Tuesday, June 15, 2021

Admission open for LKG to 9th Std

LKG ಇಂದ 9 ನೇ ತರಗತಿ, ರಾಜ್ಯ ಮತ್ತು CBSE ಪಠ್ಯಕ್ರಮಕ್ಕೆ ಪ್ರವೇಶ ಪ್ರಾರಂಭವಾಗಿದೆ.

ಪಾಲಕರು ಶಾಲಾ ಕಚೇರಿಯಿಂದ ಅರ್ಜಿ ತೆಗೆದುಕೊಳ್ಳಬಹುದು.

ಕಚೇರಿ ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 

ಭರ್ತಿ ಮಾಡಿದ ಅರ್ಜಿಯೊಂದಿಗೆ, ನೀವು ಆಧಾರ್ ಕಾರ್ಡ್, ಹಿಂದಿನ ಅಂಕಗಳ ಕಾರ್ಡ್, ಫೋಟೋ ಲಗತ್ತಿಸಬೇಕು.

LKG ಗೆ ಕನಿಷ್ಠ ವಯಸ್ಸು 3 ವರ್ಷ 10 ತಿಂಗಳು ಮತ್ತು 1 ನೇ ತರಗತಿಗೆ 5 ವರ್ಷ ಮತ್ತು 10 ತಿಂಗಳು

ಹೆಚ್ಚಿನ ವಿವರಗಳಿಗಾಗಿ, ಕಚೇರಿಯನ್ನು 9108988874, 9845558226, 08192-232816 ಸಂಪರ್ಕಿಸಬಹುದು

Admission open for LKG to 9th Std, State & CBSE syllabus

Parents can take application from School office. 

Office timing will be 10 AM to 2 PM

Along with filled application form, you need to attach copy of Aadhar Card, Previous marks card (if applicable), Passport size photograph

Minimum age for LKG is 3 Years 10 Months & for 1st Standard 5 Years and 10 Months

For any additional detail, please contact office at 9108988874, 9845558226, 08192-232816

Monday, June 14, 2021

MCQ for SSLC

Link for Test

All the best for your exam. Here are 10 papers for your to practice if you have not tried yet.

➤  MCQ Test 10 (Science, Mathematics, Social - 120 Marks)

            https://forms.gle/YouFeACfY3t5Nmtw6

➤  MCQ Test 9 (Kannada, English, Hindi - 120 Marks)

            https://forms.gle/f7WSerJUwpeeaonPA

➤ Davanagere District Level MCQ 2 ( Core Subjects - Science, Mathematics, Social Science)

    Science - https://drive.google.com/file/d/10liifW_RUKpzAJpCQs9oKzNeWBRdGz1D/view?usp=sharing

    Mathematics - https://drive.google.com/file/d/1C4aEv2-K2nTaKGSI0eUtyOLlZTmS6nLF/view?usp=sharing

    Social Science - https://drive.google.com/file/d/1Gh42kR_mTK1pMtq6wAFXVxolCJDp8-3P/view?usp=sharing

Sunday, June 6, 2021

ಕೋವಿಡ್ 19ರ ವಿರುದ್ದ ಮಾನವೀಯ ಸ್ಪರ್ಶ

ಕೋವಿಡ್ 19ರ ವಿರುದ್ದ ಮಾನವೀಯ ಸ್ಪರ್ಶ

ಸಿದ್ಧಗಂಗಾ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ಆಮ್ಲಜನಕ ಸಾಂದ್ರಕಗಳ ಕೊಡುಗೆ

ದಾವಣಗೆರೆಯ ಜನರು ಸದಾ ಸೇವೆಯಲ್ಲಿ ಮುಂದಿದ್ದಾರೆ. ನಾನು ಅನೇಕ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆದರೆ ದಾವಣಗೆರೆಯ ಜನತೆಯು ದಾನ ಮಾಡುವ, ಸಮಾಜಕ್ಕೆ ಸ್ಪಂದಿಸುವ ಮನೋಭಾವವನ್ನು ಬೇರೆಲ್ಲೂ ನೋಡಲಿಲ್ಲ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಇಂದು ಬೆÀಳಿಗ್ಗೆ ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿರುವ ಸುಮಾರು 5ಲಕ್ಷ ರೂ ಗಳ ಹತ್ತು ಆಕ್ಸಿಜನ್ ಕಾನ್ಸಂಟ್ರೆಟರ್‍ಗಳನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಿದ್ಧಗಂಗಾ ವಿದ್ಯಾಸಂಸ್ಥೆ ಸದಾ ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಾ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದೆ. ಭೂಕಂಪ, ಅತಿವೃಷ್ಟಿಯ ಸಂದರ್ಭದಲ್ಲಿ ದೇಣಿಗೆ ನೀಡಿದೆ. ಕಳೆದ ವರ್ಷ ಆಹಾರ ಕಿಟ್‍ಗಳನ್ನು ನೀಡಿ ತನ್ನ ಪರಂಪರೆ ಉಳಿಸಿಕೊಂಡಿದೆ. ಇದೀಗ ಅತ್ಯವಶ್ಯಕವಾಗಿ ಬೇಕಾಗಿರುವ ಆಮ್ಲಜನಕ ಸಾಂದ್ರಕಗಳನ್ನು ಪೂರೈಸುತ್ತಿದ್ದಾರೆ. ಈ ಸತ್ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಅವರು ಎಲ್ಲಿದ್ದರೂ ಅವರಿಗೆ ಜಿಲ್ಲಾಡಳಿತದ ಪರವಾಗಿ ಅಭಿನಂದಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳು ಮನಃಪೂರ್ವಕವಾಗಿ ಹಾರೈಸಿದರು ಮತ್ತು ದಾವಣಗೆರೆಯ ಇತಿಹಾಸದಲ್ಲಿ ಈ ಸತ್ಕಾರ್ಯ ಶಾಶ್ವತವಾಗಿ ದಾಖಲಾಗುವುದು ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆಯೆ ಪೂಜ್ಯ ಮಹಾಪೌರರಾದ ಎಸ್.ಟಿ.ವಿರೇಶ್‍ರವರು ಕೋವಿಡ್ 19ರ ಕ್ಲಿಷ್ಟ ಪರಿಸ್ಥಿತಿಯಲ್ಲಿ ಎಲ್ಲರೂ ಸಹಕರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಿದ್ಧಗಂಗಾ ವಿದ್ಯಾಸಂಸ್ಥೆ ಸೇವಾಕಾರ್ಯಗಳಲ್ಲಿ ಜಿಲ್ಲೆಯ ಮತ್ತು ರಾಷ್ಟ್ರೀಯ ವಿಪತ್ತುಗಳ ಸಂದರ್ಭದಲ್ಲಿ ಸದಾ ತನ್ನ ಕೈ ಜೋಡಿಸುತ್ತಾ ಬಂದಿದೆ. ಅವರ ಸೇವಾಭಾವನೆಗೆ ಕೃತಜ್ಞತೆಗಳು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್‍ರವರು ಈ ಆಕ್ಸಿಜನ್ ಕಾನ್ಸಂಟ್ರೇಟರ್‍ಗಳು ಯಾರಿಗೆ ಲಭ್ಯವೆಂದು ಸವಿಸ್ತಾರವಾಗಿ ತಿಳಿಸಿದರು. ಕೋವಿಡ್ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೂ ಕೆಲವೊಮ್ಮೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಆಕ್ಸಿಮೀಟರ್‍ನಲ್ಲಿ 90ಕ್ಕಿಂತ ಕಡಿಮೆಯಾದಾಗ ಉಸಿರಾಟ ಸಮಸ್ಯೆಯಿಂದ ಬಳಲುತ್ತಾರೆ. ತಕ್ಷಣ ಆಮ್ಲಜನಕದ ಪೂರೈಕೆಯಾಗಬೇಕು. ಅಂತಹ ರೋಗಿಗಳಿಗೆ ಆಕ್ಸಿಜನ್ ಸಾಂದ್ರಕಗಳು ಜೀವರಕ್ಷಕವಾಗಿರುತ್ತದೆ. ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳಿಗೆ ವೈದ್ಯರು ಆಮ್ಲಜನಕ ಪೂರೈಕೆ ಅವಶ್ಯಕತೆ ಇದೆ ಎಂದು ಮನಗಂಡು ರೋಗಿಯ ವಿವರ ಬರೆದು ಪತ್ರಕೊಟ್ಟರೆ ಅಂತಹ ರೋಗಿಗಳಿಗೆ ಉಚಿತವಾಗಿ ಸಿದ್ಧಗಂಗಾ ಸಂಸ್ಥೆಯಿಂದ ಈ ಯಂತ್ರ ಕೊಡಲಾಗುತ್ತದೆ. ಅವರ ಅವಶ್ಯಕತೆ ಮುಗಿದಾಗ ಸುಸ್ಥಿತಿಯಲ್ಲಿ ಹಿಂತಿರುಗಿಸಿದರೆ ಬೇರೆಯವರಿಗೆ ಕೊಡಲು ಅನುಕೂಲವಾಗುತ್ತದೆ. ಇದು ಸಿದ್ಧಗಂಗಾ ಸಂಸ್ಥೆಯಿಂದ ಒಂದು ಅಳಿಲು ಸೇವೆ ಎಂದರು. ಸಂಸ್ಥೆಯ ಕರೆಗೆ ಓಗೊಟ್ಟು ತಮ್ಮ ಸಹಾಯ ಹಸ್ತ ಚಾಚಿದ ದೇಶ-ವಿದೇಶಗಳಲ್ಲಿ ನೆಲೆಸಿರುವ ಹಿರಿಯ ವಿದ್ಯಾರ್ಥಿಗಳು ಕೇವಲ ಮೂರುದಿನಗಳಲ್ಲಿ ನೆರವಿನ ಮಹಾಪೂರ ಹರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್, ಕಾರ್ಯದರ್ಶಿ ಹೇಮಂತ್, ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ, ಪತ್ರಕರ್ತರು ಮತ್ತು ಹಿರಿಯ ವಿದ್ಯಾರ್ಥಿಗಳಾದ ಸಾಮ್ರಾಟ್ ಮತ್ತು ರಾಮಮನೋಹರ ಅವರು ಉಪಸ್ಥಿತರಿದ್ದರು. 


