Thursday, December 25, 2025

ಡಾ.ಶಾಮನೂರು ಶಿವಶಂಕರಪ್ಪಾಜಿ ಯವರ : 130 ಅಡಿ ಅಳತೆಯ ಬೃಹತ್ತಾದ ಚಿತ್ರ

 

ಡಾ. ಶಾಮನೂರು ಶಿವಶಂಕರಪ್ಪಾಜಿ ಯವರ ನುಡಿ ನಮನದ ಅಂಗವಾಗಿ BIET ಕಾಲೇಜಿನ ಆವರಣದಲ್ಲಿ ಇಂದು ಸಂಜೆ 130 ಅಡಿ ಅಳತೆಯ ಬೃಹತ್ತಾದ ಚಿತ್ರವನ್ನು ರಂಗೋಲಿಯಲ್ಲಿ ಅರಳಿಸಲಾಯಿತು . ಮಾನ್ಯ ಸಂಸದರಾದ ಡಾ।। ಪ್ರಭಾಮಲ್ಲಿಕಾರ್ಜುನ್ ರವರು ತಮ್ಮ ಕುಟುಂಬ ವರ್ಗದವರೊಡನೆ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ ಜಸ್ಟಿನ್ ಡಿಸೌಜ ರವರು ರಚಿಸಿದ " ದಾವಣಗೆರೆ ಧಣಿ  ಬಡವರ ಕಣ್ಮಣಿ " ಶೀರ್ಷಿಕೆಯ ಹಾಡನ್ನು ಸಮರ್ಪಿಸಲಾಯಿತು. ಬಾಪೂಜಿ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆ ಅಲ್ಲಿ ಆಗಮಿಸಿ ಭಾವ ನಮನ ಸಲ್ಲಿಸಿದರು . ಚಿತ್ರ ರಚಿಸಿದ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೂ ಹಾಗೂ ಚಿತ್ರಕಲಾ ಶಿಕ್ಷಕರಿಗೆ ಹಾಗೂ ದೈಹಿಕ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಡಾ ।। ಜಯಂತ್ ರವರ ಪರಿಕಲ್ಪನೆಯಲ್ಲಿ ಹಾಗೂ ಡಿ ಎಸ್ ಹೇಮಂತ್ ರವರ ನಿರ್ದೇಶನದಲ್ಲಿ ಮೂಡಿ ಬಂದ ಈ ಕಾರ್ಯಕ್ರಮ ಹೃದಯ ಸ್ಫರ್ಶಿಯಾಗಿತ್ತು. 



Sunday, December 21, 2025

ಸಿದ್ಧಗಂಗಾದಲ್ಲಿ ಇಂದು ಇನ್ನೊಂದು ಶಿಕ್ಷಣ “ಸಂಭ್ರಮ”


ಕಳೆದ ಐದು ದಶಕಗಳಲ್ಲಿ ದಾವಣಗೆರೆ ವಿದ್ಯಾ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, "ವಿದ್ಯಾಕಾಶಿ"ಎನ್ನುವ ಅಭಿದಾನಕ್ಕೆ ಒಳಗಾಗಿದೆ. ರಾಜ್ಯವೇ ಹೆಮ್ಮೆ ಪಡುವಂತಹ ಶಿಕ್ಷಣ ಸಂಸ್ಥೆಗಳು ಇಲ್ಲಿದ್ದು, ವಿದ್ಯಾರ್ಥಿಗಳನ್ನು ನಾಡಿನ ಎಲ್ಲೆಡೆಯಿಂದ ಆಕರ್ಷಿಸುತ್ತಿವೆ. ಇಂತಹ ನಗರದ ಹೆಮ್ಮಯ ಶಿಕ್ಷಣ ಸಂಸ್ಥೆಗಳಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯೂ ವಿಶೇಷವಾಗಿ ಉಲ್ಲೇಖಿಸುವಂತಹುದಾಗಿದೆ. 1970 ರಲ್ಲಿ ಸ್ಥಾಪನೆಯಾಗಿ, ಈವರೆಗೆ ಸುಮಾರು 50 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವ ದಾಖಲೆ ಈ ಸಂಸ್ಥೆಯದು. ತುಮಕೂರಿನ ಶ್ರೀ ಸಿದ್ಧಗಂಗಾ ಸ್ವಾಮೀಜಿಯವರ ಆರ್ಶೀವಾದದಿಂದ ಅರಳಿದ ಈ ಸಂಸ್ಥೆಯ ಸ್ಥಾಪಕರಾದ ಎಂ.ಎಸ್‌ ಶಿವಣ್ಣನವರ ಸದಾಶಯಗಳನ್ನು, ಕನಸುಗಳನ್ನು ನನಸಾಗಿಸುವಲ್ಲಿ ಸಫಲತೆಯನ್ನು ಕಂಡಿರುವುದು ಸತ್ಯಸ್ಯ ಸತ್ಯ. 

