Wednesday, March 31, 2021

ಏಸುವಿನ ಅಂತ್ಯಕಾಲ ನೆನಪಿಸುವ ಪವಿತ್ರವಾರ

 “ಏಸುವಿನ ಅಂತ್ಯಕಾಲ ನೆನಪಿಸುವ ಪವಿತ್ರವಾರ”


ಗುಡ್‍ಫ್ರೈಡೆ ದಿನ ನನಗೊಂದು ಮೆಸೇಜ್ ಬಂತು. “Happy Good Friday”. ಒಂದು ಕ್ಷಣ ಮನಸ್ಸು ವಿಚಲಿತವಾಯಿತು. ಮೆಸೇಜ್ ಮಾಡಿದವರಿಗೆ ಅದೊಂದು ಹಬ್ಬ..... ಸಂಭ್ರಮದ ದಿನ ಎಂಬ ಭಾವನೆ ಇದ್ದೀತು. ವಾಸ್ತವವಾಗಿ ಗುಡ್‍ಫ್ರೈಡೆ ಒಂದು ಶೋಕದ ದಿನ. ಏಸು ಮರಣದಂಡನೆಗೆ ಗುರಿಯಾಗಿ ಶಿಲುಬೆಯಲ್ಲಿ ಪ್ರಾಣಬಿಟ್ಟ ದಿನ. ವಿಶ್ವದಾದ್ಯಂತ ಕ್ರೈಸ್ತರಿಗೆ ಇದು ದುಃಖದ ದಿನ.

ಗುಡ್‍ಫ್ರೈಡೆ ಆಚರಣೆಯ ಹಿಂದೆ ನಲವತ್ತು ದಿನಗಳ ತಪಸ್ಸು ಕಾಲ “Lent” ಇರುತ್ತದೆ. ಬೂದಿ ಬುಧವಾರದಿಂದ ಪ್ರಾರಂಭವಾಗುವ ಈ ತಪಸ್ಸುಕಾಲ ಪಾಸ್ಕ ಹಬ್ಬ “Easter” ದಲ್ಲಿ ಕೊನೆಗೊಳ್ಳುತ್ತದೆ. ಈಸ್ಟರ್ ಹಬ್ಬ ಭಾನುವಾರ ಬರುವುದರಿಂದ ಕ್ರೈಸ್ತರಲ್ಲದವರಿಗೆ ಈ ಹಬ್ಬದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಗುಡ್‍ಫ್ರೈಡೆ ಸರಕಾರಿ ರಜೆ ಆದ ಕಾರಣ ಇದನ್ನು ಕ್ರೈಸ್ತರ ಸಂಭ್ರಮದ ಹಬ್ಬವೆಂದೇ ಜನ ತಿಳಿದಿದ್ದಾರೆ. ಮಹಮ್ಮದೀಯರು ರಂಜಾನ್ (ಈದ್-ಉಲ್-ಫಿತರ್) ಕಾಲದಲ್ಲಿ ಆಚರಿಸುವ ತಪಸ್ಸಿಗೆ ಹೋಲಿಕೆಯಾಗಿ, ಹಿಂದುಗಳು ಅಯ್ಯಪ್ಪಸ್ವಾಮಿಯ ಮಾಲಾಧಾರಣೆಯ ಸಂದರ್ಭದಲ್ಲಿ ಪಾಲಿಸುವ ನಿಯಮಾವಳಿಗಳಂತೆ ಕ್ರೈಸ್ತರೂ ಕೂಡ ಪ್ರತಿ ವರ್ಷ 40 ದಿನಗಳ ಕಾಲ ವೈಭವದ ಜೀವನ ಮತ್ತು ಶುಭ ಸಮಾರಂಭಗಳಿಂದ ವಿಮುಖರಾಗಿ ಸರಳ ಸಾತ್ವಿಕ ಜೀವನ ನಡೆಸುತ್ತಾ ಜಪತಪಗಳಲ್ಲಿ ಮಗ್ನರಾಗಿ ಏಸುವಿಗೆ ಪ್ರಿಯರಾಗುತ್ತಾರೆ. ಏಕಾಂಗಿಯಾಗಿ ಮರುಭೂಮಿಯಲ್ಲಿ ಧ್ಯಾನ ಮಗ್ನರಾದ ಏಸು 40 ದಿನಗಳ ಉಪವಾಸದಲ್ಲಿ ಪರಿಪರಿಯಾದ ಶೋಧನೆಗಳಿಂದ ಮುಕ್ತರಾಗುವ ವಿಧಾನಗಳನ್ನು ಈ ದಿನಗಳಲ್ಲಿ ಅನುಕರಿಸುತ್ತಾರೆ.


