Wednesday, August 27, 2025

ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶ್ರದ್ಧಾ-ಭಕ್ತಿಯ ಆಕರ್ಷಕ ಮೆರವಣಿಗೆಯೊಂದಿಗೆ ಪೇಪರ್‌ ಗಣೇಶನ ಪ್ರತಿಷ್ಠಾಪನೆ



ದಾವಣಗೆರೆ ಆ. 27,

12 ಅಡಿ ಎತ್ತರದ ಭವ್ಯ ಗಣಪತಿ ಮಕ್ಕಳು ಎಳೆಯುತ್ತಿದ್ದ ರಥದ ಮೇಲೆ ಗಂಭೀರವದನವಾಗಿ ವಿರಾಜಮಾನನಾಗಿದ್ದನು. ಶಾಲೆಯ ಮಕ್ಕಳು ವಿವಿಧ ವೇಷ ಭೂಷಣಗಳಲ್ಲಿ ಆಗಮಿಸಿದ್ದರು. ತಿರುಪತಿ ವೆಂಕಟೇಶ, ಧನಲಕ್ಷ್ಮಿ, ಮಧುರೆ ಮೀನಾಕ್ಷಿ, ಚಾಮುಂಡೇಶ್ವರಿ, ಗಣಪತಿ, ಶಿವಾಜಿ, ರಾಮ, ಸೀತೆ, ಲಕ್ಷ್ಮಣ, ಹನುಮಂತ, ಪರಶುರಾಮ, ರಾಧಾಕೃಷ್ಣ ಹೀಗೆ ಸುಮಾರು ಇನ್ನೂರಕ್ಕೂ ಹೆಚ್ಚು ಮಕ್ಕಳು ಪೌರಾಣಿಕ ಪಾತ್ರದಲ್ಲಿ ಕಣ್ಮನ ಸೆಳೆಯುವಂತಿದ್ದರು. ಬೆಳಿಗ್ಗೆ 9 ಗಂಟೆಗೆ ಶಾಲೆಯಿಂದ ಪರಿಸರ ಸ್ನೇಹಿ ಪೇಪರ್‌ ಗಣಪತಿಯನ್ನು ಗಾಂಧಿ ಸರ್ಕಲ್‌ಗೆ ತಂದರು. ಅಲ್ಲಿಂದ ನಂದಿಕೋಲು, ಡೊಳ್ಳು, ವೀರಗಾಸೆ, ಪಟಗಳನ್ನು ಹಿಡಿದ ಮಕ್ಕಳು ಆಗಮಿಸಿ ಮೆರವಣಿಗೆಗೆ ಸಿದ್ಧರಾದರು. ಜೊತೆಗೆ ಸಾವಿರಕ್ಕೂ ಹೆಚ್ಚು ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಶಿಸ್ತುಬದ್ಧವಾಗಿ ಮೆರವಣಿಗೆಯೊಡನೆ ಹೆಜ್ಜೆ ಹಾಕಿದರು.


ಶಾಲೆಯ ವಾದ್ಯವೃಂದದವರು ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ ನಡೆದರು. ನಡುನಡುವೆ ಮಕ್ಕಳ ಉದ್ಘೋಷ ದಾರಿಹೋಕರ ಗಮನ ಸೆಳೆಯಿತು. ಕ್ಷಣಕಾಲ ನಿಂತು ಗಣಪತಿಗೆ ಕೈ ಮುಗಿಯುತ್ತಿದ್ದರು. ಮೆರವಣಿಗೆ ಗಾಂಧಿ ಸರ್ಕಲ್‌ನಿಂದ ಜಯದೇವ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌ ಮೂಲಕವಾಗಿ ಸಿದ್ಧಗಂಗಾ ಶಾಲೆಯ ಆವರಣ ತಲುಪಿತು. ಬೃಹತ್‌ ಮೆರವಣಿಗೆ ಭಕ್ತಿಪೂರ್ವಕ ವಾತಾವರಣ ಸೃಷ್ಠಿಸಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಸಿದ್ಧಗಂಗಾ ಸಂಸ್ಥೆಯ ಮಕ್ಕಳೇ ತಯಾರಿಸಿದ ಈ ಪೇಪರ್‌ ಗಣಪತಿ ನೋಡಿ ದಿಗ್ಭೃಾಂತರಾದರು. ಕೆಲವರು ಸ್ಪರ್ಶಿಸಿ ಪುನೀತರಾದರು. ನಾಲ್ಕು ಮಕ್ಕಳು ಎತ್ತಬಹುದಾದ 12 ಅಡಿ ಎತ್ತರದ ಪರಿಸರ ಸ್ನೇಹಿ ಗಣಪ ಸಾರ್ವಜನಿಕ ವೀಕ್ಷಣೆಗೆ 10 ದಿನಗಳ ಕಾಲ ಲಭ್ಯವಿದೆ. 11ನೇ ದಿನ ವಿಸರ್ಜಿಸಲಾಗುವುದು.



ಪ್ರತಿವರ್ಷ ಗಣೇಶ ಚತುರ್ಥಿಯನ್ನು ವಿಭಿನ್ನವಾಗಿ ಸಾಂಪ್ರದಾಯಿಕವಾಗಿ ಆಚರಿಸುವ ಮಕ್ಕಳಲ್ಲಿ ಭಕ್ತಿಭಾವ ಮೂಡಿಸುವುದರ ಜೊತೆಗೆ ಶಾಲಾ ಮಕ್ಕಳೇ ರೂಪಿಸುವ ಗಣಪತಿ ಪೂಜೆಗೆ ಹಲವಾರು ಪಾಲಕರು ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ನಿರ್ದೇಶಕ ಡಾ|| ಜಯಂತ್‌ ಅವರ ಪರಿಕಲ್ಪನೆಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಶಾಲೆಯ ಚಿತ್ರಕಲಾ ಶಿಕ್ಷಕರ ನೆರವಿನಿಂದ ಸುಂದರ ರೂಪ ತಾಳುವ ಪೇಪರ್‌ ಗಣಪತಿಗೆ ಪ್ರತಿನಿತ್ಯ ಬೆಳಿಗ್ಗೆ ಶಾಲಾ ಮಕ್ಕಳು ಪೂಜಾ ಕಾರ್ಯದ ನೇತೃತ್ವ ವಹಿಸುವರು. ಕಾರ್ಯದರ್ಶಿ ಹೇಮಂತ್‌ ಹಾಗೂ ದೈಹಿಕ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪ್ರತಿ ತರಗತಿಯ ಶಿಕ್ಷಕರು ಈ ಮಕ್ಕಳಿಗೆ ಮಾರ್ಗದರ್ಶನ ನೀಡುವರು. ಭಾವೈಕ್ಯತೆ, ಭಾತೃತ್ವ ಬೆಳೆಸುವಲ್ಲಿ ಮಹಾಗಣಪತಿಯ ಪಾತ್ರ ಹಿರಿದಾಗಿದೆ. ಇಡೀ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರದಿಂದ ಈ ಬೃಹತ್‌ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ.

No comments:

Post a Comment