Thursday, June 21, 2018

4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ


ಸಿದ್ಧಗಂಗಾ ಮಕ್ಕಳಿಂದ ಯೋಗ ಅಭಿಯಾನ

ದಾವಣಗೆರೆ, ಜೂ 19.

 ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯೋಗ ಅಭಿಯಾನಕ್ಕೆ ಸಿದ್ಧಗಂಗಾ ಶಾಲೆಯ – ಕಾಲೇಜಿನ ಮಕ್ಕಳು ವಿಶಿಷ್ಠ ರೀತಿಯಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ ಜೂನ್ 16 ರಿಂದ 20ರವರೆಗೆ ಐದು ದಿನಗಳ ಯೋಗ ಶಿಬಿರ ನಡೆಯುತ್ತಲಿದ್ದು ಸಿದ್ಧಗಂಗಾ ಶಾಲಾ – ಕಾಲೇಜಿನ ನೂರಾರು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಬೆಳಿಗ್ಗೆ 6 ರಿಂದ 6.45ರವರೆಗೆ ವಿವಿಧ ಆಸನಗಳನ್ನು ಪ್ರದರ್ಶಿಸುತ್ತಿದ್ದಾರೆ.

ಪ್ರಕೃತಿಯ ಪ್ರಶಾಂತ ವಾತಾವರಣದಲ್ಲಿ ಮಕ್ಕಳ ಈ ಸಾಮೂಹಿಕ ಯೋಗಾಭ್ಯಾಸ ಕಣ್ಮನ ಸೆಳೆಯುವಂತಿದೆ. ಶಿಬಿರದ ಉದ್ಘಾಟನೆಗೆ ಆಗಮಿಸಿದ್ದ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್‍ರವರು 35ಸಾವಿರ ಮಕ್ಕಳ ಸಹಕಾರದೊಂದಿಗೆ ಬೃಹತ್ ಯೋಗ ಕಾರ್ಯಕ್ರಮ ಏರ್ಪಡಿಸುತ್ತಿರುವ ವಿಚಾರವನ್ನು ಹಂಚಿಕೊಂಡರು. ಸಿದ್ಧಗಂಗಾ ಸಂಸ್ಥೆಯ ಸಹಕಾರವನ್ನು ಶ್ಲಾಘಿಸಿದರು. ಭಾರತೀಯ ಪ್ರಾಚೀನ ಪರಂಪರೆಯ ಯೋಗ ಇಂದು ವಿಶ್ವ ಮಾನ್ಯತೆ ಪಡೆದಿದೆ. ಜಗತ್ತು ಭಾರತದ ಸಂಸ್ಕೃತಿ ಮತ್ತು ವಿಚಾರ ಧಾರೆಗಳಿಂದ ಪ್ರಭಾವಿತವಾಗುತ್ತಿದೆ. ಯೋಗ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಂಡು ದಿನಾಚರಣೆಯನ್ನು  ಅರ್ಥಪೂರ್ಣಗೊಳಿಸುವಂತೆ ಕರೆ ನೀಡಿದರು.

ಯೋಗ ಒಕ್ಕೂಟ ಹಮ್ಮಿಕೊಂಡಿರುವ ಸೈಕಲ್ ಜಾಥಾ, ಚಿತ್ರಕಲೆ ಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದ ಮಕ್ಕಳು ಪಾಲ್ಗೊಂಡರು.