ಬೂದಿ ಬುಧವಾರ "Ash Wednesday" ತಪಸ್ಸಿನ  ಸಿದ್ಧತೆಯ ದಿನ. ಮನುಷ್ಯನ ಜೀವನ ನಶ್ವರ, ಮಣ್ಣಿಂದ ಮಣ್ಣಿಗೆ ಹೋಗುವ ತಾರ್ಕಿಕ ಸಿದ್ಧಾಂತವನ್ನು ಮನನ ಮಾಡಿಕೊಳ್ಳುವ ದಿನ. ಹಣೆಯ ಮೇಲೆ ತಾಳೆಗರಿ ಸುಟ್ಟ ಬೂದಿಯ ಶಿಲುಬೆಯನ್ನು ಸಾಂಕೇತಿಕವಾಗಿ ಬರೆಯುತ್ತಾರೆ. ತಾಳೆಗರಿ ಸಿಗದಿದ್ದಲ್ಲಿ ತೆಂಗಿನ ಗರಿ ಉಪಯೋಗಿಸಿ ಶಿಲುಬೆಯಾಕಾರ ಮಾಡಿ ಚರ್ಚಿನಲ್ಲಿ ಪಡೆದು ಮನೆಯಲ್ಲಿ ಮುಂದಿನ ವರ್ಷದವರೆಗೆ ಕಾಪಾಡುತ್ತಾರೆ. ಒಣಗರಿಗಳನ್ನು ಸುಟ್ಟು ಬೂದಿಗೆ ಆಲಿವ್ ಎಣ್ಣೆ ಬೆರೆಸಿ ಹಣೆಗೆ ಹಚ್ಚುತ್ತಾರೆ. ವಾಸ್ತವವಾಗಿ ಆ ದಿನ ಗೋಣಿನಾರಿನಿಂದ ಹೊಲಿದ ಬಟ್ಟೆ ಧರಿಸಿ ಮೈ ಮೇಲೆ ಬೂದಿ ಸಿಂಪಡಿಸುವ ಪದ್ಧತಿ ಇತ್ತು. ವೈರಾಗ್ಯದ ಸಂಕೇತ ಬೂದಿ. ವಿಭೂತಿ ಧಾರಣೆಯನ್ನು ಹೋಲುವ ಈ ಆಚರಣೆ ಮನುಷ್ಯನಿಗೆ ಪ್ರಾಪಂಚಿಕ ಆಸೆಗಳನ್ನು ತ್ಯಾಗ ಮಾಡುವಂತೆ ಪ್ರೇರೇಪಿಸುತ್ತದೆ. 