Friday, April 30, 2021

Bridge Course for CBSE/ICSE 10 Students

Prestigious Siddaganga PU College is organising a Bridge Course for CBSE/ICSE 10 Students getting into PUC Science. This bridge course will help students to understand PU concepts effectively. To register to bridge course signup with link https://bit.ly/3vgPG9W

Watch video below for more detail


Sunday, April 25, 2021

1 PUC Admission (for CBSE/ICSE Students)

 Dear Parent,

Since CBSE/ICSE Grade 10 board exams are cancelled this year, admission for I PUC will be open to all CBSE/ICSE Grade 10 students. There will be a eligibility test based on Science & Mathematics. Upon clearing this test, parents can get their child admitted by paying fee as per the table below. However students can get up to 100% tuition fee as MSS scholarship program in the name of founder M S Shivanna.

Contact office for further detail

Landline : 08192-233635

Mobile : 8073301604

Address : 2347, Siddalingeshwara Nagar, Davanagere

Virtual Tour : https://youtu.be/f-pSmnSXD6c

Direction : https://goo.gl/maps/kb5hpAGk4STb2v7Y6

Details of MSS Scholarship (For CBSE/ICSE Students Only)

1. MSS Scholarship exam will be based on 1st PUC syllabus.

2. Exam will be for 600 marks covering PCMB/CS & 2 Languages based on combination opted by student.

3. Exam will be tentatively held in the month of August 2021.

4. Exam will be in offline mode using Pen and Paper.

5. Eligible students will receive scholarship amount in the form of Cheque.

6. Only students who get admitted on or before May 31st June 26th 2021 will be eligible for MSS Scholarship.

7. MSS Scholarship will be applicable only for 1 PUC Students.

8. Date of exam and portion will be published later.



Hostel Fee is based on room selection, will be allotted based on availability. 



Sunday, April 18, 2021

ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದ ಹರಿಕಾರನ ಪ್ರಥಮ ವರ್ಷದ ಸ್ಮರಣೆ

 ಶಿಕ್ಷಣ ಶಿಲ್ಪಿ ಎಂ.ಎಸ್.ಶಿವಣ್ಣ

ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದ ಹರಿಕಾರನ ಪ್ರಥಮ ವರ್ಷದ ಸ್ಮರಣೆ

‘ಶಿವಣ್ಣ’ ಎಂಬ ಶಿಕ್ಷಣದ ದ್ರುವತಾರೆ ಸಿದ್ಧಗಂಗೆಯ ನಭದಿಂದ ಜಾರಿ ಬಿದ್ದು ಏಪ್ರಿಲ್ 18 ಕ್ಕೆ ವರ್ಷ ತುಂಬುತ್ತದೆ. ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದು ಸಿದ್ಧಗಂಗೆಯ ವೈಶಿಷ್ಠ್ಯತೆ ಮೆರೆದು ತಮ್ಮ ಪೂಜ್ಯ ಗುರುಗಳಾದ ಲಿಂ|| ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಧ್ಯೇಯ ಉದ್ದೇಶಗಳನ್ನು ಈಡೇರಿಸಿ ಸಾರ್ಥಕ ಭಾವದಿಂದ ಗುರುಗಳನ್ನು ಅರಸುತ್ತಾ ಸಿದ್ಧಲಿಂಗನ ಪಾದಗಳಲ್ಲಿ ಲೀನವಾದ ಶಿವಣ್ಣನವರು ಅಖಂಡ ಗುರುಭಕ್ತಿ, ದೈವಭಕ್ತಿಯ ಪ್ರತೀಕವಾಗಿದ್ದರು.

ಎಂಭತ್ತು ಸಂವತ್ಸರಗಳನ್ನು ಹರಳುಗಟ್ಟಿಸಿ ಇಹಲೋಕ ವ್ಯಾಪಾರ ಮುಗಿಸಿದ ಶಿವಣ್ಣನವರ ಜೀವನ ಹೋರಾಟದಿಂದಲೇ ಪ್ರಾರಂಭವಾಗಿ ಹೋರಾಟದಲ್ಲೇ ಮುಕ್ತಾಯಗೊಂಡಿತು. ಶಿಕ್ಷಣ ರಂಗದಲ್ಲಿ ಮಂತ್ರದಂಡವಿಲ್ಲದ ಮಾಂತ್ರಿಕನಾಗಿ ಐದು ದಶಕಗಳಿಗೂ ಮೀರಿ ಅಮಿತ ಶ್ರದ್ಧೆಯಿಂದ ಲಕ್ಷ - ಲಕ್ಷ ವಿದ್ಯಾರ್ಥಿಗಳ ಭವಿಷ್ಯ ತಿದ್ದಿ – ತೀಡಿ ಸುಂದರ ಆಕಾರ ನೀಡಿದ ಶಿವಣ್ಣ ಮೇಷ್ಟ್ರನ್ನು ಸುಲಭವಾಗಿ ಮರೆಯಲಾಗದು.



ಪ್ರೀತಿಯಿಂದ ಮಕ್ಕಳ ಮನಸ್ಸು ಗೆದ್ದು, ತಪ್ಪಿದಾಗ ಶಿಕ್ಷಿಸಿ, ಸರಿದಾರಿಗೆ ತಂದ ಅದ್ವಿತೀಯ ಗುರುವನ್ನು ಅವರ ಶಿಷ್ಯಗಣ ಆರಾಧಿಸುತ್ತಿದ್ದಾರೆ. ಉಳಿ ಪೆಟ್ಟು ಬೀಳದೆ ಕಗ್ಗಲ್ಲು ಮೂರ್ತಿಯಾಗದು ಎಂಬ ಸಿದ್ಧಾಂತದ ಶಿವಣ್ಣನವರಿಗೆ ಮಕ್ಕಳ ಭಾವಕೋಶದಲ್ಲೊಂದು ವಿಶಿಷ್ಠ ಸ್ಥಾನವಿದೆ.

ಶಿವಣ್ಣನವರು ದಾವಣಗೆರೆಯಲ್ಲಿ ಹುಟ್ಟಿ ಬೆಳೆದವರಲ್ಲ. ಆದರೆ ಇಲ್ಲಿಯ ಜೀವನಾಡಿಯ ಮಿಡಿತ ಅರಿತವರಾಗಿದ್ದರು. 60 ರ ದಶಕದಲ್ಲಿ ಎಸ್ ಎಸ್ ಎಲ್ ಸಿ ಎಂಬ ಭೂತವನ್ನು ಎದುರಿಸಲಾರದೆ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದವರ ಆಶಾಕಿರಣವಾಗಿ “ಶಿವಾನಂದ ಟ್ಯುಟೋರಿಯಲ್” ಎಂಬ ಮಿಣುಕು ದೀಪ ಹಚ್ಚಿ ಹಂತ ಹಂತವಾಗಿ ತೈಲ ಎರೆಯುತ್ತಾ ‘ಸಿದ್ಧಗಂಗಾ’ ಎಂಬ ಜ್ಞಾನ ಜ್ಯೋತಿ ಬೆಳಗಿಸಿ ದಶದಿಕ್ಕುಗಳಲ್ಲಿ ಅದರ ಪ್ರಕಾಶ ಹರಡುವಂತೆ ಮಾಡಿ ಶಿಕ್ಷಣದ ಕ್ರಾಂತಿಕಾರರಾದರು.

ಅಂಜಿಕೆ, ಅಳಕು, ಸುಳ್ಳು, ತಟ – ವಟ ಅರಿಯದ ನಿಷ್ಕಪಟಿ. ಬೇಕೆನಿಸಿದ್ದನ್ನು ಶತಾಯ ಗತಾಯ ಪಡೆಯುವ ಹಠಮಾರಿ. ಮಾಡುವ ಕೆಲಸದಲ್ಲಿ ಶ್ರದ್ಧೆ - ನಿಷ್ಠೆ. ಪಟ್ಟು ಬಿಡದ ಛಲಗಾರ. ನೊಂದವರ ಕಣ್ಣೀರಿಗೆ ಕರಗುವ, ಮೋಸ ವಂಚನೆಗಳಿಗೆ ಆರ್ಭಟಿಸುವ ವೈರುಧ್ಯ ಸ್ವಭಾವದ ಬ್ರಹ್ಮಸೃಷ್ಟಿ. ಪ್ರಾಣದ ಹಂಗು ತೊರೆದು ಸಾತ್ವಿಕ ಹೋರಾಟ ನಡೆಸಿದ್ದು ಈಗ ಇತಿಹಾಸ. ಸಮಕಾಲೀನರು ಶಿವಣ್ಣನವರ ಎದೆಗಾರಿಕೆಗೆ ಬೆರಗಾಗುತ್ತಿದ್ದರು.

ಶಾಲೆಯ ಹೊರತಾಗಿ ಅವರ ಕಾರ್ಯಕ್ಷೇತ್ರ, ಸಮಾಜಸೇವೆ, ಪತ್ರಿಕೋದ್ಯಮ, ಸಾಂಘಿಕ ಚಟುವಟಿಕೆ, ಕಲೆ, ನಾಟಕರಂಗಗಳಿಗೆ ವಿಸ್ತರಿಸಿತ್ತು. ಬಹುಮುಖ ಪ್ರತಿಭೆಯ ಶಿವಣ್ಣನವರಿಗೆ ಪಾಠ ಮಾಡುವುದು ಬಾಲ್ಯದ ಹವ್ಯಾಸ. ಮುಂದೆ ಅದು ಸಿದ್ಧಗಂಗಾ ವಿದ್ಯಾಸಂಸ್ಥೆಯ ಸ್ಥಾಪನೆಗೆ ನಾಂದಿಯಾಯಿತು. ಡಿ.ಎಡ್, ಬಿ.ಎಡ್ ಗಳಂತಹ ಯಾವುದೇ ಶಿಕ್ಷಕ ವೃತ್ತಿಯ ಅರ್ಹತೆಗಳಿಲ್ಲದೆ ಶಿಕ್ಷಣಕ್ಕೆ ಹೊಸ ರೂಪ ನೀಡಿ ಶಿಕ್ಷಣ ತಜ್ಞನೆಂಬ ಬಿರುದು ಪಡೆದರು.