ಈ ಶಿಕ್ಷಣ ಸಂಸ್ಥೆ ಇಂದು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಸೆಲ್ಫ್‌ ಅಸೆಸ್‌ಮೆಂಟ್‌ ಟೆಸ್ಟ್‌ ನ ಪರಿಕಲ್ಪನೆಯು ವಿಶೇಷವಾದುದು ಎನ್ನಬಹುದು. ಅತ್ಯಂತ ಅಚ್ಚುಕಟ್ಟಾಗಿ ಅಯೋಜಿಸಿರುವ ಈ ಟೆಸ್ಟ್‌ ನಗರದ ಹಾಗು ಸುತ್ತಲಿನ ಗ್ರಾಮೀಣ ಭಾಗಗಳ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳನ್ನು ಈ ಟೆಸ್ಟ್‌ ನಲ್ಲಿ ಭಾಗವಹಿಸುವಂತೆ ಮಾಡಿ, ಅವರಲ್ಲಿ ಹೊಸ ಉತ್ಸಾಹವನ್ನು ಹುಟ್ಟು ಹಾಕಿರುವುದು ನಿಜ. ಪಿಯುಸಿ ಅತ್ಯಂತ ಮುಖ್ಯ ಹಾಗು ತಿರುವಿನ ಶೈಕ್ಷಣಿಕ ಘಟ್ಟವೆಂದು ವಿವರಿಸಿದ ಜಸ್ಟಿನ್‌ ಡಿʼಸೌಜರವರು, ಹೆಚ್ಚಿನ ಅಂಕಗಳಿಸುವತ್ತ ವಿದ್ಯಾರ್ಥಿಗಳ ಮನವೊಲಿಸಿದರು. ತಮ್ಮ ಶಿಕ್ಷಣ ಸಂಸ್ಥೆಯ ಎಂಎಸ್‌ಎಸ್ ಕ್ವಿಜ್‌ ಮತ್ತು ಎಂಎಸ್‌ಎಸ್ ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿ ತಿಳಿಸಿ, ಅದರಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಂಸ್ಥೆ ನೀಡುವ ವಿದ್ಯಾರ್ಥಿ ವೇತನ ಹಾಗೂ ಅರ್ಹರಿಗೆ ನೀಡುವ ಉಚಿತ ವಿದ್ಯಾಭ್ಯಾಸದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ, ಟೆಸ್ಟ್‌ ಗೆ ಪೂರ್ವಬಾವಿಯಾಗಿ ನಡೆದ ಸಭೆಯಲ್ಲಿ ವಿವರಿಸಿದರು. 50 ಅಂಕಗಳ 1 ಗಂಟೆ ಅವಧಿಯ ಈ ಟೆಸ್ಟ್‌ ನ ಫಲಿತಾಂಶವನ್ನು ಒಂದು ವಾರದ ಒಳಗೆ ವಿದ್ಯಾರ್ಥಿಗಳಿಗೆ ಅವರ ಮೊಬೈಲ್‌ ಸಂಖ್ಯೆಗೆ ನೇರವಾಗಿ ಕಳಿಸಲಾಗುವುದು ಎಂದವರು ತಿಳಿಸಿದರು. 