ಪಾಸ್ಕ ಹಬ್ಬದ ಹಿಂದಿನ ಭಾನುವಾರ ಗರಿಗಳ ಹಬ್ಬ Palm Sunday ಪವಿತ್ರವಾರ. ಇದು ಇದಏಸು ಜೆರುಸಲೇಂ ಪ್ರವೇಶಿಸುವ ದಿನ. ತಪಶ್ಶಕ್ತಿಯನ್ನು ಪಡೆದು ವಿನಮ್ರವಾಗಿ ಪುರಪ್ರವೇಶ ಮಾಡುವ ದಿನ. ವಿಜಯೀ ವೀರನಂತೆ ಕುದುರೆ ಏರಿ ಬರದೆ ದೀನನಾಗಿ ಕತ್ತೆಯ ಮೇಲೆ ಆಸೀನನಾದ ಏಸುವನ್ನು ಪುರ ಜನರು ತಾಳೆ ಗರಿಗಳನ್ನು ಹಾಸಿ, ತಾಳೆಗರಿಗಳನ್ನು ಚಾಮರದಂತೆ ಬೀಸಿ ರಾಜ ಮರ್ಯಾದೆಯಿಂದ ಬರಮಾಡಿಕೊಳ್ಳುತ್ತಾರೆ. ಇದನ್ನು ಕಂಡ ಆಳರಸರ ಮನಸ್ಸಿನಲ್ಲಿ ಈಷ್ರ್ಯೆ ಹುಟ್ಟಿ ಆತನ ಮೇಲೆ ಅಪವಾದ ಹೊರಿಸಿ ಮರಣದಂಡನೆಗೆ ಗುರಿಪಡಿಸುತ್ತಾರೆ.

ತಾನು ಮರಣದಂಡನೆಗೆ ಗುರಿಯಾಗುವ ವಿಷಯ ಮತ್ತು ತಮ್ಮ ಹನ್ನೆರಡು ಶಿಷ್ಯರಲ್ಲಿ ಜೂದಾಸನೆಂಬುವನು ತಮ್ಮನ್ನು ಹಿಡಿದುಕೊಡಲಿದ್ದಾನೆ ಎಂದು ತಿಳಿದಿದ್ದರೂ ಏಸು ಹನ್ನೆರಡೂ ಜನರ ಪಾದಗಳನ್ನು ತೊಳೆದು ಅವರನ್ನು ಪಾಪ ಮುಕ್ತರನ್ನಾಗಿಸುತ್ತಾರೆ. ಗುಡ್‍ಫ್ರೈಡೆಯ ಹಿಂದಿನ ದಿನವನ್ನು ಪವಿತ್ರ ಗುರುವಾರವೆಂದು ಕರೆಯಲಾಗುತ್ತದೆ. ಶಿಷ್ಯರ ಪಾದ ತೊಳೆದು ಅವರೊಡನೆ ಕೊನೆಯ ಭೋಜನ ಮಾಡುವ ಏಸು ಎಲ್ಲ ಶಿಷ್ಯರ ಪಾಪಗಳನ್ನು ಪವಿತ್ರ ಗುರುವಾರದಂದು ಕ್ಷಮಿಸುತ್ತಾರೆ. ತಮ್ಮ ಉಪದೇಶಗಳನ್ನು ಮುಂದುವರಿಸಲು ಆಶೀರ್ವದಿಸುತ್ತಾರೆ.