ಸಿದ್ಧಗಂಗೆಗೆ ಸೇರಿದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವಂತೆಯೇ ಇಲ್ಲ. ಬೋಧನೆಯಲ್ಲಿನ ನಾವೀನ್ಯತೆ ಇಲ್ಲಿ ಎಲ್ಲರಿಗೂ ಕರಗತ. ಶಿಕ್ಷಣವೆಂಬುದು ಏಕಾಗ್ರತೆಯ ಕೂಸು. ಕಥೆಗಳ ಮೂಲಕ ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಿ ನಂತರ ಪಠ್ಯಗಳಲ್ಲಿ ತೊಡಗಿಸಿಕೊಳ್ಳುವುದು ಶಿವಣ್ಣನವರ ಬೋಧನಾ ಕ್ರಮವಾಗಿತ್ತು. ಎಷ್ಟೋ ವರ್ಷಗಳ ಹಿಂದೆ ಹೇಳಿದ ಕಥೆಗಳು ಮಕ್ಕಳ ಮನಸ್ಸಿನಲ್ಲಿ ಇಂದಿಗೂ ಅಚ್ಚೊತ್ತಿ ನಿಂತಿದೆ. ಕಥೆಗಳೆಂದರೆ ಅದು ಜೀವನದ ರಸಪಾಕ. ಅನುಭವದ ಮೂಸೆಯಲ್ಲಿ ಪುಟಿದ ಚಿನ್ನ. ತನ್ನ ವಾಗ್ಝರಿಯಿಂದ ಮಕ್ಕಳನ್ನು ಸೆಳೆಯುತ್ತಿದ್ದ ಸೂಜಿಗಲ್ಲಾಗಿದ್ದರು ಶಿವಣ್ಣನವರು. ಕಥೆಯ ಮೂಲಕ ನೀತಿ ಬೋಧಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿದ ಶ್ರೇಷ್ಠ ಗುರು!

ಖಂಡ – ತುಂಡವಾಗಿ ಮಾತನಾಡುತ್ತಿದ್ದ ಶಿವಣ್ಣನವರಿಗೆ ವೈರಿಗಳ ಸಮೂಹವೂ ದೊಡ್ಡದಿತ್ತು. ವೈರಿಯೂ ಮೆಚ್ಚುವಂತೆ ಬಾಳಿದ ಶಿವಣ್ಣನವರ ತತ್ವ - ಸಿದ್ಧಾಂತಗಳಿಂದ ಪ್ರಭಾವಿತರಾದ ಕ್ರಮೇಣ ಅವರೆಲ್ಲರೂ ಸ್ನೇಹಿತರಾದದ್ದು ಮತ್ತೊಂದು ದಾಖಲೆ.

ಶಿಕ್ಷಣಕ್ಕೆ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ, ವಿಜ್ಞಾನ ಆವಿಷ್ಕಾರಗಳಿಗೆ, ನಾಟಕ, ಸಂಗೀತ, ನೃತ್ಯಗಳಿಗೆ ಮುಕ್ತ ಅವಕಾಶ ನೀಡಿ ಶಿಕ್ಷಣದಿಂದ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆ ಎಂಬುದನ್ನು ಸದ್ದಿಲ್ಲದೆ ಸಾಧಿಸಿ ತೋರಿಸಿದ ಶಿವಣ್ಣನವರು ಶಾಲೆ ಸಮಾಜಮುಖಿಯಾಗಿರಬೇಕೆಂಬ ಸಂದೇಶವನ್ನು ತಮ್ಮ ಜೀವಿತ ಕಾಲದಲ್ಲಿ ಪಾಲಿಸಿ ಅದೇ ಪರಂಪರೆಯನ್ನು ಸಂಸ್ಥೆಯಲ್ಲಿ ಮುಂದುವರೆಸಿಕೊಂಡು ಹೋಗಲು ದಾರಿದೀಪವಾಗಿದ್ದಾರೆ.

ಮಹಾನಗರ ಪಾಲಿಕೆಯವರು ಕೆ.ಟಿ.ಜೆ ನಗರದ 18 ನೇ ಮುಖ್ಯ ರಸ್ತೆಗೆ “ಶಿಕ್ಷಣ ಶಿಲ್ಪಿ ಎಂ.ಎಸ್ ಶಿವಣ್ಣ ರಸ್ತೆ” ಎಂದು ನಾಮಕರಣ ಮಾಡಿ ಅವರ ನೆನಪನ್ನು ಶಾಶ್ವತಗೊಳಿಸಿದ್ದಾರೆ. ಈ ಸತ್ಕಾರ್ಯಕ್ಕೆ ಸಹಕರಿಸಿದವರೆಲ್ಲರಿಗೂ ಸಂಸ್ಥೆಯ ಕೃತಜ್ಞತೆಗಳು. ದಾವಣಗೆರೆ ವಿಶ್ವವಿದ್ಯಾನಿಲಯ ಲಿಂ|| ಎಂ.ಎಸ್ ಶಿವಣ್ಣನವರ ಸೇವೆಯನ್ನು ಪರಿಗಣಿಸಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಅವರ ಅಭಿಮಾನಿಗಳು, ಶಿಷ್ಯರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪ್ರೀತಿಗೆ ನಮ್ಮ ನಮನಗಳು. ಬಹುದೊಡ್ಡ ಸಂಸ್ಥೆಯ ನಿರ್ಮಾತೃವಾದರೂ ಸರಳ, ನಿಗರ್ವಿ ಶಿವಣ್ಣನವರು ಅಣ್ಣ ಬಸವಣ್ಣ ಹೇಳಿದಂತೆ ಎನಗಿಂತ ಕಿರಿಯರಿಲ್ಲ ..... ಎಂಬ ನುಡಿಯ ಪಡಿಯಚ್ಚಾಗಿ ಬಾಳಿ-ಬದುಕಿ-ಮರೆಯಾದವರು. ಸಾವೆಂಬುದು ಭೌತಿಕ ಕಾಯಕ್ಕೆ ಮಾತ್ರ ಆದರೆ ಮಾಡಿದ ಕಾಯಕಕ್ಕೆ ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಇಂದು ದಾವಣಗೆರೆಯ ಸಿದ್ಧಗಂಗಾ ಸಂಸ್ಥೆ ರಾಜ್ಯದಾದ್ಯಂತ ಹೆಸರು ಮಾಡಿದೆ. ಗುಣಾತ್ಮಕ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವ ಗುರುಕುಲವಾಗಿದೆ. ಇರುಳನ್ನು ಹಗಲಾಗಿಸಿ ಕಣ್ರೆಪ್ಪೆ ಮುಚ್ಚದಂತೆ ಅಹರ್ನಿಶಿ ದುಡಿದು ಶೂನ್ಯದಿಂದ ಶಿಖರಕ್ಕೇರಿದ ಶಿವಣ್ಣನವರು ಆನಗೋಡಿನ ತಮ್ಮ ಜಮೀನಿನಲ್ಲಿ ಶಿಲಾ ಮಂಟಪದ ಗರ್ಭದಲ್ಲಿ ಶಾಶ್ವತ ನಿದ್ರೆಯಲ್ಲಿದ್ದಾರೆ. ಇತಿಹಾಸ ಸೃಷ್ಠಿಸಿ ಚಿರಸ್ಥಾಯಿಯಾಗಿದ್ದಾರೆ. ಅವರ ಸ್ಮರಣೆಯಲ್ಲಿ “ಅಜರಾಮರ” ನುಡಿನಮನ ಕೃತಿ ಸಿದ್ಧಗೊಂಡಿದೆ. ಕೋವಿಡ್ – 19 ರ ಅಬ್ಬರ ಪುಣ್ಯಸ್ಮರಣೆಗೆ ಅಡ್ಡಿಯಾಗಿದೆ. 2020 ರ ಸ್ಥಿತಿ ಮರುಕಳಿಸಿದೆ. ಗುರುಸ್ಮರಣೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿ ಪರಿಸ್ಥಿತಿ ತಿಳಿಯಾದ ನಂತರ ಸ್ಮರಣೋತ್ಸವ ಆಚರಣೆ ಮಾಡೋಣ.

ಜಸ್ಟಿನ್ ಡಿ’ಸೌಜ


Thursday, April 1, 2021

ಸರಿಗನ್ನಡ ಮತ್ತು ಗುಣಮಟ್ಟ

 “ಸರಿಗನ್ನಡ ಮತ್ತು ಗುಣಮಟ್ಟದ” ಬಗ್ಗೆ

ಲಿಂ|| ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ನಿಲುವು.


“ಸರಿಗನ್ನಡ”ದ ಬಗ್ಗೆ ಜಾಗೃತಿ ಮೂಡಿಸುವ ಕಾಯಕ ಪ್ರಾರಂಭವಾಗಿದೆ
. ಕನ್ನಡ ಸರಳ - ಸುಂದರ ಭಾಷೆ. ಕರ್ನಾಟಕದ ವಿವಿಧ ಭಾಗದ ಜನರು ವಿಶಿಷ್ಠ ಶೈಲಿಯ ಭಾಷಾ ಸೊಗಡನ್ನು ಹೊಂದಿದ್ದಾರೆ. ಆದರೆ ಕನ್ನಡದ ಗ್ರಂಥ ಭಾಷೆಯನ್ನು ಬರವಣಿಗೆಯಲ್ಲಿ ಬಳಸುವಾಗ, ಉಚ್ಛಾರ ಮಾಡುವಾಗ ತಪ್ಪು ಉಂಟಾಗುವುದನ್ನು ಸಿದ್ಧಗಂಗಾ ಮಠದ ಲಿಂಗೈಕ್ಯ ಪರಮ ಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಸಹಿಸುತ್ತಿರಲಿಲ್ಲ.