ಯೋಗದಿಂದ ದೇಹ-ಮನಸ್ಸುಗಳಿಗೆ ಸುಯೋಗ
ಜಾಗತಿಕವಾಗಿ ಅಭಿವೃದ್ಧಿಯ ಪಥದಲ್ಲಿರುವ ಹಲವು ರಾಷ್ಟ್ರಗಳು ನಾಗರೀಕತೆಯ ಹೊಸ್ತಿಲು ಮುಟ್ಟುವ ಮೊದಲೇ, ಭಾರತವು ವಿಜ್ಞಾನ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಮಾಡಿತ್ತು ಎಂದರೆ ಅತಿಶಯೋಕ್ತಿಯಲ್ಲ. ಭಾರತೀಯರ ‘ಶಾಸ್ತ್ರೀಯ ಚರ್ಯೆ’ ಎಂದೇ ಪರಿಗಣಿತವಾದ ಯೋಗವು ಆಧ್ಯಾತ್ಮಿಕ ಆಚರಣೆಗೆ ಸಂಬಂಧಿಸಿದ್ದು ಎನ್ನುವ ಸೀಮಿತ ಪರಿಧಿಯಿಂದ ಹೊರಬಂದು ಮನುಕುಲದ ಸೊತ್ತಾಗಿ ವಿಶ್ವಾತ್ಮಕ ಮನ್ನಣೆ ಪಡೆದಿದೆ ಆರಂಭದಲ್ಲಿ ಸಾಂಪ್ರದಾಯಿಕ, ದೈಹಿಕ - ಮಾನಸಿಕ ಆಚರಣೆಗಳ ಬೋಧನಾ ಶಾಖೆಯಾಗಿದ್ದ ಯೋಗ ಧರ್ಮ ಪ್ರಾರಂಭದಲ್ಲಿ ಹಿಂದೂ ಧರ್ಮ, ಬೌದ್ಧ ಮತ್ತು ಜೈನಧರ್ಮಗಳಲ್ಲಿ ಧ್ಯಾನದ ಆಚರÀಣೆಯಾಗಿ ಬಳಕೆಯಲ್ಲಿತ್ತು. ಉಪನಿಷತ್‍ನಲ್ಲಿ ಉಲ್ಲೇಖಿತವಾಗಿರುವಂತೆ - “ಧ್ಯಾನದ ಮೂಲಕ ಪ್ರಜ್ಞೆಯ ಉನ್ನತ ಹಂತಗಳನ್ನು ಅನುಭವಿಸುವುದರ ತಂತ್ರಗಳನ್ನು ಶುೃತಿಗಳಲ್ಲಿ ಅಭಿವೃದ್ಧಿಪಡಿಸಲಾಗಿತ್ತು. 
”ಯೋಗ ಎನ್ನುವ ಸಂಸ್ಕøತದ ಪದವು ‘ಯುಜ್’ನಿಂದ ನಿಷ್ಪನ್ನಗೊಂಡಿದೆ. ಜೊತೆಗೂಡು, ಸಂಯೋಗ, ಸೇರುವಿಕೆ ಎನ್ನುವ ವಿವಿಧ ಅರ್ಥಗಳಿವೆ. ಹಿಂದೂ ಗ್ರಂಥಗಳಲ್ಲಿ ‘ಯೋಗ’ ಎನ್ನುವ ಪದ ‘ಕಠೋಪನಿಷತ್’ನಲ್ಲಿ ಮೊದಲು ಕಂಡು ಬರುತ್ತದೆ. ಅಲ್ಲಿ “ಇಂದ್ರಿಯಗಳ ನಿಯಂತ್ರಣ ಮತ್ತು ಮಾನಸಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಉತ್ತುಂಗ ಸ್ಥಿತಿಗೆ ತಲುಪುವುದನ್ನು ಉಲ್ಲೇಖಿಸಲಾಗಿದೆ”.

ಯೋಗದ ವಿಕಾಸದ ಕುರಿತು–ಉಪನಿಷತ್ತುಗಳು, ಭಗವದ್ಗೀತೆ ಮತ್ತು ಮಹಾಭಾರತ ಹಾಗೂ ಪತಾಂಜಲಿಯ ಯೋಗ ಸೂತ್ರಗಳಲ್ಲಿ ಪ್ರಸ್ತಾಪ ಮಾಡಲಾಗಿದೆ. ಭಾರತೀಯ ತತ್ವಜ್ಞಾನದ ಪ್ರಕಾರ ಪತಾಂಜಲಿಯವರನ್ನು–ಯೋಗದ ಪಿತಾಮಹ ಎಂದು ಪರಿಗಣಿಸಲಾಗಿದೆ, ಯೋಗಾಭ್ಯಾಸ ಮಾಡುವಾಗ ಭಕ್ತಿಯಿಂದ ಈ ಶ್ಲೋಕ ಸ್ತುತಿಸುವ ಸಂಪ್ರದಾಯವಿದೆ.