ಗುಡ್‍ಫ್ರೈಡೆ – ಕ್ರೈಸ್ತರಿಗೆ ಕರಾಳ ದಿನ. ಆ ದಿನ ಏಸುವನ್ನು ಮರಣದಂಡನೆಗೆ ಗುರಿಪಡಿಸುವ ದಿನ. ಶಿಲುಬೆಯಲ್ಲಿ ಮೊಳೆ ಜಡಿದು ಬಲಿ ಪಡೆದ ದಿನ! ಕಲ್ವಾರಿ ಬೆಟ್ಟದ ಮೇಲೆ ಭಾರವಾದ ಶಿಲುಬೆ ಹೊತ್ತು ನಡೆಯುವ ಏಸುವಿಗೆ ಅಡಿಗಡಿಗೆ ಬಡಿವ ಛಡಿ ಏಟು ರಕ್ತ ಒಸರುವಂತೆ ಮಾಡುತ್ತದೆ. ಮುಳ್ಳಿನ ಕಿರೀಟದಿಂದ ಧಾರೆ – ಧಾರೆಯಾಗಿ ರಕ್ತ ಬಸಿಯುತ್ತದೆ. ವಸ್ತ್ರಗಳನ್ನು ಕಿತ್ತು ಬಿಸಾಡಿ ಅವಮಾನಿಸಿದ, ಕಳ್ಳರೊಡನೆ ಶಿಲುಬೆಗೇರುವ ದಾರುಣವಾದ ಹೀನ ಶಿಕ್ಷೆಗೊಳಪಟ್ಟ ದಿನ. ಈ ದಿನ ಕ್ರೈಸ್ತರು ಏಸುವಿನ ಹಿಂಸೆಯನ್ನು 14 ಘಟ್ಟಗಳಲ್ಲಿ ಪುನರ್‍ಮನನ ಮಾಡಿಕೊಳ್ಳುತ್ತಾರೆ. ಮಂಡಿಯೂರಿ ಏಸು ಪಟ್ಟ ಯಾತನೆಯನ್ನು ಅನುಭವಿಸುತ್ತಾರೆ. ಶಿಲುಬೆ ಹೊತ್ತು ಚೂಪಾದ ಕಲ್ಲುಗಳಿಂದ ಕೂಡಿದ ಕಲ್ವಾರಿ (ಗೊಲ್ಗೋಥಾ) ಬೆಟ್ಟದ ಮೇಲೆ ಬಾಯಾರಿದ ಏಸುವಿನ ಬಾಯಿಗೆ ಹನಿ ನೀರು ಕೊಡದ ಕ್ರೂರಿಗಳ ಕೈಯಲ್ಲಿ ದೇವಪುತ್ರ ಹತನಾದ ದಟ್ಟ ದರಿದ್ರ ದಿನವಿದು! ಮನುಕುಲದ ಉದ್ಧಾರಕ್ಕೆ ಹುತಾತ್ಮನಾದ ದಿನವಿದು! ಸಹಿಸಲಸಾಧ್ಯವಾದ ವೇದನೆಯಿಂದ ಪ್ರಾಣತ್ಯಾಗ ಮಾಡಿದ ಈ ದುರಂತ ದಿನವನ್ನು “ಶುಭ ಶುಕ್ರವಾರ” ವೆಂದು ಕರೆದರು. ರಾಷ್ಟ್ರಕವಿ ಗೋವಿಂದ ಪೈಯವರು ತಮ್ಮ “ಗೊಲ್ಗೋಥಾ” ಖಂಡ ಕಾವ್ಯದಲ್ಲಿ ಈ ಘೋರ ಘಟನೆಯನ್ನು ಮನಮಿಡಿಯುವಂತೆ ಚಿತ್ರಿಸಿದ್ಧಾರೆ. 

