Wednesday, August 27, 2025

ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶ್ರದ್ಧಾ-ಭಕ್ತಿಯ ಆಕರ್ಷಕ ಮೆರವಣಿಗೆಯೊಂದಿಗೆ ಪೇಪರ್‌ ಗಣೇಶನ ಪ್ರತಿಷ್ಠಾಪನೆ



ದಾವಣಗೆರೆ ಆ. 27,

12 ಅಡಿ ಎತ್ತರದ ಭವ್ಯ ಗಣಪತಿ ಮಕ್ಕಳು ಎಳೆಯುತ್ತಿದ್ದ ರಥದ ಮೇಲೆ ಗಂಭೀರವದನವಾಗಿ ವಿರಾಜಮಾನನಾಗಿದ್ದನು. ಶಾಲೆಯ ಮಕ್ಕಳು ವಿವಿಧ ವೇಷ ಭೂಷಣಗಳಲ್ಲಿ ಆಗಮಿಸಿದ್ದರು. ತಿರುಪತಿ ವೆಂಕಟೇಶ, ಧನಲಕ್ಷ್ಮಿ, ಮಧುರೆ ಮೀನಾಕ್ಷಿ, ಚಾಮುಂಡೇಶ್ವರಿ, ಗಣಪತಿ, ಶಿವಾಜಿ, ರಾಮ, ಸೀತೆ, ಲಕ್ಷ್ಮಣ, ಹನುಮಂತ, ಪರಶುರಾಮ, ರಾಧಾಕೃಷ್ಣ ಹೀಗೆ ಸುಮಾರು ಇನ್ನೂರಕ್ಕೂ ಹೆಚ್ಚು ಮಕ್ಕಳು ಪೌರಾಣಿಕ ಪಾತ್ರದಲ್ಲಿ ಕಣ್ಮನ ಸೆಳೆಯುವಂತಿದ್ದರು. ಬೆಳಿಗ್ಗೆ 9 ಗಂಟೆಗೆ ಶಾಲೆಯಿಂದ ಪರಿಸರ ಸ್ನೇಹಿ ಪೇಪರ್‌ ಗಣಪತಿಯನ್ನು ಗಾಂಧಿ ಸರ್ಕಲ್‌ಗೆ ತಂದರು. ಅಲ್ಲಿಂದ ನಂದಿಕೋಲು, ಡೊಳ್ಳು, ವೀರಗಾಸೆ, ಪಟಗಳನ್ನು ಹಿಡಿದ ಮಕ್ಕಳು ಆಗಮಿಸಿ ಮೆರವಣಿಗೆಗೆ ಸಿದ್ಧರಾದರು. ಜೊತೆಗೆ ಸಾವಿರಕ್ಕೂ ಹೆಚ್ಚು ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಶಿಸ್ತುಬದ್ಧವಾಗಿ ಮೆರವಣಿಗೆಯೊಡನೆ ಹೆಜ್ಜೆ ಹಾಕಿದರು.