ಈ ಟೆಸ್ಟ್‌ ನ ಕಾರ್ಯಕ್ರಮಕ್ಕೆ ಈಗ ಇಲ್ಲಿ ಅಧ್ಯಯನ ನಡೆಸುತ್ತಿರುವ ಪಿಯುಸಿ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ ತಮ್ಮ ಸೌಜನ್ಯದ ನಡೆಯಿಂದ ಪೋಷಕರ ಮನಗೆದ್ದರು. ಎಲ್ಲಾ ದೃಷ್ಠಿಯಿಂದ ಇದೊಂದು ವಿನೂತನವಾದ ಕಾರ್ಯಕ್ರಮವಲ್ಲದೆ, ಮಾದರಿಯಾದ ಕಾರ್ಯಕ್ರಮವೂ ಹೌದು. ಮಾದರಿ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಿದ್ದು ಇನ್ನೊಂದು ವಿಶೇಷ. ಈ ಪ್ರಶ್ನೆಪತ್ರಿಕೆಯ ಪ್ರಯೋಜನವನ್ನು ನೀವೂ ಪಡೆಯಿರಿ. ನಿಮ್ಮ ಸ್ನೇಹಿತರನ್ನು ಪಡೆಯಲು ಪ್ರೋತ್ಸಾಹಿಸಿ ಎಂದು ಹಾರೈಸಿದ್ದು ಮನನೀಯ. ಈ ಟೆಸ್ಟ್‌ ನಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಮತ್ತು ಅವರನ್ನು ಸಂಸ್ಥೆಯ ಆವರಣಕ್ಕೆ ಕರೆತಂದ ಪೋಷಕರಿಗೆ ಭೋಜನ ವ್ಯವಸ್ಥೆ ಮಾಡಿದ್ದು ನನ್ನ ಮಟ್ಟಿಗೆ ಒಂದು ಹೊಸ ಅನುಭವ. - ಕೆ.ಎನ್‌ ಜಯಪ್ರಕಾಶ್‌, ಪೋಷಕರು. ಮೊಬೈಲ್‌ : 7019355126

