ಸಿದ್ಧಗಂಗಾ ಕ್ಷೇತ್ರಕ್ಕೆ 11,111 ಕಿಲೋ ಅಕ್ಕಿ ರವಾನೆ
ದಾವಣಗೆರೆ ಜ. 29-
ನಡೆದಾಡುವ ದೇವರ ಮೇಲಿನ ಶ್ರದ್ಧಾಭಕ್ತಿಯ ದ್ಯೋತಕವಾಗಿ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಪಾಲಕರು, ಹಿರಿಯ ವಿದ್ಯಾರ್ಥಿಗಳು, ಭಕ್ತರು ಒಟ್ಟಾಗಿ 449 ಪ್ಯಾಕೆಟ್ ಅಕ್ಕಿ ಸಂಗ್ರಹಿಸಿ ಜನವರಿ 31ರಂದು ತುಮಕೂರಿನ ಸಿದ್ಧಗಂಗಾ ಶ್ರೀಮಠದಲ್ಲಿ ನಡೆಯುವ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮದ ದಾಸೋಹ ಮನೆಗೆ ಸಮರ್ಪಿಸುವ ಪವಿತ್ರ ಕಾರ್ಯದಲ್ಲಿ ಭಾಗಿಯಾದರು.
ತ್ರಿವಿಧ ದಾಸೋಹ ಮೂರ್ತಿಯ ಪುಣ್ಯಸ್ಮರಣೆಗೆ ಶ್ರೀಮಠಕ್ಕೆ ಆಗಮಿಸಲಿರುವ ಲಕ್ಷಾಂತರ ಭಕ್ತರ ನಿರಂತರ ದಾಸೋಹ ಸೇವೆಗೆ ದಾವಣಗೆರೆ ಸದ್ಭಕ್ತರ ಕಿರು ಸೇವೆ ಇದಾಗಿದೆ. ಈ ಸತ್ಕಾರ್ಯದಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯ ಹೇಮಂತ್, ಜಯಂತ್ ಹಿರಿಯ ವಿದ್ಯಾರ್ಥಿಗಳಾದ ಅಜ್ಜಪ್ಪ, ಸಿದ್ಧೇಶ್, ರಾಮ ಮನೋಹರ, ಹರ್ಷ ಇವರ ಸೇವೆ ಶ್ಲಾಘನೀಯ. ಪಾಲಕರು 1 ಪ್ಯಾಕೆಟ್ ಅಕ್ಕಿಯಿಂದ ಅವರ ಶಕ್ತ್ಯಾನುಸಾರ 40 ಪ್ಯಾಕೆಟ್ ಅಕ್ಕಿವರೆಗೆ ಸಮರ್ಪಿಸುವ ಮೂಲಕ ತಮ್ಮ ಭಕ್ತಿ ಸಲ್ಲಿಸಿದರು. ಹನಿ ಹನಿಗೂಡಿ ಹಳ್ಳವಾಯಿತು. ಅಂದಾಜು ಮೂರುವರೆ ಲಕ್ಷ ಮೌಲ್ಯದ ಅಕ್ಕಿಯನ್ನು ಬಸಾಪುರದ ಶ್ರೀನಿವಾಸ ರೈಸ್ ಮಿಲ್‍ನಿಂದ ಖರೀದಿಸಲಾಗಿತ್ತು.
ಇಂದು ಬೆಳಿಗ್ಗೆ 11.30ಕ್ಕೆ ಸಿದ್ಧಗಂಗಾ ಶಾಲಾ ಆವರಣದಿಂದ ಪೂಜೆಗೊಂಡ ವಾಹನದಲ್ಲಿ 11,111 ಕಿಲೋ ಅಕ್ಕಿಯ ಪ್ಯಾಕೆಟ್‍ಗಳನ್ನು ಜೋಡಿಸಲಾಗಿತ್ತು. ತರಕಾರಿ ಮಾರುಕಟ್ಟೆಯಿಂದ ಸ್ವಯಂ ಪ್ರೇರಣೆಯಿಂದ ಪ್ರಭಾಕರ್ ಮತ್ತು ಸುರೇಶ್ ಸಹೋದರರು ಶ್ರೀಮಠಕ್ಕೆ ತರಕಾರಿ ಬುಟ್ಟಿಗಳನ್ನು ತಂದೊಪ್ಪಿಸಿದರು. ಕೆ.ಜಿ.ಎನ್. ಟ್ರಾನ್ಸ್‍ಪೋರ್ಟ್‍ನ ನೂರುಲ್ಲಾ ಖಾನ್‍ರವರು ಈ ವಾಹನವನ್ನು ಶ್ರೀಮಠಕ್ಕೆ ತಲುಪಿಸುವ ಜವಾಬ್ದಾರಿಯನ್ನು ಸೇವಾಭಾವನೆಯಿಂದ ವಹಿಸಿಕೊಂಡರು. ಶ್ರದ್ಧಾಭಕ್ತಿಯ ಈ ಕಾರ್ಯಕ್ಕೆ ಶಾಲೆಯ ಮಕ್ಕಳು, ಶಿಕ್ಷಕರು ಮತ್ತು ಪಾಲಕರು ಹಾಜರಿದ್ದರು.
No comments:
Post a Comment