Friday, March 8, 2019

ಜಿಟಾ ವಾಸ್ – ಎಂಬ ಮಹಿಳಾ ಉದ್ಯಮಿಯ ಯಶೋಗಾಥೆ

ಜಿಟಾ ವಾಸ್ – ಎಂಬ ಮಹಿಳಾ ಉದ್ಯಮಿಯ ಯಶೋಗಾಥೆ

ತಾಯಿ ಸತ್ತಾಗ ಆ ಮಗುವಿಗೆ ನಾಲ್ಕು ವರ್ಷ, ಶವವಾಗಿ ಮಲಗಿದ್ದ ತಾಯಿಯ ಸಮೀಪ ಕುಳಿತು ಸೆರಗಿನೊಡನೆ ಆಟವಾಡುತ್ತಿದ್ದ ಈ ಮುಗ್ಧ ಶಿಶುವನ್ನು ಕಂಡು ಮರುಗಿದವರು ಅದರ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿದರು. ನಾಲ್ಕು ಹೆಣ್ಣು ಮಕ್ಕಳ ನಂತರ ಹುಟ್ಟಿದ ಐದನೇ ಹೆಣ್ಣು ಮಗುವದು. ತಂದೆ ಅನಿವಾರ್ಯ ಕಾರಣದಿಂದ, ಹಿರಿಯರ ಒತ್ತಾಯದಿಂದ ಮರುಮದುವೆಯಾದರು. ಮಲತಾಯಿಯು ತಾಯಿಯಾಗಲು ಸಾಧ್ಯವೇ? ತಂದೆಯ ಅನಾರೋಗ್ಯದ ನಡುವೆ ಬಾಲಕಿ ಬೆಳೆದಳು. 10ನೇ ತರಗತಿ ಮುಗಿಸಿ ದೊಡ್ಡಕ್ಕನ ಆಶ್ರಯದಲ್ಲಿ ಟಿ.ಸಿ.ಹೆಚ್. ಮಾಡಲು ಹುಟ್ಟಿದೂರು ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಮೈಸೂರಿಗೆ ಹೋದಳು. ತಂದೆಯ ಆಣತಿಯಂತೆ 18 ತುಂಬಿದ ದಿನವೇ ಮದುವೆಯಾಯಿತು. ಸಾಂಸಾರಿಕ ಜೀವನಕ್ಕೆ ಬಿದ್ದ ಹುಡುಗಿಗೆ ಗಂಡನ ಧಾರಾಳತನ, ಸ್ನೇಹಿತರ ಹಿಂಡು, ದುಂದುವೆಚ್ಚ ಅರಿವಾಗುವಷ್ಟರಲ್ಲಿ ಒಂದು ಹೆಣ್ಣು ಮಗುವಿನ ತಾಯಿಯಾದಳು. ಗಂಡ ಸಾಲದಲ್ಲಿ ಮುಳುಗಿದರು. ಊರು ಬಿಟ್ಟರು. ಕಣ್ಣೆದುರು ಬೆಳೆಯುತ್ತಿರುವ ಹೆಣ್ಣು ಮಗು ಜೊತೆಗೆ ಹೊಟ್ಟೆಯಲ್ಲಿರುವ ಕೂಸಿನೊಡನೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೆರಿಗೆಗೆ ಮತ್ತು ಹುಟ್ಟಿದ ಕೂಸಿನ ಹಾಲಿಗೆ ದಿಕ್ಕಿಲ್ಲದ ಪರದಾಡಿದ ದಿನಗಳಲ್ಲಿ ಅತ್ತು ಅತ್ತು ಕಣ್ಣು ಬಾತುಕೊಂಡವು. ನೆರವಿಗೆ ಯಾರೂ ಬರಲಿಲ್ಲ. ಗಂಡ ನಡೆಸುತ್ತಿದ್ದ ಪಾತ್ರೆ ಅಂಗಡಿ ಮುಚ್ಚಿತು. ಎಂದೂ ಹೊರ ಹೋಗದ, ಲೋಕ ಜ್ಞಾನ ತಿಳಿಯದ ಎರಡು ಮಕ್ಕಳ ತಾಯಿ, ಸ್ಫುರದ್ರೂಪಿ ಯುವತಿ ಸಮಾಜದಲ್ಲಿ ಬದುಕುವ ದಾರಿ ಕಾಣದೆ ದಿಕ್ಕೆಟ್ಟಳು. ಮದುವೆ ಎಂದು ಅರ್ಧ ಓದಿ ಬಿಟ್ಟಿದ್ದ ಟಿ.