Monday, January 21, 2019

ನಗರದ ಸಿದ್ಧಗಂಗಾ ಸಂಸ್ಥೆಯಿಂದ ವಿಶ್ವ ಗುರುವಿಗೆ ಅಂತಿಮ ನಮನ


ದಾವಣಗೆರೆ, ಜ 21

ನಡೆದಾಡುವ ದೇವರು, ಕರ್ನಾಟಕ ರತ್ನ, ಕಾಯಕಯೋಗಿ, ತ್ರಿವಿಧ ದಾಸೋಹಮೂರ್ತಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಯವರು ಇಂದು ಮಧ್ಯಾನ್ಹ ಶಿವೈಕ್ಯರಾದ ವಿಷಯ ಸುದ್ಧಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದೊಳಗೆ ಮಂಕು ಕವಿದಂತಾಯಿತು. ಶ್ರೀಗಳವರ ಚೈತನ್ಯ ಜ್ಯೋತಿಯಿಂದ ಬೆಳಗುತ್ತಿದ್ದ ಶಾಲಾ ಕಾಲೇಜು ಮಕ್ಕಳು ದುಃಖಿತರಾದರು. ಪಾಲಕರು, ಶಿಕ್ಷಕರು ಅನಾಥ ಭಾವದಿಂದ ಬಿಕ್ಕಳಿಸಿದರು.

ಶಾಲಾ ಕಾಲೇಜಿನ ಐದು ಸಹಸ್ರಕ್ಕೂ ಹೆಚ್ಚು ಮಕ್ಕಳು, ಬೋಧP,À ಬೋಧಕೇತರ ಸಿಬ್ಬಂದಿವರ್ಗದವರು, ಪಾಲಕರು ಸಂಸ್ಥೆಯ ವೇದಿಕೆಗಳ ಮೇಲಿದ್ದ ಶ್ರೀ ಗಳವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪಾದುಕೆಗಳಿಗೆ ನಮಸ್ಕರಿಸಿ ಅಂತಿಮ ನಮನ ಸಲ್ಲಿಸಿದರು.

ಬೆಳಿಗ್ಗೆಯಿಂದಲೂ ದುಗುಡದ ವಾತಾವರಣದಲ್ಲಿದ್ದ ಎಲ್ಲರೂ ಒಳ್ಳೆಯ ಸುದ್ಧಿಗೆ ಕಾತುರದಿಂದ ಕಾಯುತ್ತಿದ್ದರು. ಬೆಳಿಗ್ಗೆ 10 ಗಂಟೆಗೆ ಪ್ರೌಢಶಾಲೆಯ ಮಕ್ಕಳು ಮತ್ತೊಮ್ಮೆ ಶ್ರೀಗಳವರ ಆರೋಗ್ಯಕ್ಕಾಗಿ ಧ್ಯಾನ ಮುದ್ರೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಶ್ರೀಗಳವರ ಆರೋಗ್ಯ ಉತ್ತಮಗೊಳ್ಳುತ್ತದೆಂಬ ಆಶಾಭಾವನೆ ಪ್ರತಿಯೊಬ್ಬರಲ್ಲೂ ಮನೆ ಮಾಡಿತ್ತು. ಎಲ್ಲರ ನಿರೀಕ್ಷೆ ಹುಸಿಯಾಗುವಂತೆ ಶ್ರೀಗಳವರ ಲಿಂಗೈಕ್ಯ ಸುದ್ಧಿಯಿಂದÀ ನಿರಾಸೆಗೊಂಡರು.

ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ಶ್ರೀಗಳವರು ದಾವಣಗೆರೆಯ ತಮ್ಮ ಸಂಸ್ಥೆಗೆ ಬಂದ ಎಲ್ಲ ಸಂದರ್ಭಗಳನ್ನು ಜ್ಞಾಪಿಸಿಕೊಂಡು ಅವರ ಆಶೀರ್ವಾದಬಲದಿಂದಲೇ ಮುನ್ನಡೆಯುತ್ತಿದ್ದ ಸಂಸ್ಥೆಗೆ ದಾರಿದೀಪವಾಗಿದ್ದ ಬೆಳಕನ್ನು ಕಳೆದುಕೊಂಡಂತಾಗಿದೆ ಎಂದರು.

ಶ್ರೀಗಳವರ ಗೌರವಾರ್ಥ ನಾಳೆ ಶಾಲೆ – ಕಾಲೇಜಿಗೆ ರಜೆ ಘೋಷಿಸಲಾಗಿದೆ. ಶ್ರೀಗಳವರ ಜೊತೆಗಿದ್ದ ಅವಿನಾಭಾವದ  ದ್ಯೋತಕವಾಗಿ ನೂರಾ ಹನ್ನೊಂದು ಅಡಿ ಎತ್ತರದ ಶ್ರೀಗಳವರ ಪ್ರತಿಮೆಯನ್ನು ಹೊಸ ಕ್ಯಾಂಪಸ್‍ನಲ್ಲಿ ನಿರ್ಮಿಸುವ ಯೋಜನೆ ಇದೆ ಎಂದರು.

ತುಮಕೂರಿನ ಮಠದಲ್ಲಿ ಪೂಜ್ಯರ ಅಂತಿಮ ದರ್ಶನ ಮಾಡಲಾಗದ ಭಕ್ತರು ಸಿದ್ಧಗಂಗಾ ಸಂಸ್ಥೆಯ ವೇದಿಕೆಯಲ್ಲಿಟ್ಟಿರುವ ಶ್ರೀಗಳವರ ಪಾದುಕೆಗಳ ದರ್ಶನ ಮಾಡಬಹುದೆಂದು ತಿಳಿಸಿದರು. ಸಂಸ್ಥೆಯ ಸಂಸ್ಥಾಪಕರಾದ ಎಂ. ಎಸ್. ಶಿವಣ್ಣನವರು ತದೇಕಚಿತ್ತದಿಂದ ಶ್ರೀಗಳವರ ಭಾವಚಿತ್ರ ನೋಡುತ್ತಾ ಮೂಕವಾಗಿ ರೋಧಿಸಿದರು. ತಮ್ಮನ್ನು ಸಾಕಿ - ಸಲಹಿದ , ವಿದ್ಯೆ ನೀಡಿದ ಗುರುವಿನ ಅಗಲಿಕೆ ಅವರ ಮುಖಭಾವದಲ್ಲಿ ವ್ಯಕ್ತವಾಗುತ್ತಿತ್ತು.




No comments:

Post a Comment