ಪರಮ ಪೂಜ್ಯರು ಈ ವಿಚಾರವನ್ನು ಬಹಳ ಹಿಂದೆ ಅವರ ಶ್ರೀವಾಣಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅದು ಕೆಳಗಿನಂತಿದೆ.


“ಮೊನ್ನೆ ಒಂದು ಅಪ್ಲಿಕೇಷನ್ ತಂದುಕೊಟ್ಟರು, ಕೊಟ್ಟಾತ ಒಬ್ಬ ನಿವೃತ್ತ ಶಿಕ್ಷಕ, ಮೊವತ್ತು ವರ್ಷಗಳ ಸೇವೆ ಸಲ್ಲಿಸಿ ವಿಶ್ರಾಂತ ಜೀವನಕ್ಕೆ ಕಾಲಿಡುತ್ತಿರುವ ವ್ಯಕ್ತಿ. ಮುಖ್ಯೋಪಾಧ್ಯಾಯನಾಗಿ ಪ್ರೌಢಶಾಲೆಯ ಆಡಳಿತಾಂಗದಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕ. ಅವನು ಕೊಟ್ಟ ಅರ್ಜಿಯ ವಿಷಯವನ್ನಿಲ್ಲಿ ಪ್ರಸ್ತಾಪಿಸುತ್ತಿಲ್ಲ. ಆ ಅರ್ಜಿಯ ಭಾಷಾದೋಷಗಳನ್ನು ಕುರಿತು ಹೇಳಬೇಕಾಗಿದೆ. “ನನ್ನ ಹಣ್ಣನಿಗೆ” ಎಂದು ಪದ ಬಳಸಿದ್ದು ಕಾಣಬಂದಿತು. 

ಇನ್ನೊಂದು ಇಂಗ್ಲೀಷ್ ಎಂ.ಎ ಮಾಡುತ್ತಿರುವ ಅಭ್ಯರ್ಥಿಯೊಬ್ಬ ಅಪ್ಲಿಕೇಷನ್ ಕೊಟ್ಟುಹೋದ. ಅದರ ಮೇಲೆ ಕಣ್ಣಾಡಿಸಿದಾಗ ಇದು ಯಾವ ಇಂಗ್ಲೀಷ್ ಎಂಬ ಭಾವನೆ ಬಂದಿತು. “I am here by informing” ಎಂದು ಪ್ರಾರಂಭಿಸಿ ಅನಂತರ “requesting” ಎಂದು ಸೇರಿಸಿ ವಾಕ್ಯ ಪ್ರಾರಂಭ ಮಾಡಿದ್ದು ಕಾಣಬಂದಿತು. ಮತ್ತೊಂದು ಸಮಯದಲ್ಲಿ ವಿದ್ಯಾರ್ಥಿಗಳ ಆಟೆಂಡೆನ್ಸ್ ರಿಜಿಸ್ಟರ್ ನೋಡುವ ಸಂದರ್ಭದಲ್ಲಿ ವಿದ್ಯಾರ್ಥಿ “ಸಿವರುದ್ರಯ್ಯ”, ‘ಮುಖ್ಯೋಪಾಧಾಯ’ ಎನ್ನುವ ಕಾಗುಣಿತಗಳ ದೋಷಗಳನ್ನು ಕಾಣುವಂತಾಯಿತು. ಇವು ಶಿಕ್ಷಣ ಕ್ಷೇತ್ರದಲ್ಲಿ ಕಾಣಬರುತ್ತಿರುವುದಾದರೆ ಅನ್ಯಕ್ಷೇತ್ರಗಳ ಹಣೆಬರಹವೂ ಇದೇ ಆಗಿದೆ. 

ಸಂಸ್ಕøತ ಪ್ರೌಢವಾದ, ಜ್ಞಾನನಿಷ್ಠವಾದ ಭೌದ್ಧಿಕ ಭಾಷೆ. ಅಲ್ಲಿನ ಶ್ಲೋಕಗಳ ಅಧ್ಯಯನ ನಿರ್ದಿಷ್ಟವಾಗಿರುತ್ತದೆ. ತಪ್ಪಿಲ್ಲದ ಉಚ್ಛಾರ ಅತಿ ಮುಖ್ಯ. ಪೂಜಾ ಸಂದರ್ಭದಲ್ಲಿ ಕೆಲಮಂತ್ರಗಳನ್ನು ಪಠಿಸುವ ಪುಣ್ಯಾತ್ಮರು ಅಪಶಬ್ಧವನ್ನೇ ಎತ್ತಿದ ಕಂಠದಲ್ಲಿ ಉಗ್ಗಡಿಸುವುದನ್ನು ಗಮನಿಸಬಹುದು. ವಸ್ತುಗಳ ಉತ್ಪಾದನೆಯಲ್ಲಿ, ಮಾಡುವ ಕೆಲಸದಲ್ಲಿ, ಕಲಿಯುವ ಹಂತದ ಗುಣಕ್ಕೆ ಪ್ರಾಮುಖ್ಯತೆ ಇಲ್ಲವಾಗಿದೆ. ಪರೀಕ್ಷೆಗಳಲ್ಲಿ ಫಲಿತಾಂಶ ಇಳಿಮುಖವಾಗಿದೆ. ಏರುಮುಖವಾಗಿದೆ ಎಂದರೆ ಅಪಮಾರ್ಗದಲ್ಲಿ ನಡೆದಿರಬೇಕು ಎಂಬುದು ಬಹಿರಂಗ ಸತ್ಯವಾಗಿದೆ. ಚುನಾವಣೆಗಳಲ್ಲಿ ಪ್ರಚಂಡ ಬಹುಮತ ಗಳಿಸಲಾಯಿತು ಎನ್ನುವಾಗ ನಡೆದಿರುವ ಭ್ರಷ್ಟಾಚಾರವನ್ನು ಮರೆಯುವಂತಿಲ್ಲ. ಕೃಷಿ ಕೃತ್ಯ ಕಾಯಕವೊಂದೆ ಭ್ರಷ್ಟ ಮುಕ್ತವಾದ ಪವಿತ್ರ ದುಡಿಮೆಯೆಂಬ ಸದ್ಭಾವನೆಯಿತ್ತು. ಅಲ್ಲಿಯೂ ಪ್ರಮಾಣಿಕವಾದ ದುಡಿಮೆ ಕಾಣಬರುತ್ತಿಲ್ಲ. ಪ್ರಕೃತಿ ಸೋಮಾರಿಗಳಿಗೆ, ಸೋಗಲಾಡಿತನಕ್ಕೆ ಒಲಿಯಲಾರಳು. ಗುಣಮಟ್ಟವನ್ನು ನಿರ್ಧಾರ ಮಾಡುವ ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಆದರೆ ಅಲ್ಲಿಯೂ ನ್ಯೂನತೆಗಳಿವೆಯೆನ್ನಲಾಗುತ್ತದೆ. ನಮ್ಮ ಪೂಜ್ಯಗುರುಗಳು ಬಳಸುತ್ತಿದ್ದ ಕೆಲವು ವಸ್ತುಗಳು ನಮ್ಮ ಬಳಿ ಇನ್ನೂ ಸುಭದ್ರಸ್ಥಿತಿಯಲ್ಲಿವೆ. 

ನಮ್ಮಲ್ಲಿ ಅಂಬಲಗೆರೆ ನಂಜುಂಡಯ್ಯ ಎಂಬ ಅಧ್ಯಾಪಕರೊಬ್ಬರಿದ್ದರು. ಅವರು ನೆಲಮಂಗಲದಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸಂಸ್ಕøತ ಬೋಧಿಸುವ ಅವಕಾಶ ಲಭ್ಯವಾಗಿತ್ತು. ಆದರೆ ಅವರಿಗೆ ಸಂಸ್ಕøತ ಜ್ಞಾನ ಅಷ್ಟಾಗಿರಲಿಲ್ಲ. ಅವರು ಶ್ರೀಮಠಕ್ಕೆ ಶನಿವಾರ, ಭಾನುವಾರ ಬಂದು ಇಲ್ಲಿ ಶ್ರೀ ರುದ್ರಾರಾಧ್ಯ ಶರ್ಮ, ಶ್ರೀ ಬಿ. ಗಂಗಪ್ಪ ಅವರಿಂದ ಪಾಠ ಹೇಳಿಸಿಕೊಂಡು ಸೋಮವಾರ ಶಾಲೆಗೆ ಹೋಗಿ ಬೋಧಿಸುತ್ತಿದ್ದರು. ಅವರೊಮ್ಮೆ ಶಾಲಾ ತನಿಖಾಧಿಕಾರಿಗಳಾದ ಶ್ರೀ ಗೋಪಾಲ್ ಎಂಬುವರ ಮುಂದೆ ಬೋಧಿಸಬೇಕಾಯಿತು. ಬೋಧನಾ ವಿಧಾನ ಗಮನಿಸಿದ ತನಿಖಾಧಿಕಾರಿಗಳು ನಂಜುಂಡಯ್ಯನವರಿಗೆ “ಬೋಧನಾಚಾರ್ಯ” ಎಂದು ಪ್ರಶಂಸಿಸಿ ಮಾತನಾಡಿದರು. ಗುಣಮಟ್ಟವನ್ನು ಕಾಪಾಡಿಕೊಳ್ಳುವುದರ ಹಿಂದೆ ಶ್ರದ್ಧೆ, ಪ್ರಾಮಾಣಿಕತೆ, ತಾನು ಪ್ರತಿನಿಧಿಸುತ್ತಿರುವ ಸಮಾಜ ಪ್ರಜ್ಞೆ ಇರಬೇಕಾಗುತ್ತದೆ. ಕೊನೆಯದಾಗಿ ಒಂದು ಮಾತು. ಯಾರೂ ತಪ್ಪು ತಿಳಿಯಬಾರದು. ‘ಗುಣಮಟ್ಟ’ ಎಲ್ಲರಿಗೂ ಅನ್ವಯವಾಗುವ ಮಾತು”.(ಕೃಪೆ:ಅಮೃತ ಗಂಗಾ)

ಪರಮ ಪೂಜ್ಯರ 113 ನೇ ದಿವ್ಯ ಜಯಂತಿಯಂದು ಕನ್ನಡಿಗರಾದ ನಾವು ಪೂಜ್ಯರ ಶ್ರೀವಾಣಿ ಪಾಲಿಸಿದರೆ “ಸರಿಗನ್ನಡ” ಅಭಿಯಾನಕ್ಕೆ ಒಂದು ಶ್ರೇಷ್ಠ ಕೊಡುಗೆಯಾಗಬಹುದು.

