Friday, January 18, 2019

ಶಿವಕುಮಾರ ಸ್ವಾಮಿಗಳವರ - ಶ್ರೀ ವಾಣಿ

ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ - ಶ್ರೀ ವಾಣಿ

ಶತಾಯುಷಿ, ಕರ್ನಾಟಕ ರತ್ನ, ತ್ರಿವಿಧ ದಾಸೋಹ ಮೂರ್ತಿ, ನಡೆದಾಡುವ ದೇವರು, ಸಿದ್ಧಗಂಗೆಯ ಸಂತ, ಮಹಾ ತಪಸ್ವಿ, ಕರುಣಾ ಸಾಗರ, ಕಾಯಕಯೋಗಿ ಹೀಗೆ ಹತ್ತು ಹಲವಾರು ಅಭಿದಾನಗಳಿಂದ ಕಂಗೊಳಿಸುತ್ತಿರುವ ಜಗದಚ್ಚರಿ ಶ್ರೀ ಸಿದ್ಧಗಂಗಾ ಕ್ಷೇತ್ರದ ಹಿರಿಯ ಸ್ವಾಮೀಜಿ ಡಾ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರು ತಮ್ಮ ನೂರಾ ಹನ್ನೊಂದನೆಯ ಸಾರ್ಥಕ ಜೀವನ ಸಾಗಿಸಿ ತಮ್ಮ ಆಧ್ಯಾತ್ಮಿಕ ಬಲದಿಂದ ಕೋಟ್ಯಾನುಕೋಟಿ ಜನಮಾನಸದಲ್ಲಿ ದೇವಪದವಿಯಿಂದ ಕಂಗೊಳಿಸುತ್ತಿದ್ದಾರೆ. ಕಾಲಕಾಲಕ್ಕೆ ತಮ್ಮ ವಿದ್ವತ್‍ಪೂರ್ಣ ಭಾಷಣಗಳಿಂದ ಪ್ರವಚನಗಳಿಂದ ಜನರಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಮೂಡಿಸಿದ್ದಾರೆ.
ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರು ತಮ್ಮ ಪದವಿ ಶಿಕ್ಷಣದಲ್ಲಿ ಅಭ್ಯಾಸ ಮಾಡಿದ್ದು ಗಣಿತ ಮತ್ತು ಭೌತ ವಿಜ್ಞಾನ ವಿಷಯಗಳನ್ನು. ಆದರೆ ಅವರ ಪಾರಮಾರ್ಥಿಕ ಜ್ಞಾನದಿಂದ ಸಿದ್ಧಗಂಗೆ ಇಂದು ತ್ರಿವಿಧ ದಾಸೋಹ ಕೇಂದ್ರವಾಗಿ ಕಂಗೊಳಿಸುತ್ತಿದೆ. ಶ್ರೀವಾಣಿಗಳನ್ನೊಮ್ಮೆ ಅವಲೋಕಿಸಿದರೆ ಶ್ರೀಗಳವರ ವಿಚಾರಧಾರೆ ಅವ್ಯಕ್ತವಾಗಿ ನಮ್ಮನ್ನು ಮುನ್ನಡೆಸುತ್ತದೆ.

“ಧರ್ಮದ ತಳಹದಿಯ ಮೇಲೆ ಕಟ್ಟಲ್ಪಡುವ ನಾಗರಿಕತೆ ಸುಸಂಸ್ಕøತವಾದದ್ದು. ನಮ್ಮ ಸಮಸ್ತ ಕ್ರಿಯಾಮುಖದಲ್ಲಿ ಧರ್ಮಬುದ್ಧಿ ಬರದಿದ್ದರೆ ನಾವು ಎಷ್ಟೇ ನಾಗರಿಕರೆನಿಸಿದರೂ ಸುಸಂಸ್ಕøತರೆನಿಸಲಾರೆವು. ನಮಗೆ ಗಳಿಕೆ-ಬಳಕೆ ಎರಡರ ಅರ್ಥವು ಆಗಬೇಕು. ಸಂಪಾದಿಸಿದ ಎಲ್ಲವನ್ನೂ ಧರ್ಮ ಬುದ್ಧಿಯಿಂದಲೇ ಅರಿತು ಬಳಕೆ ಮಾಡಬೇಕು”.
