ಸ್ಕೌಟ್ಸ್ – ಗೈಡ್ಸ್ ಸಿದ್ಧಗಂಗಾ ಸಂಸ್ಥೆಯಿಂದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ದಾವಣಗೆರೆಯ ಗಾಜಿನ ಅರಮನೆ
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಮಟ್ಟದ ಪ್ರಪ್ರಥಮ ಸಾಂಸ್ಕೃತಿಕ ಜಾಂಬೂರಿ ನಡೆಯುತ್ತಿದೆ. ಡಿಸೆಂಬರ್ 21 ರಿಂದ 27 ರವರೆಗೆ ದೇಶ –ವಿದೇಶದ ಮಕ್ಕಳ ಪ್ರತಿಭೆ – ಸಾಹಸ ಪ್ರದರ್ಶನ ಅನಾವರಣಗೊಳ್ಳಲಿದೆ. ರಾಷ್ಟ್ರದ ವಿವಿಧ ರಾಜ್ಯಗಳ ಮತ್ತು 10 ವಿದೇಶಿ ರಾಷ್ಟ್ರಗಳ 50 ಸಾವಿರ ಸ್ಕೌಟ್ಸ್ – ಗೈಡ್ಸ, ರೇಂಜರ್ಸ್, ರೋವರ್ಸ್, 10 ಸಾವಿರ ದಳನಾಯಕರು ಮತ್ತು 3 ಸಾವಿರ ಸ್ವಯಂ ಸೇವಕರ ಬೃಹತ್ ಮೇಳ ಕರ್ನಾಟಕದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ದಾವಣಗೆರೆ ಜಿಲ್ಲೆಯಿಂದ 920 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ.
ಈ ಅವಿಸ್ಮರಣೀಯ ಜಾಂಬೂರಿಗೆ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ 50 ಸ್ಕೌಟ್ಸ್ 47 ಗೈಡ್ಸ್‌ಗಳು, 5 ತರಬೇತಿದಾರರು ಮತ್ತು 4 ಸ್ವಯಂ ಸೇವಕರು ಎರಡು ಬಸ್‌ಗಳಲ್ಲಿ ತೆರಳಿದ್ದಾರೆ. ದಾವಣಗೆರೆ ಜಿಲ್ಲೆಯ ಪ್ರತಿಷ್ಠಿತ ಗಾಜಿನ ಅರಮನೆಯ ಪ್ರತಿರೂಪವನ್ನು ಜಾಂಬೂರಿಯ ಕಲಾ ಪ್ರದರ್ಶನದಲ್ಲಿ ಸ್ಥಾಪಿಸಿದ್ದಾರೆ. ರಾಷ್ಟ್ರದ ಅತಿ ದೊಡ್ಡ ದಾವಣಗೆರೆಯ ಗಾಜಿನ ಮನೆಯ ವಿಶಿಷ್ಠತೆಯನ್ನು ಪ್ರೇಕ್ಷಕರಿಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ತಿಳಿಸಿಕೊಡಲು ಮಕ್ಕಳು ಸಿದ್ಧರಾಗಿದ್ದಾರೆ. ಇದಲ್ಲದೆ ಹಿಂದೂ ಸಂಪ್ರದಾಯದ ವಿವಾಹ ಪದ್ಧತಿಯನ್ನು ಸಾಂಸ್ಕೃತಿಕ ವೇದಿಕೆಯಲ್ಲಿ 80 ಕ್ಕೂ ಹೆಚ್ಚು ಮಕ್ಕಳು ಅಭಿನಯಿಸಲಿದ್ದಾರೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಮಟ್ಟದ ಬೃಹತ್ ಜಾಂಬೂರಿ ಮೇಳದಲ್ಲಿ ದಾವಣಗೆರೆಯ ಅನುರೂಪ – ಸುಂದರ ಗಾಜಿನ ಅರಮನೆಯನ್ನು ಸಿದ್ಧಗಂಗಾ ಸ್ಕೌಟ್ – ಗೈಡ್ ಮಕ್ಕಳು ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ. ಶಾಲೆಯ ಚಿತ್ರಕಲಾ ಶಿಕ್ಷಕರಾದ ಯೋಗಿಪ್ರಸಾದ್, ರಾಜೇಶ್, ರಾಜಶೇಖರ್, ಸ್ವಾತಿ, ಹೀನಾ ಕೌಸರ್ ಮತ್ತು ಪ್ರಿಯಾಂಕರವರ ಪರಿಶ್ರಮದಿಂದ ಈ ಸುಂದರ ಆಕೃತಿ ಮೂಡಿ ಬಂದಿದೆ.
No comments:
Post a Comment