- ಜಸ್ಟಿನ್ ಡಿ’ಸೌಜ


Wednesday, March 31, 2021

ಏಸುವಿನ ಅಂತ್ಯಕಾಲ ನೆನಪಿಸುವ ಪವಿತ್ರವಾರ

 “ಏಸುವಿನ ಅಂತ್ಯಕಾಲ ನೆನಪಿಸುವ ಪವಿತ್ರವಾರ”


ಗುಡ್‍ಫ್ರೈಡೆ ದಿನ ನನಗೊಂದು ಮೆಸೇಜ್ ಬಂತು. “Happy Good Friday”. ಒಂದು ಕ್ಷಣ ಮನಸ್ಸು ವಿಚಲಿತವಾಯಿತು. ಮೆಸೇಜ್ ಮಾಡಿದವರಿಗೆ ಅದೊಂದು ಹಬ್ಬ..... ಸಂಭ್ರಮದ ದಿನ ಎಂಬ ಭಾವನೆ ಇದ್ದೀತು. ವಾಸ್ತವವಾಗಿ ಗುಡ್‍ಫ್ರೈಡೆ ಒಂದು ಶೋಕದ ದಿನ. ಏಸು ಮರಣದಂಡನೆಗೆ ಗುರಿಯಾಗಿ ಶಿಲುಬೆಯಲ್ಲಿ ಪ್ರಾಣಬಿಟ್ಟ ದಿನ. ವಿಶ್ವದಾದ್ಯಂತ ಕ್ರೈಸ್ತರಿಗೆ ಇದು ದುಃಖದ ದಿನ.

ಗುಡ್‍ಫ್ರೈಡೆ ಆಚರಣೆಯ ಹಿಂದೆ ನಲವತ್ತು ದಿನಗಳ ತಪಸ್ಸು ಕಾಲ “Lent” ಇರುತ್ತದೆ. ಬೂದಿ ಬುಧವಾರದಿಂದ ಪ್ರಾರಂಭವಾಗುವ ಈ ತಪಸ್ಸುಕಾಲ ಪಾಸ್ಕ ಹಬ್ಬ “Easter” ದಲ್ಲಿ ಕೊನೆಗೊಳ್ಳುತ್ತದೆ. ಈಸ್ಟರ್ ಹಬ್ಬ ಭಾನುವಾರ ಬರುವುದರಿಂದ ಕ್ರೈಸ್ತರಲ್ಲದವರಿಗೆ ಈ ಹಬ್ಬದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಗುಡ್‍ಫ್ರೈಡೆ ಸರಕಾರಿ ರಜೆ ಆದ ಕಾರಣ ಇದನ್ನು ಕ್ರೈಸ್ತರ ಸಂಭ್ರಮದ ಹಬ್ಬವೆಂದೇ ಜನ ತಿಳಿದಿದ್ದಾರೆ. ಮಹಮ್ಮದೀಯರು ರಂಜಾನ್ (ಈದ್-ಉಲ್-ಫಿತರ್) ಕಾಲದಲ್ಲಿ ಆಚರಿಸುವ ತಪಸ್ಸಿಗೆ ಹೋಲಿಕೆಯಾಗಿ, ಹಿಂದುಗಳು ಅಯ್ಯಪ್ಪಸ್ವಾಮಿಯ ಮಾಲಾಧಾರಣೆಯ ಸಂದರ್ಭದಲ್ಲಿ ಪಾಲಿಸುವ ನಿಯಮಾವಳಿಗಳಂತೆ ಕ್ರೈಸ್ತರೂ ಕೂಡ ಪ್ರತಿ ವರ್ಷ 40 ದಿನಗಳ ಕಾಲ ವೈಭವದ ಜೀವನ ಮತ್ತು ಶುಭ ಸಮಾರಂಭಗಳಿಂದ ವಿಮುಖರಾಗಿ ಸರಳ ಸಾತ್ವಿಕ ಜೀವನ ನಡೆಸುತ್ತಾ ಜಪತಪಗಳಲ್ಲಿ ಮಗ್ನರಾಗಿ ಏಸುವಿಗೆ ಪ್ರಿಯರಾಗುತ್ತಾರೆ. ಏಕಾಂಗಿಯಾಗಿ ಮರುಭೂಮಿಯಲ್ಲಿ ಧ್ಯಾನ ಮಗ್ನರಾದ ಏಸು 40 ದಿನಗಳ ಉಪವಾಸದಲ್ಲಿ ಪರಿಪರಿಯಾದ ಶೋಧನೆಗಳಿಂದ ಮುಕ್ತರಾಗುವ ವಿಧಾನಗಳನ್ನು ಈ ದಿನಗಳಲ್ಲಿ ಅನುಕರಿಸುತ್ತಾರೆ.


ಬೂದಿ ಬುಧವಾರ "Ash Wednesday" ತಪಸ್ಸಿನ  ಸಿದ್ಧತೆಯ ದಿನ. ಮನುಷ್ಯನ ಜೀವನ ನಶ್ವರ, ಮಣ್ಣಿಂದ ಮಣ್ಣಿಗೆ ಹೋಗುವ ತಾರ್ಕಿಕ ಸಿದ್ಧಾಂತವನ್ನು ಮನನ ಮಾಡಿಕೊಳ್ಳುವ ದಿನ. ಹಣೆಯ ಮೇಲೆ ತಾಳೆಗರಿ ಸುಟ್ಟ ಬೂದಿಯ ಶಿಲುಬೆಯನ್ನು ಸಾಂಕೇತಿಕವಾಗಿ ಬರೆಯುತ್ತಾರೆ. ತಾಳೆಗರಿ ಸಿಗದಿದ್ದಲ್ಲಿ ತೆಂಗಿನ ಗರಿ ಉಪಯೋಗಿಸಿ ಶಿಲುಬೆಯಾಕಾರ ಮಾಡಿ ಚರ್ಚಿನಲ್ಲಿ ಪಡೆದು ಮನೆಯಲ್ಲಿ ಮುಂದಿನ ವರ್ಷದವರೆಗೆ ಕಾಪಾಡುತ್ತಾರೆ. ಒಣಗರಿಗಳನ್ನು ಸುಟ್ಟು ಬೂದಿಗೆ ಆಲಿವ್ ಎಣ್ಣೆ ಬೆರೆಸಿ ಹಣೆಗೆ ಹಚ್ಚುತ್ತಾರೆ. ವಾಸ್ತವವಾಗಿ ಆ ದಿನ ಗೋಣಿನಾರಿನಿಂದ ಹೊಲಿದ ಬಟ್ಟೆ ಧರಿಸಿ ಮೈ ಮೇಲೆ ಬೂದಿ ಸಿಂಪಡಿಸುವ ಪದ್ಧತಿ ಇತ್ತು. ವೈರಾಗ್ಯದ ಸಂಕೇತ ಬೂದಿ. ವಿಭೂತಿ ಧಾರಣೆಯನ್ನು ಹೋಲುವ ಈ ಆಚರಣೆ ಮನುಷ್ಯನಿಗೆ ಪ್ರಾಪಂಚಿಕ ಆಸೆಗಳನ್ನು ತ್ಯಾಗ ಮಾಡುವಂತೆ ಪ್ರೇರೇಪಿಸುತ್ತದೆ. 

ಪಾಸ್ಕ ಹಬ್ಬದ ಹಿಂದಿನ ಭಾನುವಾರ ಗರಿಗಳ ಹಬ್ಬ Palm Sunday ಪವಿತ್ರವಾರ. ಇದು ಇದಏಸು ಜೆರುಸಲೇಂ ಪ್ರವೇಶಿಸುವ ದಿನ. ತಪಶ್ಶಕ್ತಿಯನ್ನು ಪಡೆದು ವಿನಮ್ರವಾಗಿ ಪುರಪ್ರವೇಶ ಮಾಡುವ ದಿನ. ವಿಜಯೀ ವೀರನಂತೆ ಕುದುರೆ ಏರಿ ಬರದೆ ದೀನನಾಗಿ ಕತ್ತೆಯ ಮೇಲೆ ಆಸೀನನಾದ ಏಸುವನ್ನು ಪುರ ಜನರು ತಾಳೆ ಗರಿಗಳನ್ನು ಹಾಸಿ, ತಾಳೆಗರಿಗಳನ್ನು ಚಾಮರದಂತೆ ಬೀಸಿ ರಾಜ ಮರ್ಯಾದೆಯಿಂದ ಬರಮಾಡಿಕೊಳ್ಳುತ್ತಾರೆ. ಇದನ್ನು ಕಂಡ ಆಳರಸರ ಮನಸ್ಸಿನಲ್ಲಿ ಈಷ್ರ್ಯೆ ಹುಟ್ಟಿ ಆತನ ಮೇಲೆ ಅಪವಾದ ಹೊರಿಸಿ ಮರಣದಂಡನೆಗೆ ಗುರಿಪಡಿಸುತ್ತಾರೆ.