Tuesday, December 16, 2025

ಮುಳುಗುತ್ತಿದ್ದ ದಾವಣಗೆರೆ ಸಿದ್ಧಗಂಗೆಯ ನಾವೆಯನ್ನು ತೇಲಿಸಿದ ಮಹಾನುಭಾವ


ಅದು ತೊಂಭತ್ತರ ದಶಕ. ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆ ಇನ್ನೇನು ಮುಚ್ಚಿ ಹೋಗುತ್ತದೆಂಬ ಗಾಳಿ ಸುದ್ಧಿ. ಇದ್ದ ಬಾಡಿಗೆ ಕಟ್ಟಡ ಬಿಡಲು ಸುಪ್ರೀಂಕೋರ್ಟ್‌ ಆದೇಶ. ಕೊಂಡುಕೊಂಡಿದ್ದ ಈಗಿರುವ ನಿವೇಶನದಲ್ಲಿ ಕಟ್ಟಡ ಕಟ್ಟಲು ಹಣವಿಲ್ಲ. ದಿಕ್ಕು ತೋಚದೆ ಕಂಗಾಲಾಗಿದ್ದ ಸಂಸ್ಥಾಪಕ ಶಿವಣ್ಣನವರು ಹತಾಶರಾಗಿ ದುಃಖಿತರಾಗಿದ್ದರು. ಆಗ ಅವರಿಗೆ ಆಶಾಕಿರಣವಾಗಿ ಗೋಚರಿಸಿದ್ದು ಶಾಮನೂರು ಶಿವಶಂಕರಪ್ಪನವರು. 1970 ರಲ್ಲಿ ಸಿದ್ಧಗಂಗಾ ಸಂಸ್ಥೆಯ ಪ್ರಾರಂಭೋತ್ಸವಕ್ಕೆ ಆಗಮಿಸಿ ಶುಭ ಕೋರಿದ್ದ ಶಿವಶಂಕರಪ್ಪನವರು ಶಿವಣ್ಣನವರ ಏಕಾಂಗಿ ಹೋರಾಟವನ್ನು ಗಮನಿಸುತ್ತಲೇ ಬಂದಿದ್ದರು. 20 ವರ್ಷಗಳಿಂದ ಹೇಗ್ಹೇಗೋ ಎಳೆದಾಡಿದ ಸಿದ್ಧಗಂಗೆಯ ನಾವೆ ಮುಳುಗುವ ಪರಿಸ್ಥಿತಿ! 1991 ರಲ್ಲಿ M S ಶಿವಣ್ಣನವರು ಶಿವಶಂಕರಪ್ಪನವರ ಮನೆಯ ಅಂಗಳದ ಮೂಲೆಯಲ್ಲಿ ನಿಂತಿದ್ದರು. ದೂರದಿಂದ ಇವರನ್ನು ಗಮನಿಸಿದ ಅವರು “ಏನು ಬಂದಿದ್ದು ಶಿವಣ್ಣ?” ಎಂದು ಪ್ರಶ್ನಿಸಿದರು. ಶಾಲೆಯ ಕಟ್ಟಡ ಕಟ್ಟಲು ಹಣವಿಲ್ಲ, ಯಾವ ಬ್ಯಾಂಕಿನಿಂದಲೂ ಸಾಲ ಸಿಗುತ್ತಿಲ್ಲ” ಎಂದು ನಿವೇದಿಸಿಕೊಂಡಾಗ ಮರು ಮಾತಿಲ್ಲದೆ ಶಿವಶಂಕರಪ್ಪನವರು ಬಾಪೂಜಿ ಬ್ಯಾಂಕಿನ ಮ್ಯಾನೇಜರ್‌ಗೆ ಫೋನ್‌ ಮಾಡಿ “ಶಿವಣ್ಣ ಬರ್ತಾನೆ, ಅವನಿಗೆ ಶಾಲೆ ಕಟ್ಟಡ ಕಟ್ಟಲು ಲೋನ್‌ ಕೊಡು” ಎಂದು ಆಜ್ಞಾಪಿಸಿದರು. ಅತ್ತಲಿಂದ ಬ್ಯಾಂಕ್‌ ಮ್ಯಾನೇಜರ್‌ ಶ್ಯೂರಿಟಿ ಕೊಡಲು ಶಿವಣ್ಣನವರ ಹತ್ತಿರ ಏನೂ ಇಲ್ಲ” ಎಂದರು. ತಕ್ಷಣ “ಅವನು ಕೇಳಿದಷ್ಟು ಕೊಡು. ಅವನು ಕಟ್ಟದಿದ್ದರೆ ನಾನು ಕಟ್ತೀನಿ” ಎಂದು ಫೋನ್‌ ಇಟ್ಟರು. ಮುಂದಿನ ದೃಶ್ಯ ಬದಲಾಯಿತು. ಶಿವಣ್ಣನವರು ಕೇಳಿದಷ್ಟು ಸಾಲ ಬಾಪೂಜಿ ಬ್ಯಾಂಕಿನಿಂದ ಮಂಜೂರಾಯಿತು. ಸಾಲ ಪಾವತಿ - ಮರು ಸಾಲ- ಮರು ಪಾವತಿ ಹೀಗೆ ನಿರಂತರವಾಗಿ ನಡೆಯಿತು. ಮುಳುಗುತ್ತಿದ್ದ ಸಿದ್ಧಗಂಗೆಯ ನಾವೆ ತೇಲಿತು.


