ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಇವರು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸಹಯೋಗದಲ್ಲಿ “ಮಕ್ಕಳ ರಂಗ ತರಬೇತಿ ಶಿಬಿರ” ಆಯೋಜಿಸಿದರು. ಈ ಶಿಬಿರದಲ್ಲಿ ಬಿ.ಇ ಪದವೀಧರೆ ಹಾಗೂ ಹೆಗ್ಗೋಡು ರಂಗ ತರಬೇತಿ ಕೇಂದ್ರದ ಡಿಪ್ಲೊಮೋ ಪದವೀಧರೆ ಪ್ರಜ್ಞಾ ನೀಲಗುಂದ ಅವರು ಒಂದು ತಿಂಗಳ ಕಾಲ ಯಶಸ್ವಿಯಾಗಿ ಮಕ್ಕಳಿಗೆ ತರಬೇತಿ ನೀಡಿದ್ದಾರೆ.
ಶಿಬಿರದಲ್ಲಿ ಮೂವತ್ತಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ತರಬೇತಿ ಪಡೆದಿದ್ದಾರೆ. ಶಿಬಿರದಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಬಾ. ಮ. ಬಸವರಾಜಯ್ಯ ಅವರು ರಚಿಸಿರುವ “ಒಂದು ಕಾಡಿನ ಕಥೆ” ನಾಟಕ ಕಲಿತಿದ್ದು
ದಿನಾಂಕ 18-11-2025 ರ ಮಂಗಳವಾರ ಸಂಜೆ 6.30 ಕ್ಕೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಬಯಲು ರಂಗಮಂದಿರದಲ್ಲಿ ಪ್ರದರ್ಶಿಸಲಿದ್ದಾರೆ.
ಶಿಬಿರದ ಸಮಾರೋಪ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾಧಿಕಾರಿಗಳಾದ ಜಿ.ಎಂ. ಗಂಗಾಧರ ಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ನೀಲಮ್ಮನವರು ಶಿಬಿರದ ಸಮಾರೋಪ ಭಾಷಣ ಮಾಡಲಿದ್ದು, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ಅಧ್ಯಕ್ಷತೆ ವಹಿಸಲಿದ್ದಾರೆ. ನಾಟಕ ಅಕಾಡೆಮಿ ಸದಸ್ಯರುಗಳಾದ ರವೀಂದ್ರನಾಥ್ ಸಿರಿವರ, ವಿಶ್ವನಾಥ ರೆಡ್ಡಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪ್ರಜಾವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ, ಪ್ರತಿಮಾ ಸಭಾದ ಪ್ರಧಾನ ಕಾರ್ಯದರ್ಶಿ ಬಿ.ಎನ್, ಮಲ್ಲೇಶ್ ಹಾಗೂ ನೀವು-ನಾವು ತಂಡದ ಮುಖ್ಯಸ್ಥ ರಂಗಕರ್ಮಿ ಎಸ್. ಎಸ್. ಸಿದ್ಧರಾಜು ಗೌರವ ಉಪಸ್ಥಿತರಿರುತ್ತಾರೆ.
ನಾಟಕದ ಕಥಾ ಹಂದರ: ಮನುಷ್ಯರು ದಿನೇ ದಿನೇ ಕಾಡು ನಾಶಮಾಡುತ್ತಾ ವನ್ಯಪ್ರಾಣಿ ಸಂಕುಲಕ್ಕೆ ನೆಲೆ ಇಲ್ಲದಂತೆ ಮಾಡುತ್ತಿರುವುದನ್ನು ಕಂಡು “ಕಾಡು ಪ್ರಾಣಿಗಳು ಮತ್ತು ಊರು ಪ್ರಾಣಿಗಳು” ಒಟ್ಟುಗೂಡಿ ಮನುಷ್ಯರ ವಿರುದ್ಧ ಮುಷ್ಕರ ಮಾಡುತ್ತವೆ. ಕಾಡು ಹಾಗೂ ಪರಿಸರ ನಾಶದಿಂದ ಆಗುವ ವಿನಾಶದ ಬಗ್ಗೆ ಪಾಠ ಹೇಳುತ್ತವೆ….. ಹಾಡು-ನೃತ್ಯಗಳ ಸಂಯೋಜನೆಯೊಂದಿಗೆ ನಾಟಕ ಸಿದ್ಧಪಡಿಸಲಾಗಿದೆ…. ನಾಟಕಾಸಕ್ತರು ಮಕ್ಕಳು ಪ್ರದರ್ಶಿಸುವ ಈ ನಾಟಕ ವೀಕ್ಷಿಸಲು ಮನವಿ ಮಾಡಿದ್ದಾರೆ.
No comments:
Post a Comment