ಕ್ರೀಡೆಗಳಲ್ಲಿ ಎರಡು ಗುಂಪು ಆಟವಾಡುತ್ತಾರೆ. ಒಂದು ಗುಂಪು ಗೆಲ್ಲುತ್ತದೆ. ಮತ್ತೊಂದು ಗುಂಪು ಸೋಲುತ್ತದೆ. ಆಟದಲ್ಲಿ ಸೋಲು – ಗೆಲುವು ಸಾಮಾನ್ಯವಾದದ್ದು, ಗೆದ್ದವರು ಹಿಗ್ಗುತ್ತಾರೆ. ಸೋತವರು ದುಃಖ ಪಡುತ್ತಾರೆ. ಇಂದು ಸೋತವರು ನಾಳೆ ಗೆಲ್ಲಬಹುದು. ಅಪಮಾನವಾಯಿತು ಎಂಬ ಭಾವನೆ ಬಿಟ್ಟು ಮತ್ತೆ ಪ್ರಯತ್ನ ಪಟ್ಟರೆ ಗೆಲ್ಲಬಹುದು.
“ಇಂದು ಕಾಲ ಬದಲಾಗಿದೆ. ಒಂದೊಂದು ಮಠವೂ ಒಂದೊಂದು ವಿಶ್ವವಿದ್ಯಾಲಯವಾಗಬೇಕಾಗಿದೆ. ಮಠಾಧಿಪತಿಯಾದವರು ವಿದ್ವತ್ತಿನ ಶ್ರೀಗಿರಿಯಾಗಬೇಕಾಗಿದೆ. ಗಳಿಸಿದ ವಿದ್ವತ್ತನ್ನು ಜನಕಲ್ಯಾಣಕ್ಕೆ ವಿನಿಯೋಗಿಸುವ ಹೃದಯವಂತರಾಗಬೇಕಾಗಿದೆ”.
“ಆರ್ಥಿಕವಾಗಿ ಬಡತನವಿರಬಹುದು ಅದನ್ನು ಶ್ರಮ ದುಡಿಮೆಯಿಂದ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಆದರೆ ಹೃದಯ ದಾರಿದ್ರ್ಯ ಬರಬಾರದು. ದೊಡ್ಡ ಸ್ಥಾನಗಳಲ್ಲಿರುವವರು ದೊಡ್ಡ ದೃಷ್ಟಿಯುಳ್ಳವರಾಗಬೇಕು. ಉದಾತ್ತ ಚಿಂತಕರಾಗಬೇಕು. ಅಧಿಕಾರ, ಅಂತಸ್ತು, ಅವಕಾಶಗಳು ಬಂದಾಗ ಹಿರಿಯ ಮಾರ್ಗಾವಲಂಬಿಗಳಾಗಿ ಮುನ್ನಡೆಯಬೇಕು”.