“ಯೋಗೇನ ಚಿತ್ತಸ್ಯ ಪದೇನವಾಚಾಮ್
ಮಲಂ ಶರೀರಸ್ಯಚ ವೈದ್ಯಕೇನ
ಯೋಪಾಕರೋತ್ತಮ್ ಪ್ರವರಮ್ ಮುನೀನಾಮ್
ಪತಾಂಜಲಿಮ್ ಪ್ರಾಂಜಲಿರಾನತೋಸ್ಮಿ”

ಅಂದರೆ ಯೋಗ ಮಾಡುವುದರಿಂದ ಮನಸ್ಸಿನಲ್ಲಾಗುವ ಚಿತ್ತವೃತ್ತಿಗಳನ್ನು ನಿರೋಧಿಸುತ್ತಾರೆ ಹಾಗೇಯೇ ಅವರು ಮಾಡುವ ಕೆಲಸ ಕೌಶಲದಿಂದ ಕೂಡಿರುತ್ತದೆ.

“ಭವತಾಸೇನ ತುಪ್ತಾನಾಮ್ ಯೋಗೋ ಹಿ ಪರವತೌಷಧಮ್’ – ಈ ಭೂಮಿಯ ಮೇಲೆ ಜನ್ಮತಾಳಿದವರಿಗೆ ಎದುರಾಗುವ ಎಲ್ಲಾ ಕಷ್ಟ-ನಷ್ಟಗಳು, ನೋವು, ದುಗುಡು-ದುಮ್ಮಾನಗಳಿಗೆ ಸೃಷ್ಠಿಯಲ್ಲಿ ಸಿಗುವ ಏಕೈಕ ಔಷಧ ಯೋಗ ಮಾತ್ರ ಎಂದಿದ್ದಾರೆ.

ಪತಾಂಜಲಿಯವರು 2ನೇ ಸೂತ್ರದಲ್ಲಿ ರಾಜಯೋಗ ಎಂದು ಪರಿಗಣಿಸಿ, ‘ಅಷ್ಟಾಂಗ ಯೋಗ’ ಎನ್ನುವ ಮೌಲಿಕ ಗ್ರಂಥವನ್ನು ಯೋಗಕ್ಕೆ ಕಾಣಿಕೆಯಾಗಿ ನೀಡಿದ್ದಾರೆ, ಈ ಗ್ರಂಥದಲ್ಲಿ ಎಂಟು ಅಂಗಗಳನ್ನು ಕುರಿತು ವಿವರಿಸುತ್ತಾ, 
ನಿಯಮ – 5 ವರ್ಜನೆಗಳು: ಅ) ಅಹಿಂಸಾ, ಸತ್ಯಪಾಲನೆ, ಅತಿ ಆಸೆ, ಇಂದ್ರಿಯ ನಿಗ್ರಹ, ಸ್ವಾಧೀನತೆಯ ನಿಗ್ರಹ,  
ನಿಯಮ 5 ಅನುಷ್ಠಾನಗಳು : ಅ) ಶುದ್ಧತೆ, ಸಂತುಷ್ಟಿ, ಸಂಯಮ, ಅಧ್ಯಯನ, ದೇವರಲ್ಲಿ ಶರಣಾಗತಿ,  
ಯೋಗಾಸನ : ಅ) ಪೀಠ ಅಥವಾ ಧ್ಯಾನದ ಭಂಗಿಯಲ್ಲಿ ಕುಳಿತುಕೊಳ್ಳುವಿಕೆ 
ಪ್ರಾಣಾಯಾಮ : ಉಸಿರನ್ನು ನಿಯಂತ್ರಿಸುವುದು, ಇನ್ನೊಂದೆಡೆ ಜೀವಶಕ್ತಿಯ ನಿಯಂತ್ರಣವೂ ಹೌದು 
ಪ್ರತ್ಯಾಹಾರ :  ಬಾಹ್ಯ ವಸ್ತುಗಳಿಂದ, ಇಂದ್ರಿಯಗಳಿಂದ ದೂರವಿರುವಿಕೆ
ಧಾರಣ :  ಗಮನವನ್ನು ಒಂದು ವಸ್ತುವಿನ ಕಡೆಗೆ ಕೇಂದ್ರಿಕರಿಸುವುದು.
ಧ್ಯಾನ : ಗುರಿಯ ಸ್ವಭಾವದತ್ತ ಅತೀವ ಚಿಂತನೆ
ಸಮಾದಿ : ಧ್ಯಾನದ ಗುರಿಯಲ್ಲಿಯೇ ತನ್ನನ್ನು ಮಗ್ನನಾಗಿಸಿಕೊಳ್ಳುವುದು. ಈ ಮಾರ್ಗಗಳು ದೇಹ-ಮನಸ್ಸುಗಳ ಲಹರಿ ಮೀರಿದ  ಧೀ ಚೈತನ್ಯದಿಂದ ಪ್ರಾಂಜಲತೆಯನ್ನು ಸಿದ್ಧಿಸಿಕೊಳ್ಳುವ ಸಂಯಮದ ವಿಧಾನವೆಂದಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಯೋಗವು ಧರ್ಮ, ಜಾತಿ ಹಾಗೂ ವರ್ಗಗಳ ಬೇಧವಿಲ್ಲದೆ ಭಾರತೀಯರಲ್ಲಿ ಐದು ಅರ್ಥಗಳಲ್ಲಿ ಬಳಕೆಯಲ್ಲಿದೆ.
1. ಗುರಿ ಸಾಧಿಸಲು ಬೇಕಾದ ಆಚರಣೆಯ ಮಾರ್ಗವಾಗಿದೆ.
2. ದೇಹ ಮತ್ತು ಮನಸ್ಸನ್ನು ನಿಯಂತ್ರಿಸುವ ತಂತ್ರವಾಗಿದೆ.
3. ಭಾರತೀಯ ತತ್ವಜ್ಞಾನದ ಒಂದು ಪಂಥವಾಗಿ ಬಳಕೆಯಲ್ಲಿದೆ.
4. ಹಠಯೋಗ : ಮಂತ್ರ - ಲಯಗಳೊಂದಿಗೆ ಬಳಸಲಾಗುತ್ತದೆ.
5. ನಿರ್ದಿಷ್ಟ ಸಂಪ್ರದಾಯ ಅಥವಾ ಆಚರಣೆಯ ಅರ್ಥದಲ್ಲಿ ಬಳಸಲ್ಪಡುತ್ತಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಝೆನ್ ಮತ್ತು ಯೋಗಗಳನ್ನು ಅವಳಿಗಳೆಂದು ಪರಿಗಣಿಸಲಾಗುತ್ತಿದೆ. ಅದರಲ್ಲೂ ಯೋಗವೆಂದರೆ –ಆಸನ ಮತ್ತು ಹಠಯೋಗ ಎಂದೇ ಪರಿಭಾವಿಸಲಾಗಿದೆ.

