭೌತಶಾಸ್ತ್ರದಲ್ಲಿ 9, ಗಣಿತಶಾಸ್ತ್ರದಲ್ಲಿ 36, ಜೀವಶಾಸ್ತ್ರದಲ್ಲಿ 4, ಕಂಪ್ಯೂಟರ್ ಸೈನ್ಸ್‌ನಲ್ಲಿ 8 ಮಕ್ಕಳು ಒಟ್ಟು 75 ಮಕ್ಕಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಅತ್ಯುತ್ತಮ ಫಲಿತಾಂಶ ನೀಡಿರುವ ಎಲ್ಲ ಮಕ್ಕಳನ್ನು ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಮತ್ತು ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಆಡಳಿತ ಮಂಡಳಿಯ ಪ್ರಶಾಂತ್ ಡಿ.ಎಸ್., ಕಾರ್ಯದರ್ಶಿ ಹೇಮಂತ್ ಡಿ.ಎಸ್., ಡಾ|| ಜಯಂತ್ ಡಿ.ಎಸ್. ಮತ್ತು ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
Sunday, April 5, 2026
ಅಭೂತಪೂರ್ವ ಯಶಸ್ಸು ಕಂಡ ರಾಜ್ಯಮಟ್ಟದ ಎಂ.ಎಸ್.ಎಸ್. ಕ್ವಿಜ್
ದಾವಣಗೆರೆ, ಏ.5
ನಗರದ ಶ್ರೀ ಸಿದ್ಧಗಂಗಾ ಸಂಸ್ಥೆಯಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ಪ್ರತಿಷ್ಠಿತ ಎಂ.ಎಸ್.ಎಸ್. ಕ್ವಿಜ್‌ಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಕ್ಕಳ ಮಹಾಪೂರ ಹರಿದು ಬಂದು ಅಭೂತಪೂರ್ವ ಯಶಸ್ಸು ಕಂಡಿತು. ಬೀದರ್‌ನಿಂದ ಚಾಮರಾಜನಗರದವರೆಗಿನ ಸುಮಾರು 8 ಸಾವಿರ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿದ್ದರು. 10ನೇ ತರಗತಿ ಪರೀಕ್ಷೆ ಬರೆದ ಮಕ್ಕಳಿಗಾಗಿ ಪರೀಕ್ಷೆ ಮುಗಿದ ನಂತರ ಪ್ರತೀ ವರ್ಷ ಏರ್ಪಡಿಸುವ ಈ ಲಿಖಿತ ಕ್ವಿಜ್ ಎರಡು ಹಂತಗಳಲ್ಲಿ ನಡೆಯಿತು. ಬೆಳಿಗ್ಗೆ 11:00 ರಿಂದ 12:30 ಮತ್ತು ಮಧ್ಯಾಹ್ನ 02:00 ರಿಂದ 03:30 ರವರೆಗೆ ಅತ್ಯಂತ ವ್ಯವಸ್ಥಿತವಾಗಿ ನಡೆದ ಈ ಕ್ವಿಜ್ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯಿತು. ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಣ ಶಿಲ್ಪಿ ಡಾ|| ಎಂ.ಎಸ್. ಶಿವಣ್ಣನವರ ಗೌರವಾರ್ಥ ಕಳೆದ 12 ವರ್ಷಗಳಿಂದ ಏರ್ಪಡಿಸುತ್ತಾ ಬಂದಿರುವ ಈ ಲಿಖಿತ ಕ್ವಿಜ್‌ನಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ, ದ್ವಿತೀಯ ಬಹುಮಾನ 25 ಸಾವಿರ, ತೃತೀಯ ಬಹುಮಾನ 10 ಸಾವಿರ ಮತ್ತು ತಲಾ 1 ಸಾವಿರದಂತೆ 10 ಸಮಾಧಾನಕರ ಬಹುಮಾನ ಪಡೆಯುವರು. ಜೊತೆಗೆ ಪದವಿಪೂರ್ವ ವಿಜ್ಞಾನದ 2 ವರ್ಷಗಳ ಶಿಕ್ಷಣ ಉಚಿತವಾಗಿ ಪಡೆಯುವರು. ಇದಲ್ಲದೆ ಹೆಚ್ಚು ಅಂಕಗಳಿಸಿದ 100 ಮಕ್ಕಳಿಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಆಗಮಿಸಿದ 10 ಸಹಸ್ರಕ್ಕೂ ಹೆಚ್ಚು ಮಕ್ಕಳಿಗೆ, ಪಾಲಕರಿಗೆ ಮತ್ತು ಶಿಕ್ಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ, ಅಧ್ಯಕ್ಷರಾದ ಪ್ರಶಾಂತ್. ಡಿ.ಎಸ್., ಕಾರ್ಯದರ್ಶಿ ಹೇಮಂತ್. ಡಿ.ಎಸ್., ನಿರ್ದೇಶಕರಾದ ಡಾ|| ಜಯಂತ್. ಡಿ.ಎಸ್. ಮತ್ತು ಡಾ|| ಪ್ರಿತೀಶ್ ಹಾಗೂ ಶಾಲಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತಿನಿಂದ ಯಶಸ್ವಿಯಾಗಿ ನಿರ್ವಹಿಸಿದರು.