“ಎಲ್ಲಿಯವರೆಗೆ ನಮ್ಮ ದೃಷ್ಠಿ, ಭಾವನೆ, ಆಲೋಚನೆ ಕೆಲಸ ಕಾರ್ಯಗಳು ದೊಡ್ಡದಾಗುವುದಿಲ್ಲವೋ ಅಲ್ಲಿಯವರೆಗೆ ನಾವು ದೊಡ್ಡವರಾಗುವುದಿಲ್ಲ ಎಂಬುದನ್ನು ತಿಳಿಯಬೇಕು”
“ಕಷ್ಟ ಬಂದಾಗ ವ್ಯಕ್ತಿತ್ವದ ವಿಕಾಸ, ಸುಖ ಬಂದಾಗ ಸತ್ವ ಪರೀಕ್ಷೆಯಾಗದು. ಕಷ್ಟ ಬಂದಾಗ ಶಕ್ತಿ ಹೊಮ್ಮಿ, ವ್ಯಕ್ತಿತ್ವ ವಿಕಾಸವಾಗಲು ಪರಮಾತ್ಮನು ಈ ವಾತಾವರಣವನ್ನು ಸೃಷ್ಟಿ ಮಾಡಿರಬೇಕು”
“ಪ್ರತಿ ವ್ಯಕ್ತಿಯೂ ಕೂಡ ತನ್ನ ಸ್ಥಾನದಲ್ಲಿ ತಾನು ಮಾಡುವ ಕಾರ್ಯವನ್ನು ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಮಾಡಬೇಕು. ಅದೇ ದೇಶಕ್ಕೆ ಸಲ್ಲಿಸುವ ನಿಜವಾದ ದೇಶ ಸೇವೆ”
“ಪ್ರತಿನಿತ್ಯ ಮಲಗುವ ಮುನ್ನ ನಡೆನುಡಿಗಳು, ನಡೆಸಿದ ಒಳಿತು ಕೆಡಕುಗಳ ಜಮಾ ಖರ್ಚನ್ನು ಅವಲೋಕಿಸಬೇಕು. ಮರುದಿನ ತುಳಿಯಬೇಕಾದ ಗುರುಪಥವನ್ನು ಹುಡುಕುವುದರ ಮೂಲಕ ಶಿವಪಥದ ಕಡೆಗೆ ಸಾಗಬೇಕು. ವಿಕಾರ ವಿಮುಖವಾಗಿ ವಿಕಾಸ ಸುಮುಖವಾಗಿ ಹೆಜ್ಜೆ ಹಾಕುವುದರ ಮೂಲಕ ವಿಕಾರಗಳನ್ನು ತನು, ಮನ , ಬುದ್ಧಿಯಿಂದ ಗೆಲ್ಲಬೇಕು”
“ನಿಜಜೀವನದಲ್ಲಿ ಅಧಿಕಾರಿಗಳಲ್ಲಿ, ಮುಖಂಡರಲ್ಲಿ ಸಮಯ ಪ್ರಜ್ಞೆಯೇ ಇಲ್ಲ. ಕಾರ್ಯಕ್ರಮಕ್ಕೆ ಘಂಟೆಗಟ್ಟಲೇ ತಡವಾಗಿ ಬರುತ್ತಾರೆ. ಇದು ಅವ್ಯವಸ್ಥೆಯ ಪ್ರಪಂಚ. ಹಿಂದೆ ಸಮಯ ಪರಿಪಾಲನೆ ದೊಡ್ಡವರ ಜೀವನದಲ್ಲಿ ಬಹುಮುಖ್ಯವಾಗಿತ್ತು”.
“ಮನುಷ್ಯನ ಜೀವನದಲ್ಲಿ ಚಿಂತೆ ಎನ್ನುವ ಮಹಾವ್ಯಾಧಿ ಹಾನಿಕರವಾದದ್ದು, ಕಷ್ಟಕರವಾದದ್ದು. ಮನುಷ್ಯ ಸಾಧ್ಯವಾದ ಮಟ್ಟಿಗೆ ಯಾವುದೇ ಘಟನೆ ಉಂಟಾದರೆ ಚಿಂತೆ ಮಾಡುವಂತಹ ಪ್ರವೃತ್ತಿಯನ್ನು ಬಿಟ್ಟುಬಿಡಬೇಕು”.
“ಆಧ್ಯಯನಶೀಲನಾಗದ ಶಿಕ್ಷಕ ವಿದ್ಯಾರ್ಥಿಗಳನ್ನು ಸ್ಫೂರ್ತಿಗೊಳಿಸಲಾರ. ಅಧ್ಯಯನ ವಿಮುಖನಾದ ವಿದ್ಯಾರ್ಥಿ ಉತ್ತಮ ಭವಿಷ್ಯ ಕಾಣಲಾರ. ಪರಿಣಾಮದಾಯಕ ಶಿಕ್ಷಣ ವ್ಯವಸ್ಥೆ ಮಾಡದ ದೇಶ ಪ್ರಗತಿ ಸಾಧಿಸಲಾರದು”.
