Saturday, September 7, 2024

ಸಿದ್ಧಗಂಗಾ ವಿದ್ಯಾಸಂಸ್ಥೆ ಯಲ್ಲಿ ಪರಿಸರ ಸ್ನೇಹಿ 12 ಅಡಿಯ ಪೇಪರ್ ಗಣೇಶ


ದಾವಣಗೆರೆ ಸೆ.7

ಬಾಂಧವ್ಯ ಬೆಸೆಯುವ ಗಣೇಶ ಚತುರ್ಥಿಯು, ಭಕ್ತಾದಿಗಳು ವಿವಿಧ ಆಕಾರದ ಗಣಪಗಳನ್ನು ಭಕ್ತಿಯಿಂದ ಬರಮಾಡಿಕೊಂಡು ಪೂಜಿಸುವ ಭಾವೈಕ್ಯತೆ ಮೆರೆಯುವ ಹಬ್ಬವಾಗಿದೆ.

ನಗರದ ಪ್ರತಿಷ್ಠಿತ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಪರಿಸರ ಸ್ನೇಹಿ 12 ಅಡಿ ಎತ್ತರದ ಪೇಪರ್ ಗಣೇಶನ ಭವ್ಯ ಆಕೃತಿ ಎಲ್ಲರ ಗಮನ ಸೆಳೆಯುತ್ತಿದೆ.

ವಿದ್ಯಾರ್ಥಿಗಳ ಸಹಾಯದಿಂದ ಶಾಲೆಯ ಚಿತ್ರಕಲಾ ಶಿಕ್ಷಕರಾದ ಪ್ರಶಾಂತ್ ಕುಮಾರ್, ಸ್ವಾತಿ, ಹೀನ ಕೌಸರ್, ಮುಜಸ್ಸಿಂ, ಸಹನಾ ಹಾಗೂ ಶಾಲಾ ಮಕ್ಕಳ ಕೈ ಚಳಕದಲ್ಲಿ ಮೂಡಿಬಂದಿರುವ ಈ ಗಣಪನನ್ನು ಸಂಪೂರ್ಣವಾಗಿ ಕಾಗದ, ಮೈದಾ ಅಂಟು ಮತ್ತು ಇದ್ದಿಲಿನ ಪುಡಿಯಿಂದ ನಿರ್ಮಿಸಲಾಗಿದೆ. 12 ಅಡಿ ಎತ್ತರದ ಗಣಪ ಕೇವಲ 20kg ತೂಗುತ್ತಿದ್ದು ,4 ಮಕ್ಕಳು ಸುಲಭವಾಗಿ ಎತ್ತಿ ಇಳಿಸಬಹುದಾಗಿದೆ.

ಗಣಪನನ್ನು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಗರದ ಗಾಂಧಿ ಸರ್ಕಲ್ಲಿಗೆ ಕರೆದೊಯ್ದು ಅಲ್ಲಿಂದ ಸುಂದರವಾದ ರಥದಲ್ಲಿ ಕೂರಿಸಿ ಅಶೋಕ ರಸ್ತೆ, ಜಯದೇವ ಸರ್ಕಲ್, ಅಂಬೇಡ್ಕರ್ ಸರ್ಕಲ್, ವಿದ್ಯಾರ್ಥಿ ಭವನ ಸರ್ಕಲ್ ಮೂಲಕ ತಂದು ಶಾಲೆಯ ಸುಂದರ ಮಂಟಪದಲ್ಲಿ ಪ್ರತಿಷ್ಠಾಪಿಸಿದರು. 
ಸಾಂಪ್ರದಾಯಿಕ ಉಡುಗೆ ತೊಟ್ಟ ಬಾಲಕಿಯರು ಮೆರವಣಿಗೆಯುದ್ದಕ್ಕೂ ಗಣಪನ ಭಕ್ತಿ ಪ್ರಧಾನ ಗೀತೆಗಳಿಗೆ ಹೆಜ್ಜೆ ಹಾಕುತ್ತಾ ನಡುನಡುವೆ ಘೋಷಣೆ ಕೂಗಿದರು.
ಪಂಚೆ ಷರ್ಟ್ ಧರಿಸಿದ ಬಾಲಕರು ರಥ ಎಳೆಯುತ್ತಾ ಟ್ರಾಫಿಕ್ ಸಮಸ್ಯೆಯಾಗದಂತೆ ಜಾಗರೂಕತೆಯಿಂದ ವರ್ತಿಸಿದ್ದು ಸಾರ್ವಜನಿ ಕರ ಮೆಚ್ಚುಗೆಗೆ ಪಾತ್ರವಾಯಿತು.
ದಾರಿಯುದ್ದಕ್ಕೂ ಸಾರ್ವಜನಿಕರು ಈ ಬೃಹತ್ ಗಣಪತಿಗೆ ಕೈ ಮುಗಿದು ಭಕ್ತಿ ವ್ಯಕ್ತಪಡಿಸಿದರು.
ಮೆರವಣಿಗೆಯ ನೇತೃತ್ವ ವಹಿಸಿದ ಸಂಸ್ಥೆಯ ನಿರ್ದೇಶಕರಾದ ಡಾ. ಜಯಂತ್ ಹಾಗೂ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದ ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್. ಹೇಮಂತ್ ರವರು ಪೂರ್ಣ ಕಾರ್ಯಕ್ರಮವನ್ನು ಭಕ್ತಿಯಿಂದ ನಡೆಸಿಕೊಟ್ಟರು.
ಅನಂತ ಚತುರ್ದಶಿಯಂದು ವಿಸರ್ಜಿತವಾಗುವ ಈ ವಿಶಿಷ್ಠ ಬೃಹತ್ ಗಣಪತಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.ಭಕ್ತಾದಿಗಳು ಬಂದು ಗಣೇಶನ ದರ್ಶನ ಪಡೆಯಬಹುದು ಎಂದು ಸಂಸ್ಥೆಯ ಮುಖ್ಯಸ್ಥೆ ಡಾ ಜಸ್ಟಿನ್ ಡಿ ಸೌಜ ರವರು ತಿಳಿಸಿದರು.






No comments:

Post a Comment