Sunday, September 15, 2024

ಜಿಲ್ಲಾಡಳಿತದ ಸಹಯೋಗದಲ್ಲಿ ಸಿದ್ಧಗಂಗಾ ಶಾಲೆ ಮಕ್ಕಳಿಂದ ಐತಿಹಾಸಿಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

 

















ದಾವಣಗೆರೆ. ಸೆ.15
ರಾಜ್ಯದ ಬೀದರ್ ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ರಚಿಸಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ದಾವಣಗೆರೆ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ , ಶಿಕ್ಷಣ ಮತ್ತಿತರ ಇಲಾಖೆಗಳು , ಸಾರ್ವಜನಿಕರು,ಸಂಘ -  ಸಂಸ್ಥೆಗಳು ಜಿಲ್ಲೆಯ ಹರಿಹರ ನಗರ ಗಾಂಧಿ ಮೈದಾನದಲ್ಲಿ ಈ ಆಚರಣೆಯನ್ನು ವಿನೂತನ ಶೈಲಿಯಲ್ಲಿ ಆಚರಿಸಿದರು.

ದಾವಣಗೆರೆ ನಗರದ ಸಿದ್ಧಗಂಗಾ ಶಾಲೆಯ ಸುಮಾರು 1250 ಮಕ್ಕಳು ಸಂವಿಧಾನ ಪೀಠಿಕೆಯ ಪ್ರಮುಖ ಅಂಶಗಳಾದ ಡೆಮಾಕ್ರಸಿ, ಸೋಶಿಯಲಿಸ್ಟಿಕ್, ಸೆಕ್ಯುಲರ್, ಡೆಮಾಕ್ರಟಿಕ್, ರಿಪಬ್ಲಿಕ್, ಜಸ್ಟಿಸ್, ಲಿಬರ್ಟಿ, ಈಕ್ವಾಲಿಟಿ, ಫೆಟರ್ನಿಟಿ ಪದಗಳನ್ನು ಇಂಗ್ಲಿಷ್ ಅಕ್ಷರದಲ್ಲಿ ಮೂಡಿಸಿ ಎಲ್ಲರನ್ನು ಚಕಿತಗೊಳಿಸಿದರು.ಮಕ್ಕಳು ಪ್ರಜಾಪ್ರಭುತ್ವದ ಮಹತ್ವ ಪ್ರದರ್ಶಿಸುವ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯ ಶಪಥವನ್ನು ಹರಿಹರದ ಶಾಸಕರಾದ ಬಿ. ಪಿ ಹರೀಶ್ ರವರು ಭೋದಿಸಿದರು. ದಾವಣಗೆರೆ ಕ್ಷೇತ್ರದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ಪ್ರಜಾಪ್ರಭುತ್ವದ ಮಹತ್ವ ವಿವರಿಸಿ ಎಲ್ಲರ ಸಹಭಾಗಿತ್ವಕ್ಕೆ ವಂದಿಸಿದರು.ಅಲ್ಲದೆ ತಾವು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಸಂಭ್ರಮಿಸಿದರು. ಸಸಿ ನೆಟ್ಟು ನೀರೆರೆದು ದಿನದ ಸ್ಮರಣೆಯನ್ನು ಶಾಶ್ವತಗೊಳಿಸಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್. ಬಿ . ಇಟ್ನಾಳ್ ರವರು ತಮ್ಮ ಭಾಷಣದಲ್ಲಿ ವಿನೂತನ ಆಚರಣೆಯನ್ನು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಕಾರ್ಯಕ್ರಮ ಮುಗಿದ ನಂತರ ಶಾಲೆಯ ಆವರಣದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Saturday, September 7, 2024

ಸಿದ್ಧಗಂಗಾ ವಿದ್ಯಾಸಂಸ್ಥೆ ಯಲ್ಲಿ ಪರಿಸರ ಸ್ನೇಹಿ 12 ಅಡಿಯ ಪೇಪರ್ ಗಣೇಶ


ದಾವಣಗೆರೆ ಸೆ.7

ಬಾಂಧವ್ಯ ಬೆಸೆಯುವ ಗಣೇಶ ಚತುರ್ಥಿಯು, ಭಕ್ತಾದಿಗಳು ವಿವಿಧ ಆಕಾರದ ಗಣಪಗಳನ್ನು ಭಕ್ತಿಯಿಂದ ಬರಮಾಡಿಕೊಂಡು ಪೂಜಿಸುವ ಭಾವೈಕ್ಯತೆ ಮೆರೆಯುವ ಹಬ್ಬವಾಗಿದೆ.

ನಗರದ ಪ್ರತಿಷ್ಠಿತ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಪರಿಸರ ಸ್ನೇಹಿ 12 ಅಡಿ ಎತ್ತರದ ಪೇಪರ್ ಗಣೇಶನ ಭವ್ಯ ಆಕೃತಿ ಎಲ್ಲರ ಗಮನ ಸೆಳೆಯುತ್ತಿದೆ.

