Monday, April 17, 2023

ಸಿದ್ಧಗಂಗಾ ಎಂ. ಎಸ್.‌ ಎಸ್ ಕ್ವಿಜ್‌ ಅಭೂತಪೂರ್ವ ಯಶಸ್ಸು – ಶಿಸ್ತಿಗೆ ಮನಸೋತ ಪಾಲಕರು


ಪ್ರತಿ ವರ್ಷದಂತೆ ಈ ವರ್ಷವೂ ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ಎಂ. ಎಸ್.‌ ಎಸ್ ಕ್ವಿಜ್‌ ಅಭೂತ ಪೂರ್ವ ಯಶಸ್ಸು ಕಂಡಿತು. ಶಿಕ್ಷಣ ಶಿಲ್ಪಿ ಡಾ. ಎಂ. ಎಸ್.‌ ಶಿವಣ್ಣನವರ ಗೌರವಾರ್ಥ ಕಳೆದ 9 ವರ್ಷಗಳಿಂದ ನಡೆಸುತ್ತಿರುವ ಅತ್ಯಂತ ಶಿಸ್ತಿನ ಪಾರದರ್ಶಕವಾದ ಈ ಲಿಖಿತ ಕ್ವಿಜ್‌ಗೆ ಎರಡು ಸಾವಿರದ ಮುನ್ನೂರು ವಿದ್ಯಾರ್ಥಿಗಳು ಹಾಜರಾಗಿದ್ದರು. ಆಂಗ್ಲ ಮಾಧ್ಯಮ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮದ ಮಕ್ಕಳ ಜೊತೆ ಕನ್ನಡ ಮಾಧ್ಯಮದ ಮಕ್ಕಳೂ ಭಾಗವಹಿಸಿದ್ದು ವಿಶೇಷವಾಗಿತ್ತು. ದೂರದ ರಾಯಚೂರು, ಬಳ್ಳಾರಿ, ಬೆಳಗಾವಿ, ಮೈಸೂರು, ಬೆಂಗಳೂರು, ಮಂಗಳೂರು, ಸಮೀಪದ ಹಾವೇರಿ, ಹುಬ್ಬಳ್ಳಿ, ಧಾರವಾಡ, ಜಿಲ್ಲೆಗಳಿಂದ ಪಾಲಕರ ಸಮೇತ ಬಂದ ಮಕ್ಕಳು ರಾತ್ರಿ ಸಿದ್ಧಗಂಗಾ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡಿ ಬೆಳಿಗ್ಗೆ ಲಿಖಿತ ಕ್ವಿಜ್‌ಗೆ ಹಾಜರಾದರು. ಸಿದ್ಧಗಂಗಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸುಶ್ರಾವ್ಯ ಭಕ್ತಿಗೀತೆಗಳೊಂದಿಗೆ ಪ್ರಾರಂಭವಾದ ಕ್ವಿಜ್‌ಗೆ ಆಗಮಿಸಿದ್ದ ಮಕ್ಕಳನ್ನು ಮತ್ತು ಪಾಲಕರನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ ಸ್ವಾಗತಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ನಿರ್ದೇಶಕರಾದ 

ಡಾ||ಜಯಂತ್‌ರವರು ಎಂ. ಎಸ್.‌ ಎಸ್‌ ಕ್ವಿಜ್‌ನ ನಿಯಮಗಳನ್ನು ಮಕ್ಕಳಿಗೆ ತಿಳಿಸಿದರು. ಸಂಸ್ಥಾಪಕರಾದ ಶಿಕ್ಷಣ ಶಿಲ್ಪಿ ಡಾ. ಎಂ. ಎಸ್‌. ಶಿವಣ್ಣನವರ ಗೌರವಾರ್ಥ ಎಂ. ಎಸ್.‌ ಎಸ್‌ ಕ್ವಿಜ್‌ ಮತ್ತು ಎಂ. ಎಸ್.‌ ಎಸ್‌ ಸ್ಕಾಲರ್‌ಶಿಪ್‌ ಹಾಗೂ ಎಂ. ಎಸ್. ಎಸ್‌ ಟ್ರೈನಿಂಗ್‌ ಸೆಂಟರ್‌ನಲ್ಲಿ ನೀಡುತ್ತಿರುವ ಸೂಪರ್‌ ಬ್ರೈನ್‌ ಟ್ರೈನಿಂಗ್‌ ಬಗ್ಗೆ ಮಾಹಿತಿ ನೀಡುತ್ತಾ ಎಂ. ಎಸ್.‌ ಎಸ್ ಕ್ವಿಜ್‌ನಲ್ಲಿ ವಿಜೇತ ಮಕ್ಕಳಿಗೆ ಎರಡು ವರ್ಷದ ಉಚಿತ ಪಿಯು ವಿಜ್ಞಾನ ಶಿಕ್ಷಣ ಮತ್ತು ಸ್ಕಾಲರ್‌ಶಿಪ್‌ ಪಡೆಯಲು ಬೇಕಾದ ಅರ್ಹತೆಗಳನ್ನು ತಿಳಿಸಿದರು.