94 ಕೊಠಡಿಗಳಲ್ಲಿ 188 ಸಿಬ್ಬಂದಿ ವರ್ಗದ ನೆರವಿನೊಂದಿಗೆ 600 ವಿದ್ಯಾರ್ಥಿಗಳ ಸ್ವಯಂಸೇವೆಯಿಂದ ವ್ಯವಸ್ಥೆಯಲ್ಲಿ ಕಿಂಚಿತ್ತೂ ಲೋಪವಾಗದಂತೆ ಬೆಳಿಗ್ಗೆ 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಈ ಐತಿಹಾಸಿಕ ಕಾರ್ಯಕ್ರಮ ನೆರವೇರಿತು. ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ 80 ಟ್ಯಾಬ್‌ಗಳ ಮೂಲಕ ಎಂ.ಎಸ್.ಎಸ್. ಕ್ವಿಜ್ ಪ್ರವೇಶ ಪತ್ರ ವಿತರಿಸಿ, ಸಂಬಂಧಪಟ್ಟ ಕೊಠಡಿಗಳಿಗೆ ಹಾಲಿ ಪಿ.ಯು.ಸಿ. ಓದುತ್ತಿರುವ ವಿದ್ಯಾರ್ಥಿಗಳು ಮಾರ್ಗದರ್ಶನ ನೀಡಿದರು. ದೂರದೂರಿನಿಂದ ಆಗಮಿಸಿದವರಿಗೆ ಬಸ್ ನಿಲ್ದಾಣ ಮತ್ತು ರೇಲ್ವೇ ಸ್ಟೇಷನ್‌ನಿಂದ ಸಂಸ್ಥೆಯವರೆಗೆ ಶಾಲಾ ಬಸ್‌ಗಳಲ್ಲಿ ಕರೆತರಲು ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್ ರವರ ತಾಂತ್ರಿಕ ನಿಪುಣತೆಯಿಂದಾಗಿ ಅಗಾಧ ಸಂಖ್ಯೆಯಲ್ಲಿ ಆಗಮಿಸಿದ ವಿದ್ಯಾರ್ಥಿಗಳ ನೊಂದಣಿಗೆ ಯಾವ ಹಂತದಲ್ಲೂ ತೊಡಕಾಗಲಿಲ್ಲ. ಡಾ|| ಜಯಂತ್‌ರವರು ಎಂ.ಎಸ್.ಎಸ್. ಕ್ವಿಜ್ ಮತ್ತು ಎಂ.ಎಸ್.ಎಸ್. ಸ್ಕಾಲರ್‌ಶಿಪ್ ಬಗ್ಗೆ ಮಾಹಿತಿ ನೀಡಿದರು. ಡಾ|| ಪ್ರೀತಿಶ್, ಮನೋಹರ್ ನೂಜಾಡಿ, ಹರ್ಷ ಸಿ. ಗುಂಟನೂರು, ಜರೀನ್ ತಾಜ್ ಎಂ.ಡಿ., ವಿಜಯಶ್ರೀ ಬಿ.ಸಿ. ಮತ್ತು ಕವಿತಾ ಹೆಚ್. ಇವರು ಪ್ರಶ್ನೆ ಪತ್ರಿಕೆ ನಿರ್ವಹಣೆ ಮತ್ತು ವಿತರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಕಾರ್ಯದರ್ಶಿ ಹೇಮಂತ್‌ರವರು ಹಿರಿಯ ವಿದ್ಯಾರ್ಥಿಗಳ ಮತ್ತು ಸ್ನೇಹಿತರ ಸಹಕಾರದಿಂದ ಹಾಗೂ ಶಾಲೆಯ ಗಣಕಯಂತ್ರದ ತಜ್ಞ ತಂಡದವರ ಅವಿರತ ಶ್ರಮ ಮೇಳೈಸಿ ಕ್ವಿಜ್ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ಸಹಕರಿಸಿದ ಎಲ್ಲರನ್ನೂ ವಂದಿಸಿದರು.