ಏಸುವನ್ನು ಪವಿತ್ರ ಶಿಲುಬೆಯಿಂದ ಕೆಳಗಿಳಿಸಿ ಸಮಾಧಿ ಮಾಡಿದ ದಿನ ಪವಿತ್ರ ಶನಿವಾರ. “ನಾನು ಪುನರುತ್ಥಾನ ಹೊಂದಿ ಬರುವೆ” ಎಂಬ ಏಸುವಿನ ವಾಣಿಯಂತೆ ಭಾನುವಾರ ಜೀವಂತವಾಗಿ ಎದ್ದು ಬಂದರು ಈ ದಿನವನ್ನು “ಪಾಸ್ಕ” ಹಬ್ಬದ ರೂಪದಲ್ಲಿ ವಿಶ್ವದಾದ್ಯಂತ ವಿಜೃಂಭಣೆಯಿಂದ, ಸಂಭ್ರಮದಿಂದ ಆಚರಿಸುತ್ತಾರೆ. 40 ದಿನಗಳ ತಪಸ್ಸು ಮುಕ್ತಾಯಗೊಂಡು ಹರ್ಷದ ಹೊನಲು ಹರಿಯುತ್ತದೆ. ತ್ಯಾಗ - ಪ್ರಾರ್ಥನೆ ಮತ್ತು ದಾನ ಈ ಮೂರು ಆಚರಣೆಗಳ ಸಮ್ಮಿಲನವೇ ಪಾಸ್ಕ ಹಬ್ಬ. ತಪಸ್ಸಿನ ಕಾಲದಲ್ಲಿ ಪಾರಮಾರ್ಥಿಕ ಚಿಂತನೆಗೈದು ಉಪಾಸನೆ ಮಾಡುವರು. ಬೂದಿ ಬುಧವಾರ, ಶುಭ ಶುಕ್ರವಾರ ಮತ್ತು ತಪಸ್ಸು ಕಾಲದ ಎಲ್ಲಾ ಶುಕ್ರವಾರಗಳಲ್ಲಿ 14 ವಯಸ್ಸಿನ ಮೇಲ್ಪಟ್ಟವರು ಆ ದಿನಗಳಲ್ಲಿ ತಾಮಸ ಆಹಾರವನ್ನು ವರ್ಜಿಸುವರು. ಆರೋಗ್ಯವಂತರಾದ 18 ರಿಂದ 59 ನೇ ವಯೋಮಾನದವರು ಈ ದಿನಗಳಲ್ಲಿ ಕಡ್ಡಾಯವಾಗಿ ಉಪವಾಸ ಮಾಡುವರು. ಕೇವಲ ದೈಹಿಕ ದಂಡನೆ ಸಾಲದು. ಪರಿಶುದ್ಧ ಜೀವನ ಶೈಲಿಯೂ ಮುಖ್ಯವೆಂದು ಸಾರುವ “ಫಾಸ್ಕ” ಹಬ್ಬದ ಸಂದೇಶ ಎಲ್ಲರಿಗೂ ತಲುಪಲಿ.

-ಜಸ್ಟಿನ್ ಡಿ’ಸೌಜ


Friday, March 26, 2021

ಸಿದ್ಧಗಂಗಾ ಬಾಲಕ ನಕ್ಷತ್ರ ನಾಯಕನ ಸಾಧನೆ

 ರಾಷ್ಟ್ರೀಯ ಈಜು ಸ್ಪರ್ಧೆ

ಸಿದ್ಧಗಂಗಾ ಬಾಲಕ ನಕ್ಷತ್ರ ನಾಯಕನ ಸಾಧನೆ


ದಾವಣಗೆರೆ, ಮಾ. 26,

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 20 ನೇ ರಾಷ್ಟ್ರೀಯ ಪ್ಯಾರಾ ಸ್ವಿಮಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಿದ್ಧಗಂಗಾ ಪ್ರಾಥಮಿಕ ಶಾಲೆಯ 9ನೇ ತರಗತಿ ಬಾಲಕ ನಕ್ಷತ್ರ ನಾಯಕ ಸಬ್ – ಜೂನಿಯರ್ ಗ್ರೂಪ್‍ನಲ್ಲಿ 100 ಮೀ. ಬ್ಯಾಕ್ ಸ್ಟ್ರೋಕ್‍ನಲ್ಲಿ ಪ್ರಥಮ, 50 ಮೀ. ಬ್ಯಾಕ್ ಸ್ಟ್ರೋಕ್ ಮತ್ತು 50 ಮೀ. ಫ್ರೀ ಸ್ಟೈಲ್ ಸ್ವಿಮಿಂಗ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.


ಈಜು ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸಿರುವ ಬಾಲಕನಿಗೆ ಮುಖ್ಯೋಪಾದ್ಯಾಯಿನಿ K. S. ರೇಖಾರಾಣಿ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.


Thursday, March 25, 2021

ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟ

 

ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜ್, ದಾವಣಗೆರೆ.

2020-21 ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲ್ಲಿ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತ ಪೂರ್ವ ಸಾಧನೆಯನ್ನು ಮಾಡಿದ್ದಾರೆ. ಬಾಲಕರ ವಿಭಾಗದಲ್ಲಿ ಖೋ-ಖೋ, ಬಾಸ್ಕೆಟ್ ಬಾಲ್, ಕರಾಟೆ, ಪುಟ್‍ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್ ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರಲ್ಲದೆ ಒಟ್ಟು 22 ಬಾಲಕರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಥ್ರೋ-ಬಾಲ್, ಬಾಸ್ಕೆಟ್ ಬಾಲ್, ವಾಲಿ ಬಾಲ್,  ಅಥ್ಲೆಟಿಕ್ಸ್ ಹಾಗೂ ಕರಾಟೆ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಲ್ಲದೆ ಒಟ್ಟು 16 ಬಾಲಕಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿವರಗಳು ಈ ಕೆಳಗಿನಂತಿವೆ.



