Monday, February 1, 2021

ಪುನಶ್ಚೇತನ ಕಾರ್ಯಕ್ರಮ

 ಸ್ಕೌಟ್ಸ್ ಗೈಡ್ಸ್ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ

ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ

ಜನವರಿ 31,

ದಾವಣಗೆರೆ ದಕ್ಷಿಣ ವಲಯದ ಸ್ಕೌಟ್ಸ್ ಗೈಡ್ಸ್‍ನ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಕ್ರಮವನ್ನು ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. 

ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಶಿಬಿರದಲ್ಲಿ ಸಮವಸ್ತ್ರದ ಮಹತ್ವ ವಿವಿಧ ಧ್ವಜಗಳ ಆಳತೆ ಮತ್ತು ಪ್ರಾಮುಖ್ಯತೆ, ರಾಷ್ಟ್ರಗೀತೆ, ಝಂಡಾ ಗೀತೆಗಳ ತರಬೇತಿ, ಪ್ರಥಮ ಚಿಕಿತ್ಸಾ ವಿಧಾನ, ವಿವಿಧ ರೀತಿಯ ಗಂಟುಗಳನ್ನು ಮತ್ತು ಬ್ಯಾಂಡೇಜ್ ಕಟ್ಟುವ ರೀತಿಯನ್ನು ಶಿಬಿರದ ನಾಯಕರಾಗಿ ಆಗಮಿಸಿದ್ದ ಜಿಲ್ಲಾ ಕಾರ್ಯದರ್ಶಿ ರತ್ನ ಎಂ ಇವರು ಪರಿಚಯಿಸಿದರು. ಗಾಯಾಳುಗಳನ್ನು ತಕ್ಷಣ ರವಾನಿಸಲು ಉಪಯೋಗಿಸುವ ವಿವಿಧ ರೀತಿಯ ಡೋಲಿಗಳು ಅವುಗಳ ಅಳತೆ ಮತ್ತು ಲಾಗ್ ಪುಸ್ತಕ ಬರೆಯುವ ವಿಧಾನ ಮತ್ತು ಶುಭಾಷಯ ಪತ್ರಗಳನ್ನು ರಚಿಸುವ ಕುರಿತು ಮಾರ್ಗದರ್ಶನ ನೀಡಲಾಯಿತು.

ಹೊನ್ನಾಳಿಯಿಂದ ಆಗಮಿಸಿದ್ದ ಸ್ಕೌಟ್ ಸಂಪನ್ಮೂಲ ಶಿಕ್ಷಕ ಆಂಜನೇಯ ಮತ್ತು ಎಂ. ಎಂ. ಶಾಲೆಯ ವರ್ಷರವರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. 

ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಕಬ್ ಮಾಸ್ಟರ್ಸ್, ಫ್ಲಾಕ್ ಲೀಡರ್ಸ್, ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್‍ಗಳನ್ನೊಳಗೊಂಡಂತೆ 36 ಶಿಕ್ಷಕ - ಶಿಕ್ಷಕಿಯರು ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದರು.


ಸಂಜೆ 4 ಗಂಟೆಗೆ ನಡೆದ ಸಮರೋಪ ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಜಸ್ಟಿನ್ ಡಿ’ಸೌಜ ಅವರು ಕೋವಿಡ್‍ನಿಂದ ಹೊರಬಂದ ವಾತಾವರಣದಲ್ಲಿ ಈ ಪುನಶ್ಚೇತನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕೋವಿಡ್ ಸಂದರ್ಭದಲ್ಲಿ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ ಆನ್‍ಲೈನ್‍ನಲ್ಲಿ ಮಕ್ಕಳ ಚಟುವಟಿಕೆ ನಿರಂತರವಾಗಿದ್ದು ಹಲವಾರು ಬಹುಮಾನ ಗಳಿಸುವಲ್ಲಿ ಮತ್ತು ರಾಜ್ಯ ಸಂಸ್ಥೆಯಿಂದ ಪ್ರಶಂಸೆಗೊಳಪಟ್ಟಿದ್ದನ್ನು ತಿಳಿಸಿ ಸ್ಕೌಟ್ಸ್ – ಗೈಡ್ಸ್ ಶಿಕ್ಷಕರನ್ನು ಅಭಿನಂದಿಸಿದರು. ಕಾರ್ಯಕಾರಿ ಸಮಿತಿಯ ಸಹಾಯಕ ಆಯುಕ್ತರುಗಳಾದ ಡಾ|| ಜಯಂತ್ ಮತ್ತು ರೇಖಾರಾಣಿಯವರು ಉಪಸ್ಥಿತರಿದ್ದರು. ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶಶಿಕಲಾ ಅವರು ಶಿಬಿರದ ಆಯೋಜನೆಯನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಿದ್ದರು.