ಶಾಲೆಯ ವಾದ್ಯವೃಂದದವರು ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ ನಡೆದರು. ನಡುನಡುವೆ ಮಕ್ಕಳ ಉದ್ಘೋಷ ದಾರಿಹೋಕರ ಗಮನ ಸೆಳೆಯಿತು. ಕ್ಷಣಕಾಲ ನಿಂತು ಗಣಪತಿಗೆ ಕೈ ಮುಗಿಯುತ್ತಿದ್ದರು. ಮೆರವಣಿಗೆ ಗಾಂಧಿ ಸರ್ಕಲ್‌ನಿಂದ ಜಯದೇವ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌ ಮೂಲಕವಾಗಿ ಸಿದ್ಧಗಂಗಾ ಶಾಲೆಯ ಆವರಣ ತಲುಪಿತು. ಬೃಹತ್‌ ಮೆರವಣಿಗೆ ಭಕ್ತಿಪೂರ್ವಕ ವಾತಾವರಣ ಸೃಷ್ಠಿಸಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಸಿದ್ಧಗಂಗಾ ಸಂಸ್ಥೆಯ ಮಕ್ಕಳೇ ತಯಾರಿಸಿದ ಈ ಪೇಪರ್‌ ಗಣಪತಿ ನೋಡಿ ದಿಗ್ಭೃಾಂತರಾದರು. ಕೆಲವರು ಸ್ಪರ್ಶಿಸಿ ಪುನೀತರಾದರು. ನಾಲ್ಕು ಮಕ್ಕಳು ಎತ್ತಬಹುದಾದ 12 ಅಡಿ ಎತ್ತರದ ಪರಿಸರ ಸ್ನೇಹಿ ಗಣಪ ಸಾರ್ವಜನಿಕ ವೀಕ್ಷಣೆಗೆ 10 ದಿನಗಳ ಕಾಲ ಲಭ್ಯವಿದೆ. 11ನೇ ದಿನ ವಿಸರ್ಜಿಸಲಾಗುವುದು.



ಪ್ರತಿವರ್ಷ ಗಣೇಶ ಚತುರ್ಥಿಯನ್ನು ವಿಭಿನ್ನವಾಗಿ ಸಾಂಪ್ರದಾಯಿಕವಾಗಿ ಆಚರಿಸುವ ಮಕ್ಕಳಲ್ಲಿ ಭಕ್ತಿಭಾವ ಮೂಡಿಸುವುದರ ಜೊತೆಗೆ ಶಾಲಾ ಮಕ್ಕಳೇ ರೂಪಿಸುವ ಗಣಪತಿ ಪೂಜೆಗೆ ಹಲವಾರು ಪಾಲಕರು ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ನಿರ್ದೇಶಕ ಡಾ|| ಜಯಂತ್‌ ಅವರ ಪರಿಕಲ್ಪನೆಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಶಾಲೆಯ ಚಿತ್ರಕಲಾ ಶಿಕ್ಷಕರ ನೆರವಿನಿಂದ ಸುಂದರ ರೂಪ ತಾಳುವ ಪೇಪರ್‌ ಗಣಪತಿಗೆ ಪ್ರತಿನಿತ್ಯ ಬೆಳಿಗ್ಗೆ ಶಾಲಾ ಮಕ್ಕಳು ಪೂಜಾ ಕಾರ್ಯದ ನೇತೃತ್ವ ವಹಿಸುವರು. ಕಾರ್ಯದರ್ಶಿ ಹೇಮಂತ್‌ ಹಾಗೂ ದೈಹಿಕ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪ್ರತಿ ತರಗತಿಯ ಶಿಕ್ಷಕರು ಈ ಮಕ್ಕಳಿಗೆ ಮಾರ್ಗದರ್ಶನ ನೀಡುವರು. ಭಾವೈಕ್ಯತೆ, ಭಾತೃತ್ವ ಬೆಳೆಸುವಲ್ಲಿ ಮಹಾಗಣಪತಿಯ ಪಾತ್ರ ಹಿರಿದಾಗಿದೆ. ಇಡೀ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರದಿಂದ ಈ ಬೃಹತ್‌ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ.

