ಸಿದ್ಧಗಂಗೆಯ ಅಂಗಳದಲ್ಲಿ ಸಂಭ್ರಮದ ಆಚರಣೆ. ಕರ್ನಾಟಕ ಪ್ರತಿನಿಧಿಸಿ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹೇಮಂತ್ ಸ್ವಾಮಿಗೆ ಹೃದಯ ಸ್ಪರ್ಶಿ ಸನ್ಮಾನ ಮತ್ತು ಬೀಳ್ಕೊಡುಗೆ. ಸಂಸ್ಥೆಯ ಸಹಸ್ರಾರು ಮಕ್ಕಳು ಅಭಿಮಾನದಿಂದ ಹೇಮಂತ್ ಸ್ವಾಮಿಯನ್ನು ಆದರ್ಶರೂಪದಲ್ಲಿ ಕಂಡರು. ವಾಯುಸೇನೆಯಲ್ಲಿ ತರಬೇತಿ ಪಡೆಯಲು ತೆರಳುತ್ತಿರುವ ತಮ್ಮ ಆತ್ಮೀಯ ಸ್ನೇಹಿತನನ್ನು ಪುಷ್ಪವೃಷ್ಠಿಗರೆದು ರಾಷ್ಟ್ರಧ್ವಜ ಗೌರವ ನೀಡಿ ಬೀಳ್ಕೊಟ್ಟರು. ದಾವಣಗೆರೆ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ ಸಿದ್ಧಗಂಗೆಯ ಈ ಪ್ರತಿಭಾವಂತನನ್ನು ಗುರು ವೃಂದದವರು ಹಾರೈಸಿ-ಹರಸಿ ಕಳಿಸಿಕೊಟ್ಟರು.
ಭಾರತದಾದ್ಯಂತ ಪರೀಕ್ಷೆ ಬರೆದ 8 ಲಕ್ಷ ಅಭ್ಯರ್ಥಿಗಳಲ್ಲಿ 8 ಸಾವಿರ ಅಭ್ಯರ್ಥಿಗಳು ದ್ವಿತೀಯ ಹಂತಕ್ಕೆ ಬರುತ್ತಾರೆ. ಇದರಲ್ಲಿ 250 ಅಭ್ಯರ್ಥಿಗಳು ತೃತೀಯ ಹಂತಕ್ಕೆ ಬರುತ್ತಾರೆ. ಅಂತಿಮ ಆಯ್ಕೆಯಲ್ಲಿ 81 ಅಭ್ಯರ್ಥಿಗಳು ಉಳಿಯುತ್ತಾರೆ. ಆ 81 ಅದೃಷ್ಠವಂತರಲ್ಲಿ ಹೇಮಂತ್ ಸ್ವಾಮಿ ಎಂಬುದು ಆತನ ನಿರಂತರ ಪ್ರಯತ್ನ, ಸತತ ಪರಿಶ್ರಮದ ಪ್ರತಿಫಲ. ಅಪರೂಪದ ಈ ಸಾಧನೆಯನ್ನು ಕಂಪ್ಯೂಟರ್ ವಿಭಾಗದ ಪ್ರಾಧ್ಯಾಪಕರಾದ ನಫೀಸ್‌ರವರು ವಿವರಿಸಿದರು. ಪ್ರಾಚಾರ್ಯ ನಿರಂಜನ್, ನಿರ್ದೇಶಕ ಡಾ|| ಜಯಂತ್, ಹಿರಿಯ ಉಪನ್ಯಾಸಕರಾದ ಎಲ್. ವಿ. ಸುಬ್ರಹ್ಮಣ್ಯ, ಸಿದ್ದಪ್ಪ, ನರಸಿಂಹ, ಲಕ್ಷ್ಮೀ ನಾರಾಯಣ, ಜಯಣ್ಣ ಇಟಗಿ, ಪ್ರದೀಪ್, ಸದಾಶಿವ ಹೊಳ್ಳ, ವಾಣಿಶ್ರೀ ಇವರು ಎಲ್ಲ ಉಪನ್ಯಾಸಕರೊಡಗೂಡಿ ಹೇಮಂತ್ ಸ್ವಾಮಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಹೂಮಳೆಗರೆದು ಗೌರವಿಸಿದರು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ, ಉಪ ಪ್ರಾಚಾರ್ಯೆ ಗಾಯಿತ್ರಿ ಚಿಮ್ಮಡ್ ಹಾಜರಿದ್ದರು. ಶಾಲಾ ಕಾಲೇಜಿನ ಮಕ್ಕಳು ಹೇಮಂತ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಸಿದ್ಧಗಂಗಾ ಸಂಸ್ಥೆಯ ತನ್ನ ಸ್ನೇಹಿತರು ಮತ್ತು ಗುರುವೃಂದದವರು ನೀಡಿದ ಈ ಅವಿಸ್ಮರಣೀಯ ಗೌರವವನ್ನು ತಾನು ಎಂದೂ ಮರೆಯುವುದಿಲ್ಲವೆಂದು ಕೃತಜ್ಞತೆಯಿಂದ ವಿನಯದಿಂದ ಹೇಮಂತ್ ಸ್ವಾಮಿ ಎಲ್ಲರನ್ನೂ ವಂದಿಸಿದನು.