9 ರಿಂದ 10-45 ರವರೆಗೆ ವಿದ್ಯಾರ್ಥಿಗಳ ನೊಂದಣಿಯಾಯಿತು. ಪ್ರತಿಷ್ಠಿತ ಎಂ. ಎಸ್.‌ ಎಸ್.‌ ಟ್ರೋಫಿ ಹಿಡಿದ ಪಿಯುಸಿ ವಿದ್ಯಾರ್ಥಿನಿಯರು ಆಕರ್ಷಕ ಪಥಸಂಚಲನ ನಡೆಸಿದರು. ರಾಸಾಯನಿಕ ವಸ್ತುಗಳನ್ನು ಬಳಸಿ ಕೇಸರಿ, ಬಿಳಿ, ಹಸಿರು ಕಾರಂಜಿ ಚಿಮ್ಮಿಸಿದರು. 11 ಗಂಟೆಯಿಂದ 71 ಕೊಠಡಿಗಳಲ್ಲಿ ವ್ಯವಸ್ಥಿತವಾಗಿ ನಡೆದ ಲಿಖಿತ ಕ್ವಿಜ್‌ನಲ್ಲಿ ಶಾಲಾ ಕಾಲೇಜಿನ ಸಿಬ್ಬಂದಿ ವರ್ಗದವರು ಕೊಠಡಿ ವೀಕ್ಷಣೆ ಮಾಡಿದರು. ಭಾಗವಹಿಸಿದ ಪ್ರತಿ ಮಗುವಿಗೆ ಸರ್ಟಿಫಿಕೇಟ್‌ ಕೊಡಲಾಯಿತು. ಅತ್ಯಂತ ಸುವ್ಯವಸ್ಥಿತವಾಗಿ ಆಯೋಜಿಸಿದ್ದ ಲಿಖಿತ ಕ್ವಿಜ್‌ಗೆ ನೊಂದಣಿ ಮಾಡಿಸಿ ಬಂದ ಮಕ್ಕಳಿಗೆ ಮಾರ್ಗದರ್ಶನ ನೀಡಿ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸ್ವಯಂ ಸೇವೆ ಆಗಮಿಸಿದ್ದ ಪಾಲಕರ ಗಮನ ಸೆಳೆಯಿತು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಿದ್ಧಗಂಗಾ ಸ್ವಾಮಿಜಿಯವರ ಮತ್ತು ಎಂ. ಎಸ್.‌ ಶಿವಣ್ಣನವರ ಚಿತ್ರ ಬಿಡಿಸಿದ್ದ ಮಕ್ಕಳ ಏಕಾಗ್ರತೆಯನ್ನು ಪಾಲಕರು ಮೆಚ್ಚಿದರು. ಸಂಸ್ಥೆಯ ಅಧ್ಯಕ್ಷರಾದ ಡಿ. ಎಸ್.‌ ಪ್ರಶಾಂತ್‌ರವರು, ಮನುಶ್ರೀ ಮತ್ತು ಮನೋಹರ, ಹರ್ಷ ಇವರು ಕ್ವಿಜ್‌ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಕಾರ್ಯದರ್ಶಿ ಹೇಮಂತ್‌ರವರು ಆಗಮಿಸಿದ್ದ ಪಾಲಕರಿಗೆ ಮತ್ತು ಮಕ್ಕಳಿಗೆ ಮಧ್ಯಾನ್ಹದ ಉಪಹಾರದ ವ್ಯವಸ್ಥೆ ಮಾಡಿದ್ದರು.

No comments:

Post a Comment