Tuesday, August 26, 2025

ವಿದ್ಯಾರ್ಥಿಗಳ ಶ್ರಮದಿಂದ ಮೂಡಿದ ಪರಿಸರ ಸ್ನೇಹಿ ಪೇಪರ್ ಗಣಪತಿ – ಎಲ್ಲರಿಗೂ ಮಾದರಿ

 ದಾವಣಗೆರೆ | 26/08/2025



ದಾವಣಗೆರೆಯ ಸಿದ್ದಗಂಗಾ ಶಾಲೆಯ 12 ಅಡಿ ಎತ್ತರದ ಗಣೇಶ ಮೂರ್ತಿ – ಭವ್ಯ ಮೆರವಣಿಗೆಯಲ್ಲಿ ಅನಾವರಣ

ಗಣೇಶ ಚತುರ್ಥಿ ಹಬ್ಬ ಎಂದರೆ ಮನೆ ಮನೆಗೂ, ಬೀದಿ ಬೀದಿಗೂ ಹರಡುವ ಭಕ್ತಿ ಮತ್ತು ಸಡಗರ. ಆದರೆ, ಇಂದಿನ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಾಗುವ ಗಣೇಶ ಮೂರ್ತಿಗಳ ಪರಿಣಾಮವಾಗಿ ಪರಿಸರ ಮಾಲಿನ್ಯ ಗಂಭೀರ ಸಮಸ್ಯೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಇದಕ್ಕೆ ಮಾದರಿಯ ಉದಾಹರಣೆಯಾಗಿ ದಾವಣಗೆರೆಯ ಮಾದರಿ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ 12 ಅಡಿ ಎತ್ತರದ ಪರಿಸರ ಸ್ನೇಹಿ ಪೇಪರ್ ಗಣಪತಿ ಮೂರ್ತಿ ಈಗ ಸಜ್ಜಾಗಿದೆ.

ಹತ್ತು ದಿನಗಳ ಶ್ರಮ – ನೈಸರ್ಗಿಕ ಬಣ್ಣದ ಸೊಬಗು

30 ಕೆ.ಜಿ. ಹಳೆಯ ನ್ಯೂಸ್ ಪೇಪರ್ ಹಾಗೂ 10 ಕೆ.ಜಿ. ಮೈದಾ ಅಂಟನ್ನು ಬಳಸಿ, ವಿದ್ಯಾರ್ಥಿಗಳು ಹತ್ತು ದಿನಗಳ ಕಾಲ ಅಹರ್ನಿಶಿ ಶ್ರಮಿಸಿದರು. ಹಂತ ಹಂತವಾಗಿ ಪತ್ರಿಕೆಯನ್ನು ಅಂಟಿಸಿ, ಆಕರ್ಷಕವಾಗಿ ಆಕಾರ ನೀಡಿದ ನಂತರ ಮೂರ್ತಿಗೆ ನೈಸರ್ಗಿಕ ಬಣ್ಣಗಳಿಂದ ಅಲಂಕಾರ ಮಾಡಲಾಗಿದೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ, ಪ್ರಕೃತಿಗೆ ಹಾನಿಯಾಗದಂತೆ ತಯಾರಿಸಿರುವುದು ಈ ಮೂರ್ತಿಯ ಪ್ರಮುಖ ವಿಶೇಷತೆ.

ಮೆರವಣಿಗೆಯ ಸಾಂಸ್ಕೃತಿಕ ಶೋಭೆ

ಶಾಲಾ ಆವರಣದಿಂದ ಹೊರಡುವ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ನಂದಿ ಕೋಲು, ಕುದುರೆ, ಪಟ ಮುಂತಾದ ಜನಪದ ಕಲೆಗಳನ್ನು ಪ್ರದರ್ಶಿಸಲಿದ್ದಾರೆ. ಶಾಲೆಯ ವಾದ್ಯಗೋಷ್ಠಿಯು ಭಜನೆ ಹಾಗೂ ಭಕ್ತಿಗೀತೆಗಳೊಂದಿಗೆ ಶೋಭೆ ಹೆಚ್ಚಿಸಲಿದ್ದು, ಮಕ್ಕಳ ಭಕ್ತಿ ನೃತ್ಯ, ಪದ್ಯಪಾಠ ಹಾಗೂ ಕಲಾತ್ಮಕ ಅಭಿವ್ಯಕ್ತಿ ಮೆರವಣಿಗೆಯ ಆಕರ್ಷಣೆಯಾಗಲಿದೆ.