ನಾಗಲೋಟದಲ್ಲಿ ಸಾಗುತ್ತಿರುವ ಆಧುನಿಕ ಯುಗದಲ್ಲಿ ಮನುಕುಲವು ಯಂತ್ರದ ಓಟಕೆ ಮಂತ್ರವನಾಡುತ ಮುಂದಕ್ಕೆ ಅಡಿಯಿಡುತ್ತಿರುವುದನ್ನು ಗಮನಿಸಿದರೆ, ಬಾಹ್ಯ ಅಭಿವೃದ್ಧಿಯತ್ತ ಗಹನವಾಗಿ ಚಿಂತಿಸುತ್ತಾ, ತಾಳ್ಮೆ ಆನಂದ, ಆರೋಗ್ಯದತ್ತ ಗಮನಹರಿಸದೆ ಮಾನಸಿಕ ಮತ್ತು ದೈಹಿಕ ಅವಸ್ಥೆಗಳ ಕಡೆಗೆ ಗಮನವಿಲ್ಲದೆ, ಧಾವಂತವಾಗಿ  ಮನೋ ದೌರ್ಬಲ್ಯ, ಬುದ್ಧಿಭ್ರಮಣೆ ಮತ್ತು ಅನಾರೋಗ್ಯದ ಅಧಿಪತಿಗಳಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಆರೋಗ್ಯ ಸುಧಾರಣೆಯ ನೆಪದಲ್ಲಿ ನಾವು ಬಳಸುತ್ತಿರುವ ಔಷಧಿ ಮತ್ತು ಸೇವಿಸುತ್ತಿರುವ ರಾಸಾಯಾನಿಕಯುಕ್ತ ಆಹಾರಗಳಿಂದ ವಿಪರೀತ ದುಷ್ಪರಿಣಾಮಗಳನ್ನೆದುರಿಸುತ್ತಾ ಹಲವು ಕಾಯಿಲೆಗಳ ಅವಾಸರಾಗುತ್ತಿದ್ದೇವೆ.