Tuesday, February 17, 2026
ಸಿದ್ಧಗಂಗಾ ಕಾಲೇಜಿಗೆ JEE MAINS ನಲ್ಲಿ ಶೇ. 99.03
2026 ಜನವರಿಯಲ್ಲಿ ನಡೆದ JEE MAINS ಪರೀಕ್ಷೆಯಲ್ಲಿ ದಾವಣಗೆರೆಯ ಶ್ರೀ ಸಿದ್ಧಗಂಗಾ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆಯನ್ನು ಗೈದಿದ್ದಾರೆ. ಶೇಕಡ 99.03 ಪರ್ಸೆಂಟೈಲ್ ಅಂಕಗಳಿಸಿರುವ ಸಂಜಯ್ ಎಸ್ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾನೆ, ದರ್ಶನ್ ರುದ್ರಪ್ಪ ಕರಿಯಜ್ಜಿ 97.64, ಸಮರ್ಥ ಮನೋಹರ್ ಕೋರಿ 96.92, ರಶ್ಮಿ ಹೆಚ್ ಎಸ್ 95.82, ಜಯದೇವ ಜಿ ಡಿ 95.74, ಜಗದೀಶ ಸಿ ಜಿ 95.17, ಪ್ರವೀಣ್ ಕುಮಾರ್ ಪೂಜಾರ್ 94.08, ಎಸ್.ಹೆಚ್ ಮೋಹನ 93.21, ದರ್ಶನ್ ಆರ್ 93.12, ಮೋಕ್ಷ ಜೆ ಹೆಚ್ 92.94, ಸರ್ವಮಂಗಳ ಭೀಮಪ್ಪ ಸೌಕಾರ್ 92.88, ಚೈತನ್ಯ ಆರ್ 92.56, ದೀಪ ಬಿ ಜೆ 92.46, ಚಂದನ್ ಎಂ ಡಿ 91.71, ಪ್ರಣವ್ ದಿಗ್ಗಾವಿ 91.7, ಕೆ ವಿಷ್ಣು 91.58, ಮಾನ್ಯ ಯು 91.47, ಚಂದನ ಎನ್ 91.01, ಜ್ಯೋತಿ ಅರುಣ ಕುಮಾರ್ 90.11 ಪರ್ಸೆಂಟೈಲ್ ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಪ್ರಶಂಸಿಸಿದ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ರವರು ಮುಂದಿನ ಪರೀಕ್ಷೆಗಳಿಗೂ ಶುಭ ಹಾರೈಸಿದರು. ಪಿ ಯು ಕಾಲೇಜಿನ ನಿರ್ದೇಶಕರಾದ ಡಾ|| ಜಯಂತ್ ಡಿ ಎಸ್, ಅಧ್ಯಕ್ಷರಾದ ಪ್ರಶಾಂತ್ ಡಿ ಎಸ್ ಹಾಗೂ ಕಾರ್ಯದರ್ಶಿ ಹೇಮಂತ್ ಡಿ ಎಸ್ ರವರು ಹರ್ಷವನ್ನು ವ್ಯಕ್ತಪಡಿಸಿ ಮಕ್ಕಳನ್ನು ಅಭಿನಂದಿಸಿದ್ದಾರೆ. ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಹಾಗೂ ಉಪನ್ಯಾಸಕ ವೃಂದ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
Monday, January 26, 2026
ಸಿದ್ಧಗಂಗಾ ಸಂಸ್ಥೆಯಲ್ಲಿ 77 ನೇ ಗಣರಾಜ್ಯೋತ್ಸವ ಸಂಭ್ರಮ
ದಾವಣಗೆರೆ. ಜನವರಿ 26,
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಲಾ-ಕಾಲೇಜಿನ ಮಕ್ಕಳು 77 ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ ಗೈಡ್ಸ್ ನ ಕಾರ್ಯದರ್ಶಿ ಎಂ.ಸಿ. ಮಹೇಶ್ ರವರು ಧ್ವಜಾರೋಹಣ ನೆರವೇರಿಸಿದರು. ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಎಲ್‌ಕೆಜಿ ಯುಸ್ರಾ ಖಾಜಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ಕೋರಿದಳು. 2 ನೇ ತರಗತಿ ಯಶಸ್ ಆರ್.ಎಸ್ ಡಾ. ಬಿ.ಆರ್ ಅಂಬೇಡ್ಕರ್ ಬಗ್ಗೆ, ಚೈತ್ರಿಕ ಸಂವಿಧಾನ ದಿನಾಚರಣೆ ಬಗ್ಗೆ ಮೂರನೇ ತರಗತಿ ಫಜೀಲತ್ ಕೋಠಿ ಮತ್ತು ಹರ್ಷಿತ್ ಟಿ ಇವರು ಸಂವಿಧಾನದ ಪೀಠಿಕೆ ಮತ್ತು ಸಂವಿಧಾನದಲ್ಲಿರುವ ವಿವರಣೆ ತಿಳಿಸಿ ಹೇಳಿದರು.
6 ನೇ ತರಗತಿ ಸಾಕ್ಷಿ ಮತ್ತು ಗಾನಶ್ರೀ ಸಂವಿಧಾನದ ರಚನೆ ಮತ್ತು ಸಮಿತಿ ಸದಸ್ಯರ ಬಗ್ಗೆ ಬೆಳಕು ಚೆಲ್ಲಿದರು. ಅಭಿಷೇಕ್ ಎಂ.ಸಿ ಜನವರಿ 26 ರಂದು ಹುತಾತ್ಮನಾದ ಸಂಗೊಳ್ಳಿ ರಾಯಣ್ಣನ ತ್ಯಾಗ-ಬಲಿದಾನವನ್ನು ಸ್ಮರಿಸಿದನು. 1 ನೇ ತರಗತಿ ಮಕ್ಕಳು ಐ ಲವ್ ಮೈ ಇಂಡಿಯಾ, 3 ನೇ ತರಗತಿ ಮಕ್ಕಳು ವಂದೇ ಮಾತರಂ ಗೀತೆಗಳಿಗೆ ಆಕರ್ಷಕವಾಗಿ ನೃತ್ಯ ಪ್ರಸ್ತುತ ಪಡಿಸಿದರು. 7 ನೇ ತರಗತಿಯ ಜಾನ್ಹವಿ ತಂಡದವರು ಚೊಡೋ ಕಲ್ ಕಿ ಬಾತ್, ಐಜಾ ಅಫ್ಸರಿ ತಂಡದವರು ವಿಶ್ವ ವಿನೂತನ ವಿದ್ಯಾಚೇತನ, 6 ನೇ ತರಗತಿಯ ಕೀರ್ತನಾ ತಂಡದವರು ತಾಯಿ ಭಾರತಿಯ ಪಾದ ಪದ್ಮಗಳ ಎಂಬ ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. 1 ನೇ ತರಗತಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಜೈಹೋ ಹಾಡಿಗೆ ರಾåಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ವಾಣಿಶ್ರೀ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿದ್ಧಗಂಗಾ ಸಿಬಿಎಸ್‌ಇ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್, ಕಾಂಪೋಜಿಟ್ ಹೈಸ್ಕೂಲ್ ಮುಖ್ಯ ಶಿಕ್ಷಕಿ ರೇಖಾರಾಣಿ, ಸಂಸ್ಥೆಯ ಕಾರ್ಯದರ್ಶಿ ಹೇಮಂತ್, ನಿರ್ದೇಶಕರಾದ ಜಯಂತ್ ಮತ್ತು ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ಉಪಸ್ಥಿತರಿದ್ದರು. ಶಾಲಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಪಾಲ್ಗೊಂಡಿದ್ದರು. ಸಹ ಶಿಕ್ಷಕಿ ಆಶಾ. ಎಸ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಚಿತ್ರಕಲಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಧ್ವಜಸ್ತಂಭದ ಮುಂದೆ ಭಾರತದ ಭೂಪಟ ಮತ್ತು ರಂಗೋಲಿ ಬಿಡಿಸಿ ಸುಂದರವಾಗಿ ಸಿಂಗರಿಸಿದ್ದರು.
