ದಾವಣಗೆರೆ, ಜ.14
ಸಂಕ್ರಾಂತಿಯ ಮುನ್ನಾ ದಿನವಾದ ಇಂದು ನಗರದ ಸಿದ್ಧಗಂಗಾ ಸಿ.ಬಿ.ಎಸ್.ಇ ಶಾಲೆಯ 6 ಮತ್ತು 3 ಹಾಗೂ LKG ಮಕ್ಕಳು ಸಂಕ್ರಾಂತಿ ಸಂತೆಯನ್ನು ಶಾಲಾ ಆವರಣದಲ್ಲಿ ಏರ್ಪಡಿಸಿದ್ದರು. ತರಕಾರಿ, ಸೊಪ್ಪು, ಬೇಳೆ ಕಾಳು, ಮಂಡಕ್ಕಿ ಉಸುಳಿ, ವಿವಿಧ ರೀತಿಯ ರೊಟ್ಟಿ ಪಲ್ಯಗಳು, ಮಜ್ಜಿಗೆ, ಎಳನೀರು, ಬಳೆ, ಮಾವಿನ ಸೊಪ್ಪು, ಬಾಳೆಕಂಬ, ಅರಿಶಿಣ ಕುಂಕುಮ, ಹೂ, ಎಲೆ ಅಡಿಕೆ ಹೀಗೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಮಾರಾಟ ಮಾಡಿದರು. ಕೂಡು-ಕಳೆಯುವ ಲೆಕ್ಕಕ್ಕೆ ಅನುಗುಣವಾಗಿ ಮನೆಯಿಂದಲೇ ಚಿಲ್ಲರೆ ನಾಣ್ಯಗಳನ್ನು ತಂದಿದ್ದರು. ಹಳ್ಳಿಯ ಸೊಗಡು ಬಿಂಬಿಸುವಂತೆ ಮಕ್ಕಳೆಲ್ಲರೂ ಯೂನಿಫಾರಂ ಬದಲಾಗಿ ಇಳಕಲ್ ಸೀರೆ, ಧೋತಿ-ಪಂಜೆ, ಶರ್ಟು, ಟವೆಲïಗಳನ್ನು ಧರಿಸಿ ಬಂದಿದ್ದರು. ಹಣೆಯ ಮೇಲೆ ವಿಭೂತಿ-ಕುಂಕುಮ ರಾರಾಜಿಸುತ್ತಿತ್ತು. ಪಂಚಾಯಿತಿ ಕಟ್ಟೆ, ಧಾನ್ಯದ ರಾಶಿಪೂಜೆ, ಹಳ್ಳಿ ಹೋಟೆಲ್, ಗ್ರಾಮದೇವತೆ ಪೂಜೆ ಹೀಗೆ ಹಳ್ಳಿಯ ವಾತಾವರಣ ಸೃಷ್ಠಿ ಮಾಡಿದ್ದರು. ಬಂದವರಿಗೆ ಆರತಿ ಬೆಳಗಿ ಎಳ್ಳು-ಬೆಲ್ಲ ನೀಡಿ ಅತಿಥಿ ಸತ್ಕಾರವನ್ನೂ ಮಾಡಿದರು. ಕೆಲವು ಮಕ್ಕಳು ಚನ್ನೆ ಮಣೆ ಗೋಲಿ, ಬುಗುರಿ, ಚಿನ್ನಿದಾಂಡು, ಗಾಳಿಪಟದ ಆಟದಲ್ಲಿ ತಲ್ಲೀನರಾಗಿದ್ದರು. ರಾಗಿ ಬೀಸುತ್ತಾ, ಕಣಿ ಹೇಳುತ್ತಾ, ಗಿಣಿ ಶಾಸ್ತ್ರ ನುಡಿಯುತ್ತಾ ಮಕ್ಕಳು ಆಹ್ವಾನಿತರನ್ನು ಮತ್ತಷ್ಟು ರಂಜಿಸಿದರು. ಶಿಕ್ಷಕರು ಮಾರ್ಗದರ್ಶನ ನೀಡುತ್ತಾ ಸಂಕ್ರಾಂತಿ ಸಂತೆಯನ್ನು ಯಶಸ್ವಿಗೊಳಿಸಿಕೊಟ್ಟರು.



No comments:
Post a Comment