ಸಿ.ಹೆಚ್. ನಿಂದ ಏನೂ ಉಪಯೋಗವಾಗಲಿಲ್ಲ. ಮನೆ ಬಾಡಿಗೆ, ಮಕ್ಕಳ ಹಸಿದ ಹೊಟ್ಟೆಗಳಿಗೆ ಇಷ್ಟಿಷ್ಟೇ ಹಾಕುತ್ತೇನೆಂದರೂ ಕೈಯಲ್ಲಿ ಬಿಡಿಗಾಸಿಲ್ಲ. ಒಡವೆಗಳನ್ನು ಮಾರಿ ಕೆಲವು ಕಾಲ ದೂಡಿದಳು. ಬದುಕು ಕಟ್ಟಿಕೊಳ್ಳಲೇಬೇಕಿತ್ತು. ಹೊರ ಪ್ರಪಂಚಕ್ಕೆ ಕಾಲಿಟ್ಟಳು. ಗಂಡ ಮುಚ್ಚಿ ಹೊಗಿದ್ದ ಪಾತ್ರೆ ಅಂಗಡಿ ತೆರೆದು ವ್ಯಾಪಾರ ಆರಂಭಿಸಿದಳು. ನಿಧಾನವಾಗಿ ಚೇತರಿಸಿಕೊಂಡಳು. ವ್ಯಾಪಾರದ ಒಳ-ಹೊರಗುಗಳನ್ನು ಕರತಲಾಮಲಕ ಮಾಡಿಕೊಂಡಳು. ಒಂದಿದ್ದ ಅಂಗಡಿ ಎರಡಾಯಿತು. ಗಂಡ ಹಿಂತಿರುಗಿದ. ಮಗಳು ಬೆಳೆದಳು. ಮದುವೆ ವಯಸ್ಸಿಗೆ ಬಂದಳು. ಗಂಡು ಹುಡುಕುವ ಕಾಲಕ್ಕೆ ಗಂಡನ ಆರೋಗ್ಯ ವಿಷಮಿಸಿತು. 35ನೇ ವಯಸ್ಸಿಗೆ ವಿಧವೆಯಾದಳು. ಧೃತಿಗೆಡಲಿಲ್ಲ. ಮಗಳ ಮದುವೆಯನ್ನು ಯಥಾಶಕ್ತಿ ಮಾಡಿದಳು. ಮಗನನ್ನು ಓದಿಸಿದಳು. ಬಾಡಿಗೆಗಿದ್ದ ಮನೆಯ ಜಾಗವನ್ನು ಕೊಂಡು ಸ್ವಂತ ಮನೆ ಕಟ್ಟಿಸಿದಳು. ಸಂಬಂಧಿಗಳನ್ನೆಲ್ಲ ಕರೆಸಿ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದಳು. ದೈವ ಪರೀಕ್ಷೆ ನಿಲ್ಲಲಿಲ್ಲ. ಮಗಳು ಬಾಣಂತಿ ಸನ್ನಿಗೆ ಒಳಗಾಗಿ ಎಂಟು ತಿಂಗಳ ಎಳೆಯ ಕೂಸನ್ನು ಬಿಟ್ಟು ಇಹಲೋಕ ತ್ಯಜಿಸಿದಳು. ವಯಸ್ಸಿಗೆ ಬಂದ ಮಗಳನ್ನು ಕಳೆದುಕೊಂಡ ತಾಯಿಯ ದುಃಖ ಹೇಳತೀರದು. ಬಾಳಿ ಬದುಕಬೇಕಿದ್ದ ಮಗಳು ಮರೆಯಾದಾಗ ಜೀವ ಭಾರವಾಯಿತು. 