Thursday, January 22, 2026
ಕುಕಿಂಗ್ ಆಕ್ಟಿವಿಟಿ : ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆ
ದಿನಾಂಕ 22/01/2026,
ಸಂಸ್ಥೆಯ 121 ಸ್ಕೌಟ್ ಮತ್ತು 66 ಗೈಡ್ಸ್ ವಿದ್ಯಾರ್ಥಿಗಳಿಗೆ ಕುಕ್ಕಿಂಗ್ ಪ್ರಾವಿಣ್ಯತಾ ಪದಕ ಪಡೆಯಲು “ಕುಕಿಂಗ್ ಆಕ್ಟಿವಿಟಿ ” ಹಮ್ಮಿಕೊಳ್ಳಲಾಗಿತ್ತು, ಶ್ರೀಮತಿ ರೇಖಾರಾಣಿ ಕೆ ಎಸ್ ,(ಏ ಡಿ ಸಿ ) ಮಕ್ಕಳಿಗೆ ಶುಭಹಾರೈಸಿ ಹಸಿರು ನಿಶಾನೆ ತೋರಿಸುವುದರ ಮೂಲಕ ವಿದ್ಯಾರ್ಥಿಗಳ ಫೂಟ್ ಹೈಕ್ ಗೆ ಚಾಲನೆ ನೀಡಿದರು ಹೈಕಿಂಗ್ ಮೂಲಕ ಆನಗೋಡಿನ ಸಿದ್ಧೇಶ್ವರ ಪ್ರೌಢಶಾಲಾ ಆವರಣ ತಲುಪಿದ ವಿದ್ಯಾರ್ಥಿಗಳು ಧ್ವಜಾರೋಹಣದ ಬಳಿಕ ತಮ್ಮ ತಮ್ಮ ದಳಗಳ ಪ್ಯಾಟ್ರೋಲ್ ಗುಂಪುಗಳಲ್ಲಿ ಸೌದೆಒಲೆಗಳಮೇಲೆ ಅವಲಕ್ಕಿ,ಮಂಡಕ್ಕಿ,ಈರುಳ್ಳಿ ಬಜ್ಜಿ,ಮೆಣಸಿನಕಾಯಿ, ಚಪಾತಿ ಬೆಂಡೆಕಾಯಿ ಪಲ್ಯ,ತಾಳಿಪಟ್ಟು,ಪನ್ನೀರ್ ರೋಲ್,ಗೋಬಿಮಂಚೂರಿ,ಪುದೀನಾ ರೈಸ್,ಶಾವಿಗೆ ಪಾಯಸ,ಶರಬತ್ತು, ಬಾದಾಮಿಹಾಲು,ಟಿ,ಕಾಫಿ,ಇನ್ನಿತರೆ ಖಾದ್ಯಗಳನ್ನು ತುಂಬಾ ರುಚಿಕರವಾಗಿ ಉತ್ಸಾಹದಿಂದ ತಯಾರಿಸಿದರು ಹಾಗು ಅಡುಗೆಮಾಡುವ ಕೌಶಲಗಳನ್ನು ತಿಳಿದುಕೊಂಡರು .




