ಮಾನವ ದೇಹದ ಪ್ರತಿಯೊಂದು ಅವಯವದ ಸಕ್ರಿಯ ಚಟುವಟಿಕೆಗೆ ಸಂಜೀವಿನಿಯಂತಿರುವ ಯೋಗವು ಚಿಕ್ಕಮಕ್ಕಳಿಂದ ವೃದ್ಧಾಪ್ಯದವರೆಗೂ ಎಲ್ಲರೂ ಬೇಧವಿಲ್ಲದೆ ಕಲಿಯಲು ಬೇಕಾದ ಬೋಧನಾ ಶಾಖೆಯಾಗಿದೆ. ವೃದ್ಧಾಪ್ಯದಲ್ಲಿ ಸಂಭವಿಸಬಹುದಾದ ಅನೇಕ ದೈಹಿಕ-ಮಾನಸಿಕ ಕಾಯಿಲೆಗಳಿಗೆ ಸವಾಲಾಗಿ ನಿಲ್ಲುವ ಸಾಮಥ್ರ್ಯ ಯೋಗಕ್ಕಿದೆ. ಚಿಕ್ಕಮಕ್ಕಳು ಸೂಕ್ತ ಮಾರ್ಗದರ್ಶನದ ಮುಖೇನ ಅಭ್ಯಾಸ ಮಾಡುವುದರಿಂದ ಅವರ ಮೆದಳು, ಕಣ್ಣುಗಳು ಮುಂತಾದ ಸೂಕ್ಷ್ಮ ಅಂಗಾಂಗಗಳು ಚುರುಕಾಗುತ್ತವೆ ದಿನನಿತ್ಯ ಒಂದರಿಂದ –ಒಂದೂವರೆ ತಾಸು ಯೋಗಾಭ್ಯಾಸ ಮಾಡುವುದರಿಂದ ದಿನದ ಪೂರ್ಣ ಅವಧಿಯಲ್ಲಿ ಚೈತನ್ಯದ ಚಿಲುಮೆಗಳಾಗುತ್ತಾರೆ, ಜವಬ್ದಾರಿಯ ನಿಭಾವಣೆಯಲ್ಲಿರುವವರು ಮುಂಜಾನೆಯಿಂದ 12 ಗಂಟೆಯ ಒಳಗೆ, ಸಂಜೆ 4 ರಿಂದ 8 ಗಂಟೆಯ ಅವಧಿಯಲ್ಲಿ ಎರಡು ಭಾಗ ಮಾಡಿಕೊಂಡು ಅಭ್ಯಾಸ ಮಾಡುವುದು ಯೋಗ್ಯವಾದದ್ದು.

      ನಿರಂತರ ಯೋಗ ಅಭ್ಯಾಸದಿಂದ ಇಂದ್ರಿಯಗಳ ನಿಗ್ರಹದ ಜೊತೆಗೆ ಮನೋಲ್ಲಾಸ ಮತ್ತು ದೇಶದ ನೈತಿಕ ನಿಯಮಗಳನ್ನು ಪಾಲಿಸುವ ಪ್ರಬುದ್ಧ ಪ್ರಜೆಗಳಾಗುವುದರಲ್ಲಿ ಅನುಮಾನವಿಲ್ಲ, ವಿದ್ಯಾರ್ಥಿಗಳಿಗಂತೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ವಿಯಾಗಲು ಯೋಗವು ಅತ್ಯುತ್ತಮ ಅಸ್ತ್ರವಾಗಿದೆ, ಆದ ಕಾರಣ ಭಾರತದ ಹಲವು ಪ್ರಾಥಮಿಕ ಮತ್ತು ಪೌಢಶಿಕ್ಷಣದ ಶಾಲೆಗಳು ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ.