ಬಾಲಕರ ವಿಭಾಗ ಬಾಲಕಿಯರ ವಿಭಾಗ

1 ಸುದೀಪ (ಖೋ-ಖೋ) 1 ಸಹನ. ಎಸ್. ಎಸ್ (ಅಥ್ಲೆಟಿಕ್ಸ್)

2 ಕಿರಣ್ (ಖೋ-ಖೋ) 2 ಸಹನ (ಅಥ್ಲೆಟಿಕ್ಸ್)

3 ಮೋಹಿತ್ ಕಿರಣ್ (ಥ್ರೋ-ಬಾಲ್) 3 ಕವನ (ಬಾಸ್ಕೆಟ್ ಬಾಲ್)

4 ಯುವರಾಜ್. ಎಲ್ (ಅಥ್ಲೆಟಿಕ್ಸ್) 4 ಖುಷಿ (ಬಾಸ್ಕೆಟ್ ಬಾಲ್)

5 ಮಂಜುನಾಥ. ಬಿ.ಎಮ್ (ಅಥ್ಲೆಟಿಕ್ಸ್) 5 ಗೀತಾ (ಬಾಸ್ಕೆಟ್ ಬಾಲ್)

6 ಮಂಜುನಾಥ.ಸಿ.ಪಿ (ಅಥ್ಲೆಟಿಕ್ಸ್) 6 ಅಂಜಲಿ (ಬಾಸ್ಕೆಟ್ ಬಾಲ್)

7 ದರ್ಶನ್ (ಅಥ್ಲೆಟಿಕ್ಸ್) 7 ವರ್ಷ (ಬಾಸ್ಕೆಟ್ ಬಾಲ್)

8 ದೀಪಕ್. ಡಿ (ಅಥ್ಲೆಟಿಕ್ಸ್) 8 ನಿಶಾ  (ಬಾಸ್ಕೆಟ್ ಬಾಲ್)

9 ಕಲ್ಲೇಶ್ (ಕರಾಟೆ) 9 ಚೈತನ್ಯ (ವಾಲಿಬಾಲ್)

10 ಸಂಭ್ರಮ್ (ಪುಟ್‍ಬಾಲ್) 10 ಲಕ್ಷ್ಮಿ (ವಾಲಿಬಾಲ್)

11 ರಾಹುಲ್ (ಪುಟ್‍ಬಾಲ್) 11 ಲಾವಣ್ಯ (ಕರಾಟೆ)

12 ಪವನ್ (ಪುಟ್‍ಬಾಲ್) 12 ಆಷಿಯ (ಕರಾಟೆ)

13 ಪ್ರಜ್ವಲ್ (ಪುಟ್‍ಬಾಲ್) 13 ರಕ್ಷೀತ (ಕರಾಟೆ)

14 ಶ್ಯಾಮ್ (ಪುಟ್‍ಬಾಲ್) 14 ಜ್ಯೋತಿ (ಖೋ-ಖೋ)

15 ವರುಣ್ ಜಾಧವ್ (ಪುಟ್‍ಬಾಲ್) 15 ಸಂಚಿತ (ಖೋ-ಖೋ)

16 ಜೀವನ್ (ಪುಟ್‍ಬಾಲ್) 16 ದರ್ಶಿನಿ  (ಥ್ರೋ-ಬಾಲ್)

17 ಅಬ್ದುಲ್ ಕಲಾಂ ಆಜಾದ್ .ಹೆಚ್ (ಬಾಸ್ಕೆಟ್ ಬಾಲ್)