ತಾನು ಮರಣದಂಡನೆಗೆ ಗುರಿಯಾಗುವ ವಿಷಯ ಮತ್ತು ತಮ್ಮ ಹನ್ನೆರಡು ಶಿಷ್ಯರಲ್ಲಿ ಜೂದಾಸನೆಂಬುವನು ತಮ್ಮನ್ನು ಹಿಡಿದುಕೊಡಲಿದ್ದಾನೆ ಎಂದು ತಿಳಿದಿದ್ದರೂ ಏಸು ಹನ್ನೆರಡೂ ಜನರ ಪಾದಗಳನ್ನು ತೊಳೆದು ಅವರನ್ನು ಪಾಪ ಮುಕ್ತರನ್ನಾಗಿಸುತ್ತಾರೆ. ಗುಡ್‍ಫ್ರೈಡೆಯ ಹಿಂದಿನ ದಿನವನ್ನು ಪವಿತ್ರ ಗುರುವಾರವೆಂದು ಕರೆಯಲಾಗುತ್ತದೆ. ಶಿಷ್ಯರ ಪಾದ ತೊಳೆದು ಅವರೊಡನೆ ಕೊನೆಯ ಭೋಜನ ಮಾಡುವ ಏಸು ಎಲ್ಲ ಶಿಷ್ಯರ ಪಾಪಗಳನ್ನು ಪವಿತ್ರ ಗುರುವಾರದಂದು ಕ್ಷಮಿಸುತ್ತಾರೆ. ತಮ್ಮ ಉಪದೇಶಗಳನ್ನು ಮುಂದುವರಿಸಲು ಆಶೀರ್ವದಿಸುತ್ತಾರೆ.

ಗುಡ್‍ಫ್ರೈಡೆ – ಕ್ರೈಸ್ತರಿಗೆ ಕರಾಳ ದಿನ. ಆ ದಿನ ಏಸುವನ್ನು ಮರಣದಂಡನೆಗೆ ಗುರಿಪಡಿಸುವ ದಿನ. ಶಿಲುಬೆಯಲ್ಲಿ ಮೊಳೆ ಜಡಿದು ಬಲಿ ಪಡೆದ ದಿನ! ಕಲ್ವಾರಿ ಬೆಟ್ಟದ ಮೇಲೆ ಭಾರವಾದ ಶಿಲುಬೆ ಹೊತ್ತು ನಡೆಯುವ ಏಸುವಿಗೆ ಅಡಿಗಡಿಗೆ ಬಡಿವ ಛಡಿ ಏಟು ರಕ್ತ ಒಸರುವಂತೆ ಮಾಡುತ್ತದೆ. ಮುಳ್ಳಿನ ಕಿರೀಟದಿಂದ ಧಾರೆ – ಧಾರೆಯಾಗಿ ರಕ್ತ ಬಸಿಯುತ್ತದೆ. ವಸ್ತ್ರಗಳನ್ನು ಕಿತ್ತು ಬಿಸಾಡಿ ಅವಮಾನಿಸಿದ, ಕಳ್ಳರೊಡನೆ ಶಿಲುಬೆಗೇರುವ ದಾರುಣವಾದ ಹೀನ ಶಿಕ್ಷೆಗೊಳಪಟ್ಟ ದಿನ. ಈ ದಿನ ಕ್ರೈಸ್ತರು ಏಸುವಿನ ಹಿಂಸೆಯನ್ನು 14 ಘಟ್ಟಗಳಲ್ಲಿ ಪುನರ್‍ಮನನ ಮಾಡಿಕೊಳ್ಳುತ್ತಾರೆ. ಮಂಡಿಯೂರಿ ಏಸು ಪಟ್ಟ ಯಾತನೆಯನ್ನು ಅನುಭವಿಸುತ್ತಾರೆ. ಶಿಲುಬೆ ಹೊತ್ತು ಚೂಪಾದ ಕಲ್ಲುಗಳಿಂದ ಕೂಡಿದ ಕಲ್ವಾರಿ (ಗೊಲ್ಗೋಥಾ) ಬೆಟ್ಟದ ಮೇಲೆ ಬಾಯಾರಿದ ಏಸುವಿನ ಬಾಯಿಗೆ ಹನಿ ನೀರು ಕೊಡದ ಕ್ರೂರಿಗಳ ಕೈಯಲ್ಲಿ ದೇವಪುತ್ರ ಹತನಾದ ದಟ್ಟ ದರಿದ್ರ ದಿನವಿದು! ಮನುಕುಲದ ಉದ್ಧಾರಕ್ಕೆ ಹುತಾತ್ಮನಾದ ದಿನವಿದು! ಸಹಿಸಲಸಾಧ್ಯವಾದ ವೇದನೆಯಿಂದ ಪ್ರಾಣತ್ಯಾಗ ಮಾಡಿದ ಈ ದುರಂತ ದಿನವನ್ನು “ಶುಭ ಶುಕ್ರವಾರ” ವೆಂದು ಕರೆದರು. ರಾಷ್ಟ್ರಕವಿ ಗೋವಿಂದ ಪೈಯವರು ತಮ್ಮ “ಗೊಲ್ಗೋಥಾ” ಖಂಡ ಕಾವ್ಯದಲ್ಲಿ ಈ ಘೋರ ಘಟನೆಯನ್ನು ಮನಮಿಡಿಯುವಂತೆ ಚಿತ್ರಿಸಿದ್ಧಾರೆ. 

ಏಸುವನ್ನು ಪವಿತ್ರ ಶಿಲುಬೆಯಿಂದ ಕೆಳಗಿಳಿಸಿ ಸಮಾಧಿ ಮಾಡಿದ ದಿನ ಪವಿತ್ರ ಶನಿವಾರ. “ನಾನು ಪುನರುತ್ಥಾನ ಹೊಂದಿ ಬರುವೆ” ಎಂಬ ಏಸುವಿನ ವಾಣಿಯಂತೆ ಭಾನುವಾರ ಜೀವಂತವಾಗಿ ಎದ್ದು ಬಂದರು ಈ ದಿನವನ್ನು “ಪಾಸ್ಕ” ಹಬ್ಬದ ರೂಪದಲ್ಲಿ ವಿಶ್ವದಾದ್ಯಂತ ವಿಜೃಂಭಣೆಯಿಂದ, ಸಂಭ್ರಮದಿಂದ ಆಚರಿಸುತ್ತಾರೆ. 40 ದಿನಗಳ ತಪಸ್ಸು ಮುಕ್ತಾಯಗೊಂಡು ಹರ್ಷದ ಹೊನಲು ಹರಿಯುತ್ತದೆ. ತ್ಯಾಗ - ಪ್ರಾರ್ಥನೆ ಮತ್ತು ದಾನ ಈ ಮೂರು ಆಚರಣೆಗಳ ಸಮ್ಮಿಲನವೇ ಪಾಸ್ಕ ಹಬ್ಬ. ತಪಸ್ಸಿನ ಕಾಲದಲ್ಲಿ ಪಾರಮಾರ್ಥಿಕ ಚಿಂತನೆಗೈದು ಉಪಾಸನೆ ಮಾಡುವರು. ಬೂದಿ ಬುಧವಾರ, ಶುಭ ಶುಕ್ರವಾರ ಮತ್ತು ತಪಸ್ಸು ಕಾಲದ ಎಲ್ಲಾ ಶುಕ್ರವಾರಗಳಲ್ಲಿ 14 ವಯಸ್ಸಿನ ಮೇಲ್ಪಟ್ಟವರು ಆ ದಿನಗಳಲ್ಲಿ ತಾಮಸ ಆಹಾರವನ್ನು ವರ್ಜಿಸುವರು. ಆರೋಗ್ಯವಂತರಾದ 18 ರಿಂದ 59 ನೇ ವಯೋಮಾನದವರು ಈ ದಿನಗಳಲ್ಲಿ ಕಡ್ಡಾಯವಾಗಿ ಉಪವಾಸ ಮಾಡುವರು. ಕೇವಲ ದೈಹಿಕ ದಂಡನೆ ಸಾಲದು. ಪರಿಶುದ್ಧ ಜೀವನ ಶೈಲಿಯೂ ಮುಖ್ಯವೆಂದು ಸಾರುವ “ಫಾಸ್ಕ” ಹಬ್ಬದ ಸಂದೇಶ ಎಲ್ಲರಿಗೂ ತಲುಪಲಿ.

-ಜಸ್ಟಿನ್ ಡಿ’ಸೌಜ


Friday, March 26, 2021

ಸಿದ್ಧಗಂಗಾ ಬಾಲಕ ನಕ್ಷತ್ರ ನಾಯಕನ ಸಾಧನೆ

 ರಾಷ್ಟ್ರೀಯ ಈಜು ಸ್ಪರ್ಧೆ

ಸಿದ್ಧಗಂಗಾ ಬಾಲಕ ನಕ್ಷತ್ರ ನಾಯಕನ ಸಾಧನೆ


ದಾವಣಗೆರೆ, ಮಾ. 26,

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 20 ನೇ ರಾಷ್ಟ್ರೀಯ ಪ್ಯಾರಾ ಸ್ವಿಮಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಿದ್ಧಗಂಗಾ ಪ್ರಾಥಮಿಕ ಶಾಲೆಯ 9ನೇ ತರಗತಿ ಬಾಲಕ ನಕ್ಷತ್ರ ನಾಯಕ ಸಬ್ – ಜೂನಿಯರ್ ಗ್ರೂಪ್‍ನಲ್ಲಿ 100 ಮೀ. ಬ್ಯಾಕ್ ಸ್ಟ್ರೋಕ್‍ನಲ್ಲಿ ಪ್ರಥಮ, 50 ಮೀ. ಬ್ಯಾಕ್ ಸ್ಟ್ರೋಕ್ ಮತ್ತು 50 ಮೀ. ಫ್ರೀ ಸ್ಟೈಲ್ ಸ್ವಿಮಿಂಗ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.