ಮಾರ್ಗದರ್ಶನ ಮತ್ತು ಸಹಕಾರ

ಈ ಪೇಪರ್ ಗಣಪತಿ ಡಾ. ಜಯಂತ್ ರವರ ಕಲ್ಪನೆಯ ಕೂಸು. ಕಳೆದ ಹತ್ತು ವರ್ಷಗಳಿಂದ ಈ ಶಾಲೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯಾಗುತ್ತಿದ್ದು, ಇದು ದಾವಣಗೆರೆಯಾದ್ಯಂತ ಗಮನ ಸೆಳೆಯುತ್ತಿದೆ. ಶಾಲೆಯ ಡ್ರಾಯಿಂಗ್ ಶಿಕ್ಷಕರ ಸಹಕಾರ ಹಾಗೂ ಡಾ. ಜಸ್ಟಿನ್ ಡಿಸೋಜಾ ಅವರ ತಾಂತ್ರಿಕ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ದೊರೆತಿದೆ. ಶಾಲೆಯ ಅಧ್ಯಕ್ಷರಾದ ಹೇಮಂತ್ ಸರ್ ಮೆರವಣಿಗೆಯ ಎಲ್ಲಾ ವ್ಯವಸ್ಥೆಗಳಿಗೆ ನೇತೃತ್ವ ವಹಿಸಿದ್ದಾರೆ.

ಶಿಕ್ಷಕರ ಅಭಿಪ್ರಾಯ

“ಗಣೇಶನು ವಿಜ್ಞ ವಿನಾಶಕ, ಆದರೆ ನಾವು ತಯಾರಿಸಿದ ಪೇಪರ್ ಗಣಪತಿ ಸಮಾಜಕ್ಕೆ ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶ ನೀಡುತ್ತಿದೆ. ಮಕ್ಕಳು ಕಲೆಯೊಂದಿಗೆ ಜವಾಬ್ದಾರಿಯುತ ನಾಗರಿಕರಾಗುವ ದಾರಿಯಲ್ಲಿ ಸಾಗುತ್ತಿದ್ದಾರೆ” ಎಂದು ಶಿಕ್ಷಕರು ಹರ್ಷ ವ್ಯಕ್ತಪಡಿಸಿದರು.

ಭವಿಷ್ಯದ ಮಾದರಿ

ಈ ಪ್ರಯತ್ನವನ್ನು ಜಿಲ್ಲಾಡಳಿತವು ಇತರ ಶಾಲೆಗಳಲ್ಲಿಯೂ ಅನುಸರಿಸಿದರೆ, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದರ ಜೊತೆಗೆ ಸಾಂಸ್ಕೃತಿಕ ಸಂವೇದನೆ ಬೆಳೆಸಲು ಇದು ಮಹತ್ವದ ಹೆಜ್ಜೆಯಾಗಲಿದೆ. ಸಮಾಜದ ಬೆಂಬಲ ದೊರೆತರೆ, ಇಂತಹ ಪರಿಸರ ಸ್ನೇಹಿ ಹಬ್ಬಗಳು ಮುಂದಿನ ದಿನಗಳಲ್ಲಿ ಜನಆಂದೋಲನದ ರೂಪ ತಾಳಲಿವೆ.

Friday, August 15, 2025

“ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ”