“ಸ್ವಾತಂತ್ರ್ಯ ಬಂದನಂತರ ಭ್ರಷ್ಟಾಚಾರವೇ ಜೀವನ ವಿಧಾನವಾದದ್ದು ದೇಶದ ದೊಡ್ಡ ದುರಂತ. ಉನ್ನತ ಜೀವನ ಮೌಲ್ಯಗಳೆಲ್ಲ ಇಂದು ಕಣ್ಮರೆಯಾಗಿದೆ. ಪ್ರಾಮಾಣಿಕತೆ, ಸರಳ ಜೀವನ, ಆಧ್ಯಾತ್ಮಿಕ ಚಿಂತನೆಗಳು ವಿರಳವಾಗಿದೆ. ಮುಖಂಡರು ದಾಹತ್ರಯಗಳ - ಹಣ, ಅಧಿಕಾರ, ಭೋಗದ ಬೆನ್ನು ಹತ್ತಿದ್ದಾರೆ. ಸಜ್ಜನರು ತೆರೆಮರೆಗೆ ಸರಿಯುವಂತಾಗಿದೆ”.
“ಸಮಸ್ಯೆ ಪರಿಹಾರ ಕೇವಲ ಸರ್ಕಾರದಿಂದ, ಮುಖಂಡರಿಂದ ಆಗುವುದಿಲ್ಲ. ಜನತೆ ಜಾಗೃತರಾಗಬೇಕು. ಅವರಲ್ಲಿ ಕರ್ತವ್ಯ ಪ್ರಜ್ಞೆ ಮೂಡಿ ಬರಬೇಕು. ಅದನ್ನು ಆಚರಣೆಯಲ್ಲಿ ತರಬೇಕು. ಆಗ ಆರ್ಥಿಕ ಸಮಾನತೆ, ಸಹಬಾಳ್ವೆ ಉಂಟಾಗಿ ಜನರ ಭವಿಷ್ಯ ಉಜ್ವಲವಾಗುತ್ತದೆ”.
“ಮನುಷ್ಯ ಹೇಡಿಯಾಗಿ ಬಾಳಬಾರದು. ತನ್ನ ಗೌರವ, ತನ್ನ ಜನ, ತನ್ನ ದೇಶದ ಗೌರವ ಕಾಪಾಡಲು ಸದಾ ಪ್ರಯತ್ನಿಸಬೇಕು. ಆ ಕಾರ್ಯಕ್ಕೆ ಯಾವ ಅಡ್ಡಿ ಬಂದರೂ ಹೆದರಬೇಕಾಗಿಲ್ಲ”.
“ಪ್ರಾರ್ಥನೆಯೆಂದರೆ ಮನಸ್ಸಿಗೆ ಅವಶ್ಯಕವಾಗುವ ಪ್ರಸಾದ(ಆಹಾರ). ಅದನ್ನು ಗಳಿಸುವಾಗ ಏಕಾಗ್ರತೆ ಇರಬೇಕು. ಹೊಟ್ಟೆಗೆ ಹಸಿವಾದಾಗ ಹೇಗೆ ಪ್ರಸಾದ(ಆಹಾರ) ಸ್ವೀಕರಿಸುತ್ತೇವೆಯೋ ಹಾಗೆಯೇ ಮನಸ್ಸಿನ ಹಸಿವಿಗೆ ಪ್ರಾರ್ಥನೆ ಪ್ರಸಾದವಾಗುತ್ತದೆ”.
“ಜೀವಿಯ ಶ್ರೇಷ್ಠತೆಯಿರುವುದು ಹಣ, ಆಸ್ತಿ, ಅಧಿಕಾರಗಳ ಸಂಪಾದನೆಯಲ್ಲಲ್ಲ. ಅದಿರುವುದು ಆತ್ಮವನ್ನು ಅರಿಯುವುದರಲ್ಲಿ. ಕಾಣದಿರುವ ಮನುಷ್ಯನನ್ನು ಅಂದರೆ ತನ್ನೊಳಗಿನ ತನ್ನನ್ನು ಕಾಣುವುದರಲ್ಲಿ”.