18 ಮಹೇಂದ್ರಕರ್ (ಬಾಸ್ಕೆಟ್ ಬಾಲ್)

19 ಮಾತರಿಶ್ವÀ . ಕೆ (ಬಾಸ್ಕೆಟ್ ಬಾಲ್)

20 ಸಿ. ಮಹೇಶ್ (ಬಾಸ್ಕೆಟ್ ಬಾಲ್)

21 ಸುದರ್ಶನ್ (ಟೇಬಲ್ ಟೆನ್ನಿಸ್)

22 ವಿಕಾಸ್ (ಟೇಬಲ್ ಟೆನ್ನಿಸ್)


ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘನಿಸಿದ ಕಾಲೇಜಿನ ನಿರ್ದೇಶಕರಾದ ಡಾ|| ಜಯಂತ್, ಸಿಕ್ಕ ಅತ್ಯಂತ ಕಡಿಮೆ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಳ್ಳಲು ಸಿದ್ಧ ಪಡಿಸಿದ ಸಂಸ್ಥೆಯ ದೈಹಿಕ ಶಿಕ್ಷಕರ ಕಾರ್ಯವನ್ನು ಅಭಿನಂದಿಸಿದ್ದಾರೆ. ಕಾಲೇಜಿನ ಪ್ರಾಚಾರ್ಯರು, ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳ ಈ ಸಾಧನೆಗೆ ಹೆಮ್ಮೆ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.


Monday, March 8, 2021

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

 ಸಿದ್ಧಗಂಗಾ ಶಾಲೆಯಲ್ಲಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ 

ದಿನಾಂಕ: 08/03/2021 ರಂದು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಲೇಡಿ ಕಬ್ ಮಾಸ್ಟರ್, ಸ್ಕೌಟ್ ಮಾಸ್ಟರ್ ಪ್ಲಾಕ್‍ಲೀಡರ್ಸ್ ಹಾಗೂ ಗೈಡ್ ಕ್ಯಾಪ್ಟನ್‍ಗಳೆಲ್ಲರೂ ಸೇರಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಟೋಟ ಸ್ಪರ್ಧೆಗಳ ಮೂಲಕ ಆಚರಿಸಲಾಯಿತು, ಬ್ಯಾಲೆನ್ಸ್ ಇನ್ ದ ಬುಕ್ ಮತ್ತು ಥ್ರೋ ಬಾಲ್ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಜಸ್ಟಿನ್ ಡಿ’ಸೌಜರವರು ಬಹುಮಾನ ವಿತರಣೆ ಮಾಡಿದರು. “ತೊಟ್ಟಿಲು ತೂಗುವ ಕೈ ಜಗತ್ತನ್ನೆ ಆಳುತ್ತದೆ” ಹಾಗಾಗಿ ಯಾವುದೇ ಕ್ಷೇತ್ರದಲ್ಲೂ ಮಹಿಳೆಯರು ಮುಂದಿದ್ದಾರೆ ಎಂದು ಶಿಕ್ಷಕಿಯರಿಗೆ ಕಿವಿಮಾತು ಹೇಳಿದರು. ನಿಮಗಾಗಿ ಒಂದಿಷ್ಟು ಸಮಯವನ್ನು ಉಳಿಸಿಕೊಂಡು, ಸಮಾಜದಲ್ಲಿ ಯಾವುದಾದರೊಂದು ಕ್ಷೇತ್ರಗಳಲ್ಲಿ ದುಡಿದು ಮುಂದೆ ಬರಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಖಜಾಂಚಿಗಳಾದ ಶ್ರೀಮತಿ ರೇಖಾರಾಣಿ ಕೆ. ಎಸ್ ಹಾಗೂ ಶ್ರೀಮತಿ ಗಾಯತ್ರಿ ಚಿಮ್ಮಡ್ ರವರು ಹಾಜರಿದ್ದರು. ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಉಸ್ತುವಾರಿಯನ್ನು ನೋಡಿಕೊಂಡರು.