Sunday, November 1, 2026

ರಾಜ್ಯೋತ್ಸವ ಪಥ ಸಂಚಲನ ಸಿದ್ಧಗಂಗಾ ಶಾಲೆಗೆ ಪ್ರಥಮ

 71ನೇ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಗರದ ಕ್ರೀಡಾಂಗಣದಲ್ಲಿ ನಡೆದ ಪಥಸಂಚಲನದಲ್ಲಿ ಶಾಲಾ ವಿಭಾಗದಿಂದ ಸಿದ್ಧಗಂಗಾ ಪ್ರೌಢಶಾಲೆಯ ಮಕ್ಕಳು ಪ್ರಥಮ ಬಹುಮಾನ ಪಡೆದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.‌ಎಸ್. ಮಲ್ಲಿಕಾರ್ಜುನ್‌ರವರಿಂದ ಪಾರಿತೋಷಕ ಪಡೆದರು. ಉತ್ತಮ ಸಮವಸ್ತ್ರಕ್ಕೆ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು. ದೈಹಿಕ ಶಿಕ್ಷಕರಾದ ಲಿಂಗರಾಜು, ರಘು ಮತ್ತು ಶ್ರೀನಿವಾಸ ಇವರ ನೇತೃತ್ವದಲ್ಲಿ ಪಥ ಸಂಚಲನ ಮುನ್ನಡೆಸಿದ ದೀಕ್ಷಾ. ಆರ್‌. ತಂಡದವರು ಅತ್ಯುತ್ತಮವಾದ ಪ್ರದರ್ಶನ ನೀಡಿದರು. ಸಂಸ್ಥೆಯ ಆಡಳಿತ ಮಂಡಳಿ, ಬೋಧಕ ವರ್ಗದವರು ಮಕ್ಕಳನ್ನು ಅಭಿನಂದಿಸಿದ್ದಾರೆ.