ಆಧುನಿಕ ಜಗತ್ತಿನ ಒಳಗೆ ಜಂಜಾಟದಲ್ಲಿ ಜರ್ಜಿರಿತರಾಗುತ್ತಿರುವ ನಾವುಗಳು ‘ಯೋಗವಿದ್ದಲ್ಲಿ ರೋಗವಿನ್ನೆಲ್ಲಿ’ ಎನ್ನುವ ಸಂಕಲ್ಪದೊಂದಿಗೆ ಆರೋಗ್ಯ ಪೂರ್ಣ ಭಾರತಕ್ಕಾಗಿ ಯೋಗವನ್ನು ಕಲಿಯುವ ಸುಯೋಗ ನಮ್ಮದಾಗಿಸಿಕೊಳ್ಳೋಣ.

ಸಂತೋಷ ಎಸ್.
ಕನ್ನಡ ಉಪನ್ಯಾಸಕರು
ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು,
ದಾವಣಗೆರೆ 577002.


Tuesday, June 5, 2018

NEET Result - 2018

JEE, CET ನಂತರ NEET ನಲ್ಲೂ ಸಿದ್ಧಗಂಗಾ ಕಾಲೇಜಿನ ಅತ್ಯುತ್ತಮ ಸಾಧನೆ
2017-18 ನೇ ಸಾಲಿನ NEET ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸಿದ್ಧಗಂಗಾ ಪಿ.ಯು. ಕಾಲೇಜು ಸಾಧನೆಯ ಮೆರೆದಿದೆ. JEE, KCET ಪರೀಕ್ಷಾ ಫಲಿತಾಂಶದ ನಂತರ ಇಂದು ಪ್ರಕಟಗೊಂಡ NEET ಪರೀಕ್ಷೆಯಲ್ಲಿ ಸಿದ್ಧಗಂಗಾ ಪಿ.ಯು.ಕಾಲೇಜಿನ ಸುನಿಧಿ ಎಂ.ಘಟಿಕರ್ 720 ಕ್ಕೆ 516 ಅಂಕ ಗಳಿಸಿ 98.73 Percentile ನಲ್ಲಿ ರಾಷ್ಟ್ರಮಟ್ಟದ ಪರೀಕ್ಷೆಯೊಂದರಲ್ಲಿ ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಹಾಗೂ ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿರುತ್ತಾಳೆ. JEE ಹಾಗೂ CET ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ವಿದ್ಯಾರ್ಥಿನಿ ಗಮನಾರ್ಹ ಸಾಧನೆ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಜೊತೆಗೆ ಇದೇ ಕಾಲೇಜಿನ ಪೂರ್ವಿ ಪಿ. ರಾಮ್‍ಘಟ್ಟ (98.13 Percentile), ವೀರೇಶ್ ಎಮ್.ಎನ್. (94.23 Percentile), ಬಸವರಾಜ್ ಎನ್. (93.99 Percentile) ಇವರು ಸಹ ಉತ್ತಮ Percentile ಗಳಿಸಿ ಸಿದ್ಧಗಂಗೆಯ ಕೀರ್ತಿ ರಥಕ್ಕೆ ಹೆಗಲು ಕೊಟ್ಟಿರುತ್ತಾರೆ.

ವಿಶೇಷಚೇತನರಾದ ಗುರುಗೋವಿಂದಾಚಾರಿ 189ನೇ, ಚೈತ್ರ ಎಚ್.ಇ. 267ನೇ ಹಾಗೂ ವಿನಾಯಕ ಎ.ಎಮ್. 506ನೇ ರಾಷ್ಟ್ರಮಟ್ಟದ Rank ಪಡೆಯುವುದರ ಮೂಲಕ ದಾವಣಗೆರೆ ಜಿಲ್ಲೆಗೆ ಕೀರ್ತಿಯ ಕಿರೀಟ ತೊಡಿಸಿದ್ದಾರೆ.

