ಏಷಿಯನ್ ಗೇಮ್ಸ್‍ಗೆ ಸಿದ್ಧಗಂಗೆಯ ಈಜುಬಾಲೆ ರೇವತಿ ನಾಯಕ
10ನೇ ವಯಸ್ಸಿಗೆ ಈಜು ಕಲಿಯಲು ಪ್ರಾರಂಭಿಸಿದ ರೇವತಿಗೆ ದಾವಣಗೆರೆಯ ಚಾನೆಲ್ ನೀರಿನಲ್ಲಿ ಈಜುವುದೇ ಒಂದು ಸಂಭ್ರಮವಾಗಿತ್ತು. ನಂತರ ತಂದೆಯ ಪ್ರೋತ್ಸಾಹದಿಂದ ಈಜುಕೊಳಕ್ಕೆ ದಾಖಲಾದ ಈ ಬಾಲಕಿ ಮುಂದೆ ಸೃಷ್ಠಿಸಿದ್ದು ಇತಿಹಾಸ. ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವಾರು ಚಿನ್ನದ ಪದಕಗಳನ್ನು ಪಡೆದು ತನ್ನದೇ ದಾಖಲೆಗಳನ್ನು ಮುರಿದಳು.
2014ರಲ್ಲಿ ಆಗಸ್ಟ್ 4ರಿಂದ 8ರವರೆಗೆ ಅಮೇರಿಕಾದ ಪಸೆಡೋನಾದಲ್ಲಿ ನಡೆದ ಜಾಗತಿಕ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ ರೇವತಿ 100ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ 6ನೇ ಸ್ಥಾನ ಪಡೆದು ತನ್ನ ಸಾಮಥ್ರ್ಯವನ್ನು ಪ್ರದರ್ಶಿಸಿದಳು.
2015ರಲ್ಲಿ IWಂS ನ ಕಿರಿಯರ ವಿಭಾಗದ ಸ್ಪರ್ಧೆ ನೆದರ್‍ಲ್ಯಾಂಡಿನಲ್ಲಿ ಆಯೋಜನೆಗೊಂಡಿತ್ತು. 100ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಬೆಳ್ಳಿಯ ಪದಕ, 50ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಕಂಚಿನ ಪದಕ ಪಡೆದ ರೇವತಿಗೆ ಚಿನ್ನದ ಪದಕ ಪಡೆಯುವ ಹಂಬಲ ಹೆಚ್ಚುತ್ತಲೇ ಹೋಯಿತು.
2016ರ IWಂS ನ ಕಿರಿಯರ ವಿಭಾಗದ ಸ್ಪರ್ಧೆಗಳು ಈ ಬಾರಿ ಜೆಕ್ ರಿಪಬ್ಲಿಕ್‍ನ ಪ್ರೇಗ್‍ನಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ರೇವತಿ 50ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ರಜತ, 100 ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು.
2017ರಲ್ಲಿ ಜರ್ಮನಿಯ ಬರ್ಲಿನ್‍ನಲ್ಲಿ ನಡೆದ ಜಾಗತಿಕ ಮಟ್ಟದ ಓಪನ್ ಚಾಂಪಿಯನ್‍ಶಿಪ್‍ನಲ್ಲಿ ರೇವತಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಳು. 100ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ 6ನೇ ಸ್ಥಾನ, 50ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ 7ನೇ ಸ್ಥಾನ, 200ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ 10ನೇ ಸ್ಥಾನ, 100 ಮೀ. ಫ್ರೀ ಸ್ಟೈಲ್‍ನಲ್ಲಿ 24ನೇ ಸ್ಥಾನ ಪಡೆದ ರೇವತಿಗೆ ತನ್ನ ಈಜಿನ ಕ್ಷಮತೆ ಇನ್ನೂ ಹೆಚ್ಚಬೇಕಾಗಿದೆ ಎಂಬುದು ವೇದ್ಯವಾಯಿತು. ತಂದೆ ಮಂಜುನಾಥರ ನಿರಂತರ ಪ್ರಯತ್ನ, ತರಬೇತಿದಾರರ ಮಾರ್ಗದರ್ಶನದಿಂದ ಅಂತರಾಷ್ಟ್ರೀಯ ಪ್ಯಾರಾ ಸ್ವಿಮ್ಮಿಂಗ್‍ನಲ್ಲಿ ಏಷ್ಯಾದ ಮಹಿಳಾ ಸ್ಪರ್ಧಿಗಳಲ್ಲಿ 200ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ 1ನೇ ರ್ಯಾಂಕ್, 100ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ 2ನೇ ರ್ಯಾಂಕ್, 100ಮೀ. ಫ್ರೀ ಸ್ಟೈಲ್‍ನಲ್ಲಿ 3ನೇ ರ್ಯಾಂಕ್ ಪಡೆದು ಭಾರತಕ್ಕೆ ಕೀರ್ತಿ ತಂದಳು.
