ದಾವಣಗೆರೆ, ನವೆಂಬರ್ 26

ದಾವಣಗೆರೆ, ನವೆಂಬರ್ 26

ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಇವರು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸಹಯೋಗದಲ್ಲಿ “ಮಕ್ಕಳ ರಂಗ ತರಬೇತಿ ಶಿಬಿರ” ಆಯೋಜಿಸಿದರು. ಈ ಶಿಬಿರದಲ್ಲಿ ಬಿ.ಇ ಪದವೀಧರೆ ಹಾಗೂ ಹೆಗ್ಗೋಡು ರಂಗ ತರಬೇತಿ ಕೇಂದ್ರದ ಡಿಪ್ಲೊಮೋ ಪದವೀಧರೆ ಪ್ರಜ್ಞಾ ನೀಲಗುಂದ ಅವರು ಒಂದು ತಿಂಗಳ ಕಾಲ ಯಶಸ್ವಿಯಾಗಿ ಮಕ್ಕಳಿಗೆ ತರಬೇತಿ ನೀಡಿದ್ದಾರೆ.
ಶಿಬಿರದಲ್ಲಿ ಮೂವತ್ತಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ತರಬೇತಿ ಪಡೆದಿದ್ದಾರೆ. ಶಿಬಿರದಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಬಾ. ಮ. ಬಸವರಾಜಯ್ಯ ಅವರು ರಚಿಸಿರುವ “ಒಂದು ಕಾಡಿನ ಕಥೆ” ನಾಟಕ ಕಲಿತಿದ್ದು
ದಿನಾಂಕ 18-11-2025 ರ ಮಂಗಳವಾರ ಸಂಜೆ 6.30 ಕ್ಕೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಬಯಲು ರಂಗಮಂದಿರದಲ್ಲಿ ಪ್ರದರ್ಶಿಸಲಿದ್ದಾರೆ.
ಶಿಬಿರದ ಸಮಾರೋಪ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾಧಿಕಾರಿಗಳಾದ ಜಿ.ಎಂ. ಗಂಗಾಧರ ಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ನೀಲಮ್ಮನವರು ಶಿಬಿರದ ಸಮಾರೋಪ ಭಾಷಣ ಮಾಡಲಿದ್ದು, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ಅಧ್ಯಕ್ಷತೆ ವಹಿಸಲಿದ್ದಾರೆ. ನಾಟಕ ಅಕಾಡೆಮಿ ಸದಸ್ಯರುಗಳಾದ ರವೀಂದ್ರನಾಥ್ ಸಿರಿವರ, ವಿಶ್ವನಾಥ ರೆಡ್ಡಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪ್ರಜಾವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ, ಪ್ರತಿಮಾ ಸಭಾದ ಪ್ರಧಾನ ಕಾರ್ಯದರ್ಶಿ ಬಿ.ಎನ್, ಮಲ್ಲೇಶ್ ಹಾಗೂ ನೀವು-ನಾವು ತಂಡದ ಮುಖ್ಯಸ್ಥ ರಂಗಕರ್ಮಿ ಎಸ್. ಎಸ್. ಸಿದ್ಧರಾಜು ಗೌರವ ಉಪಸ್ಥಿತರಿರುತ್ತಾರೆ.
ನಾಟಕದ ಕಥಾ ಹಂದರ: ಮನುಷ್ಯರು ದಿನೇ ದಿನೇ ಕಾಡು ನಾಶಮಾಡುತ್ತಾ ವನ್ಯಪ್ರಾಣಿ ಸಂಕುಲಕ್ಕೆ ನೆಲೆ ಇಲ್ಲದಂತೆ ಮಾಡುತ್ತಿರುವುದನ್ನು ಕಂಡು “ಕಾಡು ಪ್ರಾಣಿಗಳು ಮತ್ತು ಊರು ಪ್ರಾಣಿಗಳು” ಒಟ್ಟುಗೂಡಿ ಮನುಷ್ಯರ ವಿರುದ್ಧ ಮುಷ್ಕರ ಮಾಡುತ್ತವೆ. ಕಾಡು ಹಾಗೂ ಪರಿಸರ ನಾಶದಿಂದ ಆಗುವ ವಿನಾಶದ ಬಗ್ಗೆ ಪಾಠ ಹೇಳುತ್ತವೆ….. ಹಾಡು-ನೃತ್ಯಗಳ ಸಂಯೋಜನೆಯೊಂದಿಗೆ ನಾಟಕ ಸಿದ್ಧಪಡಿಸಲಾಗಿದೆ…. ನಾಟಕಾಸಕ್ತರು ಮಕ್ಕಳು ಪ್ರದರ್ಶಿಸುವ ಈ ನಾಟಕ ವೀಕ್ಷಿಸಲು ಮನವಿ ಮಾಡಿದ್ದಾರೆ.