ಈಜು ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸಿರುವ ಬಾಲಕನಿಗೆ ಮುಖ್ಯೋಪಾದ್ಯಾಯಿನಿ K. S. ರೇಖಾರಾಣಿ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.


Thursday, March 25, 2021

ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟ

 

ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜ್, ದಾವಣಗೆರೆ.

2020-21 ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲ್ಲಿ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತ ಪೂರ್ವ ಸಾಧನೆಯನ್ನು ಮಾಡಿದ್ದಾರೆ. ಬಾಲಕರ ವಿಭಾಗದಲ್ಲಿ ಖೋ-ಖೋ, ಬಾಸ್ಕೆಟ್ ಬಾಲ್, ಕರಾಟೆ, ಪುಟ್‍ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್ ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರಲ್ಲದೆ ಒಟ್ಟು 22 ಬಾಲಕರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಥ್ರೋ-ಬಾಲ್, ಬಾಸ್ಕೆಟ್ ಬಾಲ್, ವಾಲಿ ಬಾಲ್,  ಅಥ್ಲೆಟಿಕ್ಸ್ ಹಾಗೂ ಕರಾಟೆ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಲ್ಲದೆ ಒಟ್ಟು 16 ಬಾಲಕಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿವರಗಳು ಈ ಕೆಳಗಿನಂತಿವೆ.



ಬಾಲಕರ ವಿಭಾಗ ಬಾಲಕಿಯರ ವಿಭಾಗ

1 ಸುದೀಪ (ಖೋ-ಖೋ) 1 ಸಹನ. ಎಸ್. ಎಸ್ (ಅಥ್ಲೆಟಿಕ್ಸ್)

2 ಕಿರಣ್ (ಖೋ-ಖೋ) 2 ಸಹನ (ಅಥ್ಲೆಟಿಕ್ಸ್)

3 ಮೋಹಿತ್ ಕಿರಣ್ (ಥ್ರೋ-ಬಾಲ್) 3 ಕವನ (ಬಾಸ್ಕೆಟ್ ಬಾಲ್)

4 ಯುವರಾಜ್. ಎಲ್ (ಅಥ್ಲೆಟಿಕ್ಸ್) 4 ಖುಷಿ (ಬಾಸ್ಕೆಟ್ ಬಾಲ್)

5 ಮಂಜುನಾಥ. ಬಿ.ಎಮ್ (ಅಥ್ಲೆಟಿಕ್ಸ್) 5 ಗೀತಾ (ಬಾಸ್ಕೆಟ್ ಬಾಲ್)

6 ಮಂಜುನಾಥ.ಸಿ.ಪಿ (ಅಥ್ಲೆಟಿಕ್ಸ್) 6 ಅಂಜಲಿ (ಬಾಸ್ಕೆಟ್ ಬಾಲ್)

7 ದರ್ಶನ್ (ಅಥ್ಲೆಟಿಕ್ಸ್) 7 ವರ್ಷ (ಬಾಸ್ಕೆಟ್ ಬಾಲ್)

8 ದೀಪಕ್. ಡಿ (ಅಥ್ಲೆಟಿಕ್ಸ್) 8 ನಿಶಾ  (ಬಾಸ್ಕೆಟ್ ಬಾಲ್)

9 ಕಲ್ಲೇಶ್ (ಕರಾಟೆ) 9 ಚೈತನ್ಯ (ವಾಲಿಬಾಲ್)

10 ಸಂಭ್ರಮ್ (ಪುಟ್‍ಬಾಲ್) 10 ಲಕ್ಷ್ಮಿ (ವಾಲಿಬಾಲ್)

11 ರಾಹುಲ್ (ಪುಟ್‍ಬಾಲ್) 11 ಲಾವಣ್ಯ (ಕರಾಟೆ)

12 ಪವನ್ (ಪುಟ್‍ಬಾಲ್) 12 ಆಷಿಯ (ಕರಾಟೆ)

13 ಪ್ರಜ್ವಲ್ (ಪುಟ್‍ಬಾಲ್) 13 ರಕ್ಷೀತ (ಕರಾಟೆ)

14 ಶ್ಯಾಮ್ (ಪುಟ್‍ಬಾಲ್) 14 ಜ್ಯೋತಿ (ಖೋ-ಖೋ)

15 ವರುಣ್ ಜಾಧವ್ (ಪುಟ್‍ಬಾಲ್) 15 ಸಂಚಿತ (ಖೋ-ಖೋ)

16 ಜೀವನ್ (ಪುಟ್‍ಬಾಲ್) 16 ದರ್ಶಿನಿ  (ಥ್ರೋ-ಬಾಲ್)

17 ಅಬ್ದುಲ್ ಕಲಾಂ ಆಜಾದ್ .ಹೆಚ್ (ಬಾಸ್ಕೆಟ್ ಬಾಲ್)

18 ಮಹೇಂದ್ರಕರ್ (ಬಾಸ್ಕೆಟ್ ಬಾಲ್)

19 ಮಾತರಿಶ್ವÀ . ಕೆ (ಬಾಸ್ಕೆಟ್ ಬಾಲ್)

20 ಸಿ. ಮಹೇಶ್ (ಬಾಸ್ಕೆಟ್ ಬಾಲ್)

21 ಸುದರ್ಶನ್ (ಟೇಬಲ್ ಟೆನ್ನಿಸ್)

22 ವಿಕಾಸ್ (ಟೇಬಲ್ ಟೆನ್ನಿಸ್)


ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘನಿಸಿದ ಕಾಲೇಜಿನ ನಿರ್ದೇಶಕರಾದ ಡಾ|| ಜಯಂತ್, ಸಿಕ್ಕ ಅತ್ಯಂತ ಕಡಿಮೆ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಳ್ಳಲು ಸಿದ್ಧ ಪಡಿಸಿದ ಸಂಸ್ಥೆಯ ದೈಹಿಕ ಶಿಕ್ಷಕರ ಕಾರ್ಯವನ್ನು ಅಭಿನಂದಿಸಿದ್ದಾರೆ. ಕಾಲೇಜಿನ ಪ್ರಾಚಾರ್ಯರು, ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳ ಈ ಸಾಧನೆಗೆ ಹೆಮ್ಮೆ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.


Monday, March 8, 2021

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

 ಸಿದ್ಧಗಂಗಾ ಶಾಲೆಯಲ್ಲಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ 

ದಿನಾಂಕ: 08/03/2021 ರಂದು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಲೇಡಿ ಕಬ್ ಮಾಸ್ಟರ್, ಸ್ಕೌಟ್ ಮಾಸ್ಟರ್ ಪ್ಲಾಕ್‍ಲೀಡರ್ಸ್ ಹಾಗೂ ಗೈಡ್ ಕ್ಯಾಪ್ಟನ್‍ಗಳೆಲ್ಲರೂ ಸೇರಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಟೋಟ ಸ್ಪರ್ಧೆಗಳ ಮೂಲಕ ಆಚರಿಸಲಾಯಿತು, ಬ್ಯಾಲೆನ್ಸ್ ಇನ್ ದ ಬುಕ್ ಮತ್ತು ಥ್ರೋ ಬಾಲ್ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಜಸ್ಟಿನ್ ಡಿ’ಸೌಜರವರು ಬಹುಮಾನ ವಿತರಣೆ ಮಾಡಿದರು. “ತೊಟ್ಟಿಲು ತೂಗುವ ಕೈ ಜಗತ್ತನ್ನೆ ಆಳುತ್ತದೆ” ಹಾಗಾಗಿ ಯಾವುದೇ ಕ್ಷೇತ್ರದಲ್ಲೂ ಮಹಿಳೆಯರು ಮುಂದಿದ್ದಾರೆ ಎಂದು ಶಿಕ್ಷಕಿಯರಿಗೆ ಕಿವಿಮಾತು ಹೇಳಿದರು. ನಿಮಗಾಗಿ ಒಂದಿಷ್ಟು ಸಮಯವನ್ನು ಉಳಿಸಿಕೊಂಡು, ಸಮಾಜದಲ್ಲಿ ಯಾವುದಾದರೊಂದು ಕ್ಷೇತ್ರಗಳಲ್ಲಿ ದುಡಿದು ಮುಂದೆ ಬರಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಖಜಾಂಚಿಗಳಾದ ಶ್ರೀಮತಿ ರೇಖಾರಾಣಿ ಕೆ. ಎಸ್ ಹಾಗೂ ಶ್ರೀಮತಿ ಗಾಯತ್ರಿ ಚಿಮ್ಮಡ್ ರವರು ಹಾಜರಿದ್ದರು. ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಉಸ್ತುವಾರಿಯನ್ನು ನೋಡಿಕೊಂಡರು.



Monday, February 1, 2021

ಪುನಶ್ಚೇತನ ಕಾರ್ಯಕ್ರಮ

 ಸ್ಕೌಟ್ಸ್ ಗೈಡ್ಸ್ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ

ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ

ಜನವರಿ 31,

ದಾವಣಗೆರೆ ದಕ್ಷಿಣ ವಲಯದ ಸ್ಕೌಟ್ಸ್ ಗೈಡ್ಸ್‍ನ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಕ್ರಮವನ್ನು ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. 

ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಶಿಬಿರದಲ್ಲಿ ಸಮವಸ್ತ್ರದ ಮಹತ್ವ ವಿವಿಧ ಧ್ವಜಗಳ ಆಳತೆ ಮತ್ತು ಪ್ರಾಮುಖ್ಯತೆ, ರಾಷ್ಟ್ರಗೀತೆ, ಝಂಡಾ ಗೀತೆಗಳ ತರಬೇತಿ, ಪ್ರಥಮ ಚಿಕಿತ್ಸಾ ವಿಧಾನ, ವಿವಿಧ ರೀತಿಯ ಗಂಟುಗಳನ್ನು ಮತ್ತು ಬ್ಯಾಂಡೇಜ್ ಕಟ್ಟುವ ರೀತಿಯನ್ನು ಶಿಬಿರದ ನಾಯಕರಾಗಿ ಆಗಮಿಸಿದ್ದ ಜಿಲ್ಲಾ ಕಾರ್ಯದರ್ಶಿ ರತ್ನ ಎಂ ಇವರು ಪರಿಚಯಿಸಿದರು. ಗಾಯಾಳುಗಳನ್ನು ತಕ್ಷಣ ರವಾನಿಸಲು ಉಪಯೋಗಿಸುವ ವಿವಿಧ ರೀತಿಯ ಡೋಲಿಗಳು ಅವುಗಳ ಅಳತೆ ಮತ್ತು ಲಾಗ್ ಪುಸ್ತಕ ಬರೆಯುವ ವಿಧಾನ ಮತ್ತು ಶುಭಾಷಯ ಪತ್ರಗಳನ್ನು ರಚಿಸುವ ಕುರಿತು ಮಾರ್ಗದರ್ಶನ ನೀಡಲಾಯಿತು.

ಹೊನ್ನಾಳಿಯಿಂದ ಆಗಮಿಸಿದ್ದ ಸ್ಕೌಟ್ ಸಂಪನ್ಮೂಲ ಶಿಕ್ಷಕ ಆಂಜನೇಯ ಮತ್ತು ಎಂ. ಎಂ. ಶಾಲೆಯ ವರ್ಷರವರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. 

ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಕಬ್ ಮಾಸ್ಟರ್ಸ್, ಫ್ಲಾಕ್ ಲೀಡರ್ಸ್, ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್‍ಗಳನ್ನೊಳಗೊಂಡಂತೆ 36 ಶಿಕ್ಷಕ - ಶಿಕ್ಷಕಿಯರು ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದರು.


ಸಂಜೆ 4 ಗಂಟೆಗೆ ನಡೆದ ಸಮರೋಪ ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಜಸ್ಟಿನ್ ಡಿ’ಸೌಜ ಅವರು ಕೋವಿಡ್‍ನಿಂದ ಹೊರಬಂದ ವಾತಾವರಣದಲ್ಲಿ ಈ ಪುನಶ್ಚೇತನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕೋವಿಡ್ ಸಂದರ್ಭದಲ್ಲಿ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ ಆನ್‍ಲೈನ್‍ನಲ್ಲಿ ಮಕ್ಕಳ ಚಟುವಟಿಕೆ ನಿರಂತರವಾಗಿದ್ದು ಹಲವಾರು ಬಹುಮಾನ ಗಳಿಸುವಲ್ಲಿ ಮತ್ತು ರಾಜ್ಯ ಸಂಸ್ಥೆಯಿಂದ ಪ್ರಶಂಸೆಗೊಳಪಟ್ಟಿದ್ದನ್ನು ತಿಳಿಸಿ ಸ್ಕೌಟ್ಸ್ – ಗೈಡ್ಸ್ ಶಿಕ್ಷಕರನ್ನು ಅಭಿನಂದಿಸಿದರು. ಕಾರ್ಯಕಾರಿ ಸಮಿತಿಯ ಸಹಾಯಕ ಆಯುಕ್ತರುಗಳಾದ ಡಾ|| ಜಯಂತ್ ಮತ್ತು ರೇಖಾರಾಣಿಯವರು ಉಪಸ್ಥಿತರಿದ್ದರು. ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶಶಿಕಲಾ ಅವರು ಶಿಬಿರದ ಆಯೋಜನೆಯನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಿದ್ದರು.


 


Friday, January 22, 2021

ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಎರಡನೇ ವರ್ಷದ ಪುಣ್ಯಸ್ಮರಣೆ

 ವಿನಮ್ರತೆ ಇದ್ದಲ್ಲಿ ಜ್ಞಾನ ಇರುತ್ತದೆ. 

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ.

ದಾವಣಗೆರೆ ಜ. 21, ಇಡೀ ಜಗತ್ತು ತಿರುಗಿ ನೋಡುವಂತೆ ಸತ್ಕಾರ್ಯ ಮಾಡಿದವರು ಸಿದ್ಧಗಂಗಾ ಶಿವಕುಮಾರ ಶ್ರೀಗಳು. ಅವರ ಹೆಸರಲ್ಲಿರುವ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆ ಕೂಡ ಅದರಂತೆಯೇ ನಡೆಯುತ್ತಿರುವ ಕಾರಣ ಈ ಸಂಸ್ಥೆಯಲ್ಲಿ ಕಲಿತವರು ಸುಸಂಸ್ಕøತರಾಗುತ್ತಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಅಭಿಪ್ರಾಯ ವ್ಯಕ್ತಪಡಿಸಿದರು. 

ಅವರಿಂದು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದಾಡುವ ದೇವರೆಂದೇ ಭಾವಿಸಿದ್ದ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಮತ್ತು ದಾಸೋಹದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಿನಮ್ರತೆ ಇದ್ದಲ್ಲಿ ಜ್ಞಾನ ಇರುತ್ತದೆ ಎಂದ ಅವರು ಮಕ್ಕಳಿಗೆ ಸುಜ್ಞಾನವಂತರಾಗುವ ಶಿಕ್ಷಣ ಪಡೆಯಲು ತಿಳಿಸಿದರು. 

ಪಿ. ಯು. ಸಿ ಹಂತದ ವಿದ್ಯಾರ್ಥಿಗಳು ಮುಂದೆ ನಾನು ಏನಾಗಬೇಕೆಂದು ಕನಸು ಕಟ್ಟುವ ಸಮಯ. ಈ ಸಮಯದಲ್ಲಿ ನೀವು ಉನ್ನತ ಮಟ್ಟದ ಕನಸನ್ನೇ ಕಟ್ಟಿ ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗುತ್ತೆ ಎಂದರು.

ಜಾತಿ, ವರ್ಣಗಳನ್ನ ಮೀರಿ ಸಮಾಜದ ಆಸ್ತಿಯಾಗಿ ನಿಮ್ಮ ಬಳಿ ಬರುವ ಎಲ್ಲರಿಗೂ ಒಳಿತನ್ನು ಬಯಸಿ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಂದುವರೆದು ಮಾತನಾಡಿದ ಬೀಳಗಿಯವರು ದೊಡ್ಡ ಮರದ ನೆರಳಿನಲ್ಲಿ ಬೆಳೆಯುವವರು ವಿಭೂತಿ  ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕೆಂದರು. ದಾಸೋಹ ಉದ್ಘಾಟನೆಯ ನಂತರ ಸಾಂಕೇತಿಕವಾಗಿ ಕೆಲವು ಮಕ್ಕಳಿಗೆ ಪ್ರಸಾದ ವಿನಿಯೋಗಿಸಿದರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳು ನಮ್ಮ ನಾಡಿನ ಸಹಸ್ರಾರು ನಿರ್ಗತಿಕರ ದಾರಿದೀಪವಾಗಿದ್ದರು ಅವರು ಇಂದು ನಮ್ಮ ಜೊತೆಗಿಲ್ಲ ಆದರೆ ಅವರ ಆದರ್ಶ ನಮ್ಮ ಜೊತೆಗಿದೆÉ. ಅವುಗಳನ್ನ ನಾವು ಪಾಲಿಸೋಣ ಎಂದರು.

ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಶ್ವೇತಾ ಶ್ರೀನಿವಾಸ್ ಉಪಸ್ಥಿತರಿದ್ದರು.


ಪ್ರಾರಂಭದಲ್ಲಿ ಸಿದ್ಧಗಂಗಾ ಪಿ. ಯು. ಕಾಲೇಜು ಪ್ರಾಂಶುಪಾಲರಾದ ನಿರಂಜನ ಜಿ. ಸಿ. ಸ್ವಾಗತಿಸಿದರು. ಪಿ. ಯು. ಕಾಲೇಜು ನಿರ್ದೇಶಕ ಜಯಂತ್ ಡಿ. ಎಸ್. ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಸಿದ್ಧಗಂಗೆ ಶ್ರೀಗಳವರ ತ್ರಿವಿಧ  ದಾಸೋಹ  ಸೇವೆಯನ್ನು ಮತ್ತು ಅವರ ಮಾರ್ಗದಲ್ಲೇ ಮುನ್ನಡೆದ ಎಂ. ಎಸ್. ಶಿವಣ್ಣನವರ ಕಾಯಕವನ್ನು ನಿರೂಪಿಸುತ್ತಾ ನಡೆದಾಡುವ ದೇವರು ಪಾದಸ್ಪರ್ಶ ಮಾಡಿದ ಪುಣ್ಯಭೂಮಿ ಈ ಸಿದ್ಧಗಂಗಾ ವಿದ್ಯಾಸಂಸ್ಥೆ ಎಂದರು. ಕನ್ನಡ ಉಪನ್ಯಾಸಕ ಸದಾಶಿವ ಹೊಳ್ಳ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ದರ್ಶನ್ ರುದ್ರಾಕ್ಷಿಬಾಯಿ ಮತ್ತು ತಂಡದವರು ಸುಶ್ರಾವ್ಯವಾಗಿ ಹಾಡಿ ಭಕ್ತಿ ಸೇವೆ ಸಮರ್ಪಿಸಿದರು. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಮತ್ತು ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್. ಹೇಮಂತ್ ಮತ್ತು ಪ್ರಶಾಂತ್‍ರವರು ನಿರ್ವಹಿಸಿದರು.

ಸಂಸ್ಥಾಪಕ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಸ್ಟಿನ್ ಡಿ’ಸೌಜ ಎಲ್ಲರಿಗೂ ವಂದಿಸಿದರು.