2017ರಲ್ಲಿ ದುಬೈನಲ್ಲಿ ನಡೆದ ಏಷಿಯನ್ ಯೂಥ್ ಪ್ಯಾರಾ ಗೇಮ್ಸ್‍ನಲ್ಲಿ 100ಮೀ. ಫ್ರೀ ಸ್ಟೈಲ್‍ನಲ್ಲಿ, 100ಮೀ. ಬಟರ್‍ಫ್ಲೈನಲ್ಲಿ, 200ಮೀ. ಮೆಡ್‍ಲೇ ಸ್ವಿಮ್ಮಿಂಗ್‍ನಲ್ಲಿ ತಲಾ ಒಂದೊಂದು ಕಂಚಿನ ಪದಕ ಪಡೆದಳು. ಏಷಿಯನ್ ಗೇಮ್ಸ್‍ನಲ್ಲಿ ಪದಕ ಪಡೆಯುವ ಕ್ಷಣ ರೋಮಾಂಚನ ಉಂಟು ಮಾಡಿತೆಂದು ರೇವತಿ ಹೇಳುತ್ತಾಳೆ. ಪದಕಧಾರಣೆಯ ಸಂದರ್ಭದಲ್ಲಿ ಭಾರತದ ಧ್ವಜ ಮೇಲೇರಿ ರಾಷ್ಟ್ರಗೀತೆ ಮೊಳಗಿದ ಕ್ಷಣ ತನ್ನಲ್ಲಿ ಧನ್ಯತೆಯ ಭಾವ ಉಕ್ಕಿಸಿತು, ಕಣ್ಣಂಚಿನಲ್ಲಿ ಕಂಬನಿ ತುಳುಕಿತು ಎಂದು ಭಾವ ಪರವಶಳಾಗುತ್ತಾಳೆ.
ಪ್ರತಿಬಾರಿ ಪದಕ ಧರಿಸಿ ಬಂದಾಗ ತನ್ನ ಶಾಲೆ ತನಗೆ ನೀಡಿದ ಅಭೂತಪೂರ್ವ ಸ್ವಾಗತ ಮರೆಯಲಾಗದು ಎಂದು ಸ್ಮರಿಸಿಕೊಳ್ಳುವ ರೇವತಿ ಹಮ್ಮು-ಬಿಮ್ಮಿಲ್ಲದ ಸರಳ ಹುಡುಗಿ. ಮುಗ್ಧವಾಗಿ ಮಾತನಾಡುವ, ಸಹಪಾಠಿಗಳೊಂದಿಗೆ ಸ್ನೇಹದಿಂದಿರುವ, ಅಧ್ಯಾಪಕರೊಂದಿಗೆ ಸದಾ ಮೆಲು ನುಡಿಯಲ್ಲಿ ಸಂಭಾಷಿಸುವ ರೇವತಿ ಸಿದ್ಧಗಂಗೆಯ ಕಣ್ಮಣಿ.
ದೇಶ-ವಿದೇಶಗಳನ್ನು ಸುತ್ತಿ ಬಂದರೂ ಆಕಾಶದಲ್ಲಿ ಹಾರುವ ಹಕ್ಕಿ ಮರಳಿ ಗೂಡಿಗೆ ಸೇರುವಂತೆ ರೇವತಿ ತನ್ನ ತರಗತಿ ಕೊಠಡಿಯೊಳಗೆ ನಿಶ್ಶಬ್ಧಳಾಗಿ ಸ್ಥಾಪಿತಳಾಗುತ್ತಾಳೆ. ಸಾಧನೆಯ ಒಂದು ಚಿಕ್ಕ ಎಳೆಯೂ ಈ ಬಾಲಕಿಯ ನಡೆ-ನುಡಿಯಲ್ಲಿ ಪ್ರಕಟವಾಗದು. ತೀರಾ ಸಾಮಾನ್ಯಳಂತೆ, ಅಹಂಭಾವ ಸುಳಿಯದಂತೆ ವರ್ತಿಸುತ್ತಾಳೆ. ಇದು ರೇವತಿಯಲ್ಲಿರುವ ಶ್ರೇಷ್ಠ ಗುಣ.