ಸ್ವತಃ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಬಾಪೂಜಿ ಸಂಸ್ಥೆಯ ಕಾರ್ಯದರ್ಶಿ ಮತ್ತೊಂದು ಸಂಸ್ಥೆಯ ಬೆಳವಣಿಗೆಗೆ ಹೇಗೆ ಸಹಾಯ ಹಸ್ತ ನೀಡಿದರು ಎಂಬುದು ಅವರ ಉದಾರ ನೀತಿಗೊಂದು ನಿದರ್ಶನ. ಅನೇಕ ಕಾರ್ಯಕ್ರಮಗಳಲ್ಲಿ ನಮ್ಮೊಡನೆ ಭಾಗವಹಿಸಿದ ನೆನಪು ಮರೆಯಲಾಗದು. ಬೋರ್‌ವೆಲ್‌ ತೋಡಿಸಿದಾಗ ಅದಕ್ಕೆ ಚಾಲನೆ ನೀಡಿದ ಸಣ್ಣ ಕಾರ್ಯದಿಂದ, ನಡೆದಾಡಿದ ದೇವರು ಸಿದ್ಧಗಂಗಾ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯ ಸ್ಮರಣೆಯಲ್ಲಿ ದಾಸೋಹಕ್ಕೆ ಚಾಲನೆ ನೀಡಿ ಸ್ವತಃ ಮಕ್ಕಳಿಗೆ ಬಡಿಸಿದ ಅಮೋಘ ಕಾರ್ಯಕ್ಕೆ ಅವರಿಂದ ಚಾಲನೆ ದೊರಕಿತ್ತು. ಸಹಾಯ ಬೇಡಿ ಬಂದವರಿಗೆ ಎಂದೂ ಇಲ್ಲವೆಂದಿಲ್ಲ. ಸದಾ ತೆರೆದ ಮನಸ್ಸು – ತೆರೆದ ಬಾಗಿಲು ಸಾಮ್ರಾಟ ಅಶೋಕನನ್ನು ನೆನಪಿಸುತ್ತದೆ.ಅವರ ಸ್ಮರಣ ಶಕ್ತಿ ಅದ್ಭುತವಾದದ್ದು. ಒಳ-ಹೊರಗು ಎಂಬುದಿಲ್ಲದೆ ಇದ್ದದ್ದು ಇದ್ದಂತೆ ನುಡಿಯುವ ನಿಷ್ಕಲ್ಮಶ ಜೀವಿ.ಸಾಮಾಜಿಕ ಹರಿಕಾರ, ಶೈಕ್ಷಣಿಕ ಕ್ರಾಂತಿಕಾರ, ಸಾಂಸ್ಕೃತಿಕ ರಾಯಭಾರಿ, ಆಧ್ಯಾತ್ಮದ ಮೇರು ಶಿಖರ. 94 ವರ್ಷಗಳ ತುಂಬು ಜೀವನದಲ್ಲಿ ಅವರು ಅನುಭವಿಸಿದ ನೋವುಗಳೆಷ್ಟೋ! ಒಂದು ಘಟನೆ ನನ್ನ ಮನಃ ಕಲಕಿತ್ತು. ಬಾಪೂಜಿ ಸಂಸ್ಥೆಯ ಸುವರ್ಣ ಮಹೋತ್ಸವ. ಬಹಳ ಅದ್ದೂರಿಯಾಗಿ ಆಯೋಜನೆಗೊಂಡಿತು. ರಾಷ್ಟ್ರಪತಿ A P J ಅಬ್ದುಲ್‌ ಕಲಾಂ ರವರು ಆಗಮಿಸಿದ್ದರು. ಬಾಪೂಜಿ ಸಂಸ್ಥೆ ಹರ್ಷದ ಹೊನಲಲ್ಲಿ ತೇಲುತ್ತಿತ್ತು. ಶಿವಶಂಕರಪ್ಪನವರ ಕುಟುಂಬಕ್ಕೆ ಬರಸಿಡಿಲಿನ ವಾರ್ತೆ ತಲುಪಿತು. ಅಪಘಾತದಲ್ಲಿ ಮೊಮ್ಮಗಳ ದುರಂತ ಸಾವು! ಕೌಟುಂಬಿಕ ಸಮಸ್ಯೆಯನ್ನು ಬದಿಗೊತ್ತಿ ಸಮಾರಂಭಕ್ಕೆ ಕಿಂಚಿತ್ತೂ ಲೋಪವಾಗದಂತೆ ದುಃಖ ನುಂಗಿ ನಗುವಿನ ಮುಖವಾಡ ಧರಿಸಿ ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡ ನಂಜುಂಡ ಶಾಮನೂರು ಶಿವಶಂಕರಪ್ಪನವರು. ಕಷ್ಟಗಳನ್ನು ನುಂಗಿ ನೀರು ಕುಡಿಯುವುದು ಅವರಿಗೆ ಜನ್ಮತಃ ಬಂದ ದೇಣಿಗೆ. ಅಸಂಖ್ಯಾತರಿಗೆ ನೆರಳು ನೀಡಿದ ಆಲದ ಮರ ಧರೆಗುಳಿದಿದೆ. ಅಪ್ಪಾಜಿಯವರ ನೆನಪು ಸಿದ್ಧಗಂಗಾ ಸಂಸ್ಥೆಯಲ್ಲಿ ಅಮರ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಇಂದು ಬೆಳಿಗ್ಗೆ ಶಾಲಾ ಕಾಲೇಜಿನ ಮಕ್ಕಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪ್ರಾರ್ಥಿಸಿ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಿದರು.

- ಜಸ್ಟಿನ್‌ ಡಿʼಸೌಜ
ಸಿದ್ಧಗಂಗಾ ವಿದ್ಯಾಸಂಸ್ಥೆ,
ದಾವಣಗೆರೆ