Saturday, December 31, 2022

 ಮಕ್ಕಳ ಕೌಶಲ್ಯದ ಅನಾವರಣ

ಸಿದ್ಧಗಂಗಾದಲ್ಲಿ ನಡೆದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ.






ನಗರದ ಶ್ರೀ  ಸಿದ್ಧಗಂಗಾ ಶಾಲೆಯ 3 ರಿಂದ 10 ನೇ ತರಗತಿಯ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡರು. ನೂರಾರು ಮಾದರಿಗಳು, ಅದಕ್ಕೆ ಸಂಬಂಧಪಟ್ಟ ವಿವರಣೆ, ಮಕ್ಕಳ ವಿಜ್ಞಾನಾಸಕ್ತಿ ಮತ್ತು ಕಲಾ ಪ್ರೇಮಕ್ಕೆ ಸಾಕ್ಷಿಯಾದವು. ಸುಂದರವಾಗಿ ನಿರ್ಮಿತವಾದ ವೇದಿಕೆಯಲ್ಲಿ ಹಸಿರು ಸಸ್ಯಗಳಿಗೆ ನೀರೆರೆಯುವ ಮೂಲಕ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ'ಸೌಜ ರವರು ಮತ್ತು ತೀರ್ಪುಗಾರರಾಗಿ ಆಗಮಿಸಿದ್ದ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳನ್ನು ಶ್ಲಾಘಿಸಿದರು. ತಮ್ಮ ಮಕ್ಕಳ ‘ವಸ್ತು ಪ್ರದರ್ಶನ’ ವೀಕ್ಷಿಸಲು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಸ್ಮಾರ್ಟ್ ರೈಲ್ವೆ ಸ್ಟೇಷನ್, ಕಾರ್ಗಿಲ್ ಯುದ್ಧ , ಚನ್ನಕೇಶವ ದೇವಸ್ಥಾನ, ಮಣ್ಣಿನ ಮತ್ತು ಶಿಲೆಗಳ ಮಾದರಿಗಳು, ವಿಧಾನಸೌಧ, ಆದಿಮಾನವನ ಜೀವನಶೈಲಿ ಹೀಗೆ ನೂರಾರು ಸಮಾಜಶಾಸ್ತ್ರಕ್ಕೆ, ಕಲೆಗೆ ಸಂಬಂಧಪಟ್ಟ ಮಾದರಿಗಳು ಒಂದಕ್ಕಿಂತ  ಒಂದು ಆಕರ್ಷಕವಾಗಿ ಪ್ರದರ್ಶನಗೊಂಡವು. ಮಕ್ಕಳ ಕ್ರಿಯಾಶೀಲತೆಗೆ ವಿಸ್ಮಯ ಪಡುವಂತಾಯಿತು. ವಿಜ್ಞಾನ ಮಾದರಿಗಳು ಭೌತಶಾಸ್ತ್ರದ ಅನೇಕ ತತ್ವಗಳ ಮೇಲೆ ಆಧಾರಿತವಾಗಿದ್ದು, ರಸಾಯನಶಾಸ್ತ್ರ ವಿಭಾಗದಲ್ಲಿ ಮಕ್ಕಳು ರಾಸಾಯನಿಕ ಕ್ರಿಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಜೀವ ವೈವಿಧ್ಯಗಳ ಮಾದರಿಗಳು, ಸಸ್ಯಗಳು, ಜಲಚಕ್ರ, ನೀರಿನ ಮರುಬಳಕೆಯ ಮಾದರಿಗಳು ಜೀವಶಾಸ್ತ್ರ ವಿಭಾಗದಲ್ಲಿ ಗಮನ ಸೆಳೆದವು. ಹೊಲಗದ್ದೆಗಳಲ್ಲಿ ಪಶು-ಪಕ್ಷಿಗಳನ್ನು ಓಡಿಸಲು ದೊಡ್ಡ ಶಬ್ದ ಬರುವಂತೆ ಮಾಡಿದ ಮಂಕಿಗನ್ ಮಾದರಿಯ ಸರಳ ಯಂತ್ರದ ಬಗ್ಗೆ ಎಲ್ಲರೂ ಆಕರ್ಷಿತರಾದರು. ಇತ್ತೀಚಿನ ದಿನಗಳಲ್ಲಿ ಊರೊಳಗೆ ಬರುತ್ತಿರುವ ಮುಷ್ಯಾಗಳ ಹಾವಳಿ ತಡೆಯಲು ಇದು ಸೂಕ್ತವಾಗಿದೆ ಎಂಬ ಅಭಿಪ್ರಾಯ ಎಲ್ಲರಲ್ಲಿ ಮೂಡಿತು. ಪ್ಲಾಸ್ಟಿಕ್ ಪೈಪ್‌ನಿಂದ ಮಾಡಿದ ಬಹಳ ಹಗುರವಾದ ಈ ಮಂಕಿಗನ್ ಬಹು ಉಪಯೋಗಿಯಾಗಿತ್ತು. ಪ್ರಾಣಿ ಸಂಗ್ರಹಾಲಯ, ಗ್ರಾಮರ್ ಟ್ರೀ  , ಹೈಡ್ರಾಲಿಕ್ ಬ್ರಿಡ್ಜ್ , ರಾಕೆಟ್ ಉಡಾವಣೆ, ಸೌರವ್ಯೂಹ, ಕೆಂಪುಕೋಟೆ ಇತ್ಯಾದಿ ಅನೇಕ ಮಾದರಿಗಳಿದ್ದವು.

ಕೋವಿಡ್‌ನಿಂದಾಗಿ ಮಕ್ಕಳು ಎರಡು ವರ್ಷ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಸಂಸ್ಥೆಯ ಕಾರ್ಯದರ್ಶಿ ಹೇಮಂತ್‌ರವರ ಮಾರ್ಗದರ್ಶನದಲ್ಲಿ, ಶಿಕ್ಷಕರ ಮತ್ತು ಪಾಲಕರ ಸಹಯೋಗದಿಂದ ಕಲೆ ಮತ್ತು ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ಮಕ್ಕಳ ಆಸಕ್ತಿ ಅನಾವರಣಗೊಂಡಿತು. 300 ಕ್ಕೂ ಹೆಚ್ಚು ವಿವಿಧ ಮಾದರಿಗಳು ಪ್ರದರ್ಶಿತಗೊಂಡಿದ್ದವು.

No comments:

Post a Comment