ಸಿದ್ಧಗಂಗಾ ಪಿ.ಯು ಕಾಲೇಜಿನಿಂದ ಪರೀಕ್ಷೆ ತೆಗೆದುಕೊಂಡವರ ಪೈಕಿ ಈ ಬಾರಿ ಒಟ್ಟು 320 ವಿದ್ಯಾರ್ಥಿಗಳು ಅರ್ಹತೆಗಳಿಸಿದ್ದು, 39 ವಿದ್ಯಾರ್ಥಿಗಳು 85 Percentile ಗಿಂತ ಅಧಿಕ ಅಂಕ ಗಳಿಸಿರುತ್ತಾರೆ. ಕಾಲೇಜಿನ ಇತಿಹಾಸದಲ್ಲೇ ಇದೊಂದು ಅಪ್ರತಿಮ ಸಾಧನೆ ಆಗಿದೆ. ಉತ್ತಮ ಫಲಿತಾಂಶ ತಂದುಕೊಟ್ಟಿದ್ದಕ್ಕಾಗಿ ಕಾಲೇಜಿನ ಸಂಸ್ಥಾಪಕರಾದ ಶ್ರೀ ಎಮ್.ಎಸ್.ಶಿವಣ್ಣ, ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜಾ, ಕಾರ್ಯದರ್ಶಿಗಳಾದ ಶ್ರೀ ಹೇಮಂತ್.ಡಿ.ಎಸ್., ನಿರ್ದೇಶಕರಾದ ಡಾ|| ಜಯಂತ್ ಹಾಗೂ ಪ್ರಾಂಶುಪಾಲರಾದ ಶ್ರೀ ಪ್ರಸಾದ್ ಬಂಗೇರ ಎಸ್. ಇವರು ಹರ್ಷವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.


Saturday, June 2, 2018

KCET Result - 2018

ದಾವಣಗೆರೆ, ಜೂನ್ 1, 2018
2017-18ನೇ ಸಾಲಿನ ಸಿ.ಇ.ಟಿ. ಫಲಿತಾಂಶ ಇಂದು ಪ್ರಕಟಗೊಂಡಿದ್ದು  ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಸುನಿಧಿ ಎಂ. ಘಟಿಕರ್ ಬಿ.ಎಸ್ಸಿ (ಅಗ್ರಿ)ಯಲ್ಲಿ ರಾಜ್ಯಕ್ಕೆ 28ನೇ Rank  ಹಾಗೂ ಭರತ್ ಪಟೇಲ್ ಪಶು ವೈದ್ಯಕೀಯದಲ್ಲಿ ರಾಜ್ಯಕ್ಕೆ 24ನೇ Rank ಪಡೆದಿರುತ್ತಾರೆ.  ಸುನಿಧಿ ಎಂ.ಘಟಿಕರ್ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 191ನೇ Rank, ಪಶು ವೈದ್ಯಕೀಯ ವಿಭಾಗದಲ್ಲಿ 139ನೇ Rank, ಬಿ.ಫಾರ್ಮ ಹಾಗೂ ಡಿ.ಫಾರ್ಮದಲ್ಲಿ 349ನೇ Rank ಪಡೆದಿರುತ್ತಾಳೆ. ಈ ವಿದ್ಯಾರ್ಥಿನಿಯು JEE(Main) ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ  ದಾವಣಗೆರೆ ಜಿಲ್ಲೆಗೆ  ಪ್ರಥಮ ಸ್ಥಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ರಾಜ್ಯ ಮಟ್ಟದ ಸಿ.ಇ.ಟಿಯಲ್ಲಿ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಫಲಿತಾಂಶ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸ್ಥಾನ ಪಡೆದು ದಾಖಲೆ ನಿರ್ಮಿಸಿದೆ.