“ಪ್ರಾಣಕ್ಕೆ ಸಮಾನವಾದುದು ಅಭಿಮಾನ, ಅಭಿಮಾನ ಎಂದರೆ ಅಹಂಕಾರ ಎಂದು ಅರ್ಥವಲ್ಲ. ಅಹಂಕಾರ ಕೆಟ್ಟದ್ದು ಅದನ್ನು ಪೋಷಿಸಬಾರದು. ಅಭಿಮಾನ ಎಂದರೆ ಆತ್ಮಶ್ರದ್ಧೆ. ಆತ್ಮಗೌರವದಿಂದ ಬಾಳಬೇಕು. ಆತ್ಮಗೌರವ ಹೋದರೆ ಮರಣಪ್ರಾಯ”.
“ಜನರು ಮೊದಲು ತಮ್ಮ ಕರ್ತವ್ಯವನ್ನು ಚೆನ್ನಾಗಿ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ತಮಗೆ ಅನ್ಯಾಯವಾದುದನ್ನು ಪ್ರತಿಭಟನೆ ಮಾಡಲು ಶಕ್ತಿ ಬೆಳೆಸಿಕೊಳ್ಳಬೇಕು. ತಮಗೇನು ಸೌಲಭ್ಯ ದೊರೆಯಬೇಕು ಅದನ್ನು ಹೋರಾಟ ಮಾಡಿ ಪಡೆದುಕೊಳ್ಳಬೇಕು”.
“ಸೌಜನ್ಯ, ವಿನಯ, ನಮ್ರವಾಣಿ, ಮೃದು ವಚನದಿಂದ ಆನಂದವೇ ಉಂಟಾಗುತ್ತದೆ. ಮಾತು ಮನುಷ್ಯನ ಅಳತೆಯ ಸಾಧನ. ಸಜ್ಜನ – ದುರ್ಜನ ನಿರ್ಣಯವಾಗಬೇಕಾದರೆ ಮಾತಿನಿಂದಲೇ ಸಾಧ್ಯ. ಶತ್ರ್ರುತ್ವ – ಮಿತ್ರತ್ವ ಬರುವುದಕ್ಕೆ ಮಾತೇ ಕಾರಣ. ಮಾತು ಕಠೋರವಾದರೆ ಶತ್ರು. ಮಾತು ವಿನಯ - ಸೌಜನ್ಯವಾದಾಗ ಮಿತ್ರ”.
“ಯಾರು ನಿಜವಾದ ಜ್ಞಾನ ಸಂಪಾದನೆ ಮಾಡುತ್ತಾರೋ ನಿಜವಾದ ಜ್ಞಾನಿಯಾಗುತ್ತಾನೋ ಅವನೇ ನಿಜವಾದ ಶ್ರೀಮಂತ”.
“ಮನುಷ್ಯ ಯುದ್ಧಮುಖಿಯಾಗಬೇಕು. ತನ್ನೊಳಗೆ ತಾನು ಯುದ್ಧ ಮಾಡಬೇಕು. ಒಳಗಿರುವ ಮೃಗೀಯ ಭಾವನೆಗಳ ವಿರುದ್ಧ ತನ್ನನ್ನು ತಿಂದು ತೇಗುವ ಅವಗುಣಗಳ ವಿರುದ್ಧ, ತನ್ನಿಂದ ತಾನು ಬದುಕಿದ ಆ ದೇಶ ಕಾಲಗಳ ಹಾನಿ ವಿಪ್ಲವಗಳ ವಿರುದ್ಧ ಯುದ್ಧ ಮಾಡಬೇಕು”.
“ಶಿಕ್ಷಕ ಎಲ್ಲಕ್ಕೂ ಮೊದಲು ಚಾರಿತ್ರ್ಯಶುದ್ಧಿಯನ್ನು ಕಾಪಾಡಿಕೊಳ್ಳಬೇಕು. ಅಧ್ಯಯನಶೀಲನಾಗಬೇಕು. ಚಲಿಸುವ ಜ್ಞಾನ ಭಂಡಾರವಾಗಬೇಕು”.