ವಿದ್ಯಾರ್ಥಿಗಳ ಸಹಾಯದಿಂದ ಶಾಲೆಯ ಚಿತ್ರಕಲಾ ಶಿಕ್ಷಕರಾದ ಪ್ರಶಾಂತ್ ಕುಮಾರ್, ಸ್ವಾತಿ, ಹೀನ ಕೌಸರ್, ಮುಜಸ್ಸಿಂ, ಸಹನಾ ಹಾಗೂ ಶಾಲಾ ಮಕ್ಕಳ ಕೈ ಚಳಕದಲ್ಲಿ ಮೂಡಿಬಂದಿರುವ ಈ ಗಣಪನನ್ನು ಸಂಪೂರ್ಣವಾಗಿ ಕಾಗದ, ಮೈದಾ ಅಂಟು ಮತ್ತು ಇದ್ದಿಲಿನ ಪುಡಿಯಿಂದ ನಿರ್ಮಿಸಲಾಗಿದೆ. 12 ಅಡಿ ಎತ್ತರದ ಗಣಪ ಕೇವಲ 20kg ತೂಗುತ್ತಿದ್ದು ,4 ಮಕ್ಕಳು ಸುಲಭವಾಗಿ ಎತ್ತಿ ಇಳಿಸಬಹುದಾಗಿದೆ.

ಗಣಪನನ್ನು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಗರದ ಗಾಂಧಿ ಸರ್ಕಲ್ಲಿಗೆ ಕರೆದೊಯ್ದು ಅಲ್ಲಿಂದ ಸುಂದರವಾದ ರಥದಲ್ಲಿ ಕೂರಿಸಿ ಅಶೋಕ ರಸ್ತೆ, ಜಯದೇವ ಸರ್ಕಲ್, ಅಂಬೇಡ್ಕರ್ ಸರ್ಕಲ್, ವಿದ್ಯಾರ್ಥಿ ಭವನ ಸರ್ಕಲ್ ಮೂಲಕ ತಂದು ಶಾಲೆಯ ಸುಂದರ ಮಂಟಪದಲ್ಲಿ ಪ್ರತಿಷ್ಠಾಪಿಸಿದರು. 
ಸಾಂಪ್ರದಾಯಿಕ ಉಡುಗೆ ತೊಟ್ಟ ಬಾಲಕಿಯರು ಮೆರವಣಿಗೆಯುದ್ದಕ್ಕೂ ಗಣಪನ ಭಕ್ತಿ ಪ್ರಧಾನ ಗೀತೆಗಳಿಗೆ ಹೆಜ್ಜೆ ಹಾಕುತ್ತಾ ನಡುನಡುವೆ ಘೋಷಣೆ ಕೂಗಿದರು.
ಪಂಚೆ ಷರ್ಟ್ ಧರಿಸಿದ ಬಾಲಕರು ರಥ ಎಳೆಯುತ್ತಾ ಟ್ರಾಫಿಕ್ ಸಮಸ್ಯೆಯಾಗದಂತೆ ಜಾಗರೂಕತೆಯಿಂದ ವರ್ತಿಸಿದ್ದು ಸಾರ್ವಜನಿ ಕರ ಮೆಚ್ಚುಗೆಗೆ ಪಾತ್ರವಾಯಿತು.
ದಾರಿಯುದ್ದಕ್ಕೂ ಸಾರ್ವಜನಿಕರು ಈ ಬೃಹತ್ ಗಣಪತಿಗೆ ಕೈ ಮುಗಿದು ಭಕ್ತಿ ವ್ಯಕ್ತಪಡಿಸಿದರು.
ಮೆರವಣಿಗೆಯ ನೇತೃತ್ವ ವಹಿಸಿದ ಸಂಸ್ಥೆಯ ನಿರ್ದೇಶಕರಾದ ಡಾ. ಜಯಂತ್ ಹಾಗೂ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದ ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್. ಹೇಮಂತ್ ರವರು ಪೂರ್ಣ ಕಾರ್ಯಕ್ರಮವನ್ನು ಭಕ್ತಿಯಿಂದ ನಡೆಸಿಕೊಟ್ಟರು.
ಅನಂತ ಚತುರ್ದಶಿಯಂದು ವಿಸರ್ಜಿತವಾಗುವ ಈ ವಿಶಿಷ್ಠ ಬೃಹತ್ ಗಣಪತಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.ಭಕ್ತಾದಿಗಳು ಬಂದು ಗಣೇಶನ ದರ್ಶನ ಪಡೆಯಬಹುದು ಎಂದು ಸಂಸ್ಥೆಯ ಮುಖ್ಯಸ್ಥೆ ಡಾ ಜಸ್ಟಿನ್ ಡಿ ಸೌಜ ರವರು ತಿಳಿಸಿದರು.