ದಾವಣಗೆರೆ ಆಗಸ್ಟ್ 15

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. 3 ನೇ ತರಗತಿ ವಿದ್ಯಾರ್ಥಿನಿ ಚೇತನಾ ಧ್ವಜಾರೋಹಣ ಮಾಡಿದಳು. ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಧರಿಸಿದ PreKG , LKG ಹಾಗೂ UKG ಮಕ್ಕಳು ಗಮನ ಸೆಳೆದರು. LKG ಯ ನುಸ್ರಖಾಜ್ , ಜಾಹ್ನವ್ ಹಾಗೂ ಗಗನ್, ಯುಕೆಜಿ ಯ ಅಹಾನ, ಸಾತ್ವಿಕ್ ಮತ್ತು ಕಾರುಣ್ಯ ಇವರು ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಮಾಡಿದರು.
2 ನೇ ತರಗತಿಯ ಅಥರ್ವ ,ಸಂಗೊಳ್ಳಿ ರಾಯಣ್ಣನ ಏಕಪಾತ್ರಾಭಿನಯ ಪ್ರದರ್ಶಿಸಿದನು. 6ನೇ ತರಗತಿ ಮಕ್ಕಳು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ವಿವಿಧ ತರಗತಿಯ ಒಟ್ಟು 80 ಮಕ್ಕಳಿಂದ “ಮಾತೆ ಪೂಜಕ” ಎಂಬ ಹಾಡಿಗೆ ಸಾಮೂಹಿಕವಾಗಿ ಹಾಡಿದ್ದು ವಿಶೇಷವಾಗಿತ್ತು .ಹೈಸ್ಕೂಲ್ ವಿದ್ಯಾರ್ಥಿಗಳಿಂದ ಕಾರ್ಗಿಲ್ ವಿಜಯೋತ್ಸವ ನಾಟಕ ಪ್ರದರ್ಶಿಸಲಾಯಿತು.







ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ , ಬೋಧಕ ಹಾಗೂ ಬೋಧಕೇತರ ವರ್ಗದವರಿಂದ ಪಾಲಕರಿಂದ ಮೈದಾನ ತುಂಬಿತ್ತು. ಸಂಸ್ಥೆಯ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿ ಕಾರ್ಯಕ್ರಮ ವೀಕ್ಷಿಸಿದರು.

Sunday, August 10, 2025

ವಂದೇ ಭಾರತ್ ಸ್ವಾಗತ : ಭಾಗವಹಿಸಿದ ಸಿದ್ಧಗಂಗಾ ಸ್ಕೌಟ್ ಮತ್ತು ಗೈಡ್ ಮಕ್ಕಳು


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆ ದಾವಣಗೆರೆ, ದಿನಾಂಕ 10-08-2025 ರಂದು, ಬೆಂಗಳೂರಿನಿಂದ ಬೆಳಗಾವಿಗೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್ ಅನ್ನು ಮಾನ್ಯ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು ಈ ನಿಮಿತ್ತ ದಾವಣಗೆರೆ ರೈಲು ನಿಲ್ದಾಣದಲ್ಲಿ ನೂತನ ಕಾರ್ಯವೈಕರಿಯುಳ್ಳ ರೈಲನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು, ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ  ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ನೃತ್ಯ,ಹಾಗೂ ನೈರುತ್ಯ ರೈಲ್ವೆ ವಿಭಾಗದಿಂದ ಆಯೋಜಿಸಿದ್ದ ಚಿತ್ರಕಲಾ,ಭಾಷಣ,ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಸಿದ್ಧಗಂಗಾಶಾಲೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದೆ ಶ್ರೀಮತಿ ಪ್ರಭಾಮಲ್ಲಿಕಾರ್ಜುನ್ ಮೇಡಂ ಅವರಿಂದ ಪ್ರಥಮ.ದ್ವಿತೀಯ, ತೃತೀಯ ಸ್ಥಾನ ಪಡೆದು ಪ್ರಶಸ್ತಿಪತ್ರ ಹಾಗೂ ಬಹುಮಾನ ಪಡೆದರು,ದಾವಣಗೆರೆಇಂದ ಹಾವೇರಿಯ ತನಕ ನೂತನ ವಂದೇಭಾರತ್ ರೈಲಿನಲ್ಲಿ‌ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಪ್ರಯಾಣಿಸಿ ಪುಳಕಗೊಂಡರು ಸ್ಥಳೀಯ ಸಂಸ್ಥೆಯ 105 ಸ್ಕೌಟ್ ಗೈಡ್ ‌ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.