“ಕೃಷಿ ಪವಿತ್ರವಾದ ಕಾಯಕ. ವ್ಯವಸಾಯದ ಬಗ್ಗೆ ಇಂದಿನ ಯುವಜನಾಂಗ ಆಸಕ್ತಿ ಬೆಳೆಸಿಕೊಳ್ಳಬೇಕು”.
“ಇತ್ತೀಚೆಗೆ ಚುನಾವಣೆಗಳೂ ನೀತಿ ಭ್ರಷ್ಟವಾಗುತ್ತಿವೆ. ಎಚ್ಚೆತ್ತ ಮತದಾರ ವಿಚಾರವಂತನಾಗಬೇಕು. ತನ್ನ ಮತವನ್ನು ಹೆಂಡಕ್ಕೆ, ಹಣಕ್ಕೆ ಬಟ್ಟೆ ಬರೆಗಳಿಗೆ ಮಾರಿಕೊಳ್ಳಬಾರದು. ಧರ್ಮ ಬಾಹಿರ, ನೀತಿ ಬಾಹಿರನಾಗಿ ನಡೆಯಬಾರದು. ಮತದಾನವೂ ಪವಿತ್ರ ಪೂಜೆಯೆಂದೇ ಭಾವಿಸಬೇಕು”.
“ಇಂದು ಎಲ್ಲೆಲ್ಲಿಯೂ ಸೇವೆಯೆಂಬ ಮಾತು ಜನಪ್ರಿಯವಾದ ಸವಿನುಡಿಯಾಗಿದೆ. ಆದರೆ ಸೇವೆ ಎಂಬುದು ಪ್ರಚಾರದ ಸರಕಲ್ಲ. ಅದು ಗುಪ್ತ ಶಕ್ತಿ. ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿಡುವ ಜೀವನ ವಿಧಾನ”
ಮಾನವ ಜನ್ಮ ಲಭ್ಯವಾಗುವುದೇ ಒಂದು ಪುಣ್ಯ. ಅಂತಹ ಪುಣ್ಯ ಸಂದರ್ಭ ಬಂದಾಗ ಇಲ್ಲಿ ಸಲ್ಲುವಂತೆ ಬಾಳುವ ಕಲೆಯನ್ನರಿತು, ಅಲ್ಲಿಯೂ ಸಲ್ಲುವ ಗುರಿ ನಮ್ಮದಾಗಬೇಕು.
ಟಿ. ವಿ. ಎಂಬ ರಾಕ್ಷಸ ಬಂದು ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಒಂದು ಕಾಲಕ್ಕೆ ಟಿ.ವಿ. ಒಂದು ದೊಡ್ಡ ಸಾಧನೆಯಾಗಿತ್ತು. ಜ್ಞಾನಾರ್ಜನೆಗೆ ಪೂರಕವಾಗಿತ್ತು. ಇಂದು ಟಿ.ವಿ. ಮುಂದೆ ಕುಳಿತ ಯುವಜನಾಂಗ ಮುಂದಿನ ಭವಿಷ್ಯವನ್ನು ಯೋಚನೆ ಮಾಡದೆ ವೃಥಾ ಕಾಲವನ್ನು ವ್ಯರ್ಥ ಮಾಡುತ್ತಾರೆ.
ನಮ್ಮ ಸಂಸ್ಕøತಿಯ ದಿವ್ಯ ಬೆಳಕಿಗೆ ಅನೀತಿಯ, ಭ್ರಷ್ಟಾಚಾರದ ಕವಚವನ್ನು ತೊಡಿಸಿದ್ದಾರೆ. ಅದನ್ನು ಕಿತ್ತು ಹಾಕಿದರೆ ಮಾನವೀಯತೆಯ ಬಂಗಾರ ಅರಳುತ್ತದೆ. ಜಗತ್ತಿನ ಕಣ್ಣು ತೆರೆಯುತ್ತದೆ.