ಸಿದ್ಧಗಂಗಾ ಸಂಸ್ಥೆಯಲ್ಲಿ ಸಂಭ್ರಮದ ೭೧ ನೇ ರಾಜ್ಯೋತ್ಸವ

 ಎಲ್ಲಿ ನೋಡಿದರಲ್ಲಿ ಹಳದಿ ಕೆಂಪು ಬಾವುಟಗಳು, ಶಿಕ್ಷಕಿಯರು ಧರಿಸಿದ್ದ ಹಳದಿ ಕೆಂಪು ಸೀರೆಗಳು, ವೇದಿಕೆಯಲ್ಲಿ ಹಳದಿ ಕೆಂಪು ವರ್ಣಗಳ ಬಲೂನಿನ ಕಮಾನುಗಳು, ತೋರಣಗಳು ನಾಡಹಬ್ಬದ ಸಂಭ್ರಮಕ್ಕೆ ಕಳೆ ನೀಡಿತು. ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಈ ಸುಂದರ ದೃಶ್ಯಾವಳಿಗಳಿಗೆ ಶಾಲಾ – ಕಾಲೇಜಿನ ಮಕ್ಕಳು, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಪಾಲಕರು ಸಾಕ್ಷಿಯಾದರು. ೭೧ ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣವನ್ನು ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ ವಿಜೇತೆ ಚಂಪಾರವರು ನೆರವೇರಿಸಿ ಸಭಿಕರಿಗೆ ರಾಜ್ಯೋತ್ಸವ ಸಂದೇಶ ನೀಡಿದರು. ಕರ್ನಾಟಕದ ಸುಂದರ ಭೂಪಟವನ್ನು ಹಿರಿಯ ಕನ್ನಡ ಶಿಕ್ಷಕ ಮಲ್ಲಿಕಾರ್ಜುನಯ್ಯನವರು ಅನಾವರಣಗೊಳಿಸಿದರು. ಹಚ್ಚೇವು ಕನ್ನಡದ ದೀಪ ಗೀತೆಯೊಂದಿಗೆ ಪ್ರಾರಂಭವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ೭ನೇ ತರಗತಿ ನಮನ ಕನ್ನಡ ಏಕೀಕರಣದ ಬಗ್ಗೆ ಸುದೀರ್ಘ ವಿವರಣೆ ನೀಡಿದಳು. ೪ನೇ ತರಗತಿ ಮಕ್ಕಳು ವಚನ ಸಾಹಿತ್ಯ ವೈಭವವನ್ನು ವಚನಕಾರರ ಪಾತ್ರಧಾರಿಗಳಾದ ಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ಅಲ್ಲಮ ಪ್ರಭು, ಅಕ್ಕ ಮಹಾದೇವಿ, ಮುಕ್ತಾಯಕ್ಕನವರ ವಚನಗಳನ್ನು ಹಾಡಿದರೆ ಅದಕ್ಕೆ ತಕ್ಕ ಭಾವಾರ್ಥವನ್ನು ಮಕ್ಕಳು ವಿವರಿಸಿದರು. ಕರ್ನಾಟಕದ ಪ್ರಾತಃಸ್ಮರಣೀಯರಾದ ಸ್ವಾಮಿ ವಿವೇಕಾನಂದ, ಕಿತ್ತೂರು ಚೆನ್ನಮ್ಮ, ಮದಕರಿ ನಾಯಕ, ಸಂಗೊಳ್ಳಿರಾಯಣ್ಣ, ಒನಕೆ ಓಬವ್ವ, ಅಂಬೇಡ್ಕರ್‌, ಸಾಲು ಮರದ ತಿಮ್ಮಕ್ಕ ಪಾತ್ರಧಾರಿಗಳು ಸುಂದರವಾಗಿ ರಾåಂಪ್ ವಾಕ್‌ ಮಾಡಿದರು. ೧೦ನೇ ತರಗತಿಯ ನವ್ಯ ಮತ್ತು ಶಿಕ್ಷಕ ಮಲ್ಲಿಕಾರ್ಜುನರವರು ಕನ್ನಡ ರಾಜ್ಯೋತ್ಸವದ ಮಹತ್ವ ತಿಳಿಸಿದರು. ಶಿಕ್ಷಕ ಗುರುಮೂರ್ತಿಯವರ ಮಾರ್ಗದರ್ಶನದಲ್ಲಿ ಜೈಮಿನಿ ಭಾರತ ಪಠಿಸಿದ ಮನಾಲ್‌ ಜಾನ್‌, ಯಶಸ್ವಿ, ಶ್ರೀನಿಧಿ ಗಮನ ಸೆಳೆದರು. ೮ನೇ ತರಗತಿ ಸಿರಿ ಹಳೆಗನ್ನಡ ಪದ್ಯ ಪಠಿಸಿ ಭಾವಾರ್ಥ ತಿಳಿಸಿದರೆ, ೩ನೇ ತರಗತಿ, ೬ನೇ ಮತ್ತು ೮ನೇ ತರಗತಿ ಮಕ್ಕಳು ಕನ್ನಡ ಹಾಡುಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು. ಶಿಕ್ಷಕಿಯರೆಲ್ಲರೂ ಸೇರಿ ಹಾಡಿದ ವಿಶ್ವವಿನೂತನ ಸಾಮೂಹಿಕ ಗೀತೆ ಗಮನ ಸೆಳೆಯುವಂತಿತ್ತು. ವೇದಿಕೆ ನಿರ್ವಹಣೆಯನ್ನು ಶಿಕ್ಷಕಿ ಆಶಾ ಮತ್ತು ಮೀನಾಕ್ಷಿಯವರು ಮಾಡಿದರು. ವೇದಿಕೆಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ, ಸಂಸ್ಥೆಯ ಕಾರ್ಯದರ್ಶಿ ಹೇಮಂತ್‌, ನಿರ್ದೇಶಕರಾದ ಡಾ. ಜಯಂತ್‌, ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ ಮುಖ್ಯ ಶಿಕ್ಷಕಿ ರೇಖಾರಾಣಿ ಉಪಸ್ಥಿತರಿದ್ದರು.