ನಗರದ ಸಿದ್ಧಗಂಗಾ ಶಾಲಾ-ಕಾಲೇಜುಗಳಲ್ಲಿ ಇಂದು ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರಿಕೆಜಿಯ ಪುಟಾಣಿ ಭುವಿತ್ ಕನಕದಾಸರ ವೇಷ ಧರಿಸಿ ಎಲ್ಲರ ಗಮನ ಸೆಳೆದನು. 2 ನೇ ತರಗತಿ ಬಾಲಕ ಜಯಸೂರ್ಯಸ್ವಾಮಿ ಕನಕದಾಸರ ಪ್ರಸಿದ್ಧ “ದಾಸನಾಗು ವಿಶೇಷನಾಗು” ಕೀರ್ತನೆ ಹಾಡಿದನು. 4 ನೇ ತರಗತಿ ಬಾಲಕಿ ಆರಾಧ್ಯ ಕನಕದಾಸರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಎಲ್ಲರಿಗೂ ತಿಳಿಸಿಕೊಟ್ಟಳು. ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿಯಿಂದ ಪೂಜಿಸಲಾಯಿತು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ಮತ್ತು ಶಿಕ್ಷಕರು ಹಾಗೂ ಉಪನ್ಯಾಸಕರು ಆಚರಣೆಯಲ್ಲಿ ಭಾವಗಹಿಸಿದರು.
ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಲಾ-ಕಾಲೇಜಿನ ಮಕ್ಕಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಪಾಲಕರು ಸೇರಿ70ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಸದಾಶಿವ ಹೊಳ್ಳರವರು ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕದ ಹಿರಿಮೆಯನ್ನು ತಿಳಿಸುತ್ತಾ ನಾಡಿಗಾಗಿ ಶ್ರಮಿಸಿದ ದಿಗ್ಗಜರನ್ನು ಸ್ಮರಿಸಿದರು. ಭಾರತ ಜನನಿಯ ತನುಜಾತೆ ಕರ್ನಾಟಕ ಮಾತೆಯ ವೈಭವವನ್ನು ವರ್ಣಿಸಿದರು.
70 ಮಕ್ಕಳಿಂದ “ಹಚ್ಚೇವು ಕನ್ನಡ ದೀಪ” ಗೀತೆಯನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಲಾಯಿತು. ಅಕ್ಕಮಹಾದೇವಿ ಮತ್ತು ಬಸವಣ್ಣನವರ ವಚನಗಳನ್ನು ಸಿ.ಬಿ.ಎಸ್.ಇ ಎಲ್.ಕೆ.ಜಿ. ರಾಘವಿ ಮತ್ತು ಮನಿಷ್ ಗೌಡ ಹೇಳಿದರು. ಒಂದನೇ ತರಗತಿ ರಿಷಿಕ್ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಪರಿಚಯ ಮಾಡಿದರೆ, 2ನೇ ತರಗತಿ ತಾನ್ವಿ ಹರೀಶ್, ನಿದಾ ಫಾತಿಮ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಪರಿಚಯ ಮಾಡಿಕೊಟ್ಟರು. ಎಲ್.ಕೆ.ಜಿ. ರೇವಂತ್ ಆರ್ಯ ಮತ್ತು 8ನೇ ತರಗತಿ ಓಜಸ್ ರಾಜ್ಯೋತ್ಸವದ ಶುಭಾಷಯ ತಿಳಿಸಿದರು. ಪುಣಾಣಿ ಮಕ್ಕಳು ಜೋಗದ ಸಿರಿ ಬೆಳಕಿನಲ್ಲಿ ಹಾಡನ್ನು ಇಂಪಾಗಿ ಹಾಡಿದರು.ಸಿ.ಬಿ.ಎಸ್.ಇ. 6ನೇ ತರಗತಿ ಮಕ್ಕಳು ಬಾರಿಸು ಕನ್ನಡ ಡಿಂಡಿಮ ಮತ್ತು ಕನ್ನಡ ಹೊನ್ನುಡಿ ದೇವಿಯನು ಪೂಜಿಸು ಹಾಡುಗಳಿಗೆ ಆಕರ್ಷಕ ನೃತ್ಯ ಮಾಡಿದರು. ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ವಂದನಾರ್ಪಣೆ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿʼಸೌಜ ಮಾಡಿದರೆ, ಶಿಕ್ಷಕಿ ಆಶಾರವರು ಅಚ್ಚುಕಟ್ಟಾಗಿ ನಿರೂಪಣೆ ನಡೆಸಿಕೊಟ್ಟರು. ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಮತ್ತು ನಿರ್ದೇಶಕ ಡಾ|| ಜಯಂತ್‌ರವರು ಭಾಗವಹಿಸಿದ್ದರು. ಮಕ್ಕಳು ಹಳದಿ ಕೆಂಪು ಬಣ್ಣದ ವಸ್ತ್ರಗಳಲ್ಲಿ ಕಂಗೊಳಿಸಿದರು. ಸಂಗೀತ ಶಿಕ್ಷಕರು, ದೈಹಿಕ ಶಿಕ್ಷಕರು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದುಕೊಟ್ಟರು.