ಸಾಮಾನ್ಯರ ದೃಷ್ಟಿಯಲ್ಲಿ ಮಾನವನ ವಯೋಮಾನವನ್ನು ಹುಟ್ಟಿದಾರಭ್ಯದಿಂದ ಸಾಯುವ ತನಕ ಲೆಕ್ಕ ಹಾಕುವುದು ವಾಡಿಕೆ. ಆದರೆ ಜ್ಞಾನಿಗಳು ಅವರು ನಿದ್ರೆ, ಕಲಹ, ವ್ಯಸನಗಳಲ್ಲಿ ವ್ಯರ್ಥವಾಗಿ ಕಳೆದ ವಯಸ್ಸನ್ನು ಪರಿಗಣಿಸುವುದಿಲ್ಲ.
ಸೃಷ್ಟಿಯಲ್ಲಿ ಹುಟ್ಟುವ ಪ್ರತಿಯೊಂದು ಜೀವಿಯೂ ಅನುಭವಿಸಬೇಕಾದ ಒಂದು ಅನಿವಾರ್ಯ ಘಟನೆ ಮರಣ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಅದಕ್ಕೆ ಸಾರ್ಥಕತೆಯನ್ನು ತಂದುಕೊಡುವ ಪ್ರಯತ್ನ ಪವಿತ್ರವಾದುದು. ಹುಟ್ಟು ಸಾವಿನ ಮಧ್ಯೆ ಇರುವ ಬಾಳು ಅದನ್ನು ನಿರ್ಧರಿಸುತ್ತದೆ.
ಯಾರಾದರೂ ಮಹಾಕವಿಯ, ಮಹಾಸಂತನ, ದೊಡ್ಡ ಅನುಭವಿಯ ಒಂದು ವಾಕ್ಯವನ್ನು ಕಂಠಪಾಠ ಮಾಡಿದರೆ ಇಡೀ ಜೀವಮಾನಕ್ಕೆ ಅದು ಕಾಣಿಕೆಯಾಗಿ ಸೇವೆ ಸಲ್ಲಿಸುತ್ತದೆ.
“ವಿಜ್ಞಾನ ಏನೆಲ್ಲವನ್ನು ಸಾಧಿಸಿದೆಯಾದರೂ ಜಗತ್ತನ್ನೇ ಅಂಗೈಯ ನೆಲ್ಲಿಯೆಂಬಂತಾಗಿಸಿದೆಯಾದರೂ ಪ್ರಕೃತಿಯ ಮುಂದೆ ಮನುಷ್ಯನ ಸಾಧನೆ ಏನೇನೂ ಇಲ್ಲ ಎಂಬುದನ್ನು ಸಾರಿ ಸಾರಿ ಹೇಳಿದವು ಸುನಾಮಿಗಳು”.
“ಸಕಲ ಜೀವರಿಗೆ ಲೇಸನೇ ಬಯಸುವ” ವಿಜ್ಞಾನವಿಂದು ಬೇಕಾಗಿದೆ. ಬಾಂಬು ಅಣುಬಾಂಬುಗಳ ಮೂಲಕ ಮನುಕುಲವನ್ನು ನಾಶಮಾಡುವ ಯುದ್ಧಾಸ್ರ್ತಗಳಿಗಿಂತ ನರಳುತ್ತಿರುವ ಜೀವಿಗಳಿಗೆ ನಗು ತಂದು ಕೊಡುವ ವಿಜ್ಞಾನ ಇಂದು ಬೇಕಾಗಿದೆ.
ಕಾಯಕ – ದಾಸೋಹಗಳು ದೇಹ ಮತ್ತು ಮನಸ್ಸುಗಳನ್ನು ಪವಿತ್ರ ಮಾಡುವ ಶುದ್ಧ ಸಂಜೀವಿನಿಗಳು.

ಕೃಪೆ: ಶ್ರೀ ಗುರುಸ್ಮøತಿ ಸಂಪುಟ

ಸಂಗ್ರಹ: ಜಸ್ಟಿನ್ ಡಿ’ಸೌಜ, ಸಿದ್ಧಗಂಗಾ ಶಾಲೆ

1 comment:

  1. Great Information sharing.I am very happy to read this article .. thanks for giving us go through info.Fantastic nice. I appreciate this post Take a look at Raspberry Pi Black Friday Deals

    ReplyDelete