40 ನೇ ವಯಸ್ಸಿಗೆ ಗಂಡ – ಮಗಳು ಇಬ್ಬರನ್ನೂ ಕಳೆದುಕೊಂಡ ಅಜ್ಜಿಗೆ ಮೊಮ್ಮಗಳ ಜವಾಬ್ದಾರಿ ಜೀವನ್ಮುಖಿ ಮಾಡಿತು. ಆಸರೆಯಾಗಿದ್ದ ಮಗನನ್ನು ಬೆಳೆಸುತ್ತಾ ತನ್ನ ವ್ಯಾಪಾರವನ್ನು ವಿಸ್ತರಿಸಿದಳು. ಪೇಟೆಬೀದಿಯಲ್ಲಿ ತಲೆ ತಗ್ಗಿಸಿಕೊಂಡು ನಡೆಯುತ್ತಲೇ ತನ್ನ ಯೌವ್ವನದ ದಿನಗಳನ್ನು ನಿಟ್ಟುಸಿರಿನ ಮುಸುಕಿನೊಳಗೆ ದೂಡಿದಳು. ನೋಡುಗರು ಬೆರಗಾಗುವಂತೆ ಆರ್ಥಿಕವಾಗಿ ಸಬಲಳಾದಳು. ಕಷ್ಟದಲ್ಲಿದ್ದಾಗ ಬಿಡಿಗಾಸನ್ನೂ ಕೊಡದ ನೆಂಟರಿಷ್ಟರನ್ನು ಪ್ರೀತಿಯಿಂದ ಕಂಡು ಕೈಲಾದ ಸಹಾಯ ಮಾಡಿದಳು. ದಾನಧರ್ಮಗಳನ್ನು ಮಾಡುತ್ತಾ ಯಜಮಾನಿಯಾದಳು. ಮೂರು ಅಂತಸ್ತಿನ ಅಂಗಡಿ ಸಮುಚ್ಛಯವನ್ನು ಕಟ್ಟಿಸಿ ವ್ಯವಹಾರ ನಿಪುಣೆ ಎನಿಸಿಕೊಂಡಳು. ಮೃದು ಮಾತಿಗೆ, ಗ್ರಾಹಕರನ್ನು ಅನುನಯಿಸಿ ಕೊಳ್ಳುವಂತೆ ಮಾಡುವ ಚಾತುರ್ಯಕ್ಕೆ ಹಳ್ಳಿಗರು ‘ಈ ಅಮ್ಮನ’ ಅಂಗಡಿಗೆ ಮುಗಿಬಿದ್ದರು. ಬಿಡುವಿಲ್ಲದ ವ್ಯಾಪಾರ – ವಹಿವಾಟಿನಲ್ಲಿ ತನ್ನ ನೋವು ಮರೆಯಲು ಪ್ರಯತ್ನಿಸಿದಳು. ಯಶಸ್ವೀ ಉದ್ಯಮಿ ಎನಿಸಿಕೊಂಡಳು. ಪುರುಷ ಪ್ರಧಾನ ಪಾತ್ರೆ ಅಂಗಡಿ ವ್ಯವಹಾರದಲ್ಲಿ ತನ್ನದೇ ವಿಶಿಷ್ಠ ಛಾಪು ಮೂಡಿಸಿದ ಈ ಮಹಿಳೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪೇಟೆ ಬೀದಿಯಲ್ಲಿರುವ ವಾಸ್ ಮೆಟಲ್ಸ್ ನ ಒಡತಿ “ಜೀಟಾ ವಾಸ್” ನಿಸ್ಸಾಹಕ ಹೆಣ್ಣು ಮಕ್ಕಳಿಗೊಂದು ಮಾದರಿ! ಮಾರ್ಚ್ 8ರ ಮಹಿಳಾ ದಿನಾಚರಣೆಯಂದು ಈ ಯಶಸ್ವಿ ಮಹಿಳೆಗೊಂದು ಸಲಾಂ ಹೇಳೋಣ.


- ಹೇಮಂತ್ ಡಿ ಎಸ್

1 comment:

  1. Great Information sharing.I am very happy to read this article .. thanks for giving us go through info.Fantastic nice. I appreciate this post Take a look at Water Heaters Black Friday 2020 Deals

    ReplyDelete