ಕು|| ಸುನಿಧಿ ಎಂ ಘಟಿಕರ್ ಬಿ.ಎಸ್ಸಿ ಅಗ್ರಿಯಲ್ಲಿ 28ನೇ ಪಶು ವೈದ್ಯಕೀಯದಲ್ಲಿ 139ನೇ ಇಂಜಿನಿಯರಿಂಗ್‍ನಲ್ಲಿ 191ನೇ Rank, ಭರತ್ ಪಟೇಲ್ ಹೆಚ್.ಎಲ್. ಬಿ.ಎಸ್ಸಿ ಅಗ್ರಿಯಲ್ಲಿ 355ನೇ ಪಶು ವೈದ್ಯಕೀಯದಲ್ಲಿ 24ನೇ Rank, ಗಣೇಶ್ ಕೆ.ಆರ್. ಬಿ.ಎಸ್ಸಿ ಅಗ್ರಿಯಲ್ಲಿ 196ನೇ, ಪಶು ವೈದ್ಯಕೀಯದಲ್ಲಿ 46ನೇ Rank, ಮೇಘರಾಜ್ ಬಿ.ಕೆ. ಬಿ.ಎಸ್ಸಿ. ಅಗ್ರಿಯಲ್ಲಿ 433ನೇ, ಪಶು ವೈದ್ಯಕೀಯದಲ್ಲಿ 65ನೇ Rank, ಸೌಭಾಗ್ಯ ಎಸ್ ಬೀಳಗಿಮಠ್ ಬಿ.ಎಸ್ಸಿ. ಅಗ್ರಿಯಲ್ಲಿ 300ನೇ, ಪಶು ವೈದ್ಯಕೀಯದಲ್ಲಿ 93ನೇ Rank, ಬಸವರಾಜ್ ಬಿ.ಎಸ್ಸಿ. ಅಗ್ರಿಯಲ್ಲಿ 278ನೇ, ಪಶು ವೈದ್ಯಕೀಯದಲ್ಲಿ 114ನೇ Rank, ಕೀರ್ತಿ ಜಿ.ಎಂ ಬಿ.ಎಸ್ಸಿ. ಅಗ್ರಿಯಲ್ಲಿ 270ನೇ, ಪಶು ವೈದ್ಯಕೀಯದಲ್ಲಿ 116ನೇ Rank, ವೀರೇಶ್ ಎಂ.ಎನ್. ಬಿ.ಎಸ್ಸಿ. ಅಗ್ರಿಯಲ್ಲಿ 450ನೇ, ಪಶು ವೈದ್ಯಕೀಯದಲ್ಲಿ 129ನೇ Rank, ಸೌಂದರ್ಯ ಬಿ.ಎಸ್. ಪಶು ವೈದ್ಯಕೀಯದಲ್ಲಿ 144ನೇ Rank, ಪೃಥ್ವಿರಾಜ್ ಹಳೇಮನಿ ಬಿ.ಎಸ್ಸಿ. ಅಗ್ರಿಯಲ್ಲಿ 492ನೇ, ಪಶು ವೈದ್ಯಕೀಯದಲ್ಲಿ 197ನೇ Rank ಪಡೆದಿರುತ್ತಾರೆ.

ಕಾಲೇಜಿನ ಒಟ್ಟು ವಿದ್ಯಾರ್ಥಿಗಳಲ್ಲಿ ನೂರರೊಳಗೆ 5 ವಿದ್ಯಾರ್ಥಿಗಳು, ಐನೂರರೊಳಗೆ  38, ಸಾವಿರದೊಳಗೆ 58  ಹಾಗೂ ಐದು ಸಾವಿರದೊಳಗೆ 376 Rank ಪಡೆದಿರುತ್ತಾರೆ ಎಂದು ಪ್ರಾಚಾರ್ಯರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ವಿದ್ಯಾರ್ಥಿಗಳ ಈ ಉತ್ತಮ ಸಾಧನೆಗೆ ಸಂಸ್ಥಾಪಕರಾದ ಎಂ.ಎಸ್.ಶಿವಣ್ಣ, ಶ್ರೀಮತಿ ಜಸ್ಟಿನ್ ಡಿಸೋಜ, ಕಾರ್ಯದರ್ಶಿಗಳಾದ ಶ್ರೀ ಹೇಮಂತ್. ಡಿ.ಎಸ್ ಹಾಗೂ ನಿರ್ದೇಶಕರಾದ ಡಾ|| ಜಯಂತ್.ಡಿ.ಎಸ್ ಮತ್ತು ಪ್ರಾಚಾರ್ಯರಾದ ಪ್ರಸಾದ್‍ ಬಂಗೇರ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಹಾಗೂ ಅತ್ಯುತ್ತಮವಾಗಿ ಭೋಧಿಸಿ ಮಾರ್ಗದರ್ಶನ ಮಾಡಿದ ಉಪನ್ಯಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪ್ರಾಂಶುಪಾಲರು
ಪ್ರಸಾದ್ ಬಂಗೇರ ಎಸ್,
ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು,
ದಾವಣಗೆರೆ 577002.
ಫೋನ್ ಸಂಖ್ಯೆ : 9448754037