ತಾಯಿ ಸುನಂದ ರೇವತಿಗೆ ಬೇಕಾದ ಪೌಷ್ಠಿಕ ಆಹಾರ ಕಾಲಕಾಲಕ್ಕೆ ಒದಗಿಸುವ ಮಮತಾಮಯಿ. ಈಜಲು ಬೇಕಾದ ದೈಹಿಕ ಶಕ್ತಿ, ಸದಾ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ತಂದೆ ಮಂಜುನಾಥ, ಪ್ರೋತ್ಸಾಹಿಸುವ “ಸಿದ್ಧಗಂಗಾ” ಬಾಲಕಿಯ ಕನಸಿಗೆ ನೀರೆರೆದು ಪೋಷಿಸುತ್ತಿದೆ.
ಈ ಬಾಲಕಿಯ ಪ್ರತಿಭೆ ಗುರುತಿಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಇಲಾಖೆ “ರಾಷ್ಟ್ರಮಟ್ಟದ ಸಾಧಾರಣ ಬಾಲ ಪ್ರತಿಭೆ” ಎಂದು 2016ರಲ್ಲಿ ಘೋಷಿಸಿತು. ಘನವೆತ್ತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಚಿನ್ನದ ಪದಕವನ್ನು 14-12-2016ರಂದು ಪಡೆದ ರೇವತಿಗೆ ದಾವಣಗೆರೆ ಜಿಲ್ಲಾಡಳಿತ 2017ರ ಗಣರಾಜ್ಯೋತ್ಸವದಂದು ಸನ್ಮಾನಿಸಿದೆ. ಕರ್ನಾಟಕ ರಾಜ್ಯ ಸರ್ಕಾರದ ಅಂದಿನ ಮುಖ್ಯಮಂತ್ರಿ ಸನ್ಮಾನ್ಯಶ್ರೀ ಸಿದ್ಧರಾಮಯ್ಯನವರು ಕ್ರೀಡಾಪಟುಗಳ ಕನಸಿನ “ಏಕಲವ್ಯ ಪ್ರಶಸ್ತಿ” ನೀಡಿ ಗೌರವಿಸಿದ್ದಾರೆ.
ಇದೀಗ 17ರ ಕಿಶೋರಿ ರೇವತಿ ಇಂಡೋನೇಷಿಯಾದ ಜಕಾರ್ತಾದಲ್ಲಿ ನಡೆಯುವ ಏಷಿಯನ್ ಗೇಮ್ಸ್‍ನಲ್ಲಿ ಪಾಲ್ಗೊಳ್ಳಲು ಹಾರಿದ್ದಾಳೆ. ಸುಮಾರು ಮೂರು ಸಾವಿರ ಕ್ರೀಡಾಪಟುಗಳು ಏಷ್ಯಾ ಖಂಡದ 43 ರಾಷ್ಟ್ರಗಳಿಂದ ಈ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಅದರಲ್ಲಿ ನಮ್ಮ ರೇವತಿ ಒಬ್ಬಳೆಂಬುದು ಹೆಮ್ಮೆಯ ವಿಷಯ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡೋತ್ಸವ ಒಲಿಂಪಿಕ್ ಸಮಿತಿಯ ಮಾನ್ಯತೆ ಪಡೆದಿದೆ. ಏಷಿಯನ್ ಗೇಮ್ಸ್‍ನಲ್ಲಿ ಭಾಗವಹಿಸುವುದು ಕ್ರೀಡಾಪಟುಗಳ ಕನಸು. ಒಲಿಂಪಿಕ್‍ಗೆ ಭಾಗವಹಿಸಲು ಇದು ಅಂತಿಮ ಮೆಟ್ಟಿಲು. ಏಷಿಯನ್ ಗೇಮ್ಸ್ ಫೆಡರೇಷನ್ ನಿಯಂತ್ರಿಸುವ ಈ ಕ್ರೀಡಾ ಚಟುವಟಿಕೆ ಜಕಾರ್ತಾದಲ್ಲಿ ಅಕ್ಟೋಬರ್ 6ರಿಂದ 13ರವರೆಗೆ ಜಕಾರ್ತಾದಲ್ಲಿ ನಡೆಯಲಿದೆ. ದಾವಣಗೆರೆಯ ಈಜುಬಾಲೆ ಏಷಿಯನ್ ಗೇಮ್ಸ್‍ನಲ್ಲಿ ಪದಕ ಪಡೆಯುವ ಅರ್ಹತೆ ಹೊಂದಿದ್ದಾಳೆ. ಪದಕ ಗೆದ್ದು ಭಾರತದ ಕೀರ್ತಿ ಬೆಳಗಲಿ ಎಂದು ಆಶಿಸೋಣ.
ಡಿ.ಎಸ್. ಹೇಮಂತ್
click here for josaa 2020
ReplyDelete