ಉಪಯೋಗಿಸಿ ಬಿಸಾಡುವ ಟಿಶ್ಯೂ ಪೇಪರ್ ನೀವಾಗಬೇಡಿ ಹದಿವಯಸ್ಸಿನ ಬಾಲಕಿಯರಿಗೆ ಡಾ || ಶಶಿಕಲಾ ಕೃಷ್ಣಮೂರ್ತಿಯವರಿಂದ ಎಚ್ಚರಿಕೆ
ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳಲ್ಲಿ ಉಂಟಾಗಿರುವ ಮಾನಸಿಕ ಬದಲಾವಣೆಗಳ ಹಾಗೂ ಹದಿವಯಸ್ಸಿನ ಹೆಣ್ಣು ಮಕ್ಕಳು ತಮ್ಮ ಜೀವನ ಶೈಲಿಯನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದರ ಬಗ್ಗೆ ಎಸ್. ಎಸ್. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (SSIMS) ನ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ|| ಶಶಿಕಲಾ ಕೃಷ್ಣಮೂರ್ತಿಯವರು ಸಿದ್ಧಗಂಗಾ ಸಂಸ್ಥೆಯ 10 ನೇ ತರಗತಿ ಬಾಲಕಿಯರಿಗೆ ಮತ್ತು ತಾಯಂದಿರಿಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.
ಕೋವಿಡ್‌ನಿಂದಾಗಿ ಶಾಲೆಗಳು ಮುಚ್ಚಿದ್ದಾಗ ಮಕ್ಕಳು ಆನ್‌ಲೈನ್ ತರಗತಿಗೆಂದು ಪಡೆದ ಮೊಬೈಲ್‌ಗಳಿಂದಾಗಿ ಹೇಗೆ ಅದಕ್ಕೆ ದಾಸರಾಗಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. 180 ಹೆಣ್ಣು ಮಕ್ಕಳು ಅಷ್ಟೇ ಸಂಖ್ಯೆಯ ತಾಯಂದಿರು ಡಾ|| ಶಶಿಕಲಾ ಮೇಡಂರವರ ಮಾತುಗಳನ್ನು ತದೇಕ ಚಿತ್ತದಿಂದ ಆಲಿಸಿದರು. ಹದಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಲ್ಲಿ ಆಗುವ ದೈಹಿಕ ಬದಲಾವಣೆ, ಶುಚಿತ್ವ, ಋತು ಚಕ್ರ, ಆಹಾರ ಪದ್ಧತಿ, ಯುವಕರತ್ತ ಆಕರ್ಷಣೆ, ಸ್ನೇಹಿತರ ಆಯ್ಕೆಯ ಬಗ್ಗೆ ವಿವೇಚನೆ ಇವುಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು. ತಾಯಂದಿರು ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು. ಲೈಂಗಿಕ ದೌರ್ಜನ್ಯಗಳ ಬಗ್ಗೆ ಅವುಗಳಿಂದಾಗುತ್ತಿರುವ ಅನಾಹುತಗಳನ್ನು ವಿವರಿಸುತ್ತಾ “ಉಪಯೋಗಿಸಿ ಬಿಸಾಡುವ ಟಿಶ್ಯೂ ಪೇಪರ್ ನೀವಾಗಬೇಡಿ” ಎಂದು ಎಚ್ಚರಿಕೆ ನೀಡಿದರು.
ಪ್ರಾರಂಭದಲ್ಲಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ 10 ನೇ ತರಗತಿಯ ಬಾಲಕಿಯರು ಪೂಜಾ ಸಾಮಗ್ರಿಗಳೊಂದಿಗೆ ತಮ್ಮ ತಮ್ಮ ತಾಯಂದಿರಿಗೆ ಪಾದ ಪೂಜೆ ನೆರವೇರಿಸಿ ಪುಷ್ಪವೃಷ್ಠಿಗೈದರು. ಹೆತ್ತಮ್ಮನಿಗೆ ಹೆಮ್ಮೆ ತರುವ ಮಗಳಾಗುವೆನೆಂದು ವಾಗ್ದಾನ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ, ಶಿಕ್ಷಕಿಯರಾದ ಪ್ರತಿಭಾ, ಝೀನತ್, ರಮಾದೇವಿ, ಅಂಬುಜಾಕ್ಷಿ ಮತ್ತು ಭೂಮಿಕ ಇವರಿದ್ದರು. ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿತ್ತೆಂಬುದು ಎಲ್ಲರ ಅಭಿಪ್ರಾಯವಾಗಿತ್ತು.
No comments:
Post a Comment