Friday, November 22, 2024

ವರ್ಷದ ಉತ್ತಮ ಪ್ರೌಢಶಾಲಾ ವಿದ್ಯಾರ್ಥಿಯಾಗಿ ಸಿದ್ಧಗಂಗಾ ಶಾಲೆಯ ಯಶಸ್ವಿನಿ ಕೆ.ಪಿ ಆಯ್ಕೆ

ದಾವಣಗೆರೆ. ನ.22

ದಾವಣಗೆರೆ ಜಿಲ್ಲಾ ಶಿಶು ಕಲ್ಯಾಣ ಮಂಡಳಿಯ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ವನಿತಾ ಸಮಾಜದಲ್ಲಿ ಏರ್ಪಡಿಸಲಾಗಿದ್ದ ವರ್ಷದ ಉತ್ತಮ ಪ್ರೌಢಶಾಲಾ ವಿದ್ಯಾರ್ಥಿ ಆಯ್ಕೆ ಸ್ಪರ್ಧೆಯಲ್ಲಿ ನಗರದ ಸಿದ್ಧಗಂಗಾ ಪ್ರೌಢಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ ಕೆ.ಪಿ ಆಯ್ಕೆಯಾಗಿದ್ದಾಳೆ. ನವೆಂಬರ್ 24 ರ ಭಾನುವಾರ ಸಂಜೆ 5 ಗಂಟೆಗೆ ವನಿತಾ ಸಮಾಜದಲ್ಲಿ ಯಶಸ್ವಿನಿ ಕೆ.ಪಿ ಯ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.ಸಿದ್ಧಗಂಗಾ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಯಶಸ್ವಿನಿ ಕೆ.ಪಿ ಪ್ರತಿಭಾವಂತೆ, ಪಠ್ಯಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಬಾಲಕಿ, ಹಲವಾರು ಬಹುಮಾನಗಳ ವಿಜೇತೆ, ಇಂಡಿಯನ್‌ ಟ್ಯಾಲೆಂಟ್‌ ಪರೀಕ್ಷೆಯಲ್ಲಿ RANK , ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಾಜ್ಯ ಮಟ್ಟದ ವಿಜ್ಞಾನ ವಿಚಾರ ಸಂಕಿರಣದಲ್ಲಿ ಮತ್ತು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ ಶಾಲಾಮಟ್ಟದಲ್ಲಿ ನಡೆಯುವ ಅನೇಕ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಸಮರ್ಥನಾಯಕತ್ವ ಗುಣ ಹೊಂದಿರುವ ಈ ಬಾಲಕಿ ವಿನಯ ಸಂಪನ್ನೆ ಎಂದು ಶಾಲಾ ಮುಖ್ಯಶಿಕ್ಷಕಿ ರೇಖಾರಾಣಿಯವರು ಶ್ಲಾಘಿಸಿದ್ದಾರೆ. 10 ನೇ ತರಗತಿಯ ಶಿಕ್ಷಕ ವೃಂದ ಮತ್ತು ಸಹಪಾಠಿಗಳು ಯಶಸ್ವಿನಿಯನ್ನು ಅಭಿನಂದಿಸಿದ್ದಾರೆ. ಯಶಸ್ವಿನಿಯ ತಂದೆ ಪಾಲಾಕ್ಷಪ್ಪ ಮತ್ತು ತಾಯಿ ಜ್ಯೋತಿಕಲಾ ಅವರು ಮಗಳ ಆಯ್ಕೆಯನ್ನು ಸಂಭ್ರಮದಿಂದ ಹಂಚಿಕೊಂಡಿದ್ದಾರೆ.‍


Friday, November 1, 2024

ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ರಾಜ್ಯೋತ್ಸವ

ದಾವಣಗೆರೆ ನ. 1.

ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಲಾ – ಕಾಲೇಜಿನ ಮಕ್ಕಳು ಮತ್ತು ಸಿಬ್ಬಂದಿ ವರ್ಗದವರು 69 ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಹಿರಿಯ ಶಿಕ್ಷಕಿ ವಸಂತ ಆರ್.‌ ರವರು ಧ್ವಜಾರೋಹಣ ನೆರವೇರಿಸಿದರು. ಸಂಗೀತ ಶಿಕ್ಷಕರಾದ ಮಂಗಳ ಮತ್ತು ರುದ್ರಾಕ್ಷಿಬಾಯಿ ನೇತೃತ್ವದಲ್ಲಿ ಕನ್ನಡ ಭಾವಗೀತೆಗಳನ್ನು ಮಕ್ಕಳು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಕರ್ನಾಟಕ ಏಕೀಕರಣದ ಬಗ್ಗೆ, ಕನ್ನಡ ನಾಡು, ಶ್ರೀಮಂತಿಕೆ, ಭಾಷಾ ಪ್ರೌಢಿಮೆ, ಸುಂದರ ಲಿಪಿಯ ಬಗ್ಗೆ ಮಕ್ಕಳು ಭಾಷಣ ಮಾಡಿದರು. ಜಾನಪದ ಪ್ರಕಾರಗಳಾದ ಡೊಳ್ಳು, ಕಂಸಾಳೆ, ನಂದಿಕೋಲುಗಳ ಪ್ರಾತ್ಯಕ್ಷಿಕೆ ನೀಡಿ ಈ ಕಲೆಗಳ ಭವ್ಯತೆ, ಆಚರಣೆ, ವಸ್ತ್ರ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿಯರಾದ ಉಷಾರಾಣಿ ಎಸ್‌ ಎಲ್, ವಿಜಯಶ್ರೀ‌ ಬಿ ಸಿ, ವಸಂತ ಆರ್. ರವರು ಬರೆದಿದ್ದ ಕವನಗಳನ್ನು ಮಕ್ಕಳು ವಾಚಿಸಿದರು. ಆಕರ್ಷಕ ರಂಗೋಲಿ ಚಿತ್ತಾರದ ನಡುವೆ ಕರ್ನಾಟಕ ಮಾತೆಯ ಭಾವ ಚಿತ್ರ ಮತ್ತು ಕರ್ನಾಟಕ ಭೂಪಟ ಸುಂದರವಾಗಿ ಕಂಗೊಳಿಸುತ್ತಿತ್ತು. ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿ ಡಿ ಎಸ್‌ ಹೇಮಂತ್‌, ನಿರ್ದೇಶಕರಾದ ಡಾ|| ಜಯಂತ್‌‌ ಡಿ. ಎಸ್., ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇಖಾರಾಣಿ ಕೆ. ಎಸ್.‌‌, ಸಿ ಬಿ ಎಸ್‌ ಇ ಶಾಲೆಯ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್‌ ಇವರು ಉಪಸ್ಥಿತರಿದ್ದರು. ಸ್ವಾಗತ, ಪ್ರಾಸ್ತಾವಿಕ ಮತ್ತು ವಂದನಾರ್ಪಣೆಯನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ ರವರು ನಡೆಸಿಕೊಟ್ಟರು. ಶಿಕ್ಷಕಿ ಆಶಾ ಎಸ್.‌ ರವರು ಕಾರ್ಯಕ್ರಮ ನಿರೂಪಿಸಿದರು.